‘‘ನನ್ನ ಮನೆಯ ಮೇಲೆ ನಾಲ್ಕು ದಾಳಿಗಳಾಗಿವೆ’’ -ಡಾ. ಜೆ. ಎಸ್. ಬಂದೂಕ್ವಾಲಾ
ಭಾಗ-2
♦ ನಾಲ್ಕು ದಾಳಿಗಳು?
ಉ: ಮೊದಲ ದಾಳಿ, 1981ರಲ್ಲಿ ನಡೆಯಿತು. ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಚಳವಳಿಯೊಂದು ನಡೆಯುತ್ತಿತ್ತು. ನಾನು ಆಗ ಮಹಾರಾಜ ಸಯ್ಯಿಜಿರಾವ್ ವಿಶ್ವವಿದ್ಯಾನಿಲಯದ ಹಾಸ್ಟೆಲ್ ವಾರ್ಡನ್ ಆಗಿದ್ದೆ. ದಲಿತ ವಿದ್ಯಾರ್ಥಿಗಳನ್ನು ರಕ್ಷಿಸು ವುದು ನನ್ನ ಕರ್ತವ್ಯ ಅನ್ನಿಸಿತು. ಅವರಿಗೆ ಬೆಂಬಲ ನೀಡುವುದಕ್ಕಾಗಿ ಹರಿಜನ ಲೊಕಾಲಿಟಿಯೊಂದರಲ್ಲಿ ನಾನು ಮೂರು ದಿನ ಉಪವಾಸ ಸತ್ಯಾಗ್ರಹ ಮಾಡಿದೆ. ನನ್ನ, ಉಪವಾಸ ಮುಗಿದ ಕೂಡಲೆ, ನನ್ನ ಮನೆಯ ಮೇಲೆ ದಾಳಿ ಮಾಡಲಾಯಿತು.
ಅದಾಗಿ ಒಂದು ವರ್ಷದ ಬಳಿಕ ಎರಡನೆಯ ದಾಳಿ ನಡೆಯಿತು. ಆಗ ವಡೋದರಾದ ಪೊಲೀಸ್ ಕಮಿಶನರ್ ಆಗಿದ್ದ ಜಸ್ಪಾಲ್ಸಿಂಗ್ ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿದ್ದರು ಮತ್ತು ಮುಸ್ಲಿಮರು ವಾಸಿಸುತ್ತಿದ್ದ ಪ್ರದೇಶಗಳನ್ನು ಮಿನಿ ಪಾಕಿಸ್ತಾನ ಎಂದು ಕರೆಯುತ್ತಿದ್ದರು. ಆ ವರ್ಷ ಮುಹರ್ರಂ ವೇಳೆ ಘರ್ಷಣೆಗಳು ನಡೆದಿದ್ದವು, ಘರ್ಷಣೆಯಲ್ಲಿ ಬಂಧಿತರಾದ ಮುಸ್ಲಿಮರ ಮೇಲೆ ಪಾಶವೀ ದೌರ್ಜನ್ಯ ನಡೆಸಲಾಯಿತು. ಅದರ ವಿರುದ್ಧ ಸಾರ್ವಜನಿಕವಾಗಿಯೇ ನಾನು ಧ್ವನಿ ಎತ್ತಿದೆ. ದೊಂಬಿಗಳು ಆರಂಭವಾದಾಗ ನನ್ನ ಮನೆಯ ಮೇಲೆ ದಾಳಿ ನಡೆಸಲಾಯಿತು. ನನಗೆ ಆ ಘಟನೆ ಚೆನ್ನಾಗಿ ನೆನ ಪಿದೆ. ಯಾಕೆಂದರೆ ಅವರು ನನ್ನ ರೆಫ್ರಿಜಿರೇಟರನ್ನು ನನ್ನ ಅಪಾರ್ಟ್ ಮೆಂಟಿನ ಮೊದಲ ಮಹಡಿಯಿಂದ ಕೆಳಗೆ ಎಸೆದಿದ್ದರು.
