ಈ ಬಾರಿ ಗುಜರಾತ್ ಮಾದರಿ ಗೆಲ್ಲಲು ಸಾಧ್ಯವೇ?
ಮೋದಿಯವರ ಮಾತುಗಳು ಸೃಷ್ಟಿಸುವ ಮೋಡಿಗೆ ಬಲಿಯಾಗಿ ಮೂರ್ಖರಾದವರಿಗೆ ಸತ್ಯಾಂಶಗಳೇನೆಂದು ತಿಳಿಯುವುದು ಬೇಕಿರಲಿಲ್ಲ. ಆದರೆ ಈಗ ಗಗನಕ್ಕೇರುತ್ತಿರುವ ಬೆಲೆಗಳು, ತಾಂಡವವಾಡುತ್ತಿರುವ ನಿರುದ್ಯೋಗದ ಸಮಸ್ಯೆ, ಏರಿದ ಹಿಂಸಾಚಾರಗಳಿಂದ ತತ್ತರಿಸುತ್ತಿರುವ ಜನತೆಗೆ ಶಾಂತಿ, ಸೌಹಾರ್ದ, ನೆಮ್ಮದಿಯ ಬದುಕು ಗಗನಕುಸುಮದಂತಾಗಿರುವಾಗ ಭ್ರಮೆಯ ಪರದೆ ನಿಧಾನಕ್ಕೆ ಕಳಚಿಬೀಳುತ್ತಿದೆ.
ನರೇಂದ್ರ ಮೋದಿಯವರು ಅಂದು 2014ರ ಚುನಾವಣಾ ಪ್ರಚಾರ ಕಾಲದಲ್ಲಿ ಬಿಗಿಯುತ್ತಿದ್ದ ನೂರಾರು ಭಾಷಣಗಳಲ್ಲಿ ಗುಜರಾತ್ ಮಾದರಿ ಅಭಿವೃದ್ಧಿಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದುದನ್ನು ಯಾರು ತಾನೆ ಮರೆಯಬಲ್ಲರು? ಗುಜರಾತ್ ರಾಜ್ಯ ನಿಜವಾಗಿಯೂ ಅಭಿವೃದ್ಧಿ ಹೊಂದಿದ್ದ ಪಕ್ಷದಲ್ಲಿ ಮೋದಿಯವರ ಇಂದಿನ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಅಭಿವೃದ್ಧಿ ಬಿಟ್ಟು ಬೇರೇನೂ ಮಾತುಗಳು ಇರಬಾರದಿತ್ತು, ಅಲ್ಲವೇ? ಆದರೆ ಇಂದು ಅಭಿವೃದ್ಧಿಯ ಮಾತು ಪೂರ್ತಿ ನಾಪತ್ತೆಯಾಗಿ ಹಿಂದುತ್ವ, ರಾಮ ಮಂದಿರಗಳ ಭಜನೆ ಪ್ರಾರಂಭವಾಗಿದೆ. ಇದರರ್ಥ ಒಂದೇ: ಇಂದು ಅಂದಿನ ಹಾಗೆ ಮತದಾರರನ್ನು ಮೋಸಗೊಳಿಸಲು ಸಾಧ್ಯವಿಲ್ಲವೆಂದು ಮೋದಿಗೆ ಮನವರಿಕೆಯಾಗಿದೆ. ಅಸಲಿಗೆ ಗುಜರಾತ್ ಅಂದು ಇತರ ಹಲವಾರು ರಾಜ್ಯಗಳಿಗಿಂತ ಹಿಂದಿತ್ತು ಮತ್ತು ಈಗಲೂ ಹೆಚ್ಚುಕಡಿಮೆ ಹಾಗೇ ಇದೆ. ಇದನ್ನು ಇಂದು ಗುಜರಾತಿನ ಬಹುತೇಕ ಜನ ಗಮನಿಸಿದ್ದಾರೆ; ಗುಜರಾತ್ ಮಾದರಿ ಅಭಿವೃದ್ಧಿ ಬರೀ ಮಿಥ್ಯವೆಂಬ ಸತ್ಯವನ್ನು ಅರ್ಥಮಾಡಿಕೊಂಡಿದ್ದಾರೆ.
