ಇಟ್ಟಿಗೆ ಗೂಡುಗಳಿಂದ ಮಾಲಿನ್ಯದ ಸಂಕಟ
ಎಲಿಫೆಂಟಾ : ಗುಹೆಯ ಹೊರಗೂ ಈಗ ಕತ್ತಲು!
ಮುಂಬೈಗೆ ಬರುವ ಪ್ರವಾಸಿಗರಲ್ಲಿ ಅನೇಕರ ಒಂದು ಆಸೆ ಎಂದರೆ ಗೇಟ್ವೇ ಆಫ್ ಇಂಡಿಯಾದಿಂದ ಹತ್ತು ಕಿ.ಮೀ. ದೂರವಿರುವ ಎಲಿಫೆಂಟಾ ಕೇವ್ಸ್ಗೆ ಬೋಟ್ನಲ್ಲಿ ಪಯಣಿಸಿ ವೀಕ್ಷಿಸಿ ಬರುವುದು. ವಿಶ್ವ ಸ್ಮಾರಕ ದರ್ಜೆ ಪಡೆದಿರುವ ಎಲಿಫೆಂಟಾ ಕೇವ್ಸ್ನ ಪರಿಸರ ಈ ದಿನಗಳಲ್ಲಿ ಕತ್ತಲೆಯಲ್ಲಿ ಮುಳುಗಿದೆ. ಸುಮಾರು ಒಂದು ತಿಂಗಳಿನಿಂದ ಇದೇ ದೃಶ್ಯವಿದೆ. ಸರಕಾರಕ್ಕೆ ಇಲ್ಲಿಯ ನಿವಾಸಿಗಳ ಅಳಲು ಇನ್ನೂ ಕೇಳಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಕತ್ತಲೆಯಲ್ಲೇ ದಿನಗಳೆಯುವಂತಾಗಿದೆ. ಎಲಿಫೆಂಟಾವನ್ನು 'ಧರಾಪುರಿ' ಎಂದೂ ಕರೆಯುತ್ತಾರೆ.
ಎಲಿಫೆಂಟಾ ಸಮುದ್ರ ತೀರದಿಂದ 10 ಕಿ.ಮೀ. ದೂರದಲ್ಲಿದೆ. ಸ್ವಾತಂತ್ರ್ಯ ದೊರೆತ ನಂತರದಿಂದಲೂ ಇಲ್ಲಿನ ನಿವಾಸಿಗಳು ವಿದ್ಯುತ್ ಕಾಣಲೇ ಇಲ್ಲ. ಇಲ್ಲಿನ ಶಿಖರದಲ್ಲಿ ಎರಡು ಜನರೇಟರ್ನ ಸಹಾಯದಿಂದ ಎಲಿಫೆಂಟಾದ ಮೂರು ಹಳ್ಳಿಗಳಾದ ರಾಜ್ಬಂದರ್, ಮೊರಾಬಂದರ್ ಮತ್ತು ಶೇಠ್ಬಂದರ್ನ ನಿವಾಸಿಗಳು ಜೀವನ ಸಾಗಿಸುತ್ತಾ ಬಂದಿದ್ದಾರೆ. ಎರಡು ಜನರೇಟರ್ಗಳ ಸಹಾಯದಿಂದ ಪ್ರತೀದಿನ ಇಲ್ಲಿ ಕೇವಲ ಮೂರು ಗಂಟೆ ಮಾತ್ರ ವಿದ್ಯುತ್ ಬರುತ್ತದೆ. ಈ ಜನರೇಟರ್ಗಳನ್ನು ಮಹಾರಾಷ್ಟ್ರ ಪರ್ಯಟನ ವಿಕಾಸ ನಿಗಮವು ಒದಗಿಸಿದೆ.
ಎಲಿಫೆಂಟಾದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ 300 ಪರಿವಾರಗಳು ವಾಸಿಸುತ್ತವೆ. ಇಲ್ಲಿನ ಒಟ್ಟು ಜನಸಂಖ್ಯೆ ಸುಮಾರು 1,200 ಆಗಿರುತ್ತದೆ. ಜನರೇಟರ್ ಫೇಲ್ ಆಗಿರುವ ಕಾರಣ ರಾಜ್ಬಂದರ್ ಮತ್ತು ಶೇಠ್ಬಂದರ್ ಹಳ್ಳಿಗಳಲ್ಲಿ ವಿದ್ಯುತ್ ಅಕ್ಟೋಬರ್ 2017ರಿಂದ ಕೈಕೊಟ್ಟಿದೆ. ಎರಡನೇ ಜನರೇಟರ್ ಮೂರನೇ ಹಳ್ಳಿಗೆ ವಿದ್ಯುತ್ ಒದಗಿಸುತ್ತದೆ.
ಇದೀಗ ಊರಿನ ಜನತೆ ವಿದ್ಯುತ್ ಇಲ್ಲದ್ದರಿಂದ ತೊಂದರೆಗೆ ಒಳಗಾಗಿದ್ದು ಕಳೆದವಾರ ಎಲಿಫೆಂಟಾದ (ಧರಾಪುರಿ) ಸರಪಂಚ ಬಲೀರಾಮ ಠಾಕೂರ್ ಅವರ ನೇತೃತ್ವದಲ್ಲಿ ಎಂಐಡಿಸಿಯ ಅಧಿಕಾರಿಗಳನ್ನು ಭೇಟಿ ಆಗಿದ್ದಾರೆ. ಎಂಐಡಿಸಿಯ ಕಾರ್ಯಕಾರಿ ಸಂಚಾಲಕ ವಿಜಯ ವಾಘ್ಮಾರೆ ಅವರು ಆಶ್ವಾಸನೆ ನೀಡಿ ಶೀಘ್ರವೇ ಊರಿನವರ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.
ಸದ್ಯ ನ್ಹಾವಾಶೇವ್ ಸಮುದ್ರದ ಕೆಳಗಡೆಯಿಂದ ಕೇಬಲ್ ಹಾಕುವ ಕೆಲಸ ಜಾರಿಯಲ್ಲಿದೆ. ಹಗಲಲ್ಲಿ ಪ್ರವಾಸಿಗರಿಗೆ ಇದರ ಬಿಸಿ ತಟ್ಟುವುದಿಲ್ಲ.!
* * *
ಈ ಬಾರಿ ಡೋಲ್ ಬಂದಿ!
ಮಧ್ಯ ಮುಂಬೈಯ ಮಹೀಮ್ನ ಪ್ರಸಿದ್ಧ ದರ್ಗಾ ಹಝ್ರತ್ ಮಖ್ದೂಮ್ ಫಕೀ ಅಲಿ ಮಾಹಿಮೀಯ ವಾರ್ಷಿಕ ಮೇಳಾ ಆರಂಭವಾಗಿ ದ್ದು ಡಿಸೆಂಬರ್ 12ರ ತನಕ ನಡೆಯುತ್ತದೆ. ದರ್ಗಾ ಟ್ರಸ್ಟ್ ಈಗಾಗಲೇ ತಯಾರಿ ಆರಂಭಿಸಿದೆ. ಈ ಸಲದ ವಿಶೇಷ ಅಂದರೆ ಡೋಲ್ ಬಂದಿ.
ಈ ಸಂದರ್ಭದಲ್ಲಿ ಬಾಬಾ ಮಖ್ದೂಮ್ರ ದರ್ಗಾದಲ್ಲಿ ಮುಂಬೈ ಮತ್ತು ಅಕ್ಕಪಕ್ಕದ ಕ್ಷೇತ್ರಗಳಲ್ಲಿನ ಅವರ ಅನುಯಾಯಿಗಳು ಚಾದರ (ಸಂದಲ್) ಹಿಡಿದು ಬ್ಯಾಂಡ್ಗಳೊಂದಿಗೆ ಆಗಮಿಸುತ್ತಾರೆ. ಮೊದಲ ಚಾದರ ಪೊಲೀಸರದ್ದಾಗಿರುತ್ತದೆ. ಆನಂತರ ಇತರರು ಆಸ್ಥೆಯಿಂದ ದರ್ಗಾಕ್ಕೆ ಹೂ-ಚಾದರ ಹೊತ್ತು ಬರುತ್ತಾರೆ. ದೂರದೂರಿನಿಂದ ಜನ ಚಾದರ ಹಿಡಿದು ಸಂಭ್ರಮ ಆಚರಿಸುತ್ತಾ ಇಲ್ಲಿಗೆ ಬರುತ್ತಾರೆ. ಡೋಲು - ಬ್ಯಾಂಡ್ ಬಾರಿಸುತ್ತಾ ಮೆರವಣಿಗೆಯಲ್ಲಿ ಬರುತ್ತಾರೆ.
ಈ ಸಲ ದರ್ಗಾದ ಟ್ರಸ್ಟಿಗಳು ಈ ರೀತಿ ಬ್ಯಾಂಡ್-ಡೋಲು ಬಾರಿಸಬಾರದೆಂದು ವಿನಂತಿಸಿದ್ದಾರೆ. ಟ್ರಸ್ಟ್ನ ಅಧ್ಯಕ್ಷ ಸೋಹೆಲ್ ಖಂಡ್ವಾನಿ ಅವರು ತಿಳಿಸಿದಂತೆ ''ಪ್ರತೀವರ್ಷ ಡೋಲು -ತಾಸೆ ಬಡಿಯಬೇಡಿ ಎಂದು ಮೆರವಣಿಗೆಯಲ್ಲಿ ಚಾದರ ಹಿಡಿದು ಬರುವವರನ್ನು ಟ್ರಸ್ಟ್ ವಿನಂತಿಸುತ್ತಲೇ ಬಂದಿದೆ. ಆದರೆ ಯಾರೂ ಅದನ್ನು ಕಿವಿಗೆ ಹಾಕಿಕೊಂಡಿಲ್ಲ, ಹಾಗಾಗಿ ಈ ಬಾರಿ ಡೋಲ್ಬಂದಿ ಸಶಕ್ತವಾಗಿ ಪಾಲಿಸಲಾಗುವುದು'' ಎಂದಿದ್ದಾರೆ. ಶರೀಅತ್ನಲ್ಲಿ ಡೋಲು-ತಾಸೆ ಬಾರಿಸುವುದಕ್ಕೆ ನಿಷೇಧವಿದೆ. ಇದನ್ನು ಶ್ರದ್ಧಾಳುಗಳು ನೆನಪಿಟ್ಟುಕೊಳ್ಳುಬೇಕು ಎಂದಿದ್ದಾರೆ.
* * *
ಓಪನ್ ಆರ್ಟ್ ಗ್ಯಾಲರಿ
ದಕ್ಷಿಣ ಮುಂಬೈಯ ಗೇಟ್ ವೇ ಆಫ್ ಇಂಡಿಯಾ ವೀಕ್ಷಿಸುವ ಜನ ಫೌಂಟನ್ ಕ್ಷೇತ್ರದಿಂದ ನಡೆಯುತ್ತಾ ಮುಂದೆ ಕಾಲಾಘೋಡಾ ದಾಟುವಾಗ ಜಹಾಂಗೀರ್ ಆರ್ಟ್ ಗ್ಯಾಲರಿ ಗಮನ ಸೆಳೆಯುತ್ತದೆ. ಇದರೊಳಗೆ ನಾಲ್ಕು ಗ್ಯಾಲರಿಗಳಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತದೆ. ಇಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡುವುದು ಕಲಾವಿದರಿಗೂ ಹೆಮ್ಮೆಯ ಸಂಗತಿ. ಆದರೆ ಈಗ ಬುಕ್ಕಿಂಗ್ ಮಾಡಿದರೆ ಗ್ಯಾಲರಿ ದೊರೆಯುವುದು ಹಲವು ವರ್ಷಗಳ ನಂತರ! ಅಷ್ಟು ದೊಡ್ಡ ಕ್ಯೂ ಇರುತ್ತದೆ.