♦ ಆಗ ನೀವು ಎಲ್ಲಿ ಉಳಿದುಕೊಂಡಿದ್ದೀರಿ?
ಉ: ಯುನಿವರ್ಸಿಟಿ ಕ್ಯಾಂಪಸ್ನಲ್ಲಿ. ಮೂರನೆಯ ದಾಳಿ 2002ರಲ್ಲಿ ನಡೆಯಿತು. ಫೆಬ್ರವರಿ 28ರ ರಾತ್ರಿ 8ಕ್ಕೆ ನಾನು(ಹಿಂದುತ್ವ ಸಿದ್ಧಾಂತಿ) ವೀರ್ ಸಾವರ್ಕರ್ರವರ ಜೀವನದ ಕುರಿತು ಮಾತನಾಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ನನ್ನ ಬಳಿ ಬಂದು ‘‘ಯಾವ ಮುಸ್ಲಿಮನೂ ಯಾವತ್ತೂ ಅವರ(ಸಾವರ್ಕರ್) ಬಗ್ಗೆ ಮಾತಾಡುವುದಿಲ್ಲ; ಫೆಬ್ರವರಿ 26ರಂದು ನೀವು ಮಾತನಾಡಬೇಕು’’ ಎಂದರು. ನಾನು ಮಾತನಾಡಿದೆ. ಆದರೆ ನನ್ನ ಭಾಷಣದ ಕೊನೆಯ ವಾಕ್ಯ ಅವರಿಗೆ ಇಷ್ಟವಾಗಲಿಲ್ಲ.
♦ ಆ ಕೊನೆಯ ವಾಕ್ಯ ಯಾವುದು?
ಉ: ನಾನು ಹೇಳಿದೆ: ‘‘ನನ್ನ ಮಿತ್ರರೇ, ಭಾರತದ ಮುಂದೆ ಎರಡು ಆಯ್ಕೆಗಳಿವೆ ಎಂಬುದನ್ನು ನೆನಪಿನಲ್ಲಿಡಿ. ಒಂದು ಆಯ್ಕೆ, ಪ್ರತಿಯೊಂದು ಮಗುವಿಗೂ, ಅವನು ಅಥವಾ ಅವಳು ತಾನು ಭಾರತದ ಒಂದು ಭಾಗ ಎಂದು ಅನ್ನಿಸುವ ಹಾದಿ. ಮಹಾತ್ಮಾ ಗಾಂಧಿಯವರ ಹಾದಿ. ಇದಕ್ಕೆ ವಿರುದ್ಧವಾಗಿ, ಸಾವರ್ಕರ್ರವರ ಹಾದಿ. ಈ ಹಾದಿಯಲ್ಲಿ ಹಲವು ಭಾರತೀಯರಿಗೆ ತಾವು ಭಾರತದ ಒಂದು ಭಾಗ ಅಲ್ಲ ಎಂದು ಅನ್ನಿಸುತ್ತದೆ. ಈ ಹಾದಿ ಭಾರತದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತದೆ.’’
ನನ್ನ ಭಾಷಣ ಮುಗಿದು 8 ಗಂಟೆಗಳ ನಂತರ, ಫೆಬ್ರವರಿ 27ರಂದು, ಗೋಧ್ರಾ ಟ್ರೈನ್ ಘಟನೆ ನಡೆಯಿತು. ದಾಳಿ ನಡೆದ ಹಲವು ಮನೆಗಳಲ್ಲಿ ಮೊದಲು ದಾಳಿ ನಡೆದದ್ದು ನನ್ನ ಮನೆಯ ಮೇಲೆ. ನಾನು ತುಂಬ ಚೆಂದದ ಒಂದು ಮನೆ ಕಟ್ಟಿಸಿದ್ದೆ. ಅದು ಭಾಗಶಃ ಹಾನಿಗೊಳಗಾಯಿತು. ಆದರೆ, ಅವರು ಮರುದಿನ ಪುನಃ ದಾಳಿ ನಡೆಸಿದರು. ಅಲ್ಲಾಹು ಒಬ್ಬನೇ ನನ್ನನ್ನು ಉಳಿಸಿದ.
