ಪ್ರತಿಯೊಬ್ಬ ಭಾರತೀಯ ಬಡವನ ಬಹುದೊಡ್ಡ ಜೀವನ ಸುರಕ್ಷೆ ಡಾ. ಅಂಬೇಡ್ಕರ್
ಇಂದು ಅಂಬೇಡ್ಕರ್ ಪರಿನಿಬ್ಬಾಣ ದಿನ
ಭಾರತವನ್ನು ಡಾ.ಅಂಬೇಡ್ಕರರು ಒಮ್ಮೆಗೆ ಎರಡು ದೃಷ್ಟಿಕೋನದಲ್ಲಿ ಗ್ರಹಿಸಿದ್ದರು. ಒಂದು ಇಂಡಿಯಾ ಮತ್ತೊಂದು ಭಾರತ. ಮುಂಬೈ, ದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರಿನಂತಹ ನಗರಗಳು ಇಂಡಿಯಾವನ್ನು ಪ್ರತಿನಿಧಿಸಿದರೆ 29 ಲಕ್ಷ ಹಳ್ಳಿಗಳು ಭಾರತವನ್ನು ಪ್ರತಿನಿಧಿಸುತ್ತವೆ. ನಗರೀಕರಣದ ಉರುಳಿಗೆ ಸಿಲುಕಿ ಇಂಡಿಯಾ ದೇಶದ ಜನ ನಾಗಲೋಟದಲ್ಲಿ ಧಾವಿಸುತ್ತಿದ್ದಾರೆ, ಹಳ್ಳಿಗಳ ಭಾರತ ಮೌಢ್ಯ, ಅಂಧಕಾರ, ಜಾತಿ ವ್ಯವಸ್ಥೆಯ ಉರುಳಿಗೆ ಸಿಲುಕಿ ತೆವಳುತ್ತಿದೆ. ಬಹುಶಃ ಇವರೆಡರ ಅಂತರಂಗವನ್ನು ಅಂಬೇಡ್ಕರರು ಗ್ರಹಿಸಿದಷ್ಟು ಅವರ ಸಮಕಾಲೀನ ನಾಯಕರಾರೂ ಗ್ರಹಿಸಲಿಕ್ಕೆ ಸಾಧ್ಯವಿರದು. ಏಕೆಂದರೆ ಬೇರೆ ನಾಯಕರಿಗೆ ಬಡತನ ಅವರನ್ನು ಹಿಂಡಿದರೆ ಅಂಬೇಡ್ಕರ್ರನ್ನು ಬಡತನದೊಟ್ಟಿಗೆ ಸಾಮಾಜಿಕ ಅವಮಾನವೂ ಸೇರಿಕೊಂಡು ಅವರನ್ನು ಹಿಂಡಿ ಹಿಪ್ಪೆಮಾಡಿತ್ತು. ಈ ಅವಮಾನವೇ ಅಂಬೇಡ್ಕರ್ರನ್ನು ಭಾರತದ ಅಂತರಂಗದ ಆಳಕ್ಕೆ ಇಳಿಸಿತು. ಅಂದಿನ ಕಾಲಕ್ಕೆ ಭಾರತದ ಅಂತರಂಗ ಯಾವುದಿರಬಹುದು ಎಂದು ಯೋಚಿಸಿದರೆ ಶೋಷಣೆ, ಬಡತನ, ಅನಕ್ಷರತೆ, ಗುಲಾಮಗಿರಿ, ಅಸಮಾನತೆ ಮತ್ತು ಬಹುದೊಡ್ಡ ಶ್ರೇಣೀಕೃತ ಜಾತಿ ವ್ಯವಸ್ಥೆಯೇ ಆಗಿದೆ. ಇದು ಭಾರತೀಯ ಅಂತರಂಗದ ಬಹುದೊಡ್ಡ ಒಳ ತಿರುಳು. ಅಂದಿನ ಕಾಲಕ್ಕೆ ಡಾ.ಅಂಬೇಡ್ಕರ್ ಭಾರತೀಯ ಅಂತರಂಗದ ಆಳವನ್ನು ಅಪಾರವಾಗಿ ಗ್ರಹಿಸಿದ್ದರು. ಈ ಪರಿ ಆಳದ ಶೋಧನೆಯ ಛಲವೇ ಅವರನ್ನು ಅಸಮಾ ನತೆಯೊಟ್ಟಿಗೆ ಸಂಘರ್ಷಕ್ಕಿಳಿಯಲು ಪ್ರೇರೇಪಿಸಿತು. ಬಹುಕೋಟಿ ಜನರ, ಶೋಷಿತರ ಬದುಕಿನ ಸುರಕ್ಷತೆಗೆ ಅವರನ್ನು ನೆರವಾಗಿ ನಿಲ್ಲಿಸಿತು. ಈ ದೇಶದಲ್ಲಿನ ಕಾನೂನು ಪ್ರತಿಯೊಬ್ಬ ಬಡವನನ್ನು ರಕ್ಷಿಸುತ್ತದೆ. ಆತನಿಗೆ ಸುರಕ್ಷತೆ ನೀಡುತ್ತದೆ. ನಾವು ನಮ್ಮ ಬದುಕಿನ ಸುರಕ್ಷತೆ ಡಾ.