ಲೊಟ್ಟೆ ಘೋಷಣೆಗಳ ಸರದಾರ ಮೋದೀ ಜಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಕೂಡಾ ಅಪ್ಪಟ ಮತಗಟ್ಟೆಯ ರಾಜಕಾರಣವಾಗಿತ್ತು. ಇದಕ್ಕೆ 2014ರಿಂದ ಇದುವರೆಗೆ ನಡೆದಿರುವ ನೂರಾರು, ಸಾವಿರಾರು ಜನವಿಕಾಸ ವಿರೋಧಿ ಘಟನೆಗಳೇ ಸಾಕ್ಷಿ. ಕಳೆದ ಮೂರೂವರೆ ವರ್ಷಗಳಲ್ಲಿ ವಿಕಾಸದ ಹೆಸರಿನಲ್ಲಿ ಮೋದಿ ಸರಕಾರ ಮಾಡಿರುವ ದುಸ್ಸಾಧನೆಗಳೆಂದರೆ ಮಿತ್ರ ಕಾರ್ಪೊರೇಟುಗಳ ಉದ್ಧಾರ, ರೈತರ ಸಮಸ್ಯೆಗಳ ಅವಗಣನೆ, ಕೃಷಿ ವಿಮೆ ಹೆಸರಿನಲ್ಲಿ ಲೂಟಿ, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌಜನ್ಯಗಳಲ್ಲಿ ಹೆಚ್ಚಳ, ವಾಕ್ಸ್ವಾತಂತ್ರ್ಯದ ದಮನ, ಅಘೋಷಿತ ತುರ್ತು ಪರಿಸ್ಥಿತಿ, ನೋಟು ರದ್ದತಿ, ಜಿಎಸ್ಟಿ ಇತ್ಯಾದಿ ಇತ್ಯಾದಿ....... ಮೋದಿಯ ಆಡಳಿತಾವಧಿಯಲ್ಲಿ ಗುಜರಾತ್ ರಾಜ್ಯದಲ್ಲಿ ಮೂಲಭೂತ ವ್ಯವಸ್ಥೆಗಳಿಗೆಂದು ಪಡೆದ ಸಾಲದ ಪ್ರಮಾಣ ರೂ. 53,000 ಕೋಟಿಗಳಿಂದ ರೂ. 1,65,000 ಕೋಟಿಗಳಿಗೇರಿತ್ತು. ಆದರೆ ದಲಿತರು, ಪಾಟಿದಾರರು, ಅಲ್ಪಸಂಖ್ಯಾತರು ಮುಂತಾದ ಜನವರ್ಗಗಳಲ್ಲಿ ಅತೃಪ್ತಿ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಸಾಲದ ಮೊತ್ತ ಯಾವುದಕ್ಕಾಗಿ, ಯಾರ ವಿಕಾಸಕ್ಕಾಗಿ ವೆಚ್ಚವಾಗಿದೆ ಎಂಬ ಪ್ರಶ್ನೆ ಇದೆ.
ರೆಹನುಮಾ ಸಂಸ್ಥೆ ಕೈಗೊಂಡ ಅಧ್ಯಯನವೊಂದು ಗುಜರಾತಿನ ಅಲ್ಪಸಂಖ್ಯಾತರ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಗುಜರಾತ್ ಒಳಗೊಂಡಂತೆ ಏಳು ರಾಜ್ಯಗಳ 2015-16, 2016-17, 2017-18ರ ಸಾಲಿನ ಬಜೆಟ್ಗಳನ್ನು ಹೋಲಿಸಿದಾಗ ಅಲ್ಪಸಂಖ್ಯಾತರಿಗಾಗಿ ಅತ್ಯಂತ ಕಡಿಮೆ ಮೊತ್ತಗಳನ್ನು ಮೀಸಲಿಟ್ಟ ರಾಜ್ಯವೆಂದರೆ ಗುಜರಾತ್ ಎಂದು ಅಧ್ಯಯನ ಹೇಳುತ್ತದೆ. ಉದಾಹರಣೆಗೆ 2017-18ರ ಸಾಲನ್ನು ತೆಗೆದುಕೊಂಡರೆ ಪಶ್ಚಿಮ ಬಂಗಾಳದಲ್ಲಿ ರೂ. 