ನಾನು ನೆರೆಮನೆಯವರೊಬ್ಬರ ಮನೆಗೆ ಹೋದೆ. ಅವರು ಒಂದು ಬ್ರಾಹ್ಮಣ ಕುಟುಂಬದವರು. ಅವರು ನನ್ನನ್ನು ಒಳಗೆ ಕರೆದು ಅವರ ಮನೆಯ ಬಾತ್ರೂಮ್ನಲ್ಲಿ ನನ್ನನ್ನು ಅಡಗಿಸಿಟ್ಟರು. ದಾಳಿ ನಡೆದದ್ದು ಆಗ. ಅವರು ಎಲ್ಲವನ್ನೂ ಪುಡಿಗಟ್ಟುತ್ತಿದ್ದರು. ಪೊಲೀಸ್ ಕಾನ್ಸ್ಟೇಬಲ್ಗಳಲ್ಲಿ ಒಬ್ಬ ಹೇಳುವುದನ್ನು ನಾನು ಕೇಳಿಸಿಕೊಂಡೆ. ‘‘ನಿಮಗೆ 15 ನಿಮಿಷ ಇದೆ. ನಿಮಗೆ ಬೇಕಾದ್ದನ್ನು ಮಾಡಿ’’.
♦ ಆಮೇಲೆ ನೀವು ಎಲ್ಲಿಗೆ ನಿಮ್ಮ ನಿವಾಸವನ್ನು ಸ್ಥಳಾಂತರಿಸಿದಿರಿ?
ಉ: ಒಂದು ಮುಸ್ಲಿಂ ಕುಟುಂಬ ನಮಗೆ ಆಶ್ರಯ ನೀಡಿತು. ನಾನು ಮತ್ತು ನನ್ನ ಮಗಳು ಅವರ ಮನೆಗೆ ಹೋದೆವು. ಸ್ವಲ್ಪ ಸಮಯದ ಬಳಿಕ ನಾವು, ನನ್ನ ಮಗ ಇರುವ ಅಮೆರಿಕಕ್ಕೆ ಹೋದೆವು. ನಾನು ಮೂರು ತಿಂಗಳುಗಳ ಬಳಿಕ ಮರಳಿ ಬಂದೆ. ನಾನು ಮಹಾರಾಜ ಸಯ್ಯೆಜಿರಾವ್ ವಿವಿ ಬಳಿ ನನಗೊಂದು ಸ್ಟಾಫ್ ಕ್ವಾರ್ಟಸ್ ನೀಡುವಂತೆ ವಿನಂತಿಸಿದೆ. ನಾಲ್ಕು ಅಪಾರ್ಟ್ಮೆಂಟ್ಗಳಿದ್ದ ಒಂದು ಬ್ಲಾಕ್ನಲ್ಲಿ ನನಗೆ ಒಂದು ಫ್ಲಾಟ್ ನೀಡಿದರು. ನಾನು ಅಲ್ಲಿಗೆ ಶಿಫ್ಟ್ ಆದಾಗ, ಅಲ್ಲಿದ್ದ ಇತರ ಮೂರು ಕುಟುಂಬಗಳು ಆ ಕಟ್ಟಡವನ್ನೇ ತೊರೆದುಹೋದರು.
♦ ಯುನಿವರ್ಸಿಟಿಯ ಜನ ಹಾಗೆ ಮಾಡಿದರೆ?
ಉ: ಹೌದು. ಯಾರೂ ನನ್ನ ಸಮೀಪ ವಾಸಿಸಲು ಇಷ್ಟಪಡಲಿಲ್ಲ.
