ಕಾಡುಗೊಲ್ಲರು : ಒಂದು ಹುಡುಕಾಟ
ಕುರುಕ್ಷೇತ್ರದ ಆಸುಪಾಸಿನಿಂದ ಅಥವಾ ಮಗಧ, ಮಥುರಾಗಳ ಕಡೆಯಿಂದ, ಯಮುನಾ ಮತ್ತು ನರ್ಮದಾ ನದಿಗಳ ಪ್ರಾಂತಗಳಿಂದ ದನಗಾಹಿಗಳಾಗಿ ಹೊರಟ ಗೋವಳರು ಮಹಾರಾಷ್ಟ್ರದವರೆಗೆ ತಲುಪಿ, ಮಹಾರಾಷ್ಟ್ರದಲ್ಲಿ ಎಮ್ಮೆ ಗೌಳಿಗಳಾಗಿ, ದನಗರ್ ಗೌಳಿಗಳಾಗಿ ನಿಂತವರು ಹಾಲು ಹೈನಿನ ವ್ಯಾಪಾರದಿಂದ ಊರಿನವರಾಗಿ ಮಾರ್ಪಟ್ಟಿರಬೇಕು. ಅಲ್ಲಿ ನಿಲ್ಲದೆ ಕರ್ನಾಟಕದ ಗಡಿಗಳನ್ನು ತಲುಪಿದ ಕಾಡುಗೊಲ್ಲರ ಕುಲವೊಂದು ಕರ್ನಾಟಕದಲ್ಲಿ ಇಲ್ಲಿನ ಭೌಗೋಳಿಕ ಅಂಶಗಳಿಗೆ ಅನುಸಾರವಾಗಿ ಕುರಿಗಾಹಿಗಳಾಗಿ ಮಾರ್ಪಟ್ಟಿರಬೇಕು ಎಂದು ಅಂದಾಜಿಸಲಾಗಿದೆ.
ಕಾಡುಗೊಲ್ಲ ಜನಾಂಗ ಕರ್ನಾಟಕ ಸಂಸ್ಕೃತಿಯಲ್ಲಿ ಹಲವು ಕಾರಣಗಳಿಂದ ಅತ್ಯಂತ ಮಹತ್ವ ಪಡೆದಿರುವ ಬುಡಕಟ್ಟು ಸಮುದಾಯವಾಗಿದೆ. ಮಾನವ ಶಾಸ್ತ್ರಜ್ಞರು ಹೇಳುವ ಪ್ರಕಾರ ಕರ್ನಾಟಕದ ದ್ರಾವಿಡ ಪೂರ್ವ ಐದು ಬುಡಕಟ್ಟುಗಳಲ್ಲಿ ಇದೂ ಒಂದು. ಇದರ ಪ್ರಧಾನ ವೃತ್ತಿ ಪಶು ಪಾಲನೆ. ಅವರ ಕುಲಕಥನಗಳ ಪ್ರಕಾರ, ಕಾಡುಗೊಲ್ಲರು ‘ಉತ್ತರದೇಶ’ದಿಂದ ಬಂದವರು. ದಿಲ್ಲಿ ಸುಲ್ತಾನನ ಕಾಟವನ್ನು ತಡೆದುಕೊಳ್ಳಲಿಕ್ಕಾಗದೆ ನದಿಯನ್ನು ದಾಟಿ ಈ ಸೀಮೆಗೆ ಬಂದೆವೆಂದು ಅವರು ತಮ್ಮ ಸ್ಮತಿ ಕೋಶದಿಂದ ಹೇಳುತ್ತಾರೆ. ಅವರು ದಿಲ್ಲಿಯಿಂದ ಇಲ್ಲಿಗೆ ಬಂದರೋ ಅಥವಾ ದಿಲ್ಲಿ ಪ್ರತಿನಿಧಿಯಾಗಿ ಆಳ್ವಿಕೆ ಮಾಡುತ್ತಿದ್ದ ಗೋಲ್ಕೊಂಡದ ಸುಲ್ತಾನನ ಉಪಟಳ ತಾಳದೆ ಇಲ್ಲಿಗೆ ಬಂದರೋ - ಗೋಲ್ಕೊಂಡ ಎಂಬುದು ‘ಗೋವಳ ಕೊಂಡ’ ಅಂದರೆ ತೆಲುಗಿನಲ್ಲಿ ಗೋವುಗಳ ಬೆಟ್ಟ ಎಂದಾಗುತ್ತದೆ- ಇವೆಲ್ಲವೂ ಕೂಡ ಇನ್ನೂ ಸಮರ್ಪಕವಾಗಿ ಅಧ್ಯಯನಕ್ಕೊಳಪಟ್ಟಿಲ್ಲ. ಭಾರತದ ಅತ್ಯಂತ ವಿಸ್ತಾರವಾದ ನದಿಗಳಲ್ಲಿ ಒಂದಾದ ಗೋದಾವರಿ ನದಿ ಹೆಸರೂ ಕೂಡ ಗೋವು ದಾರಿ ಎಂದು ಊಹಿಸಬಹುದಾದ ಹೆಸರನ್ನು ಮಹಾರಾಷ್ಟ್ರ ಮತ್ತು ಆಂಧ್ರಗಳೆರಡರಲ್ಲೂ ಹೊಂದಿರುವುದು ಒಂದು ಆಸಕ್ತಿದಾಯಕವಾದ ವಿಷಯ.
ಅದೇ ಮಾರ್ಗವನ್ನು ಅನುಸರಿಸಿ ನೋಡಿದರೆ ‘ಯಾದಗಿರ್’ ಎನ್ನುವ ಕರ್ನಾಟಕದ ಜಿಲ್ಲೆಯ ಹೆಸರು ಗೋಲ್ಕೊಂಡದ ನೆನಪಲ್ಲಿ ‘ಯಾದವಗಿರಿ’ ಎನುವ ಅರ್ಥವನ್ನು ಹೊತ್ತುಕೊಂಡಿದೆ. ಆ ಭಾಗದಲ್ಲಿ ಈಗಲೂ ಗೊಲ್ಲ ಕುಲದವರು ತಮ್ಮ ಮಂದೆಗಳ ಜೊತೆ ಅರೆ ಅಲೆಮಾರಿ ಜೀವನ ನಡೆಸುತ್ತಿರುವುದನ್ನು ನಾವು ಗಮನಿಸಬಹುದು. ಭಾರತದಲ್ಲಿ ಆಫ್ರಿಕಾ ಮೂಲದ ಅತ್ಯಂತ ಪ್ರಾಚೀನ ಡಿಎನ್‌ಎ ಉಳಿಕೆಯನ್ನು ತಮಿಳುನಾಡಿನಲ್ಲಿರುವ ಗೊಲ್ಲ ಜನಾಂಗದ ವ್ಯಕ್ತಿಯಲ್ಲಿ ಮಾನವ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಸುಮಾರು 35,000 ದಿಂದ 50,000 ವರ್ಷಗಳಷ್ಟು ಪ್ರಾಚೀನತೆಗೆ ಹೋಗುವ ಅದೇ ಡಿಎನ್‌ಎ ಮಾದರಿ ಗುಜರಾತಿನ ಯಾದವ ಕುಲದಲ್ಲಿ ದೊರೆತಿದೆ. ಗೊಲ್ಲ ಕುಲದ ಜನಾಂಗೀಯ ಈರಗಾರನಾಗಿದ್ದಿರಬಹುದಾದ, ಉತ್ತರ ಭಾರತದ ಅಹಿರ-ಅಭೀರ-ಯಾದವ ಕುಲದ ಬುಡಕಟ್ಟು ಮುಖ್ಯಸ್ಥನಾಗಿರಬಹುದಾದ ಕೃಷ್ಣನಿಗಂತೂ ಭಾರತೀಯ ಸಂಸ್ಕೃತಿಯಲ್ಲಿ ಅಚಲವಾದ, ಅಮೂಲ್ಯವಾದ ಸ್ಥಾನ ಮಾನ ದೊರೆತಿದೆ.