3,471 ಕೋಟಿ ಮೀಸಲಿಡಲಾಗಿದ್ದರೆ ಗುಜರಾತ್ನಲ್ಲಿ ಬರೀ ರೂ. 51.44 ಕೋಟಿ ತೆಗೆದಿರಿಸಲಾಗಿದೆ. ಶೇ.ವಾರು ಪ್ರಮಾಣ ನೋಡಿದರೆ ಪ. ಬಂಗಾಳದಲ್ಲಿ ಇದು ಒಟ್ಟು ಬಜೆಟಿನ ಶೇ. 1.9ರಷ್ಟು ಇದ್ದರೆ ಗುಜರಾತಿನಲ್ಲಿ ಕೇವಲ ಶೇ. 0.029! ಇನ್ನು ಕರ್ನಾಟಕದ 2015-16ರ ಸಾಲಿನ ಬಜೆಟಿನಲ್ಲಿ ಅಲ್ಪಸಂಖ್ಯಾತರಿಗಾಗಿ ರೂ. 845.02 ಕೋಟಿ ತೆಗೆದಿರಿಸಲಾಗಿದ್ದರೆ 2017-18ರಲ್ಲಿ ಅದನ್ನು ರೂ. 2,199.94 ಕೋಟಿಗೆ ಏರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯನ್ನು ಆಧರಿಸಿ ತಯಾರಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ 13ನೇ ಸ್ಥಾನದಲ್ಲಿದೆ. ಅದೇ ರೀತಿ ಶಿಶು ಮರಣಗಳ ಪಟ್ಟಿಯಲ್ಲಿ 17ನೇ, ಆಯುಸ್ಸು ನಿರೀಕ್ಷೆಯಲ್ಲಿ 19ನೇ, ಲಿಂಗಾನುಪಾತದ ಪಟ್ಟಿಯಲ್ಲಿ 21ನೇ ಮತ್ತು ಸಾಕ್ಷರತೆಯ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಗುಜರಾತಿನ ಶೇ. 49ರಷ್ಟು ಮಕ್ಕಳು ಪೌಷ್ಟಿಕತೆಯ ಅಭಾವದಿಂದ ನರಳುತ್ತಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಈ ಅಂಕಿಅಂಶಗಳು ಹೆಚ್ಚುಕಮ್ಮಿ ಇದೇ ರೀತಿ ಇದ್ದವು. ಹಾಗಾದರೆ ಇದೆಂಥಾ ಅಭಿವೃದ್ಧಿ, ಕನಸಿನಲ್ಲಿ ಸಹಿತ ಹಾಗೆ ಹೇಳಲು ಸಾಧ್ಯವಿದೆಯೇ ಎಂದು ಗುಜರಾತಿಗಳು ಕೇಳುತ್ತಿದ್ದಾರೆ.
ಆದರೆ ಸರಕಾರ ಇದಕ್ಕೆ ಉತ್ತರಿಸಲಾರದು. ಏಕೆಂದರೆ ಗುಜರಾತಿನಲ್ಲಿ ಅಸಲಿಗೆ ದೊಡ್ಡ ಉದ್ದಿಮೆಗಳ ಸ್ಥಾಪನೆಗೆಂದು ಭೂಮಿ, ನೀರು, ವಿದ್ಯುತ್, ತೆರಿಗೆ ಇತ್ಯಾದಿಗಳಲ್ಲಿ ಸಕಲ ರೀತಿಯ ರಿಯಾಯಿತಿ, ವಿನಾಯಿತಿಗಳನ್ನು ಪಡೆದುಕೊಂಡ ಬಾಲಂಗೋಚಿ ಕಾರ್ಪೊರೇಟು ಕುಳಗಳು ಎಣೆಯಿಲ್ಲದಷ್ಟು ಅಭಿವೃದ್ಧಿಯಾಗಿವೆೆ! ಹೊಸ ಉದ್ದಿಮೆಗಳು ಶೇ. 