ಇದೀಗ ಕಾಲಾಘೋಡಾ ಪರಿಸರದಲ್ಲಿ ಪ್ರತೀ ರವಿವಾರ ಓಪನ್ ಆರ್ಟ್ ಗ್ಯಾಲರಿ ಕಂಡುಬರುತ್ತಿದ್ದು ಕಲಾಪ್ರಿಯರಿಗೆ ನಡೆದುಕೊಂಡೇ ಇವುಗಳನ್ನು ವೀಕ್ಷಿಸುವ ಅವಕಾಶ ದೊರೆತಿದೆ. ಕಳೆದ ಅಕ್ಟೋಬರ್ನಿಂದ ಭವ್ಯ ರೀತಿಯಲ್ಲಿ ಇದು ಆರಂಭವಾಗಿದ್ದರೂ ನಡುವೆ ನಿಂತು ಹೋಗಿತ್ತು. ಇದೀಗ ಮತ್ತೆ ಆರಂಭಿಸುವ ತಯಾರಿ ನಡೆದಿದೆ. ಇದರಂತೆ ಕಾಲಾಘೋಡಾ ಕ್ಷೇತ್ರದಲ್ಲಿ ರವಿವಾರದಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ತನಕ ಎಲ್ಲರಿಗೂ ಬಹಿರಂಗ ವೇದಿಕೆ ನೀಡಲಾಗುವುದು. ಇದರಲ್ಲಿ ಚಿತ್ರಕಲೆ, ಗಾಯನ, ನೃತ್ಯ ಸಹಿತ ವಿವಿಧ ಕಲಾ ಪ್ರಕಾರಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಬಹುದಾಗಿದೆ. ಜನರು ನಡೆಯುತ್ತಾ ಇವುಗಳನ್ನು ವೀಕ್ಷಿಸಿ ಆನಂದಿಸಬಹುದು. ಮುಂಬೈ ಮಹಾನಗರ ಪಾಲಿಕೆ ಕಾಲಾಘೋಡಾದ ಬಳಿ 250 ಮೀಟರ್ ದೂರದಲ್ಲಿ 21 ವೇದಿಕೆಗಳನ್ನು ಅಳವಡಿಸುತ್ತಿದೆ. ಇಲ್ಲಿಗೆ ಬರುವ ಜನ ಯಾವುದೇ ಗೌಜಿ ಗದ್ದಲವಿಲ್ಲದೆ, ನೂಕು ನುಗ್ಗಲಿಲ್ಲದೆ ಕಲಾಕಾರರ ಅದ್ಭುತ ಕಲಾಕೃತಿಗಳನ್ನು ನೋಡಬಹುದಾಗಿದೆ. ಇಲ್ಲಿ ಬಾಲಿವುಡ್ ಟೀಮ್ ಕೂಡಾ ಕಾಣಬಹುದು.
ಈ ರೀತಿಯ ಪ್ರದರ್ಶನ ಈಗ ಪ್ರತೀ ರವಿವಾರ ಇಲ್ಲಿ ಕಾಣಬಹುದಾಗಿದೆ. ಮಹಾರಾಷ್ಟ್ರ ಪರ್ಯಟಣಾ ವಿಕಾಸ ಮಹಾಮಂಡಲದ ಜೊತೆ ಮನಪಾ ಅನುಬಂಧ ಕೈಗೊಂಡಿದೆ. ಆಯೋಜನೆಯ ಸಮಯ ಈ ಕ್ಷೇತ್ರದಲ್ಲಿ ರಸ್ತೆಯ ಟ್ರಾಫಿಕ್ ಬಂದ್ ಇರುವುದು.
ಕಾಲಾಘೋಡಾ ಪರಿಸರ, ಜಹಂಗೀರ್ ಆರ್ಟ್ ಗ್ಯಾಲರಿಯ ಎದುರಿನ ರಸ್ತೆಯಲ್ಲಿ ರವಿವಾರದ ದಿನ ಬೆಳಗ್ಗೆ ನಡೆದುಕೊಂಡು ಹೋಗುವಾಗ ಸಿಗುವ ಸೌಂದರ್ಯವೇ ಬೇರೆ. ರಸ್ತೆಯ ಆ ಕಡೆ, ಈ ಕಡೆ ನೂರಾರು ಚಿತ್ರ ಕಲಾವಿದರು ಕುಳಿತು ಚಿತ್ರಗಳನ್ನು ಬಿಡಿಸುತ್ತಿರುತ್ತಾರೆ. ಎದುರು ಕಂಡ ಯಾವುದಾದರೂ ದೃಶ್ಯ ಅವರ ಚಿತ್ರದಲ್ಲಿ ಮೂಡಿಬರುತ್ತದೆ. ರಸ್ತೆಯಲ್ಲಿ ಮಾರಾಟಕ್ಕೂ ತಾವು ರಚಿಸಿದ ಚಿತ್ರಗಳನ್ನು ತೂಗು ಹಾಕಿರುತ್ತಾರೆ. ಚಿತ್ರಕಲಾವಿದರಿಗೆ ಇದು ಖುಶಿಯ ಸಂಗತಿ.
