ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರ ಲಾಭಗಳು ಗೊತ್ತೇ...?
ಬೆಳಗ್ಗೆ ಎದ್ದು ಪ್ರಾತವಿಧಿಗಳನ್ನು ಪೂರೈಸಿದ ನಂತರ ಕೆಲವರು ಬರೀ ಚಹಾ, ಕಾಫಿ ಅಥವಾ ಹಾಲನ್ನು ಸೇವಿಸಬಹುದು. ಕೆಲವರು ಬರಿಯ ನೀರನ್ನು ಕುಡಿಯಬಹುದು. ಕೆಲವರು ಪಟ್ಟಾಗಿ ತಿಂಡಿಯನ್ನು ತಿನ್ನಬಹುದು. ಹೀಗೆ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೇವೆ ಎನ್ನುವುದು ಜನರಿಂದ ಜನರಿಗೆ ಭಿನ್ನವಾಗಿರುತ್ತದೆ. ಆದರೂ ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಸೇವಿಸಲು ಇಷ್ಟಪಡದ ಕೆಲವು ಖಾದ್ಯ, ಪೇಯಗಳೂ ಇವೆ. ಉದಾಹರಣೆಗೆ ಬೆಳಗ್ಗೆದ್ದು ಖಾಲಿಹೊಟ್ಟೆಯಲ್ಲಿ ಮಸಾಲೆಭರಿತ ಆಹಾರವನ್ನು ತಿನ್ನಲು ಹೆಚ್ಚಿನವರು ಬಯಸುವುದಿಲ್ಲ. ಇದೇ ರೀತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದನ್ನು ಹೆಚ್ಚಿನವರು ಕಲ್ಪನೆಯೂ ಮಾಡುವುದಿಲ್ಲ. ಆದರೆ ಬೆಳಗಿನ ತಿಂಡಿಗೆ ಮುನ್ನ ಖಾಲಿಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಹಲವಾರು ಲಾಭಗಳಿವೆ ಎನ್ನುವುದನ್ನು ಹಲವಾರು ಸಂಶೋಧನಾ ಅಧ್ಯಯನಗಳು ತೋರಿಸಿವೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದವೂ ಇದನ್ನು ಪುಷ್ಟೀಕರಿಸಿದೆ.
ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಒಂದು ಗ್ಲಾಸ್ ಬಿಸಿನೀರಿನೊಂದಿಗೆ ಸೇವಿಸಬೇಕು ಎನ್ನುತ್ತಾರೆ ತಜ್ಞರು. ತುಪ್ಪವನ್ನು ಸೇವಿಸಿದ ಬಳಿಕ ಕನಿಷ್ಠ ಅರ್ಧ ಗಂಟೆ ಕಾಲ ಬೇರೇನನ್ನೂ ಸೇವಿಸಕೂಡದು. ಹೀಗೆ ಮಾಡುವುದರಿಂದ ಸಿಗುವ ಆರೋಗ್ಯಲಾಭಗಳ ಬಗ್ಗೆ ಮಾಹಿತಿಯಿಲ್ಲಿದೆ.
ಜೀವಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಆಯುರ್ವೇದದಲ್ಲಿ ಹೇಳಿರುವಂತೆ ತುಪ್ಪವು ‘ರಸ’ವಾಗಿ ಕಾರ್ಯ ನಿರ್ವಹಿಸುತ್ತದೆ. ರಸವು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ನಮ್ಮ ಶರೀರದಲ್ಲಿಯ ಎಲ್ಲ ಜೀವಕೋಶಗಳನ್ನು ಪೋಷಿಸುವ ಅಗತ್ಯ ಪೌಷ್ಟಿಕಾಂಶವಾಗಿದೆ. ಹೀಗಾಗಿ ತುಪ್ಪವು ಜೀವಕೋಶಗಳ ಪುನಃಶ್ಚೇತನವನ್ನು ಹೆಚ್ಚಿಸುತ್ತದೆ ಮತ್ತು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ಚರ್ಮದ ಸಹಜ ಹೊಳಪನ್ನು ಹೆಚ್ಚಿಸುತ್ತದೆ
ತುಪ್ಪವು ಶರೀರದಲ್ಲಿನ ಎಲ್ಲ ಜೀವಕೋಶಗಳನ್ನು ಪೋಷಿಸುವ ಮತ್ತು ಅವುಗಳಿಗೆ ಪುನಃಶ್ಚೇತನವನ್ನು ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಅದು ಚರ್ಮದ ಸಹಜ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅದು ಚರ್ಮದಲ್ಲಿ ನೈಸರ್ಗಿಕವಾಗಿ ತೇವಾಂಶವಿರುವಂತೆ ಮಾಡುತ್ತದೆ ಮತ್ತು ಒಣಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಸೋರಿಯಾಸಿಸ್ನಂತಹ ಚರ್ಮ ಕಾಯಿಲೆಗಳಿಗೂ ಅದು ಒಳಗಿನಿಂದಲೇ ಚಿಕಿತ್ಸೆ ನೀಡುತ್ತದೆ.