85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕೆಂಬ ಸರಕಾರದ ಆದೇಶವೂ ಬರೀ ಕಾಟಾಚಾರದ್ದಾಗಿತ್ತು. ಏಕೆಂದರೆ ಭರವಸೆ ಇತ್ತಷ್ಟು ಉದ್ಯೋಗಗಳು ಸೃಷ್ಟಿಯಾಗಿಲ್ಲ. ಗುಜರಾತಿನಲ್ಲಿ ಇಂದು ಲಕ್ಷಾಂತರ ಯುವಜನರು ಉದ್ಯೋಗಗಳಿಲ್ಲದೆ ಪರದಾಡುತ್ತಿದ್ದಾರೆ. ನಿರುದ್ಯೋಗದ ದರ ಶೇ. 6.8ಕ್ಕೆ ಏರಿದ್ದು ಇದು ರಾಷ್ಟ್ರೀಯ ದರಕ್ಕಿಂತಲೂ ಜಾಸ್ತಿ. 2004ರಿಂದ 2015 ತನಕ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ದಾಖಲಾಗಿದ್ದ ಸುಮಾರು 43.44 ಲಕ್ಷ ನಿರುದ್ಯೋಗಿಗಳ ಪೈಕಿ ಉದ್ಯೋಗ ಸಿಕ್ಕಿರುವುದು ಕೇವಲ 24.41 ಲಕ್ಷ ಮಂದಿಗೆ; ಸುಮಾರು 19.09 ಲಕ್ಷ ಜನರಿಗೆ ಉದ್ಯೋಗ ಇನ್ನೂ ಕನಸಿನ ಗಂಟಾಗಿಯೇ ಉಳಿದಿದೆ. ಈ ಅಂಕಿಅಂಶಗಳು ಕೇವಲ ಸಂಘಟಿತ ವಲಯಕ್ಕೆ ಸಂಬಂಧಿಸಿವೆ. ಸುಮಾರು ಶೇ. 90ರಷ್ಟು ಕಾರ್ಮಿಕರಿರುವ ಅಸಂಘಟಿತ ವಲಯದ ನಿರುದ್ಯೋಗಿಗಳ ಸಂಖ್ಯೆ ಹಲವು ಲಕ್ಷಗಳನ್ನು ದಾಟಬಹುದು. ಏಕೆಂದರೆ ನೋಟು ರದ್ದತಿ ಮತ್ತು ಜಿಎಸ್ಟಿಗಳ ಅತ್ಯಧಿಕ ದುಷ್ಪರಿಣಾಮ ಆಗಿರುವುದು ಇದೇ ವಲಯದ ಮೇಲೆ. ಮತ್ತೊಂದು ವಿಷಯವೆಂದರೆ 2009ರ ತನಕ ಉದ್ಯೋಗಸೃಷ್ಟಿಯ ಅಂಕಿಅಂಶಗಳನ್ನು ಒದಗಿಸುತ್ತಾ ಇದ್ದ ಸರಕಾರ ಇದ್ದಕ್ಕಿದ್ದಂತೆ 2010ರ ಲಾಗಾಯ್ತು ಅದನ್ನು ಕೈಬಿಟ್ಟು ಕೇವಲ ಶೃಂಗಸಭೆಗಳ ಸಮಯದಲ್ಲಿ ಅದೂ ಸಂಭಾವ್ಯ ಉದ್ಯೋಗಗಳ ಸಂಖ್ಯೆಗಳನ್ನು ಪ್ರಕಟಿಸಲು ಶುರುಮಾಡಿದೆ. ಮೋದಿಯವರು 2009ರ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಮಾಡಿದ ಭಾಷಣದಲ್ಲಿ 29.81 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದೂ 2011ರ ಶೃಂಗಸಭೆಯಲ್ಲಿ 60.69 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದೂ ರೀಲು ಬಿಟ್ಟಿದ್ದರು.
ಆದರೆ ವಾಸ್ತವ ತೀರ ಭಿನ್ನವಾಗಿದೆ. ರಾಜ್ಯ ಸರಕಾರದ ಅಂಕಿಅಂಶಗಳ ಪ್ರಕಾರ 2008ರಿಂದ 2009ರ ತನಕದ ಒಂದು ವರ್ಷದಲ್ಲಿ ಸಂಘಟಿತ ವಲಯದಲ್ಲಿ ಬರೀ 1.1 ಲಕ್ಷ ಮಂದಿಗೆ ಉದ್ಯೋಗ ಲಭಿಸಿದೆ. ಮುಂದಿನ ವರ್ಷಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಸಾಗಿರುವ ಪರಿಸ್ಥಿತಿಯಲ್ಲಿ ಸರಕಾರ ಬಹುಶಃ ಮುಜುಗರದಿಂದ ತಪ್ಪಿಸಿಕೊಳ್ಳಲೆಂದು 2010ರ ನಂತರ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆಗೊಳಿಸುವುದನ್ನು ನಿಲ್ಲಿಸಿದೆ. ನೋಟು ರದ್ದತಿ ಮತ್ತು ಜಿಎಸ್ಟಿಗಳ ಪರಿಣಾಮವಾಗಿ ಅನೌಪಚಾರಿಕ ವಲಯದ ಸಣ್ಣ, ಮಧ್ಯಮ ಉದ್ದಿಮೆಗಳಿಗೆ ಬಿದ್ದ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಹೆಚ್ಚಿನವು ಮುಚ್ಚಬೇಕಾಗಿ ಬಂದಿರುವುದರಿಂದ ಕಳೆದ ಒಂದು ವರ್ಷದಿಂದೀಚೆಗಂತೂ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಮೋದಿಯವರ ತಥಾಕಥಿತ ಗುಜರಾತ್ ಮಾದರಿಯ ಒಂದು ಪ್ರಮುಖ ಅಂಶವಾಗಿದ್ದುದು ‘ವೈಬ್ರೆಂಟ್ ಗುಜರಾತ್’ ಯಾ ‘ಶಕ್ತಿಉತ್ಸಾಹ’ದ ಗುಜರಾತ್ ಶೃಂಗಸಭೆಗಳು. ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬ್ಯಾಂಡು, ವಾದ್ಯಗಳೊಂದಿಗೆ ಪ್ರಾರಂಭಿಸಿದ ಆ ದ್ವೈವಾರ್ಷಿಕ ‘ವೈಬ್ರೆಂಟ್ ಗುಜರಾತ್’ ಶೃಂಗಸಭೆ ಎಂಬುದು ರಾಜ್ಯದಲ್ಲಿ ಭಾರಿ ಹೂಡಿಕೆಯಾಗುತ್ತಿದೆ ಎಂಬ ಭ್ರಮೆಯನ್ನು ಬಿತ್ತುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೆಲ್ಲ ಬರೀ ಮೋಸ, ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೆಂದು ಎಷ್ಟು ಹೇಳಿದರೂ ಜನ ಅಂದು ನಂಬಲು ಸಿದ್ಧರಿರಲಿಲ್ಲ. ಏಕೆಂದರೆ ಅವರು ಮೋದಿಯವರ ಡೈಲಾಗ್ಗಳಿಗೆ ಮಾರುಹೋಗಿದ್ದರು. ಅವರ ಮಾತುಗಳು ಸೃಷ್ಟಿಸುವ ಮೋಡಿಗೆ ಬಲಿಯಾಗಿ ಮೂರ್ಖರಾದವರಿಗೆ ಸತ್ಯಾಂಶಗಳೇನೆಂದು ತಿಳಿಯುವುದು ಬೇಕಿರಲಿಲ್ಲ. ಆದರೆ ಈಗ ಗಗನಕ್ಕೇರುತ್ತಿರುವ ಬೆಲೆಗಳು, ತಾಂಡವವಾಡುತ್ತಿರುವ ನಿರುದ್ಯೋಗದ ಸಮಸ್ಯೆ, ಏರಿದ ಹಿಂಸಾಚಾರಗಳಿಂದ ತತ್ತರಿಸುತ್ತಿರುವ ಜನತೆಗೆ ಶಾಂತಿ, ಸೌಹಾರ್ದ, ನೆಮ್ಮದಿಯ ಬದುಕು ಗಗನಕುಸುಮದಂತಾಗಿರುವಾಗ ಭ್ರಮೆಯ ಪರದೆ ನಿಧಾನಕ್ಕೆ ಕಳಚಿಬೀಳುತ್ತಿದೆ.