♦ 1972ರಲ್ಲಿ ಇದ್ದ ಗುಜರಾತ್, ನೀವು ಅಮೆರಿಕದಿಂದ ಭಾರತಕ್ಕೆ ಮರಳಿದಾಗ ಭಾರೀ ಬದಲಾಗಿದೆ ಎಂಬುದು ನಿಮ್ಮ ಕಥಾನಕದಿಂದ ತಿಳಿಯುತ್ತದೆ.
ಉ: ಹೌದು. ಗುಜರಾತ್ ಈಗ ಸಂಪೂರ್ಣವಾಗಿ ಬದಲಾಗಿದೆ. 1959ರಲ್ಲಿ ನೆಹರೂರವರು ಮಾರ್ಟಿನ್ ಲೂಥರ್ಕಿಂಗ್ರವರನ್ನು ಭಾರತಕ್ಕೆ ಆಹ್ವಾನಿಸಿದರು. ದಿಲ್ಲಿಯಿಂದ ಅಹ್ಮದಾಬಾದ್ಗೆ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನದಲ್ಲಿ ಅವರು ಅಮೆರಿಕನ್ ಪತ್ರಕರ್ತನೊಬ್ಬನೊಡನೆ ತಾನು ಭಾರತಕ್ಕೆ ಒಬ್ಬ ಪ್ರವಾಸಿಯಾಗಿ ಬಂದಿದ್ದೇನೆ; ಆದರೆ ಅಹ್ಮದಾಬಾದ್ಗೆ ಒಬ್ಬ ಯಾತ್ರಿಕನಾಗಿ ಹೋಗುತ್ತಿದ್ದೇನೆ ಎಂದು ಹೇಳಿದರು. ಈಗ ಯಾರಾದರೂ ತಾನು ಗುಜರಾತಿಗೆ ಒಬ್ಬ ಯಾತ್ರಿಕನಾಗಿ ಹೋಗುತ್ತಿದ್ದೇನೆ ಎಂದು ಹೇಳುವುದನ್ನು ನೀವು ಎಂದಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ?
♦ ನೀವ್ಯಾಕೆ ಹಾಗೆ ಹೇಳುತ್ತೀರಿ?
ಉ: ಬಿಜೆಪಿ-ಆರೆಸ್ಸೆಸ್ ಮತ್ತು ನರೇಂದ್ರಮೋದಿ ಗುಜರಾತ್ಗೆ ಏನು ಮಾಡಿದ್ದಾರೋ, ಆ ಕಾರಣಕ್ಕಾಗಿ ಹೀಗೆ ಹೇಳುತ್ತಿದ್ದೇನೆ. ಅವರು ಸಮಾಜವನ್ನು ಸಂಪೂರ್ಣವಾಗಿ ಧ್ರುವೀಕರಿಸಿದ್ದಾರೆ ಮತ್ತು ಒಡೆದಿದ್ದಾರೆ.
♦ ಮೋದಿ ಪ್ರಧಾನಿಯಾಗಿ ದಿಲ್ಲಿಗೆ ಹೋದ ಬಳಿಕ ಅಂದರೆ 2014ರ ನಂತರ, ಗುಜರಾತಿನಲ್ಲಿ ಮುಸ್ಲಿಮರಿಗೆ ಪರಿಸ್ಥಿತಿ ಬದಲಾವಣೆಯಾಗಿದೆಯೇ?
ಉ: ಇಲ್ಲಿ (ಗುಜರಾತ್ನಲ್ಲಿ) ಮೋದಿಯವರಿದ್ದ ಹನ್ನೆರಡು ವರ್ಷಗಳಲ್ಲಿ ಅವರು ಗುಜರಾತಿ ಸಮಾಜವನ್ನು ಯಶಸ್ವಿಯಾಗಿ ಕಮ್ಯುನಲೈಸ್ ಮಾಡಿ ದರು. ಮುಸ್ಲಿಮರಿಗೆ ಹಲವರು ಹಿಂದೂ ಗೆಳೆಯರಿದ್ದ ಒಂದು ಕಾಲವಿತ್ತು. ಆದರೆ ಅಂತಹ ಸಂಬಂಧಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಪ್ರತಿವರ್ಷ ಈದ್ನ ವೇಳೆ ಹಲವು ಜನ ನನ್ನ ಮನೆಗೆ ಬಂದು ಹಬ್ಬದೂಟ ಮಾಡುತ್ತಿದ್ದರು. ಈಗ ಬರುವವರೇ ಇಲ್ಲ ಎನ್ನಬಹುದು.