ಸಂದು ನೋವು ಮತ್ತು ಸಂಧಿವಾತವನ್ನು ತಡೆಯುತ್ತದೆ
ತುಪ್ಪವು ನೈಸರ್ಗಿಕ ಕೀಲೆಣ್ಣೆಯಾಗಿದ್ದು, ಅದು ಶರೀರದಲ್ಲಿಯ ಎಲ್ಲ ಸಂದುಗಳು ಮತ್ತು ಅಂಗಾಂಶಗಳಿಗೆ ತೈಲದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ ಹಾಗು ಸಂದು ನೋವು ಮತ್ತು ಸಂಧಿವಾತದಂತಹ ಸಮಸ್ಯೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಅಸ್ಥಿರಂಧ್ರತೆಯನ್ನು ತಡೆಯುವ ಒಮೆಗಾ-3 ಫ್ಯಾಟಿ ಆ್ಯಸಿಡ್ಗಳೂ ತುಪ್ಪದಲ್ಲಿವೆ.
ಮಿದುಳಿನ ಕೋಶಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ
ತುಪ್ಪ, ವಿಶೇಷವಾಗಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಮಿದುಳಿನ ಕೋಶಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ ಮತ್ತು ಮಿದುಳಿನ ನರಗಳ ತುದಿಗಳನ್ನು ಪ್ರಚೋದಿಸುವ ಮೂಲ ಜ್ಞಾಪಕ ಶಕ್ತಿ, ಕಲಿಕೆ ಇತ್ಯಾದಿಗಳನ್ನು ಉತ್ತಮಗೊಳಿಸುತ್ತದೆ. ಡಿಮೆನ್ಶಿಯಾ ಮತ್ತು ಅಲ್ಝೀಮರ್ಸ್ನಂತಹ ಕಾಯಿಲೆಗಳನ್ನೂ ಅದು ತಡೆಯತ್ತದೆ.
ದೇಹದ ತೂಕವನ್ನು ತಗ್ಗಿಸುತ್ತದೆ
ತುಪ್ಪವು ದೇಹದ ತೂಕವನ್ನು ಹೆಚ್ಚಿಸುತ್ತದೆ ಎನ್ನ್ನುವುದು ಜನರಲ್ಲಿ ಬೇರೂರಿರುವ ಸಾಮಾನ್ಯ ತಪ್ಪು ಗ್ರಹಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಪ್ರತಿದಿನ ಖಾಲಿಹೊಟ್ಟೆಯಲ್ಲಿ 5-10 ಮಿ.ಲೀ.ತುಪ್ಪವನ್ನು ಸೇವಿಸುವುದರಿಂದ ಅದು ವಾಸ್ತವದಲ್ಲಿ ಶರೀರದಲ್ಲಿ ಚಯಾಪಚಯ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ದೇಹತೂಕವನ್ನು ತಗ್ಗಿಸಲು ನೆರವಾಗುತ್ತದೆ.
ತಲೆಗೂದಲು ಉದುರುವುದನ್ನು ತಡೆಯುತ್ತದೆ
ತುಪ್ಪವು ನಮ್ಮ ತಲೆಗೂದಲ ಕುಳಿಗಳನ್ನು ಪೋಷಿಸುವುದರಿಂದ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಅದರ ಸೇವನೆಯು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಮೃದುವಾಗಿ ಹೊಳೆಯುತ್ತವೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
ಹಾಲಿನ ವೈರಿಗಳಿಗೂ ಲಾಭಕಾರಿ
ಲ್ಯಾಕ್ಟೋಸ್ ಇನ್ಟಾಲರನ್ಸ್ ಹೊಂದಿರುವ ಅಥವಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿದ ಬಳಿಕ ಅನಪೇಕ್ಷಿತ ಜೀರ್ಣ ಸಮಸ್ಯೆಗಳನ್ನು ಅನುಭವಿಸುವವರು ಯಾವುದೇ ಹಿಂಜರಿಕೆಯಿಲ್ಲದೆ ತುಪ್ಪವನ್ನು ಸೇವಿಸಬಹುದು. ಅದರಲ್ಲಿ ಅತ್ಯಂತ ಅಲ್ಪ ಪ್ರಮಾಣದಲ್ಲಿ ಲ್ಯಾಕ್ಟೋಸ್ ಇರುವುದರಿಂದ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಇಂತಹ ವ್ಯಕ್ತಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ನೈಸರ್ಗಿಕ ಕ್ಯಾನ್ಸರ್ ಪ್ರತಿರೋಧಕ
ತುಪ್ಪವು ಶರೀರದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುವ ಕ್ಯಾನ್ಸರ್ ಪ್ರತಿರೋಧಕ ಗುಣಗಳನ್ನು ಹೊಂದಿರುವುದರಿಂದ ಈ ಮಾರಣಾಂತಿಕ ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.