‘ವೈಬ್ರೆಂಟ್ ಗುಜರಾತ್’ ಶೃಂಗಸಭೆಗಳ ಸಮಯದಲ್ಲಿ ಮಾಧ್ಯಮಗಳು ಉದ್ದುದ್ದ ವರದಿಗಳನ್ನು ಪ್ರಕಟಿಸುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಕೋಟಿಗಟ್ಟಲೆ ಮೊತ್ತದ ಅನೇಕ ಹೂಡಿಕೆ ಒಪ್ಪಂದಗಳಿಗೆ (ಎಂಒಯು) ಸಹಿಹಾಕಲಾಯಿತು ಎಂಬ ವಿಷಯಕ್ಕೆ ಭಾರೀ ಪ್ರಾಧಾನ್ಯತೆ ಇರುತ್ತದೆ. ತುತ್ತೂರಿ ಮಾಧ್ಯಮಗಳ ವಿಷಯವನ್ನಂತೂ ಕೇಳುವುದೇ ಬೇಡ, ಅಲ್ಲಿ ಅತಿರಂಜಿತ, ಉತ್ಪ್ರೇಕ್ಷಿತ ವರದಿಗಳು ನಿರ್ಭಿಡೆಯಾಗಿ ಬಿತ್ತರವಾಗುತ್ತಾ ಇರುತ್ತವೆ. ಇಂತಹ ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಂಒಯುಗಳಿಗೆ ಸಹಿಹಾಕಿದ ಸುದ್ದಿಯನ್ನು ಓದುವ ಜನ ಅದನ್ನು ನಿಜವೆಂದೇ ನಂಬಿ ರೋಮಾಂಚನಗೊಳ್ಳುವುದರಲ್ಲಿ ಅಚ್ಚರಿಯಿಲ್ಲ. ಆದರೆ ವಾಸ್ತವ ಏನೆಂದರೆ ಈ ಎಂಒಯುಗಳು ಬರೀ ಅನೌಪಚಾರಿಕ ಒಡಂಬಡಿಕೆಗಳಾಗಿವೆ ಹೊರತು ಕಾನೂನಾತ್ಮಕ ಒಪ್ಪಂದಗಳಲ್ಲ. ಅವು ಕೇವಲ ಉದ್ದೇಶಿತ ಹೂಡಿಕೆಯ ಅಂಕಿಅಂಶಗಳನ್ನಷ್ಟೇ ನೀಡುತ್ತವೆ! ಅಲ್ಲಿ ಹೂಡಿಕೆಯ ಗ್ಯಾರಂಟಿ ಇಲ್ಲ!
2003ರಿಂದ 2017ರ ತನಕ ಆಯೋಜಿಸಲಾದ ಇಂತಹ 8 ಶೃಂಗಸಭೆಗಳು ಎಷ್ಟು ಹೂಡಿಕೆಯನ್ನು ಆಕರ್ಷಿಸಲು ಸಫಲವಾಗಿವೆ ಎಂಬ ಮಾಹಿತಿಗಳನ್ನು ಕಲೆಹಾಕಲು ಹೊರಟ ಪತ್ರಕರ್ತೆ ಐಶ್ವರ್ಯ ಅಯ್ಯರ್ಗೆ ರಾಜ್ಯ ಸರಕಾರದಿಂದ ನಕಾರಾತ್ಮಕ ಸ್ಪಂದನೆ ದೊರೆತಿದೆ. 2012-2017ರ ಅವಧಿಯಲ್ಲಿ ನಡೆದಂತಹ ಮೂರು ಶೃಂಗಸಭೆಗಳ ಫಲಿತಾಂಶವನ್ನು ತಿಳಿಸಲು ಕೋರಿದ ಮಾಹಕಾ ಅರ್ಜಿಗಳಿಗೆ ಗುಜರಾತ್ ಸರಕಾರ ಬೇರೇನೋ ಅಸ್ಪಷ್ಟ ಉತ್ತರ ನೀಡುವ ಮೂಲಕ ಬೀಸುವ ದೊಣ್ಣೆಯಿಂದ ಪಾರಾಗಲು ಯತ್ನಿಸಿದೆ.