ಅಂಬೇಡ್ಕರ್ ಎಂಬುದನ್ನು ಮರೆತಿದ್ದೇವೆ. ತುತ್ತು ಅನ್ನಕ್ಕಾಗಿ ಜೀತ ಮಾಡುವಾಗ ಜೀತವೇ ಬದುಕಾಗಿತ್ತು. ಅನ್ನಕ್ಕಾಗಿ ಕೂಲಿ ಮಾಡುವಾಗ ಕೂಲಿಯೇ ನಮ್ಮ ಬದುಕಾಗಿತ್ತು. ಇಂದು ಅನ್ನಕ್ಕಾಗಿ ಅಕ್ಷರವೇ ನಮ್ಮ ಬದುಕಾಗಿದೆ. ಅಕ್ಷರ ಕೇವಲ ಅನ್ನಕ್ಕೆ ಮಾತ್ರ ಅರಿವಿಗೆ ಅಲ್ಲ ಎಂದುಕೊಂಡರೆ ಮತ್ತೊಮ್ಮೆ ಇಲ್ಲಿ ಜೀತದ ಕ್ರೌರ್ಯದಲ್ಲೂ, ಕೂಲಿಯ ನರಕದಲ್ಲೂ ಒದ್ದಾಡಬೇಕಿದೆ ಎಂಬ ಅರಿವನ್ನು ಮರೆತಿದ್ದೇವೆ. ಭಾರತದಲ್ಲಿ ಜೀತ ಮತ್ತು ಕೂಲಿಯ ಕ್ರೌರ್ಯದಿಂದ ನಮ್ಮನ್ನು ಸುರಕ್ಷತೆಯ ಜೀವನದೆಡೆಗೆ ಎಳೆದು ತಂದವರ ಅಂತರಂಗದ ಅರಿವಿನ ಆಳ ನಮಗಿನ್ನೂ ಕೈಗೆಟಕಿಲ್ಲ. ಆ ಆಳಕ್ಕೆ ಇಳಿಯುವ ಪ್ರಯತ್ನವನ್ನು ನಾವು ಕೂಡ ಗಂಭೀರವಾಗಿ ಮಾಡಿಲ್ಲ.
ಬಹುಕೋಟಿ ಶೋಷಿತರ ಬದುಕಿಗೆ ಸುರಕ್ಷತೆಯನ್ನು ನೀಡಿದ ಡಾ.ಅಂಬೇಡ್ಕರರ ಬದುಕು ಸುರಕ್ಷಿತವಾಗಿತ್ತೇ ಎಂದು ಯೋಚಿಸಿದರೆ ಖಂಡಿತಾ ಇಲ್ಲ. ಈ ದೇಶದ ಬಡವನ ಬದುಕಿಗಾಗಿ ಡಾ.ಅಂಬೇಡ್ಕರ್ರು ತಮ್ಮ ನಾಲ್ಕು ಮಕ್ಕಳನ್ನು ಕಳೆದುಕೊಂಡರು. ತನ್ನ ಮೊದಲನೇ ಪತ್ನಿಯನ್ನು ಬಡತನ ನುಂಗಿ ಹಾಕಿಬಿಟ್ಟಿತ್ತು. ತಮ್ಮ ಕೊನೆಯ ದಿನಗಳಲ್ಲಿ ಅವರು ಅನುಭವಿಸಿದ ಯಾತನೆಗೆ ಪದವೇ ಇಲ್ಲ. ಅವರ ಪಾರ್ಥಿವ ಶರೀರವನ್ನು ದಿಲ್ಲಿಯಿಂದ ಮುಂಬೈಗೆ ತರಲು ಅವರ ಸ್ನೇಹಿತರು ಪಟ್ಟ ಪಾಡು ಹೇಳತೀರದು. ಇದು ಭಾರತದ ಬಹುಕೋಟಿ ಜನರ ರಕ್ಷಣೆಗೆ ಹೋರಾಟ ಮಾಡಿದ ಬಹುದೊಡ್ಡ ಜೀವಪರ ನಾಯಕರೊಬ್ಬರು ಬದುಕಿದ ರೀತಿ. ಇದು ಬಾಬಾ ಸಾಹೇಬರಂತಹವರಿಗೆ ಮಾತ್ರ ಸಾಧ್ಯವಾಯಿತು. ಏಕೆಂದರೆ ಅವರು ಏನೂ ಇಲ್ಲದೆ ಬದುಕುವ ಭಾರತೀಯರ ಅಂತರಂಗವನ್ನು ಅರ್ಥ ಮಾಡಿಕೊಂಡಿದ್ದರು.
