40ಕ್ಕೆ ಮೊದಲೇ ಪುರುಷರ ತಲೆ ಬೋಳಾಗುವುದು, ಕೂದಲು ಬಿಳಿಯಾಗುವುದು ಈ ಅಪಾಯವನ್ನು ಹೆಚ್ಚಿಸಬಹುದು..
ಪುರುಷರಲ್ಲಿ 40ಕ್ಕೆ ಮೊದಲೇ ತಲೆ ಬೋಳಾಗುತ್ತಿದ್ದರೆ ಮತ್ತು ಕೂದಲು ಬಿಳಿಯಾಗುತ್ತಿದ್ದರೆ ಅದು ಅವರಲ್ಲಿ ಹೃದ್ರೋಗದ ಅಪಾಯವನ್ನು ಐದು ಪಟ್ಟುಗಳಷ್ಟು ಹೆಚ್ಚಿಸಬಹುದು ಎನ್ನುವುದನ್ನು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ.
ಪುರುಷರಲ್ಲಿ ತಲೆ ಬೋಳಾಗುವುದು ಮತ್ತು ಸಣ್ಣ ವಯಸ್ಸಿನಲ್ಲಿಯೇ ಬಿಳಿಕೂದಲುಗಳು ಕಾಣಿಸಿಕೊಳ್ಳುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುವಲ್ಲಿ ಬೊಜ್ಜನ್ನೂ ಮೀರಿಸಿದೆ ಎನ್ನುತ್ತದೆ ಅಧ್ಯಯನ ವರದಿ. ಬೊಜ್ಜು ಹೃದ್ರೋಗದ ಅಪಾಯವನ್ನು ನಾಲ್ಕು ಪಟ್ಟಿನಷ್ಟು ಹೆಚ್ಚಿಸುತ್ತದೆ.
ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಕುಟುಂಬದಲ್ಲಿ ಯಾರಿಗಾದರೂ ಸಣ್ಣವಯಸ್ಸಿ ನಲ್ಲಿಯೇ ಹೃದಯ ಸಮಸ್ಯೆಯಿದ್ದ ಇತಿಹಾಸವಿದ್ದರೆ, ಬೊಜ್ಜು ಹೊಟ್ಟೆ, ಹೆಚ್ಚಿನ ದೇಹತೂಕ, ಡಿಸ್ಲಿಪಿಡಿಮಿಯಾ ಅಥವಾ ಹೆಚ್ಚಿನ ಲಿಪಿಡ್ ಮಟ್ಟ ಮತ್ತು ಧೂಮ್ರಪಾನ ಇವು ಹೃದ್ರೋಗಕ್ಕೆ ಸಂಬಂಧಿಸಿದಂತೆ ಪುರುಷರಲ್ಲಿ ತಲೆ ಬೋಳಾಗುವಿಕೆ, ಕೂದಲು ನೆರೆಯುವಿಕೆ ಮತ್ತು ಬೊಜ್ಜಿಗಿಂತ ಕಡಿಮೆ ಅಪಾಯಕಾರಿಯಾಗಿವೆ ಎನ್ನುತ್ತಾರೆ ಸಂಶೋಧಕರು.
ಆರೋಗ್ಯವಂತ ಜನರಿಗೆ ಹೋಲಿಸಿದರೆ ಹೃದಯ ಸಮಸ್ಯೆಗಳನ್ನು ಹೊಂದಿರುವ ಯುವಕರಲ್ಲಿ ನರೆಗೂದಲು ಕಾಣಿಸಿಕೊಳ್ಳುವ ಪ್ರಮಾಣ ಶೇ.50ರಷ್ಟು ಮತ್ತು ಬೊಕ್ಕತಲೆಯಾಗುವ ಪ್ರಮಾಣ ಶೇ.49ರಷ್ಟಿರುತ್ತದೆ. ಇದು ಆರೋಗ್ಯವಂತರಲ್ಲಿ ಅನುಕ್ರಮವಾಗಿ ಶೇ.30 ಮತ್ತು ಶೇ.27ರಷ್ಟಿರುತ್ತದೆ.
ಗುಜರಾತಿನ ಯು.ಎನ್ ಮೆಹ್ತಾ ಹೃದಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಚಿನ್ ಪಾಟೀಲ್ ಅವರ ನೇತೃತ್ವದ ತಂಡವು ನಡೆಸಿದ್ದ ಅಧ್ಯಯನದ ವರದಿಯನ್ನು ಇತ್ತೀಚಿಗೆ ಕೋಲ್ಕತಾದಲ್ಲಿ ನಡೆದ ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾದ 69ನೇ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಲಾಗಿದೆ. ತಂಡವು ಹೃದಯ ಸಮಸ್ಯೆಗಳಿದ್ದ, 40 ವರ್ಷಕ್ಕಿಂತ ಕಡಿಮೆ ಪ್ರಾಯದ 790 ಪುರುಷರನ್ನು ಮತ್ತು ಅಂತಹ ಸಮಸ್ಯೆಗಳಿಲ್ಲದಿದ್ದ ಅದೇ ವಯೋಗುಂಪಿನ 1,270 ಪುರುಷರನ್ನು ತನ್ನ ಅಧ್ಯಯನ ಕ್ಕೊಳಪಡಿಸಿತ್ತು.
ತಲೆ ಬೋಳಾಗುವುದು ಹೃದ್ರೋಗ ಅಪಾಯವನ್ನು ಇತರರಿಗೆ ಹೋಲಿಸಿದರೆ 5.6ರಷ್ಟು ಹೆಚ್ಚಿಸುತ್ತದೆ ಮತ್ತು ಕೂದಲು ಬಿಳಿಯಾಗುವುದರಿಂದ ಈ ಅಪಾಯ 5.3ರಷ್ಟು ಹೆಚ್ಚುತ್ತದೆ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ.