ವಿಹಾರಕ್ಕೆಂದು ಈ ಪಾರ್ಕ್ ಗೆ ಹೋಗಬೇಡಿ: ಇದು 'ವಿಷಪೂರಿತ' ಉದ್ಯಾನವನ
ಸುಮಾರು 100 ವಿಷಪೂರಿತ, ಮಾದಕ ಸಸ್ಯಗಳನ್ನು ಹೊಂದಿರುವ ವಿಶಿಷ್ಟ ಉದ್ಯಾನವನವೊಂದು ಬ್ರಿಟನ್ನಿನ ನಾರ್ಥ್ಂಬರ್ಲ್ಯಾಂಡ್ನಲ್ಲಿರುವ ಏನಿಕ್ ಕ್ಯಾಸಲ್ ನಲ್ಲಿದ್ದು, ಇದನ್ನು ಪಾಯ್ಸನ್ ಗಾರ್ಡನ್ ಎಂದೇ ಕರೆಯಲಾಗುತ್ತಿದೆ. ಸುಂದರವಾದ 12 ಎಕರೆಗಳಷ್ಟು ವಿಶಾಲವಾದ ಏನಿಕ್ ಉದ್ಯಾನವನದಿಂದ ಸುತ್ತುವರಿದಿರುವ ಪಾಯ್ಸನ್ ಗಾರ್ಡನ್ ಕಪ್ಪುಬಣ್ಣದ ಪ್ರವೇಶದ್ವಾರಗಳನ್ನು ಹೊಂದಿದ್ದು, ಮಾರ್ಗದರ್ಶಿ ಜೊತೆಯಲ್ಲಿ ರುವ ಪ್ರವಾಸಿಗಳಿಗೆ ಮಾತ್ರ ಇಲ್ಲಿಗೆ ಪ್ರವೇಶಾವಕಾಶವಿದೆ. ಇಲ್ಲಿಗೆ ಭೇಟಿ ನೀಡುವವರು ಯಾವುದೇ ಗಿಡವನ್ನು ಮೂಸುವುದನ್ನು, ಮುಟ್ಟುವುದನ್ನು ಮತ್ತು ಎಲೆಗಳ ರುಚಿ ನೋಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಆದರೂ ಕೆಲವರು ಇಲ್ಲಿ ನಡೆದಾಡುವಾಗ ವಿಷಪೂರಿತ ಗಾಳಿಯನ್ನು ಸೇವಿಸಿ ಬವಳಿ ಬಂದು ಬೀಳುವ ಘಟನೆ ಗಳು ಆಗಾಗ್ಗೆ ನಡೆಯುತ್ತಿರುತ್ತವೆ.
ಏನಿಕ್ ಕ್ಯಾಸಲ್ ಮಾನವರಿಗೆ ಯಾವುದೇ ಕೆಡುಕನ್ನುಂಟು ಮಾಡದ ಹಲವಾರು ಸಸ್ಯಗಳನ್ನು ಹೊಂದಿದೆಯಾದರೂ ಅದರ ಕಪ್ಪು ಗೇಟ್ಗಳ ಹಿಂದೆ ಮಾರಣಾಂತಿಕ ವಿಷಯುಕ್ತ ಸಸ್ಯಗಳು ಬೆಳೆಯುತ್ತಿವೆ. 1995ರಲ್ಲಿ ನಾರ್ಥ್ಂಬರ್ಲ್ಯಾಂಡ್ನ ಡಚೆಸ್ ಆದ ಜೇನ್ ಪರ್ಸಿಗೆ ಆಕೆಯ ಗಂಡ ಕೋಟೆಯ ಸುತ್ತಲಿನ ನಿರುಪಯುಕ್ತ ವಿಶಾಲ ವಾಣಿಜ್ಯಿಕ ಜಾಗದಲ್ಲಿ ಏನಾದರೂ ಮಾಡುವಂತೆ ಸೂಚಿಸಿದ್ದ. ಅಲ್ಲೊಂದು ಇತರ ಉದ್ಯಾನವನಗಳಿಗಿಂತ ಭಿನ್ನವಾದ ಪಾರ್ಕ್ ರೂಪಿಸಲು ನಿರ್ಧರಿಸಿದ್ದ ಜೇನ್ಗೆ ಇಟಲಿಯಲ್ಲಿನ ಮೆಡಿಸಿ ಪಾಯ್ಸನ್ ಗಾರ್ಡ್ನ್ ಸ್ಫೂರ್ತಿಯಾಗಿತ್ತು.
ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗಬಲ್ಲ ಬ್ರಝಿಲ್ನ ಬ್ರಗ್ಮಾನ್ಸಿಯಾ ದಂತಹ ವಿಲಕ್ಷಣ ಸಸ್ಯಗಳು ಮತ್ತು ಜನರನ್ನು ಪ್ರಜ್ಞಾಹೀನವಾಗಿಸುವ ಲಾರೆಲ್ಗಳಂತಹ ಸಾಮಾನ್ಯ ಇಂಗ್ಲೀಷ್ ಗಿಡಗಳು ಈ ಉದ್ಯಾನವನದಲ್ಲಿವೆ.
ಈ ಗಾರ್ಡನ್ನಲ್ಲಿ ಗಾಂಜಾದಂತಹ ನಿಷೇಧಿತ ಮಾದಕ ದ್ರವ್ಯಗಳ ಗಿಡಗಳೂ ಇವೆ.
ಪಾಯ್ಸನ್ ಗಾರ್ಡನ್ನಲ್ಲಿರುವ ಕೆಲವು ವಿಷಯುಕ್ತ ಸಸ್ಯಗಳು
► ಸ್ಟ್ರೈಕೋನ್ಸ್ ನಕ್ಸ್-ವೊಮಿಸಿಯಾ
ಈ ಗಿಡದ ಎಲ್ಲ ಭಾಗಗಳು ವಿಷಯುಕ್ತ ವಾಗಿದ್ದು, ಸೆಳವು ಮತ್ತು ಉಸಿರುಗಟ್ಟಿಸುವ ಮೂಲಕ ಸಾವಿಗೆ ಕಾರಣವಾಗುತ್ತವೆ.
► ಹೆಮ್ಲಾಕ್
ಇದು ಸ್ನಾಯುಗಳ ಪಾರ್ಶ್ವವಾಯವಿಗೆ ಕಾರಣವಾಗುತ್ತದೆ ಮತ್ತು ಉಸಿರಾಟವನ್ನು ನಿಲ್ಲಿಸುತ್ತದೆ. ಪ್ರಾಚೀನ ತತ್ತ್ವಜ್ಞಾನಿ ಸಾಕ್ರೇಟಿಸ್ಗೆ ಇದೇ ಸಸ್ಯವನ್ನು ತಿನ್ನಿಸಿ ಕೊಲ್ಲಲಾಗಿತ್ತು.
► ಕ್ಯಾಸ್ಟರ್ಬೀನ್ಸ್
ಇದು ಜೀವಕೋಶಗಳು ಪ್ರೋಟಿನ್ ಉತ್ಪಾದಿಸುವುದನ್ನು ಪ್ರತಿರೋಧಿಸುತ್ತದೆ. ನೋವು, ಉರಿಯೂತ, ಪಚನ ವ್ಯವಸ್ಥೆಯಲ್ಲಿ ರಕ್ತಸ್ರಾವ ಮತ್ತು ರಕ್ತವಾಂತಿಗೆ ಕಾರಣವಾಗುತ್ತದೆ.
► ಡಿಜಿಟಾಲಿಸ್
ವಾಕರಿಕೆ, ಹಳದಿ ದೃಷ್ಟಿ, ಮಸುಕು ದೃಷ್ಟಿ, ಸೆಳವುಗಳೊಂದಿಗೆ ಸಾವಿಗೂ ಕಾರಣವಾಗುತ್ತದೆ.
► ಡೆಡ್ಲಿ ನೈಟ್ಶೇಡ್
ಮಸುಕು ದೃಷ್ಟಿ, ದದ್ದುಗಳು ಮತ್ತು ತೊದಲುವಿಕೆಗೆ ಕಾರಣವಾಗುವ ಇದು ಭ್ರಮೆಗಳನ್ನೂ ಸೃಷ್ಟಿಸುತ್ತದೆ.