ಬೆಂಗಳೂರು ಈಗ ಸಾಯುತ್ತಿರುವ ನಗರ: ಪ್ರೊ.ರಾಮಚಂದ್ರ
ಉಡುಪಿ, ಡಿ.9: ಕಳೆದ ನಾಲ್ಕೈದು ದಶಕಗಳಲ್ಲಿ ಶೇ.1028ರಷ್ಟು ಕಾಂಕ್ರೀಟ್ ಮಯವಾದ ಬೆಂಗಳೂರು ನಗರ, ಶೇ.88ರಷ್ಟು ಗಿಡಮರ ಹಾಗೂ ಶೇ. 79ರಷ್ಟು ಕೆರೆಮದಗಗಳ ನಾಶದಿಂದ ಸಾಯುತ್ತಿರುವ ನಗರವಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಸಾಯನ್ಸ್‌ನ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
1800ರಲ್ಲಿ ಇದ್ದ 1,452 ಕೆರೆಗಳ ಸಂಖ್ಯೆ ಇಂದು 193ಕ್ಕೆ ಇಳಿದಿದೆ. ಮೇ ತಿಂಗಳಲ್ಲಿ 14ರಿಂದ 16ಡಿಗ್ರಿ ಸೆಲ್ಶಿಯಸ್‌ನಷ್ಟಿದ್ದ ಉಷ್ಣತೆ ಈಗ 30ರಿಂದ 40ರ ಆಸುಪಾಸಿನಲ್ಲಿದೆ. ಡಿಸೆಂಬರ್ ತಿಂಗಳಲ್ಲಿ ಶೂನ್ಯ ಡಿಗ್ರಿ ಉಷ್ಣಾಂಶ ಹೊಂದಿ ಸೇಬು ಬೆಳೆಯುತಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಕಾಡಾಗಿ ಬೆಳೆದು ಈಗ ರಾಶಿರಾಶಿ ಕಸ ಹಾಗೂ ಅಸಹಿಷ್ಣು ಜನರಿಂದಲೇ ತುಂಬಿಕೊಂಡಿದೆ ಎಂದರು.
ನೇತ್ರಾವತಿ ತಿರುವು, ಎತ್ತಿನಹೊಳೆ, ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತನೆ, ಸಮುದ್ರದಲ್ಲಿ ಸಿಹಿ ನೀರ ಅಣೆಕಟ್ಟು ಮೂಲಕ ಬೆಂಗಳೂರಿಗೆ ನೀರು ಪೂರೈಕೆ ಯೋಜನೆಯನ್ನು ಕೇವಲ ಮೂರ್ಖರಷ್ಟೇ ರೂಪಿಸಲು ಸಾಧ್ಯ ಎಂದವರು ಹೇಳಿದರು.
ಕೋಲಾರದಲ್ಲಿ ವಾರ್ಷಿಕ 700ರಿಂದ 850 ಮಿ. ಮೀ. ಮಳೆ ಬೀಳುತ್ತಿದ್ದು ಕೆರೆಗಳಿದ್ದರೆ 15ಟಿಎಂಸಿ ಸಂಗ್ರಹ ಸಾಧ್ಯ. ಎತ್ತಿನಹೊಳೆ ಯೋಜನೆಯನ್ನು ಸರಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿ ತರಾತುರಿಯಲ್ಲಿ ಪೂರ್ಣಗೊಳಿಸುತ್ತಿದೆ. ಈ ಯೋಜನೆಯಿಂದ 24ಟಿಎಂಸಿ ನೀರು ಖಂಡಿತ ಸಿಗುವುದಿಲ್ಲ. ಸಿಗುವುದು 0.85ಟಿಎಂಸಿ ಮಾತ್ರ. ಇಡೀ ಬೆಂಗಳೂರಿಗೆ 18ರಿಂದ 20ಟಿಎಂಸಿ ನೀರಿನ ಅಗತ್ಯವಿದ್ದು, ಲೂಟಿಗಾಗಿ ರೂಪಿಸುವ ಯೋಜನೆ ನೆಲ, ಜಲಕ್ಕೆ ಮಾರಕ ವಾಗುತ್ತಿದೆ. ಬೆಂಗಳೂರು, ಮುಂಬೈ ಸಹಿತ ದೇಶದ ವಿವಿಧೆಡೆ ಆಗಾಗ ನೆರೆ ಹಾವಳಿ ತಲೆದೋರುತಿದ್ದರೂ ಸರಕಾರ ಇನ್ನೂ ಎ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.
ದೇಶಪ್ರೇಮದೊಂದಿಗೆ ಯುವಜನತೆ ನೆಲ, ಜಲ, ಹಿರಿಯರ ಬಗ್ಗೆ ಪ್ರೀತಿ ಹೊಂದಬೇಕು. ಅಭಿವೃದ್ಧಿ ಹೆಸರಲ್ಲಿ ಜೀವ ವೈವಿಧ್ಯತೆ ನಾಶ ಸಲ್ಲದು. ನೆಲ, ಜಲಕ್ಕೆ ಹಾನಿ ಮಾಡುವ ಅಭಿವೃದ್ಧಿ ನಮಗೆ ಬೇಡ ಎನ್ನುವ ನಿಲುವು ನಮ್ಮದಾಗಬೇಕು. ನೈಸರ್ಗಿಕ ಸಂಪತ್ತಿನ ನಾಶಕ್ಕೆ ಅವಕಾಶ ಕೊಡಬೇಡಿ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಮಾರಧಾರೆಗೆ ಅಣೆಕಟ್ಟು ನಿರ್ಮಿಸಿದರೆ, ಅಲ್ಲಿರುವ ಅಪರೂಪದ ಜೀವ ವೈವಿಧ್ಯ ನಾಶವಾಗಲಿದ್ದು, 1,200 ಎಕರೆ ಭೂಮಿ ಮುಳುಗಡೆಯಾಗಲಿದೆ. ದೇವರ ಕಾಡಿಗೂ ಸಂಚಕಾರ ಬರಲಿದೆ. ವೈಜ್ಞಾನಿಕ ವರದಿ ಸಲ್ಲಿಕೆ ಬಳಿಕ ಕುಮಾರಧಾರಾ ನದಿಯಿಂದ ಭೂಗತ ಕೊಳವೆ ಮೂಲಕ ಬೆಂಗಳೂರಿಗೆ ನೀರು ಸರಬರಾಜಿಗೆ ಸರಕಾರಿ ಎಂಜಿನಿುರ್‌ಗಳು ಉದ್ದೇಶಿಸಿದ್ದಾರೆ ಎಂದರು.
ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಗೆ ಉಷ್ಣವರ್ಧಕ ಅನಿಲಗಳ ಉತ್ಪತ್ತಿ (ಕಲ್ಲಿದ್ದಲು) ಜಗತ್ತಿನಲ್ಲಿ ಶೇ.60, ಭಾರತದಲ್ಲಿ ಶೇ.50ರಷ್ಟು ಮಾಡುತ್ತಿವೆ ಎಂದು ಪ್ರೊ.ರಾಮಚಂದ್ರ ನುಡಿದರು.