varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಪರಮೇಶ್ವರ್ ಪ್ರಾಬ್ಲಂ

ವಾರ್ತಾ ಭಾರತಿ : 10 Dec, 2017
- ಬಸು ಮೇಗಲಕೇರಿ

‘‘ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಿಗುತ್ತಿಲ್ಲ. ಅವರನ್ನು ಕಡೆಗಣಿಸಲಾಗುತ್ತಿದೆ. ಆ ಪಕ್ಷದಲ್ಲಿ ಅವರಿಗೆ ಭವಿಷ್ಯವಿಲ್ಲ. ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶರಣಾಗಿದೆ. ಇದನ್ನು ಅರ್ಥ ಮಾಡಿಕೊಂಡು, ಅವರು ಕೂಡಲೇ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವುದು ಸೂಕ್ತ’’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ್ಷ ಎಂ.ಡಿ.ಚಂದ್ರಶೇಖರ್ ಪತ್ರಿಕಾಗೋಷ್ಠಿಯ ಮೂಲಕ ಡಾ.ಜಿ.ಪರಮೇಶ್ವರ್ ಅವರಿಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ಇದು ಹಿತೈಷಿಗಳ ಬುದ್ಧಿಮಾತಿನಂತೆಯೂ ಇದೆ, ವಿರೋಧಿಗಳ ಕುಹಕದಂತೆಯೂ ಕೇಳಿಸುತ್ತಿದೆ. ಜೊತೆಗೆ ಕಾಂಗ್ರೆಸ್‌ನಲ್ಲಿ ಪರಮೇಶ್ವರ್ ಅವರ ಸ್ಥಾನ-ಮಾನ ಮತ್ತು ಸದ್ಯದ ಸ್ಥಿತಿ-ಗತಿಯನ್ನು ಹೇಳುತ್ತಿರಬಹುದಲ್ಲವೇ ಎಂಬ ಅನುಮಾನವನ್ನೂ ಹುಟ್ಟುಹಾಕುತ್ತದೆ. ಪರಮೇಶ್ವರ್ ಪ್ರತಿಕ್ರಿಯಿಸದೆ ಸುಮ್ಮನಿರುವುದು- ಅವರ ಮನಸ್ಥಿತಿಯನ್ನು, ವ್ಯಕ್ತಿತ್ವವನ್ನು, ನಾಯಕತ್ವದ ಗುಣಾವಗುಣಗಳನ್ನು ಧ್ವನಿಸುವಂತಿದೆ. ಗೊಂದಲಕ್ಕೆಡೆಮಾಡಿದೆ.

ಈ ಗೊಂದಲವನ್ನು ಗಟ್ಟಿಗೊಳಿಸುವಂತೆ, ಸಿದ್ದರಾಮಯ್ಯ ನವರು ತಮ್ಮ ಐದು ವರ್ಷಗಳ ಮುಖ್ಯಮಂತ್ರಿ ಅವಧಿಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಗಿಸುತ್ತಿರುವ ಈ ಸಂದರ್ಭದಲ್ಲಿ, ಇದೇ ಕೊನೇ ಚುನಾವಣೆ ಎನ್ನುತ್ತಿದ್ದವರು ಈಗ ಇದ್ದಕ್ಕಿದ್ದಂತೆ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಅವಧಿಗೂ ನಮ್ಮದೇ ಸರಕಾರ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ಘೋಷಣೆಗೆ ಸಮ್ಮತಿ ಸೂಚಿಸುವಂತೆ ದಿಲ್ಲಿಯ ದೊರೆಸಾನಿ ಸೋನಿಯಾ ಗಾಂಧಿ ಕೂಡ ಸುಮ್ಮನಾಗಿದ್ದಾರೆ. ಯುವನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನು ಅಪ್ಪಿಮುದ್ದಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಈ ಬೆಳವಣಿಗೆಗಳಿಗೆ ಪೂರಕವಾಗಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಿಸ್ತೇಜ ಸ್ಥಿತಿ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಬಿಜೆಪಿಯ ಗುಂಪುಗಾರಿಕೆ ಮತ್ತು ಜೆಡಿಎಸ್‌ನ ಸೀಮಿತ ಸೀಟ್ ಆಕಾಂಕ್ಷೆಯ ಲಾಭವನ್ನು ಕಾಂಗ್ರೆಸ್ ಪಡೆಯಲು ಮುಂದಾಗಿದೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಕಾಣುತ್ತಿದೆ. ಗೆಲ್ಲುವ ಸೂಚನೆಗಳು ಕಾಣಲಾರಂಭಿಸತೊಡಗಿದಂತೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಬೇಕೆಂಬವರ ಪಟ್ಟಿಯೂ ದೊಡ್ಡದಾಗುತ್ತಿದೆ. ಕಾಂಗ್ರೆಸ್ಸಿಗರು ಮೂಲತಃ ಆರಾಮಖೋರ ರಾಜಕಾರಣಿಗಳು. ಅಧಿಕಾರವಿದ್ದಾಗ ಜೀವಂತವಿರುವ, ಸೋತಾಗ ಸತ್ತಂತಿರುವ ಕಾಂಗ್ರೆಸ್ಸಿಗರಿಗೆ, ಅಧಿಕಾರವಿಲ್ಲವೆಂದರೆ ರಾಜಕಾರಣವೇ ಇಲ್ಲ. ಇಂತಹ ಕಾಂಗ್ರೆಸ್ ಪಕ್ಷದಲ್ಲಿ ಈಗ ಎಲ್ಲರೂ ನಾಯಕರೇ. ಕಡಿಮೆ ಎಂದರೂ ಐದಾರು ಜನ ಚೀಫ್ ಮಿನಿಸ್ಟರ್ ಮೆಟೀರಿಯಲ್ಗಳೇ. ಹಿರಿತನ, ಜಾತಿವಾರು, ಪ್ರದೇಶವಾರು ಲೆಕ್ಕ ತೆಗೆದುಕೊಂಡರೆ ಎಲ್ಲರೂ ಅರ್ಹರೆ. ಆದರೆ, ನಿಜವಾದ ಜನನಾಯಕ ಎನ್ನಿಸಿಕೊಂಡವರಿಲ್ಲಿ ವಿರಳ.

ಅವುಗಳ ಪೈಕಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೆಸರು ಮುಂಚೂಣಿಯಲ್ಲಿದೆ. ಎರಡನೇ ಬಾರಿಗೆ ಸಿಎಂ ಸಿಕ್ಕಿದರೆ ಒಂದು ಕೈ ನೋಡೇಬಿಡೋಣ ಎಂದು ಸಿದ್ದರಾಮಯ್ಯ ಕೂಡ ಸಿದ್ಧರಾಗಿದ್ದಾರೆ. ಆದರೆ 2013ರಲ್ಲಿ ನಡೆದ ಕೊಡು-ಕೊಳ್ಳುವಿಕೆಯ ಒಪ್ಪಂದವನ್ನು ಸಿದ್ದರಾಮಯ್ಯನವರನ್ನು ಉಲ್ಲಂಘಿಸುವುದಿಲ್ಲವೆಂಬ ನಂಬಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿದ್ದಾರೆ. ಇನ್ನು ಕೊಪ್ಪರಿಗೆಗಟ್ಟಲೆ ಹಣವಿಟ್ಟುಕೊಂಡು ಡಾರ್ಕ್ ಹಾರ್ಸ್ ನಾನೇ ಎಂದು ಆರ್.ವಿ.ದೇಶಪಾಂಡೆ, ತೆರೆಯ ಮರೆಯಲ್ಲಿಯೇ ಷಡ್ಯಂತ್ರ ರೂಪಿಸುತ್ತಿದ್ದಾರೆ. ಅಂಥದ್ದೇ ಮತ್ತೊಬ್ಬ ನಾಯಕ ಡಿ.ಕೆ.ಶಿವಕುಮಾರ್, ಈ ಬಾರಿ ಪ್ರಯತ್ನ ಹಾಕೋಣ, ಸಿಗದಿದ್ದರೆ, ಮುಂದಕ್ಕೆ ಗ್ಯಾರಂಟಿ ಮಾಡಿಕೊಳ್ಳೋಣ ಎಂಬ ಯೋಚನೆಯಲ್ಲಿದ್ದಾರೆ.