* * *
ಒಂದು ಹಾಪುಸ್ ಹಣ್ಣಿಗೆ 150ರೂ.!
ಮೂರು ತಿಂಗಳ ಮೊದಲೇ ಮುಂಬೈಗೆ ಹಾಪುಸ್ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಆದರೆ ಬೆಲೆ ಮಾತ್ರ ದುಬಾರಿ. ಒಂದು ಹಾಪುಸ್ ಹಣ್ಣಿನ ಬೆಲೆ ರೂ. 150. ಅಂದರೆ ಡಜನ್ನಿಗೆ 1,800 ರೂಪಾಯಿ!
ಕೊಂಕಣದ ಹಾಪುಸ್ ಮಾವಿನ ಹಣ್ಣಿಗೆ ಮಾರುಕಟೆಯಲ್ಲಿ ತನ್ನದೇ ಆದ ಛಾಪು ಇದೆ. ಸಾಮಾನ್ಯವಾಗಿ ಪ್ರತೀ ವರ್ಷ ಫೆಬ್ರವರಿಯ ಕೊನೆ ವಾರದಲ್ಲಿ ಮಾರುಕಟ್ಟೆಗೆ ಬರುತ್ತದೆ. ಆದರೆ ಈ ವರ್ಷ ಆಗಮನದ ಮೂರು ತಿಂಗಳ ಮೊದಲೇ ಹಾಪುಸ್ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ. ನವಿಮುಂಬೈಯ ಎಪಿಎಂಸಿ ರಖಂ ಫಲಮಾರುಕಟ್ಟೆಯಲ್ಲಿ ಹಣ್ಣು ಮಾರಾಟಗಾರರು ಹೇಳುವಂತೆ ದೇವಗಢ್ನ ಹಾಪುಸ್ ಮಾವಿನಹಣ್ಣಿನ ಆಗಮನ ಶುರುವಾಗಿದೆ. ಈಗಾಗಲೇ ಜನ ಖರೀದಿಯಲ್ಲಿ ಆಸಕ್ತಿ ತೋರಿದ್ದಾರೆ. ಮೊದಲ ದಿನವೇ ಐದು ಡಜನ್ ಮಾವಿನ ಹಣ್ಣುಗಳು 9,000 ರೂಪಾಯಿಗೆ ಮಾರಾಟವಾಗಿದೆ.
ಈ ಬಾರಿ ಕೊಂಕಣದಲ್ಲಿ ಕಂಡು ಬಂದ ತೂಫಾನೀ ಮಳೆ ಮತ್ತು ಬದಲಾದ ಹವಾಮಾನ ಮಾವಿನ ಫಸಲಿಗೆ ಲಾಭದಾಯಕವಾಗಿದೆಯಂತೆ, ಹಾಗಾಗಿ ಈ ವರ್ಷ ಹಾಪುಸ್ ಮಾವಿನ ಹಣ್ಣಿನ ಫಸಲು ಚೆನ್ನಾಗಿ ಕಂಡು ಬಂದಿದೆ. ಬೆಳೆಗೆ ಹಾನಿ ಆಗದಂತೆ ರೈತರೂ ತೀವ್ರ ಉಪಾಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತೀ ಹಣ್ಣಿಗೂ ಪ್ಲ್ಯಾಸ್ಟಿಕ್ನ ಕಾಗದದಲ್ಲಿ ಕವರ್ ಮಾಡಿ ಸಂರಕ್ಷಣೆ ಮಾಡಲಾಗಿದೆ.
* * *
ಇಟ್ಟಿಗೆ ಗೂಡುಗಳಿಂದ ಪರಿಸರ ಮಾಲಿನ್ಯ
ಪರಿಸರಕ್ಕೆ ಹಾನಿ ತರುತ್ತಿರುವ ಇಟ್ಟಿಗೆ ಗೂಡುಗಳನ್ನು ಬಂದ್ ಮಾಡುವಂತೆ ನ್ಯೂ ಪನ್ವೇಲ್ನಲ್ಲಿ ಸಿಡ್ಕೋ ಆದೇಶ ನೀಡಿದೆ. ಖಾರ್ಘರ್, ಕಾಮೋಠೆ, ನವೀನ್ ಪನ್ವೇಲ್ ಮೊದಲಾದ ಕ್ಷೇತ್ರಗಳನ್ನು ಮಾಲಿನ್ಯದಿಂದ ಮುಕ್ತಗೊಳಿಸಲಾಗುವುದು. ಪನ್ವೇಲ್ ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದೆ.
ಪನ್ವೇಲ್ ಮಹಾನಗರ ಪಾಲಿಕೆ ಮತ್ತು ಸಿಡ್ಕೋದ ಪ್ರಸ್ತಾವಿತ ದಕ್ಷಿಣ ನವಿ ಮುಂಬೈ ಶಹರ ಕ್ಷೇತ್ರದಲ್ಲಿ ಅನಧಿಕೃತ ರೂಪದಿಂದ ನಡೆಸುತ್ತಿರುವ 40ಕ್ಕೂ ಅಧಿಕ ಇಟ್ಟಿಗೆ ಗೂಡುಗಳ ಮೇಲೆ ಸಿಡ್ಕೋ ಶೀಘ್ರವೇ ಕ್ರಮ ಕೈಗೊಳ್ಳಲಿದೆ. ಈ ಎಲ್ಲಾ ಅನಧಿಕೃತ ಇಟ್ಟಿಗೆ ಗೂಡುಗಳನ್ನು ಶೀಘ್ರವೇ ಬಂದ್ ಮಾಡಲು ಆದೇಶವನ್ನು ಸಿಡ್ಕೋ ನೀಡಿದೆ. ಹಗಲು-ರಾತ್ರಿ ಕಪ್ಪು- ಬಿಳಿ ಹೊಗೆಯನ್ನು ಹೊರ ಚೆಲ್ಲುವ 40ರಿಂದ 50ರಷ್ಟು ಇಟ್ಟಿಗೆ ಗೂಡುಗಳು ಖಾರ್ಘರ್, ಕಾಮೋಠೆ, ನವೀನ್ ಪನ್ವೇಲ್, ಕೋಪ್ರಾ, ಕರಂಜಾಡೆ, ರೊಡ್ಪಾಲಿ, ಕಲಂಬೋಲಿ, ತಲೋಜಾ.... ಮೊದಲಾದ ಉಪನಗರಗಳ ಅನೇಕ ಸೆಕ್ಟರ್ಗಳಲ್ಲಿದ್ದು ಲಕ್ಷಗಟ್ಟಲೆ ನಿವಾಸಿಗಳಿಗೆ ಇದರಿಂದ ಬಿಡುಗಡೆ ಸಿಗಲಿದೆ.
ಈ ಅನಧಿಕೃತ ಇಟ್ಟಿಗೆ ಗೂಡುಗಳಿಂದ ಬಿಡುಗಡೆ ಮಾಡುವಂತೆ ಸ್ಥಳೀಯ ನಿವಾಸಿಗಳು ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಿಡ್ಕೋ ಆಡಳಿತವನ್ನು ವಿನಂತಿಸಿದ್ದವು. ಸಿಡ್ಕೋ ಈ ಅನಧಿಕೃತ ಇಟ್ಟಿಗೆ ಗೂಡುಗಳ ಮಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿದರೂ ಮತ್ತೆ ಅವರು ಆರಂಭ ಮಾಡುತ್ತಿದ್ದರು. ಈ ಮಾಲಕರೆಲ್ಲಾ ಸ್ಥಳೀಯ ಗ್ರಾಮೀಣ ಜನರೇ ಆಗಿದ್ದಾರೆ. ಪನ್ವೇಲ್ ಮನಪಾ ನಗರೀಕರಣದ ನಂತರ ಈ ಗ್ರಾಮೀಣರ ಹೊಲಗದ್ದೆಯನ್ನೂ ಆಡಳಿತ ಕಸಿದುಕೊಂಡು ಅಧಿಕಾಂಶ ಗ್ರಾಮೀಣರು ನಿರುದ್ಯೋಗಿಗಳಾಗಿದ್ದಾರಂತೆ. ಹೀಗಿರುವಾಗ ಇಟ್ಟಿಗೆ ಗೂಡು, ಸಮುದ್ರ ತೀರದಿಂದ ಮರಳು ತೆಗೆಯುವುದು ಬಿಟ್ಟರೆ ಬೇರೆ ಉದ್ಯೋಗಗಳಿಲ್ಲ ಎನ್ನುತ್ತಿದ್ದಾರೆ.
