varthabharthi


ಚಿತ್ರ ವಿಮರ್ಶೆ

ಸ್ಮಗ್ಲರ್ ಸಹವಾಸ ಸುಗಮವಲ್ಲ!

ಸ್ಮಗ್ಲರ್

ವಾರ್ತಾ ಭಾರತಿ : 9 Dec, 2017
ಶಶಿಕರ ಪಾತೂರು

ಸಾಮಾನ್ಯರು ಯಾರೂ ಸ್ಮಗ್ಲರ್‌ಗಳ ಸಹವಾಸ ಬಯಸುವುದಿಲ್ಲ. ಆದರೆ ಸಹವಾಸ ಮಾಡಿದವರಿಗೆ ಕಷ್ಟ ಖಚಿತ ಎನ್ನುವುದಕ್ಕೆ ‘ಸ್ಮಗ್ಲರ್’ ಚಿತ್ರವೇ ಉದಾಹರಣೆ. ಪ್ರಿಯಾ ಹಾಸನ್ ಸ್ಮಗ್ಲರಾಗಿ ಬಂದಾಗ ಪ್ರೇಕ್ಷಕರು ಪ್ರೀತಿಯಿಂದಲೇ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಆದರೆ ಹಿಂದಿನ ಚಿತ್ರಗಳಲ್ಲಿ ಪಡೆದ ಪ್ರೀತಿ ಉಳಿಯುತ್ತದಾ ಎನ್ನುವುದು ಸಂದೇಹ. ಕಾರಣ ಚಿತ್ರದಲ್ಲಿ ಪ್ರಿಯಾ ಹಾಸನ್ ಕಾಣಿಸಿಕೊಂಡಿರುವ ರೀತಿ. ಚಿತ್ರ ಶುರುವಾದ ಐದೇ ನಿಮಿಷಕ್ಕೆ ಪ್ರಿಯಾ ನಿರ್ವಹಿಸಿರುವ ಸೈರಸ್ ಎನ್ನುವ ಸ್ಮಗ್ಲರ್ ಹುಡುಗಿಯ ಪಾತ್ರದ ತಲೆಗೆ ಶೂಟ್ ಮಾಡಲಾಗುತ್ತದೆ. ಗುಂಡು ಕೆನ್ನೆಗಿಂತ ಎರಡಿಂಚು ಮಾತ್ರ ದೂರದಲ್ಲಿರುತ್ತದೆ. ಆದರೆ ಅದನ್ನು ಸಿಗರೇಟು ಹಿಡಿಯುವಷ್ಟೇ ಸಲೀಸಾಗಿ ಎರಡು ಬೆರಳಲ್ಲಿ ಬಂಧಿಸಿ ನಗು ಚೆಲ್ಲುತ್ತಾರೆ ಪ್ರಿಯಾ. ಆ ದೃಶ್ಯವನ್ನು ಖುದ್ದು ರಜನಿಕಾಂತ್ ನೋಡಿದರೂ ಮೂರ್ಛೆ ಹೋಗುವುದು ಖಚಿತ. ಇಂಥದೊಂದು ಇಂಟ್ರಡಕ್ಷನ್ ಪಡೆದುಕೊಂಡ ನಾಯಕಿ ಮುಂದೇನೇ ಮಾಡಿದರೂ ಅದು ಪ್ರಶ್ನಾತೀತ ಎಂದು ನಿರ್ಧರಿಸುತ್ತಾನೆ ಪ್ರೇಕ್ಷಕ. ಪ್ರಶ್ನೆಗೆ ಅವಕಾಶವೇ ಇರದಂಥ ಚಿತ್ರದ ಸನ್ನಿವೇಶಗಳು ದಾಳಿಯೆಸಗುತ್ತಾ ಸಾಗುತ್ತವೆ.

ಚಿತ್ರದಲ್ಲಿ ಪ್ರಿಯಾ ಸೈರಸ್ ಎನ್ನುವ ಸ್ಮಗ್ಲರ್ ಮಾತ್ರವಲ್ಲ ಭರತನಾಟ್ಯ ಕಲಾವಿದೆಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ ಎನ್ನುವುದು ವಿಶೇಷ. ಭರತನಾಟ್ಯ ಕಲಾವಿದೆ ಹಳ್ಳಿ ಹುಡುಗಿಯಾಗಿ ಬಂದಾಗ ಪ್ರೇಕ್ಷಕರು ಖುಷಿ ಪಡುತ್ತಾರೆ. ಆದರೆ ಅಲ್ಲಿಗೂ ಸೈರಸ್ ಆಗಮನವಾಗುವುದರೊಂದಿಗೆ ಚಿತ್ರದ ತುಂಬ ಹೊಡೆದಾಟಗಳೇ ತುಂಬಿಕೊಂಡಿದೆ. ವಿದೇಶದಲ್ಲಿ ಕಾರ್ಯನಿರತಳಾದ ಈ ಸ್ಮಗ್ಲರ್ ಅಲ್ಲಿಂದ ಭಾರತಕ್ಕೆ ಬರುತ್ತಾಳೆ. ಹಾಗೆ ಬರಲು ಕಾರಣ ಐದು ಸಾವಿರ ಕೋಟಿ ಬೆಲೆಯ ಚಿನ್ನದ ವ್ಯವಹಾರ ಆಗಿರುತ್ತದೆ. ಚಿನ್ನವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ಸೈರಸ್‌ಳದ್ದು. ಇದರಲ್ಲಿ ಆಕೆ ಗೆಲ್ಲುತ್ತಾಳಾ ಸೋಲುತ್ತಾಳಾ ಎನ್ನುವುದನ್ನು ಚಿತ್ರದ ಕೊನೆಯ ದೃಶ್ಯದಲ್ಲಿ ತೋರಿಸಲಾಗಿದೆ. ಭಾರತಕ್ಕೆ ಬಂದೊಡನೆ ಸೈರಸ್ ಮೇಲೆ ದಾಳಿ ನಡೆಸುವವರು ಯಾರು? ಆ ಘಟನೆಯಲ್ಲಿ ಗಾಯಾಳುವಾಗಿ ಆಸ್ಪತ್ರೆ ಸೇರುವಾಕೆ ಸೈರಸ್ಸೇನಾ? ಹಾಗಾದರೆ ಸಹೋದರಿ ಕಾತ್ಯಾಯಿನಿ ಏನಾದಳು.. ಎಂಬ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಉತ್ತರ ಹೇಳುತ್ತದೆ.