ಸ್ವತಃ ಡಾ.ಅಂಬೇಡ್ಕರ್ ಉರಿಯುವ ಛಲವಾಗಿದ್ದರೂ ಕೂಡ ಅವರು ಬಯ ಸಿದ್ದು ಸಮಾಜದೊಳಗೆ ಪರಸ್ಪರ ದೈಹಿಕ ಸಂಘರ್ಷಣೆಯಿಂದ ಉಂಟಾಗುವ ಜ್ವಾಲೆಯನ್ನಲ್ಲ. ಸಮಾಜದೊಳಗೆ ಪರಸ್ಪರ ಬೌದ್ಧಿಕ ಸಂಘರ್ಷಕ್ಕಿಳಿದು ಅದರಿಂದ ಹೊತ್ತಿಸುವ ಜ್ಯೋತಿಯನ್ನು. ಅವರು ತಮ್ಮ ಬದುಕಿನುದ್ದಕ್ಕೂ ಶತಮಾನಗಳಿಂದ ಬೋಧಿಸಲ್ಪಟ್ಟ ಜ್ಞಾನದೊಂದಿಗೆ ಬೌದ್ಧಿಕ ಸಂಘರ್ಷಕ್ಕಿಳಿದು ಭಾರತದ ಅಂತರಂಗದ ಆಳವನ್ನು ತಟ್ಟಿದರು. ಆ ಮೂಲಕ ಪ್ರತಿ ಬಡವನ ಮನೆಯ ಜ್ಯೋತಿಯಾದರು. ಪತ್ರಕರ್ತರೊಬ್ಬರ ‘‘ಡಾ. ಅಂಬೇಡ್ಕರ್ ಅವರೇ ಈ ಜನರನ್ನು ಉದ್ಧರಿಸಲು ಮತ್ತೆ ನೀವು ಹುಟ್ಟಿ ಬರಬೇಕು’’ ಎಂಬ ಉದ್ಗಾರಕ್ಕೆ ಉತ್ತರಿಸುತ್ತಾ, ‘‘ನಾನು ಇಲ್ಲಿ ಮತ್ತೆ ಹುಟ್ಟುವ ಅಗತ್ಯ ಇಲ್ಲ. ಆದರೆ ಈ ದೇಶದ ಪ್ರತಿಯೊಂದು ಗುಡಿಸಲಿನಲ್ಲಿಯೂ ಒಬ್ಬೊಬ್ಬ ಅಂಬೇಡ್ಕರ್ ಹುಟ್ಟುತ್ತಾನೆ’’ ಎಂದರು. ಇದು ಗುಡಿಸಿಲಿನ ಕ್ರೌರ್ಯದ ಅಂತರಂಗವನ್ನು ಗ್ರಹಿಸಿದ ರೀತಿ.
ಇಡೀ ಭಾರತೀಯ ಚರಿತ್ರೆಯಲ್ಲಿ ಬುದ್ಧನನ್ನು ಗ್ರಹಿಸಿದ ಇಬ್ಬರು ಮೇಧಾವಿಗಳಲ್ಲಿ ಓರ್ವ ಅಶೋಕ ಮತ್ತೋರ್ವರು ಡಾ.ಅಂಬೇಡ್ಕರ್ ರವರು ಭಾರತೀಯ ನೆಲದ ಅಂತರಂಗದ ಅರಿವಿನ ಆಳವೇ ಅವರನ್ನು ಬುದ್ಧನ ಹತ್ತಿರ ತಂದು ನಿಲ್ಲಿಸಿತು. ಆ ಅರಿವಿನ ಆಳದ ವಿವೇಕವೇ ಇಂದು ಭಾರತವನ್ನು ಭಾರತವಾಗಿ ಉಳಿಸಿತು.