ಕುರುಕ್ಷೇತ್ರದ ಆಸುಪಾಸಿನಿಂದ ಅಥವಾ ಮಗಧ, ಮಥುರಾ ಗಳ ಕಡೆಯಿಂದ, ಯಮುನಾ ಮತ್ತು ನರ್ಮದಾ ನದಿಗಳ ಪ್ರಾಂತಗಳಿಂದ ದನಗಾಹಿಗಳಾಗಿ ಹೊರಟ ಗೋವಳರು ಮಹಾ ರಾಷ್ಟ್ರದವರೆಗೆ ತಲುಪಿ, ಅಲ್ಲಿ ಕವಲುಗಳಾಗಿ ಒಂದು ಎಮ್ಮೆ ಸಾಕುವ ಗೌಳಿಯಾಗಿ, ಮತ್ತೊಂದು ದನಗಾಹಿ ಗೌಳಿಯಾಗಿ ದಕ್ಷಿಣ ಪ್ರಸ್ಥಭೂಮಿಯ ಮೈದಾನ ಹಾಗೂ ಅರಣ್ಯ ಪ್ರದೇಶ ಗಳಲ್ಲಿ, ಮಲೆಮರಡಿಗಳಲ್ಲಿ ನೆಲೆಗೊಂಡಿರಬೇಕು. ಹಾಗೆ ಮಹಾ ರಾಷ್ಟ್ರದಲ್ಲಿ ಎಮ್ಮೆ ಗೌಳಿಗಳಾಗಿ, ದನಗರ್ ಗೌಳಿಗಳಾಗಿ ನಿಂತವರು ಹಾಲು ಹೈನಿನ ವ್ಯಾಪಾರದಿಂದ ಊರಿನವರಾಗಿ ಮಾರ್ಪಟ್ಟಿ ರಬೇಕು. ಅಲ್ಲಿ ನಿಲ್ಲದೆ ಕರ್ನಾಟಕದ ಗಡಿಗಳನ್ನು ತಲುಪಿದ ಕಾಡುಗೊಲ್ಲರ ಕುಲವೊಂದು ಕರ್ನಾಟಕದಲ್ಲಿ ಇಲ್ಲಿನ ಭೌಗೋಳಿಕ ಅಂಶಗಳಿಗೆ ಅನುಸಾರವಾಗಿ ಕುರಿಗಾಹಿಗಳಾಗಿ ಮಾರ್ಪಟ್ಟಿರಬೇಕು. ಗೊಲ್ಲ ಕುಲದಲ್ಲಿ ಎಷ್ಟು ಕುಲಗಳಿವೆ ಎಂದು ಹೇಳುವುದು ಸ್ವಲ್ಪ ಕ್ಲಿಷ್ಟಕರ ವಿಚಾರ. ಗೊಲ್ಲ ಕುಲವನ್ನು ನೆಲ್ಲು(ಭತ್ತ) ಕುಲವನ್ನು ಎಣಿಸಿದವರಿಲ್ಲ ಎನ್ನುವ ನಾಣ್ನುಡಿ ಇದೆ.
ಅದು ಹೇಗೇ ಇರಲಿ, ಹಾಗೆ ಕರ್ನಾಟಕದಲ್ಲಿದ್ದ ಮತ್ತೊಂದು ದ್ರಾವಿಡಪೂರ್ವ ಬುಡಕಟ್ಟಾದ ಕಾಡುಕುರುಬರಿಂದ ಕುರಿ ಸಾಕಣೆಯನ್ನು ಅಳವಡಿಸಿಕೊಂಡು, ಬಳ್ಳಾರಿಯಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಯವರೆಗೆ ಕಾಡುಗೊಲ್ಲ ಸಮುದಾಯ ಹರಡಿದಂತೆ ನೆಲೆಗೊಂಡಿತು. ಈ ಗೋವಳರು ಅತ್ಯಂತ ಪ್ರಾಚೀನ ಕಾಲದಿಂದಲೂ ಒಂದು ನಿಗದಿತವಾದ ಪಶುಪಾಲನೆಯ ಸಂಚಾರಿ ಮಾರ್ಗವನ್ನು ಕಂಡುಕೊಂಡಿದ್ದು, ಬಹುಶಃ ಮಹಾರಾಷ್ಟ್ರದ ಕರ್ಹಾಡ್‌ನಿಂದ ಹಿಡಿದು ನಾಗಮಂಗಲ, ನಾಗಮಂಗಲದಿಂದ ಮೈಸೂರು, ಮೈಸೂರಿನಿಂದ ಮುಂದೆ ಮಲೆಮಹದೇಶ್ವರ ಬೆಟ್ಟ, ಮಹದೇಶ್ವರ ಬೆಟ್ಟದಿಂದ ಮುಂದಕ್ಕೆ ಆಲಂಬಾಡಿಯವರೆಗೆ, ಆಲಂಬಾಡಿಯಿಂದ ಮುಂದೆ ತಮಿಳುನಾಡು ಪಾಲಾರ್, ಪಾಲಾರ್‌ನಿಂದ ಮಧುರೈ, ಕಾಂಚಿ; ಇದು ಹೆಚ್ಚೂ ಕಡಿಮೆ ಕರ್ನಾಟಕದ ಪ್ರಾಚೀನ ಪಶುಪಾಲಕ ಜಾತಿಗಳ ಸಂಚಾರೀ ಮಾರ್ಗವಾಗಿದ್ದು, ಈ ಮಾರ್ಗದ ಮೂಲಕ ಸಂಚರಿಸುತ್ತಾ ಕ್ರಮೇಣ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಗೊಂಡು ಅರೆವ್ಯವಸಾಯಿಕರು, ಅರೆಜಾನುವಾರು ಸಾಕಣೆದಾರರು ಆಗಿ ಉಳಿದುಕೊಂಡರೆಂಬುದು ಇತಿಹಾಸದಿಂದ ನಾವು ತಿಳಿದುಕೊಳ್ಳಬಹುದು.
ಹಾಗೆ ನೋಡಿದರೆ ಹಳೇ ಮೈಸೂರಿನ ಪ್ರಾಂತದಲ್ಲಿ ಅಂದರೆ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರುಗಳಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ಈಗಿನ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯಲ್ಲಿ ಗೊಲ್ಲ ಕುಲದವರು ಒಂದು ಪ್ರಮಾಣದಲ್ಲಿ ಇದ್ದಾರಾದರೂ ಇವರು ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಬಂದವರಾಗಿರದೆ, ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದವರಾಗಿರುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮಾರ್ಗವಾಗಿ ಪಶುಪಾಲನಾ ಸಂಚಾರೀ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವರು ಒಂದು ಪ್ರಮಾಣದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶದ ಕೆಲವು ತಾಲೂಕುಗಳಲ್ಲಿ ಇದ್ದಾರಾದರೂ ಅವರು ಮಾತನಾಡುವುದು ಅಲ್ಲಿಯೂ ಕೂಡ ಕನ್ನಡ ಭಾಷೆಯನ್ನೇ. ಇದು ಅವರ ಸಹಸಂಚಾರಿ ಪಶುಪಾಲಕ ಸಮುದಾಯವಾಗಿರುವ ‘ಕುರುಬ-ಗೊಂಡ’ ಬುಡಕಟ್ಟಿನ ಲಕ್ಷಣವೂ ಆಗಿದೆ. ಕುರುಬರು ಮಧ್ಯಪ್ರದೇಶದ ಕುರ್ಖ್- ಮಾಲ್ತೋ ಸಮುದಾಯ ಮೂಲದವರಿರಬೇಕೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ.