2015ರ ಶೃಂಗಸಭೆಯ ಬಳಿಕ ಸರಕಾರ ಹೊರಡಿಸಿದ ಪ್ರಕಟನೆಯಲ್ಲಿ ಒಟ್ಟು 22,602 ಎಂಒಯುಗಳಿಗೆ ಸಹಿಹಾಕಲಾಗಿದ್ದು ಉದ್ದೇಶಿತ ಹೂಡಿಕೆಯ ಮೊತ್ತ ರೂ. 25 ಲಕ್ಷ ಕೋಟಿ ಎಂದು ತಿಳಿಸಲಾಗಿತ್ತು. ಆದರೆ ಈಗ ಮಾಹಕಾ ಅನ್ವಯ ಕೇಳಲಾದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಉದ್ದೇಶಿತ ಹೂಡಿಕೆಯ ಮೊತ್ತ ರೂ. 16.3 ಲಕ್ಷ ಕೋಟಿ ಎನ್ನಲಾಗಿದೆ! ಹಾಗಾದರೆ ಇವೆರಡರಲ್ಲಿ ಯಾವುದು ಸರಿ, ಯಾವುದು ತಪ್ಪು? ಗುಜರಾತ್ ಸರಕಾರ ತನ್ನ 2013 ಮತ್ತು 2017ರ ಶೃಂಗಸಭೆಗಳ ಬಳಿಕ ಉದ್ದೇಶಿತ ಹೂಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಂಕಿಅಂಶಗಳನ್ನೂ ಬಿಡುಗಡೆಗೊಳಿಸಿಲ್ಲ ಎನ್ನುವುದು ವಿಚಿತ್ರ ಆದರೂ ಸತ್ಯ! 2013 ಮತ್ತು 2017ರ ಶೃಂಗಸಭೆಗಳ ಬಳಿಕ ನಿಜವಾಗಿ ಆಗಿರುವ ಹೂಡಿಕೆಯ ಮೊತ್ತ ಎಷ್ಟು ಎಂಬ ಮಾಹಕಾ ಪ್ರಶ್ನೆಗೆ ನೇರವಾಗಿ ಉತ್ತರಿಸದ ಸರಕಾರ ಕೇವಲ ಅನುಷ್ಠಾನಗೊಂಡ ಮತ್ತು ಪೂರ್ಣಗೊಂಡ ಯೋಜನೆಗಳ ಸಂಖ್ಯೆಯನ್ನು ನೀಡಿ, ವಿವರಗಳು ಲಭ್ಯವಿಲ್ಲವೆಂದು ತಿಳಿಸಿ ನುಣುಚಿಕೊಂಡಿದೆ! 2017ರ ಶೃಂಗಸಭೆಯಲ್ಲಿ 25,578 ಎಂಒಯುಗಳಿಗೆ ಸಹಿ ಹಾಕಲಾಗಿದೆ ಎಂದು ಟಾಂಟಾಂ ಮಾಡಿದ ಸರಕಾರ ಇಲ್ಲಿಯೂ ಉದ್ದೇಶಿತ ಹೂಡಿಕೆಯ ಮೊತ್ತದ ಬಗ್ಗೆ ಮೌನ ತಾಳಿದೆ. ಇದರ ಅರ್ಥವೇನು? ಇವೆೆಲ್ಲ ಬರೀ ಬೂಟಾಟಿಕೆಯ ಅಂಕಿಅಂಶಗಳೆಂದೇ?
ಇದು ಇಂದಿನ ಗುಜರಾತಿನ ಅಸಲಿ ಚಿತ್ರಣ. ಇದಕ್ಕೆ ಪೂರಕವಾಗಿ ಬಂದಿವೆ ಇತ್ತೀಚಿನ ಕೆಲವು ಘಟನೆಗಳು: * ಫ್ಯಾಶಿಸ್ಟ್ ಶಕ್ತಿಗಳು ಚುನಾವಣೆ ಸ್ಪರ್ಧಿಸುತ್ತಿರುವ ದಲಿತ ನಾಯಕ ಜಿಗ್ನೇಶ್ ಮೆವಾನಿ ಮೇಲೆ ಈಗಾಗಲೇ ನಾಲ್ಕು ದಾಳಿಗಳನ್ನು ನಡೆಸಿದ್ದಾರೆ. ಈ ಕುರಿತು ಜಿಗ್ನೇಶ್ ಮಾಡಿರುವ ಟ್ವೀಟ್ ಹೀಗಿದೆ:
ನರೇಂದ್ರ ಮೋದಿಯವರಿಗೆ:
ಸಾದರ ಪ್ರಣಾಮಗಳು. ನಾನೂ ಗುಜರಾತಿನ ಮಗ ಮೋದೀಜಿ, ಎದೆ 56 ಇಂಚಿನದಾಗಿರಲಿ ಇಲ್ಲದಿರಲಿ ಹೃದಯ ದೊಡ್ಡದಿರಲಿ. ಗೆಲ್ಲುತ್ತಿರುವವರ ಮೇಲೆ ದಾಳಿ ಮಾಡಿಸುವ ಐಡಿಯ ನಿಮ್ಮದು ಅಥವಾ ಅಮಿತ್ ಶಾರದು ಏಕೆಂದರೆ ಇದು ಗುಜರಾತಿನ ಪರಂಪರೆಯಂತೂ ಅಲ್ಲ.