ಈ ಕ್ಷೇತ್ರಗಳಲ್ಲೆಲ್ಲ ಈಗ ಬಿಲ್ಡರ್ಗಳು ಸಕ್ರಿಯವಾಗಿದ್ದು ಇಟ್ಟಿಗೆಗಳಿಗೆ ಬೇಡಿಕೆ ಏರಿದೆ. ಆದರೆ ಈಗ ಹೈಕೋರ್ಟ್ನ ಕಟು ಆದೇಶದ ನಂತರ ಸಿಡ್ಕೋ ಅನಧಿಕೃತ ಇಟ್ಟಿಗೆ ಗೂಡು ಮಾಲಕರಿಗೆ ಜಾಗ ಖಾಲಿ ಮಾಡಲು ತಿಳಿಸಿದೆ. ಈ ಅನಧಿಕೃತ ಇಟ್ಟಿಗೆ ಗೂಡುಗಳ ಕಾರಣ ಏಳುವ ಹೊಗೆಯಿಂದ ಸ್ಥಳೀಯರಿಗೆ ಉಸಿರಾಟದ ತೊಂದರೆ ಕಾಣಿಸಿದೆ. ಅಸ್ತಮಾ ರೋಗಿಗಳ ಸಂಖ್ಯೆ ಏರಿದೆ. ''ಜೀವನ ಪೂರ್ತಿ ದುಡಿದ ಹಣದಲ್ಲಿ 30 -40 ಲಕ್ಷ ರೂ. ನೀಡಿ ಪ್ಲ್ಯಾಟ್ ಖರೀದಿಸಿದ್ದೇವೆ. ಆದರೆ ಇಲ್ಲಿ ಈ ಅನಧಿಕೃತ ಇಟ್ಟಿಗೆ ಗೂಡುಗಳ ಕಾರಣ ನಮ್ಮ ಆರೋಗ್ಯ ಹಾಳಾಗುತ್ತಿದೆ.'' ಎಂದು ಖಾರ್ಘರ್, ಕಾಮೊಠೆ, ನವೀನ್ ಪನ್ವೇಲ್ ಉಪನಗರಗಳ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ
ದೀಪಾವಳಿ ಮೊದಲೇ ಈ ಆದೇಶ ಬಂದಿದ್ದರೂ ಹಬ್ಬದ ಕಾರಣ ಮತ್ತು ನವಿಮುಂಬೈ ಪಾಟೀಲ್ ಸ್ಟೇಡಿಯಂನಲ್ಲಿ ಫೀಫಾ ಜ್ಯೂ. ಫುಟ್ಬಾಲ್ ವಿಶ್ವಕಪ್ನ ಸ್ಪರ್ಧೆಯಲ್ಲಿ ಬಂದೋಬಸ್ತು ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದುದರಿಂದ ಅನಧಿಕೃತ ಗೂಡುಗಳನ್ನು ಬಲಾತ್ಕಾರವಾಗಿ ತೆರವು ಗೊಳಿಸಲು ಸಿಡ್ಕೋಗೆ ಸಾಧ್ಯವಾಗಿರಲಿಲ್ಲ. ಇದೀಗ ಸಿಡ್ಕೋ ಶೀಘ್ರವೇ ಇವುಗಳನ್ನೆಲ್ಲಾ ತೆರವುಗೊಳಿಸಲು ಮುಂದಾಗಿದೆ. ಈಗಾಗಲೇ ಇಂತಹ ಇಟ್ಟಿಗೆ ಗೂಡುಗಳ ಮಾಲಕರಿಗೆ ಆದೇಶ ಕಳುಹಿಸಲಾಗಿದೆ.