ಹಾಗೆಯೇ ಗುಜರಾತ್, ರಾಜಾಸ್ತಾನ್, ಪಂಜಾಬ್ ಈ ಭಾಗಗಳ ಪುರಾಣಕಾಲದ ‘ಯದು-ತುರ್ವಸರು’ ಗೊಲ್ಲ ಕುಲಗಳ ಮೂಲ ಬುಡಕಟ್ಟುಗಳಿರಬೇಕೆಂಬುದು ವಿದ್ವಾಂಸರ ಅಂದಾಜು.
ಕರ್ನಾಟಕದಲ್ಲಿ ಇವರು ಒಂದಷ್ಟು ಕಾಲ ಸಂಚಾರಿಗಳಾಗಿ ಸಂಚರಿಸುತ್ತಿದ್ದವರು ನಂತರ ಹೆಚ್ಚೂ ಕಡಿಮೆ ಕುರಿಸಾಕಣೆಯನ್ನೇ ಪ್ರಧಾನ ಮಾಡಿಕೊಂಡಿರುವುದನ್ನು ಕಾಣಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಕುರಿಗಾಹಿಗಳೆಂಬವರು ಪ್ರಧಾನವಾಗಿ ಕುರುಬರಾದರೆ ತುಂಗಭದ್ರಾ ದಡದಿಂದೀಚೆಗೆ ಮೈಸೂರಿನವರೆಗೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಕುರಿಗಾಹಿಗಳಾಗಿ ಇರುವವರು ಗೊಲ್ಲರಾಗಿದ್ದಾರೆ. ಇದೆಲ್ಲವೂ ಸಮಾಜಶಾಸ್ತ್ರ, ಮಾನವಶಾಸ್ತ್ರ, ಸಂಸ್ಕೃತಿ ವಿಕಾಸಶಾಸ್ತ್ರದ ಅಂಗವಾಗಿ ನಾವು ಗಮನಿಸಬಹುದಾದ ನೇಪಥ್ಯದ ಅಂಶಗಳು.
ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲಕುಲಗಳು ಬಹಳ ಬೇಗನೆ ಗ್ರಾಮಸಂಸ್ಕೃತಿಗೆ ಒಳಪಟ್ಟು ವ್ಯವಸಾಯಿಕರಾಗಿ ಹಣಕಾಸಿ ನಲ್ಲೂ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಯಲ್ಲೂ ಚೇತರಿಸಿಕೊಂಡ ರಾದರೆ, ಗ್ರಾಮಗಳಿಂದ ದೂರವಾಗಿ ಹಟ್ಟಿಗಳನ್ನು ಕಟ್ಟಿಕೊಂಡು, ಕುರಿಮಂದೆಗಳ ಸಮೇತ ಗುಡಿಸಲುಗಳಲ್ಲೇ ವಾಸಮಾಡುವ ಕಾಡುಗೊಲ್ಲ ಬುಡಕಟ್ಟಿನವರು, ಕಳೆದ ಇಪ್ಪತ್ತು ಮೂವತ್ತು ವರ್ಷಗಳವರೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯ ವಾಗಿ, ಔದ್ಯೋಗಿಕವಾಗಿ ಮುನ್ನಡೆಯನ್ನು ಕಾಣದೆ, ತಮ್ಮ ಆದಿಮ ಬುಡಕಟ್ಟು ಸಂಸ್ಕೃತಿ ಸ್ವರೂಪವನ್ನು ಸಾಂಸ್ಕೃತಿಕವಾಗಿ ಉಳಿಸಿಕೊಂಡು, ಗ್ರಾಮಗಳ ಆಸುಪಾಸಿನಲ್ಲೇ ಒಂದು ಸಾಂಸ್ಕೃತಿಕ ದ್ವೀಪದಂತೆ ಉಳಿದುಕೊಂಡು ಬಂದಿದ್ದಾರೆ. ಈಗಲೂ ಶಿರಾ, ಗುಬ್ಬಿ, ಮಾಗಡಿ, ನಾಗಮಂಗಲ, ಚಾಮರಾಜನಗರದ ಕೊಳ್ಳೇಗಾಲ ಇಂತಹ ತಾಲೂಕುಗಳಲ್ಲಿ, ಯಾದಗಿರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ನಾವು ಇದನ್ನು ಕಾಣಬಹುದಾಗಿದೆ.