ನಿರ್ಮಾಪಕಿ, ನಿರ್ದೇಶಕಿಯಾಗಿ ಮಾತ್ರವಲ್ಲ, ನಟಿಯಾಗಿ ಚಿತ್ರದ ತುಂಬಾ ಪ್ರಿಯಾ ಹಾಸನ್ ತುಂಬಿಕೊಂಡಿದ್ದಾರೆ. ಮದುವೆ ಕ್ಯಾಸೆಟ್ ಎಡಿಟ್ ಮಾಡಿದಂತೆ ಹಾಡುಗಳ ದೃಶ್ಯವನ್ನು ಸಂಕಲನ ಮಾಡಲಾಗಿದೆ! ವಿದೇಶದ ದೃಶ್ಯಗಳನ್ನು ಅಡಗೂಲಜ್ಜಿ ಮನೆಯ ಗೋಡೆಗೆ ಗ್ರೀನ್ ಮ್ಯಾಟ್ ಹಾಕಿ ಚಿತ್ರೀಕರಣ ನಡೆಸಿದಂತಿದೆ. ಗೋಡೆ ತುಂಬ ಚಿತ್ರ ವಿಚಿತ್ರ ಒಳಾಂಗಣ ಅಲಂಕಾರ ಮಾಡಿದೊಡನೆ ಅದನ್ನು ವಿದೇಶೀ ಭವನ ಎಂದು ಕಲ್ಪಿಸಬೇಕೆನ್ನುವುದು ಕಲಾ ನಿರ್ದೇಶಕರ ನಿಲುವು! ಹೊಡೆದಾಟದಲ್ಲಿ ಸಾಹಸಿಕತೆ ಇದೆಯಾದರೂ, ಅಮಾನುಷಕತೆಯೇ ತುಂಬಿದೆ. ಅದೇ ರೀತಿ ಸೆಂಟಿಮೆಂಟ್ ದೃಶ್ಯಗಳಲ್ಲಿ ನಾಟಕೀಯತೆ ಎದ್ದು ಕಾಣುತ್ತದೆ. ಕಾಮೆಂಟರಿಯಂತೆ ಒಂದೇ ಸಮನೆ ಎಲ್ಲ ಪಾತ್ರಗಳು ನಿರಂತರ ಮಾತುಗಳಿಂದ ತಲೆ ಕೆಡಿಸುತ್ತವೆ. ಸೈರಸ್ ಸಹೋದರಿ ಕಾತ್ಯಾಯಿನಿಯ ಪಾತ್ರಕ್ಕೆ ಒಬ್ಬ ಪ್ರಿಯಕರನಿದ್ದಾನೆ. ಆದರೆ ಆತ ಚಿತ್ರದ ನಾಯಕ ಎನ್ನಲಾಗದು. ಚಿತ್ರಕ್ಕೆ ಪ್ರಿಯಾ ಹಾಸನ್ ನಾಯಕಿ ಮತ್ತು ನಾಯಕ ಎರಡೂ ಆಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ತಮಿಳು ನಟ ಪಾಂಡ್ಯರಾಜನ್, ಸುಮನ್, ಸಯ್ಯಿಜಿ ಶಿಂಧೆ, ರವಿಕಾಳೆ, ರಮೇಶ್ ಭಟ್, ಗಿರಿಜಾ ಲೋಕೇಶ್, ಮಿತ್ರ, ಉಮೇಶ್ ಮೊದಲಾದವರು ನಟಿಸಿದ್ದಾರೆ. ಸೈರಸ್ ವೇಷದಲ್ಲಿ ಕಾತ್ಯಾಯಿನಿ ಕಾಣಿಸಿಕೊಳ್ಳುವ ದೃಶ್ಯಗಳಲ್ಲಿ ಪ್ರಿಯಾ ಹಾಸನ್ ನೀಡಿರುವ ಹಾವ ಭಾವ ಆಕೆಯೊಳಗಿನ ಕಲಾವಿದೆಯನ್ನು ತೋರಿಸಿವೆ. ಉಳಿದಂತೆ ಪ್ರಿಯಾರ ಅಂಧಾಭಿಮಾನಿಗಳು ಮಾತ್ರ ಒಪ್ಪಬಹುದಾದ ಚಿತ್ರ ಇದು.

ತಾರಾಗಣ: ಪ್ರಿಯಾ ಹಾಸನ್, ಸುಮನ್..

ನಿರ್ದೇಶನ: ಕೆ ವೀರು, ಪ್ರಿಯಾ ಹಾಸನ್

ನಿರ್ಮಾಣ: ಗೌರಮ್ಮ, ಪ್ರಿಯಾ ಹಾಸನ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)