- ಜಿಗ್ನೇಶ್ ಮೇವಾನಿ ಡಿಸೆಂಬರ್ 5, 2017
* ಅದೇ ಫ್ಯಾಸಿಸ್ಟ್ ಶಕ್ತಿಗಳಿಂದ ಸೆಕ್ಸ್ ವೀಡಿಯೊ ಮೂಲಕ ಗುಜರಾತಿನ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಮತ್ತು ಹಿಂದುಳಿದವರ ನಾಯಕ ಅಲ್ಪೇಶ್ ಠಾಕೂರ್ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ.
* ಮೋದಿಯವರ ಚುನಾವಣಾ ಸಭೆಗಳಲ್ಲಿ ಎದ್ದು ಕಾಣುತ್ತಿರುವ ಖಾಲಿ ಖಾಲಿ ಕುರ್ಚಿಗಳು.
* ಇತ್ತೀಚೆಗೆ ‘ಎಬಿಪಿ ನ್ಯೂಸ್’ ಎಂಬ ಟಿವಿ ವಾಹಿನಿಗಾಗಿ ಸಿಎಸ್ಡಿಎಸ್ - ಲೋಕನೀತಿ ನಡೆಸಿದ ಸಮೀಕ್ಷೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿಯ ಜನಪ್ರಿಯತೆಯಲ್ಲಿ ಭಾರೀ ಇಳಿಕೆಯಾಗಿದೆ. ಸದ್ಯದಲ್ಲೇ ನಡೆಯಲಿರುವ 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಶೇ. 43ರಷ್ಟು ಮತಗಳು ದೊರಕಲಿವೆ ಎಂದು ಸಮೀಕ್ಷೆಯ ಫಲಿತಾಂಶ ತಿಳಿಸುತ್ತದೆ. ಕಳೆದ 2012ರ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಗೆ ಶೇ. 48 ಮತಗಳು ಬಿದ್ದಿದ್ದರೆ 2014ರ ಲೋಕಸಭಾ ಚುನಾವಣೆಗಳಲ್ಲಿ ಶೇ. 59 ಮತಗಳು ಬಿದ್ದಿದ್ದವು. ಪರಿಸ್ಥಿತಿ ಹೀಗಿರುವಾಗ ಗುಜರಾತಿನ ಮತದಾರರು ಮತ್ತೆ ಅದೇ ಗುಜರಾತ್ ಮಾದರಿಗೆ ವೋಟು ಹಾಕಲಿರುವರೇ ಅಥವಾ ಬದಲಾವಣೆ ತರಲಿರುವರೇ ಎನ್ನುವುದು ಇಂದಿನ ಮಿಲಿಯನ್ ಡಾಲರ್ ಪ್ರಶ್ನೆ.
**********
(ಆಧಾರ: ದ ಕ್ವಿಂಟ್ ನಲ್ಲಿ ಐಶ್ವರ್ಯ ಅಯ್ಯರ್; ಕೌಂಟರ್ವ್ಯೆನಲ್ಲಿ ಹೇಮಂತ್ ಶಾ, ಸುರೇಶ್ ಮೆಹ್ತಾ, ರೋಹಿತ್ ಶುಕ್ಲಾ; ಕೌಂಟರ್ಕರೆಂಟ್ಸ್ ನಲ್ಲಿ ಜಾರ್ಜ್ ಅಬ್ರಹಾಂ; ಕೌಂಟರ್ವ್ಯೆ ಲೇಖನಗಳು)