ಪರಮೇಶ್ವರ್‌ಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುವುದೇನು ತಪ್ಪಲ್ಲ. ಆದರೆ ಅದಕ್ಕೆ ಬೇಕಾದ ಶಾಸಕರ ಬೆಂಬಲ, ಹಣ, ಅದೃಷ್ಟ ಮತ್ತು ಹೈಮಾಂಡ್ ಆಶೀರ್ವಾದದ ಕೊರತೆ ಕಾಣುತ್ತಿದೆ. ಇದೇ ಪರಮೇಶ್ವರ್ ಅವರ ಕೊರಗು, ಕಷ್ಟ ಮತ್ತು ದುರಂತ. ಈ ನಿಟ್ಟಿನಲ್ಲಿ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಬೆಂಬಲವೂ ಇದೆ, ಹೈಕಮಾಂಡಿನ ಶ್ರೀರಕ್ಷೆಯೂ ಇದೆ. ಜೊತೆಗೆ ತಮ್ಮದೇ ಆದ ವರ್ಚಸ್ವಿ ವ್ಯಕ್ತಿತ್ವವೂ ಅದಕ್ಕೆ ಸಹಕರಿಸುತ್ತಿದೆ. ಪರಮೇಶ್ವರ್ ದಲಿತರಾದರೂ, ದಲಿತರ ಜೊತೆ ಗುರುತಿಸಿಕೊಂಡಿಲ್ಲ. ದಲಿತ ಸಂಘಟನೆಗಳನ್ನು ಹತ್ತಿರ ಬಿಟ್ಟುಕೊಂಡಿಲ್ಲ. ಹಾಗೆ ನೋಡಿದರೆ ಸಿದ್ದರಾಮಯ್ಯನವರ ಎಡ-ಬಲಕ್ಕೆ ಎಚ್.ಆಂಜನೇಯ ಮತ್ತು ಎಚ್.ಸಿ. ಮಹದೇವಪ್ಪರೆಂಬ ದಲಿತ ನಾಯಕರಿದ್ದಾರೆ. ಇವರ ಹಿಂದೆ ಬಡ ದಲಿತರಿಗಿಂತ ಹೆಚ್ಚಾಗಿ ದಲಿತ ಸಂಘಟನೆಗಳಿವೆ. ಇದೂ ಕೂಡ ಪರಮೇಶ್ವರ್ ಪಾಲಿಗೆ ದಕ್ಕುವ ಸಂಗತಿಯಾಗಿಲ್ಲ. ಈ ಕೊರತೆಯನ್ನು ತುಂಬಿಕೊಳ್ಳಲು ಅವರು, ಸಿದ್ದರಾಮಯ್ಯನವರೊಂದಿಗೆ ಅಂತರ ಕಾಪಾಡಿಕೊಳ್ಳುವುದು, ಅವರ ಸಭೆಗಳಿಗೆ ಹೋಗದೆ ಶಿಷ್ಟಾಚಾರವೆನ್ನುವುದು ಹೆಚ್ಚಾಗುತ್ತಿದೆ. ಅದು ರಾಜಕೀಯ ವಲಯದಲ್ಲಿ ಬೇರೆಯದೇ ರೂಪ ತಾಳಿ ಬಿರುಕು, ಶೀತಲ ಸಮರವಾಗಿ ಗೋಚರಿಸುತ್ತದೆ.