♦ ಹಾರ್ದಿಕ್ ಪಟೇಲ್ ಅಥವಾ ಜಿಗ್ನೇಶ್ ಮೆವಾನಿಯಂತಹ ಒಬ್ಬ ನಾಯಕ ಮುಸ್ಲಿಮರ ಮಧ್ಯೆ ಯಾಕೆ ಮೂಡಿಬಂದಿಲ್ಲ?
ಉ: ಇದು ಉದ್ದೇಶಪೂರ್ವಕ ಹಿಂದೂಗಳನ್ನು ಒಂದುಗೂಡಿಸಲು ಮುಸ್ಲಿಮರನ್ನು (ದಾಳಿಗಳ) ಗುರಿಯಾಗಿಸುವುದನ್ನವಲಂಬಿಸಿಯೇ ಮೋದಿ ಯವರ ರಾಜಕಾರಣ ಕಾರ್ಯಾಚರಿಸುತ್ತದೆ. ಏನಿದ್ದರೂ ನಾವು ರಾಜಕೀಯ ಅಧಿಕಾರದಲ್ಲಿ ಆಸಕ್ತರಲ್ಲ. ನಮ್ಮ ಗುರಿ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆ. ಮುಸ್ಲಿಮರು ಚುನಾವಣೆಗೆ ಸ್ಪರ್ಧಿಸುವುದನ್ನು ನಾನು ವಿರೋಧಿಸುತ್ತೇನೆ. ಇವತ್ತು ನಾನು ಮೋದಿ ವಿರುದ್ಧ ಚುನಾವಣೆಯಲ್ಲಿ ಹೋರಾಡುವ ಬದಲು ಕಾಂಗ್ರೆಸ್ಗೆ ಒಂದು ಪಾಕೆಟ್ ಓಟ್ ಆಗಬಯಸುತ್ತೇನೆ, ಚುನಾವಣೆ ಮುಸ್ಲಿಮರ ವಿರುದ್ಧದ ಒಂದು ಕಾದಾಟವಾಗುವುದನ್ನು ನಾನು ಬಯಸುವುದಿಲ್ಲ.
♦ ಹಾಗಾದರೆ ಈ ವರ್ಷ ನೀವು ಮುಸ್ಲಿಮರು ಸುಮ್ಮನೆ ಹೋಗಿ ಮತದಾನದ ದಿನ ಮತ ಚಲಾಯಿಸಬೇಕು ಎಂದಷ್ಟೆ ಹೇಳುತ್ತೀರಿ.?
ಉ: ಹೌದು, ಮುಸ್ಲಿಮರು ರಾಜಕೀಯದಿಂದ ದೂರ ಇರಬೇಕೆಂದು ನಾನು ಯಾಕೆ ಬಯಸುತ್ತೇನೆಂದರೆ ಮುಸ್ಲಿಮರು ರಾಜಕಾರಣಕ್ಕೆ ಬರುವುದರಿಂದ ಬಿಜೆಪಿಗೆ ಸಮಾಜವನ್ನು ಧ್ರುವೀಕರಿಸಲು ಸಹಾಯವಾಗುತ್ತದೆ. ಆದ್ದರಿಂದ ಸದ್ಯದ ಮಟ್ಟಿಗೆ ಅವರು ರಾಜಕಾರಣಕ್ಕೆ ಬರಬಾರದು.
ಕೃಪೆ: scroll.in