ಆ ಬಗೆಯ ಸಾಂಸ್ಕೃತಿಕ ದ್ವೀಪಸದೃಶ ಅಸ್ತಿತ್ವ ಕಾಪಾಡಿಕೊಂಡಿರು ವವರಲ್ಲಿ ಉತ್ತರ ಕನ್ನಡ ಜಿಲ್ಲೆ ಹಾಗೂ ಕಾರವಾರ ಜಿಲ್ಲೆಗಳ ಅರಣ್ಯಗಳಲ್ಲಿ ಗೌಳಿಗಳು ಕೂಡ ಸೇರುತ್ತಾರೆ. ಗ್ರಾಮ ಸಂಸ್ಕೃತಿಯ ಜೊತೆಗೆ, ಗ್ರಾಮದೇವತೆಗಳ ಜೊತೆಗೆ ಗೊಲ್ಲ ಸಮುದಾಯಕ್ಕೆ ಮೊದಲು ಇದ್ದ ಅನುಬಂಧ ಕಡಿಮೆ ಎಂದೇ ಹೇಳಬೇಕು. ಅವರೊಳಗೆ, ಅವರ ಬುಡಕಟ್ಟು ದೇವತೆಗಳನ್ನು ಹೊರತುಪಡಿಸಿ ಗ್ರಾಮ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿರುವ ಹನುಮಂತರಾಯ, ತಿಮ್ಮಪ್ಪ, ಬಿಳಿಗಿರಿರಂಗ ಇಂತಹ ದೇವತೆಗಳನ್ನು ಮಾತ್ರ ಗೊಲ್ಲ ಸಮುದಾಯದವರು ತಮ್ಮ ದೇವರುಗಳ ಪಟ್ಟಿಯೊಳಕ್ಕೆ ಕಳೆದ ನೂರಿನ್ನೂರು ವರ್ಷಗಳ ಅವಧಿಯಲ್ಲಿ ಸೇರಿಸಿಕೊಂಡಿರುವುದನ್ನು ಗುರುತಿಸಬಹುದು.ಇಲ್ಲದಿದ್ದರೆ ಅವರ ಅಟ್ಟಿಲಕ್ಕಮ್ಮ (ಹಟ್ಟಿ ಲಕ್ಷ್ಮೀ), ಕರಿಯಮ್ಮ, ಮಾರಮ್ಮ, ಗಿಡ್ಡಮ್ಮ ಇಂತಹ ಹೆಣ್ಣುದೇವತೆಗಳು ಕುರುಬರ ಬೀರಪ್ಪನಿರುವಂತೆ ಇವರಲ್ಲಿ ಈರಣ್ಣ, ಕರಿಯಣ್ಣ, ಕಾಟೆದೇವರು, ಕ್ಯಾತೇದೇವರು, ಪಾತೇ ದೇವರು (ಹಳೇದೇವರು), ಜುಂಜಪ್ಪ ಇಂತಹ ಕುಲದೇವತೆಗಳನ್ನು ಪೂಜಿಸಿಕೊಂಡು ಬರುತ್ತಿರುವುದು ಈಗಲೂ ನಡೆದಿದೆ.