ಇದಕ್ಕೆ ಪುಷ್ಟಿ ನೀಡುವಂತೆ ಡಿಸೆಂಬರ್ 13ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರಿ ಕಾರ್ಯಕ್ರಮಗಳ ಅನುಷ್ಠಾನ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ಹಾಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪರಮೇಶ್ವರ್ ಪಾಲ್ಗೊಳ್ಳುತ್ತಿಲ್ಲ. ಅದೇ ರೀತಿ ವಿಭಾಗೀಯ ಮಟ್ಟದಲ್ಲಿ ಪಕ್ಷ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿಲ್ಲ. ಹಾಗೆಯೇ ಪಕ್ಷ ಸಂಘಟನೆಗಾಗಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಸಿಎಂ ಪಾಲ್ಗೊಳ್ಳಲಿಲ್ಲ. ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಸಭೆಯಿಂದ ದೂರವೇ ಉಳಿದರು. ಅಲ್ಲದೆ ಗೆದ್ದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮುಖ್ಯಮಂತ್ರಿ, ಸೋತ ಶಾಸಕರ ಕ್ಷೇತ್ರಗಳಿಗೆ ಪರಮೇಶ್ವರ್ ಎಂದು ಹಂಚಿಕೆ ಮಾಡಿರುವುದೂ ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಅಸಮಾಧಾನವನ್ನು ಅದುಮಿಟ್ಟುಕೊಳ್ಳಲಾಗದ ಪರಮೇಶ್ವರ್, ‘‘ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲಿನ ಭ್ರಷ್ಟಾಚಾರವನ್ನು ಬಿಜೆಪಿ ನಾಯಕರು ಕೋರ್ಟ್‌ನಲ್ಲಿ ಪ್ರಶ್ನಿಸಲಿ. ಒಂದು ವೇಳೆ, ಆರೋಪಗಳು ಸಾಬೀತಾದಲ್ಲಿ ಜೈಲಿಗೆ ಹೋಗಲು ಸಿದ್ಧ’’ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ನಾಯಕರು ಜೈಲಿಗೆ ಹೋದವರು ಎಂದು ಸಿದ್ದರಾಮಯ್ಯ ಹೋದಲ್ಲಿ, ಬಂದಲ್ಲಿ ಲೇವಡಿ ಮಾಡುತ್ತಿರುವಾಗಲೇ, ಸಿದ್ದರಾಮಯ್ಯನವರ ಸರಕಾರದ ಒಳ-ಹೊರಗನ್ನು ಬಲ್ಲ ಪರಮೇಶ್ವರ್ ಅವರಿಂದ, ಈ ಸಂದರ್ಭದಲ್ಲಿ ಈ ಸವಾಲು- ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ, ಕೇಳಿಸುತ್ತದೆ. ಈ ಸೂಕ್ಷ್ಮ್ಮಗಳನ್ನು ಅರ್ಥ ಮಾಡಿಕೊಳ್ಳಲಾರದ ಪರಮೇಶ್ವರ್ ರಾಜಕೀಯ ಪ್ರಬುದ್ಧತೆ ಸಾಧಿಸಲಾಗದ ವಿಚಿತ್ರ ಒದ್ದಾಟದಲ್ಲಿದ್ದಾರೆ ಎನ್ನುವುದನ್ನು ಸಾರುತ್ತದೆ. 