ಅಂಬೇಡ್ಕರ್ ಅವರ ಅಂತರಂಗವನ್ನು ಅರಿಯದ ಕೆಲವು ಸಂಕುಚಿತ ಮನಸ್ಥಿತಿಗಳು ಸಮಾಜದೊಟ್ಟಿಗೆ ಜೀವಿಸುತ್ತಿವೆ. ಜೀವ ವಿರೋಧಿ ಮನಸ್ಥಿತಿಯೊಂದು ಅಂಬೇಡ್ಕರರ ಮೇಲೆ ಅಸಹನೆಯನ್ನು ತೋರಲು ಸಾಧ್ಯ. ಅಸಮಾನತೆಯನ್ನು ಆಶಿಸುವ, ಶೋಷಣೆಯನ್ನು ಮತ್ತೆ ಬಯಸುವ, ಮಾನವೀಯ ಮೌಲ್ಯಗಳಿಂದಾಚೆಗೆ ಬದುಕಲಿಚ್ಛಿಸುವ ವಿಕಾರ ಮನಸ್ಸುಗಳು ಮಾತ್ರ ಇವರ ಜೀವಪರ ವಾದವನ್ನು ದೂಷಿಸಲು ಸಾಧ್ಯ.ಇದು ಸಮಾಜದ ಅಂತರಂಗವನ್ನು ಅರಿಯದವರ ಪಾಡು.
ಬುದ್ಧ ಈ ನೆಲದ ಅಂತರಂಗ. ಬುದ್ಧನನ್ನು ಆವಿಭರ್ವಿಸಿಕೊಂಡಿದ್ದ ಬಾಬಾ ಸಾಹೇಬರು ಅಂದು ತೀರಿಕೊಂಡಾಗ ಆ ಸ್ಮಶಾನದಲ್ಲಿ ನಡೆದ ಒಂದು ರೋಚಕ ಪ್ರಸಂಗವನ್ನು ಅವರ ಈ ಪರಿನಿಬ್ಬಾಣ ದಿನದಲ್ಲಿ ನಾವು ನೆನೆಯಬೇಕಾಗಿದೆ. ಡಾ.ಬಾಬಾ ಸಾಹೇಬರ ನೇತೃತ್ವದಲ್ಲಿ ಬಾಂಬೆಯಲ್ಲಿ 1956 ಡಿಸೆಂಬರ್ 16ರಂದು ಹತ್ತು ಲಕ್ಷ ಜನರು ಬೌದ್ಧ ದಮ್ಮಕ್ಕೆ ಮತಾಂತರ ಹೊಂದುವ ಎಲ್ಲ ಸಿದ್ಧತೆಗಳು ನಡೆದಿತ್ತು. ಅದರೆ ಅಚಾನಕ್ ಆಗಿ ಬಾಬಾ ಸಾಹೇಬರು ಈ ಕಾರ್ಯಕ್ರಮದ ಹತ್ತು ದಿನದ ಮುಂಚೆಯೇ ತೀರಿಕೊಂಡಿದ್ದು ಅವರ ಆಪ್ತ ಬಿ.ಕೆ.ಗಾಯಕ್ವಾಡರನ್ನು ಇನ್ನಿಲ್ಲದ ಶೋಕಕ್ಕೆ ತಳ್ಳಿತ್ತು. ಆದರೆ ಗಾಯಕವಾಡರು ಬಾಬಾ ಸಾಹೇಬರ ಇಂಗಿತವನ್ನು ನೆರೆದಿದ್ದ ಜನಸಾಗರದ ಮುಂದೆ ಇಟ್ಟು ಬಾಬಾ ಸಾಹೇಬರ ಈ ಅತೀವ ಆಸೆಯನ್ನು ಈಡೇರಿಸಬಲ್ಲಿರಾ? ಎಂದಾಗ ಆ ಮಾನವ ಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿ ಯನ್ನು ಸೂಚಿಸಿತು. ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಎಂದೆಂದೂ ಅಳಿಸಲಾಗದ ಸ್ಮತಿ ಸ್ಮರಣೆಯಾಯಿತು. ಇದು ತಮ್ಮ ನಾಯಕನಿಗೆ ತೋರಿದ ಅತಿಹಿರಿಮೆಯ ಗೌರವವಾಯಿತು. ಹಿರಿಯ ಭಿಕ್ಕು ಆನಂದ ಕೌಶಲಯನ್ ಚಿತೆಯ ಮುಂದೆ ನಿಂತು ಅತ್ಯಂತ ದುಃಖದಿಂದ ಗದ್ಗದಿತ ಧ್ವನಿಯಲ್ಲಿ ಬುದ್ಧನ ಶ್ಲೋಕವನ್ನು ಆರಂಭಿಸಿದರು. ಅದು ನೀರ್ ಜರಿಯು ಆಕಾಶವನ್ನು ಆವರಿಸಿ ದಂತಾಯಿತು. ಜನಸಾಗರದ ಈ ಧ್ವನಿಯು ಆ ಸ್ಮಶಾನವನ್ನು ಆವರಿಸಿತು. ಸ್ಮಶಾನದ ಒಳಗೂ ಇಂತಹ ಅಪರೂಪದ ಕಾರ್ಯ ನೆರವೇರಿತು. ಬಹುಶಃ ಅನುಯಾಯಿಗಳ ಜನಸ್ತೋಮವೊಂದು ತಮ್ಮ ಅಗಲಿದ ನಾಯಕನಿಗೆ ಹೀಗೆ ಗೌರವ ಸಲ್ಲಿಸಬಹುದೆಂದು, ತಮ್ಮ ನಾಯಕನ ಅನುಪಸ್ಥಿತಿಯಲ್ಲಿಯೂ ಬಾಬಾ ಸಾಹೇಬರ ಪ್ರತಿಜ್ಞೆಯನ್ನು ಪೂರೈಸುವ ನಿಟ್ಟಿನಲ್ಲಿ ತೆಗೆದುಕೊಂಡ ಈ ಪರಿಯ ನಿರ್ಧಾರ ಐತಿಹಾಸಿಕವೇ ಸರಿ. ಚೈತ್ಯಭೂಮಿಯಲ್ಲಿ ಬಾಬಾ ಸಾಹೇಬರಿಗೆ ನಮಿಸಿದ ಈ ಘಟನೆ ವಿಶ್ವದ ಯಾವ ಜನ ನಾಯಕನ ಪಾರ್ಥಿವ ಶರೀರದ ಮುಂದೆಯೂ ನಡೆದಿರುವುದಿಲ್ಲ ಎಂಬುದು ಈಗ ಇತಿಹಾಸ. ಶತ ಶತಮಾನಗಳಿಂದ ಬದುಕಿನಿಂದಲೇ ವಂಚಿತರಾಗಿ ಅವಮಾನವನ್ನೇ ಬದುಕಾಗಿ ಸ್ವೀಕರಿಸಿದಂತಹ ಶೋಷಿತ ಸಮುದಾಯವನ್ನು ಶೋಷಣೆ ತೆಕ್ಕೆಯಿಂದ ಬಿಡಿಸಿ ಕರೆದೊಯ್ಯುವ ಡಾ.ಅಂಬೇಡ್ಕರರ ಕನಸು ಚಾರಿತ್ರಿಕ ಘಟನೆಯಾಗಿ ಉಳಿಯಿತು. 1956ರ ಅಕ್ಟೋಬರ್ 14ರಲ್ಲಿ ದಮ್ಮಕ್ಕೆ ನಡೆದ 10 ಲಕ್ಷ ಜನರ ಮತಾಂತರವನ್ನು ಬಿಟ್ಟರೆ ಈ ಘಟನೆಯು ಭಾರತದ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬುದ್ಧ ದಮ್ಮವನ್ನು ಸ್ವೀಕರಿಸಿದಂತಹ ಘಟನೆಯಾಗಿದೆ. ಅದು ಯಾವ ಸಿದ್ಧತೆಯೂ ಇಲ್ಲದೇ ಸ್ಮಶಾನದ ಒಳಗೆ ನಡೆದ ಆ ಚಾರಿತ್ರಿಕ ಕ್ಷಣ ಅಪೂರ್ವವಾದದು.
ಒಂದಂತೂ ಖಾತರಿ, ಡಾ.ಅಂಬೇಡ್ಕರ್ರವರು ಈ ನೆಲದ ಅಂತರಂಗವನ್ನು ಗ್ರಹಿಸಿದ ದೃಷ್ಟಿಕೋನದ ಪರಿಣಾಮ ನಮ್ಮನ್ನು ಇಲ್ಲಿಯವರೆಗೆ ಕರೆತಂದು ನಿಲ್ಲಿಸಿದೆ. ಆದರೆ ಅಂಬೇಡ್ಕರ್ರ ಅಂತರಂಗವನ್ನು ಅರಿಯಬೇಕಾದರೆ ಈ ಸಮಾಜ ತನ್ನನ್ನು ತಾನು ಶುದ್ಧೀಕರಣಗೊಳಿಸಿಕೊಂಡು ಮಲಿನ ಮನಸ್ಥಿತಿಯಿಂದ ಆಚೆ ನಿಂತು ಗ್ರಹಿಸಬೇಕಾಗಿದೆ.