2013ರಲ್ಲಿ ಸೋತಾಗ, ಮುಖ್ಯಮಂತ್ರಿ ರೇಸ್‌ನಿಂದ ದೂರ ಸರಿಯಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ ಪಕ್ಷ ಮುನ್ನಡೆಸಿದ ಪರಮೇಶ್ವರ್ ಸುಮ್ಮನೆ ಕೂರಲಿಲ್ಲ. ಅಧಿಕಾರಸ್ಥಾನ ಬೇಕೆಂದು ಹೈಕಮಾಂಡ್ ಮುಂದೆ ಹಲ್ಲುಗಿಂಜಿ ನಿಂತರು. ವಿಧಾನ ಪರಿಷತ್ ಸದಸ್ಯರಾಗಿ, 2015ರಲ್ಲಿ ಗೃಹ ಮಂತ್ರಿಯಾಗುವಲ್ಲಿ ಸಫಲರಾದರು. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸದೆ, ಎರಡರಲ್ಲೂ ಮುಂದುವರಿದಾಗ ವಿರೋಧ ವ್ಯಕ್ತವಾಯಿತು. ಹೈಕಮಾಂಡಿನ ಆದೇಶದ ಮೇರೆಗೆ, ಒಲ್ಲದ ಮನಸ್ಸಿನಿಂದಲೇ ಗೃಹ ಸಚಿವ ಸ್ಥಾನಕ್ಕೆ 2017ರಲ್ಲಿ ರಾಜೀನಾಮೆ ನೀಡಿದರು. ಮಂತ್ರಿ ಸ್ಥಾನ ತ್ಯಜಿಸುವ ಸಮಯಕ್ಕೆ, ಕೆಪಿಸಿಸಿ ಹಿಡಿತ ಕೈ ತಪ್ಪಿಹೋಗಿತ್ತು. ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಮತ್ತು ಎಸ್.ಆರ್.ಪಾಟೀಲ್ರನ್ನು ನೇಮಿಸಲಾಯಿತು. ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಡಿ.ಕೆ.ಶಿವಕುಮಾರ್ ಮತ್ತೊಂದು ಕುರ್ಚಿಯಲ್ಲಿ ಕೂತರು. ಕೆಪಿಸಿಸಿಯಲ್ಲಿ ಬಹುಸಂಖ್ಯಾತರಾದ ಲಿಂಗಾಯತರು, ಒಕ್ಕಲಿಗರು ಮತ್ತು ಮೇಲ್ಜಾತಿಯವರದೇ ಮತ್ತೆ ದರ್ಬಾರು ಶುರುವಾಯಿತು. ಮತ್ತೆ ಪರಮೇಶ್ವರ್ ಫಜೀತಿಗೊಳಗಾದರು. ಹಾಗೆ ನೋಡಿದರೆ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಪಲ್ಟಿ ಹೊಡೆಸಿರಲಿಲ್ಲ. ಗೃಹ ಸಚಿವರಾಗಿ ಭ್ರಷ್ಟಾಚಾರಿ ಎನಿಸಿಕೊಂಡಿರಲಿಲ್ಲ. ಆದರೂ ನಿಜವಾದ ನಾಯಕನಾಗಿ ಹೊರಹೊಮ್ಮಲು ಆಗಲೇ ಇಲ್ಲ.

ಇದಕ್ಕೆ ಕಾರಣ ಹುಡುಕುತ್ತಾ ಹೋದರೆ, ಅವರ ಹುಟ್ಟು, ಬೆಳೆದು ಬಂದ ರೀತಿ, ಅವರೇರಿದ ಅಧಿಕಾರದ ಸ್ಥಾನಗಳು, ಆನಂತರ ರೂಢಿಸಿಕೊಂಡ ಜೀವನ ಶೈಲಿಗಳೇ ಉತ್ತರವಾಗಿ ನಿಲ್ಲುತ್ತವೆ. ತುಮಕೂರು ಬಳಿಯ ಪುಟ್ಟ ಗೊಲ್ಲಹಳ್ಳಿಯಲ್ಲಿ ಶಿಕ್ಷಕರಾಗಿದ್ದ ಗಂಗಾಧರಯ್ಯನವರ ಪುತ್ರರಾಗಿ 1951ರಲ್ಲಿ ಜನಿಸಿದ ಪರಮೇಶ್ವರ್, ಓದಿ ಬೆಳೆದಿದ್ದೆಲ್ಲ ತುಮಕೂರಿನಲ್ಲಿಯೇ. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಗಂಗಾಧರಯ್ಯನವರು ವಿನೋಭಾ ಭಾವೆಯವರ ಪ್ರಭಾವಕ್ಕೊಳಗಾಗಿ ದಲಿತ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಿದ್ಧಾರ್ಥ ಎಜುಕೇಷನ್ ಸೊಸೈಟಿ ಹುಟ್ಟುಹಾಕಿದರು. ಆದರೆ ಪರಮೇಶ್ವರ್ ಉನ್ನತ ವಿದ್ಯಾಭ್ಯಾಸ ಪಡೆದು ಬೆಳೆದು ದೊಡ್ಡವರಾದಾಗ, ಅಪ್ಪಮಾಡಿಟ್ಟ ಆಸ್ತಿ ಫಲ ಕೊಡಲು ಶುರು ಮಾಡಿತ್ತು. ಹಸಿವು, ಬಡತನ, ಅವಮಾನ, ಶೋಷಣೆಗಳೆಲ್ಲ ಮರೆಯಾಗಿ ಸಮಾಜದಲ್ಲಿ ಸ್ಥಾನಮಾನ ದೊರಕಿತ್ತು. 1989ರಲ್ಲಿ ಎಸ್.ಎಂ.ಯಾಹ್ಯಾ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸ್ನೇಹ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿತ್ತು. 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಆರಿಸಿಬಂದ ಪರಮೇಶ್ವರ್‌ಗೆ ವೀರಪ್ಪಮೊಯ್ಲಿಯವರು ರೇಷ್ಮೆ ಖಾತೆ ಸಚಿವರನ್ನಾಗಿ ಮಾಡಿ ರಾಜಕೀಯದಲ್ಲಿ ನೆಲೆಯೂರಲು ಸಹಕರಿಸಿದ್ದರು. 1994ರಲ್ಲಿ ಸೋತು, 1999ರಲ್ಲಿ ಗೆದ್ದು ಎಸ್.ಎಂ. ಕೃಷ್ಣರ ಕ್ಯಾಬಿನೆಟ್‌ನಲ್ಲಿ ಉನ್ನತ ಶಿಕ್ಷಣ ಸಚಿವರಾದಾಗ, ಕೃಷ್ಣರ ಆಪ್ತ ಬಳಗದಲ್ಲಿ ಒಬ್ಬರಾಗಿದ್ದರು. ಅದಾದ ಮೇಲೆ 2004 ಮತ್ತು 2008ರಲ್ಲಿ ಗೆದ್ದರೂ ಸ್ಥಾನಮಾನವೇನು ಸಿಕ್ಕಿರಲಿಲ್ಲ. ಆದರೆ 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ 2013ರ ಚುನಾವಣೆಯಲ್ಲಿ ಸೋತರು. 2015ರಲ್ಲಿ ವಿಧಾನ ಪರಿಷತ್ ಸದಸ್ಯರಾದರು, ಗೃಹ ಮಂತ್ರಿಯಾದರು.

ಮೂರು ದಶಕಗಳ ಕಾಲ ಅಧಿಕಾರದ ಸ್ಥಾನಮಾನಗಳನ್ನು ಅಲಂಕರಿಸಿ, ತಾವು ಬೆಳೆದು ದೊಡ್ಡವರಾದರೇ ಹೊರತು, ತಮ್ಮ ಬೆಳವಣಿಗೆಗೆ ಬೆಂಬಲವಾಗಿ ನಿಂತ ದಲಿತ ಸಮುದಾಯದ ಬಗ್ಗೆ ಚಿಂತಿಸಲಿಲ್ಲ. ತಮ್ಮದೇ ಸಮುದಾಯದ ಹಿರಿಯ ರಾಜಕಾರಣಿಗಳಾದ ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ತಿಪ್ಪೇಸ್ವಾಮಿ, ರಾಚಯ್ಯ, ಮಲ್ಲಿಕಾರ್ಜುನ ಖರ್ಗೆಯವರಂತೆಯೂ ಆಗಲಿಲ್ಲ. ದಲಿತರಿಂದ ದೂರವಾಗಿ, ಬೆಂಗಳೂರಿನಲ್ಲಿ ವಾಸವಾಗಿ, ಪ್ರೊ. ಬಿ.ಕೆ.ಚಂದ್ರಶೇಖರ್, ಪ್ರೊ.ರಾಧಾಕೃಷ್ಣ ಮತ್ತು ಎಸ್.ಎಂ.ಕೃಷ್ಣರಂತಹ ಎಲೀಟ್ ಕ್ಲಾಸ್ ಸರ್ಕಲ್ನಲ್ಲಿ ಹೆಚ್ಚು ಗುರುತಿಸಿಕೊಂಡರು. ಜನಸಾಮಾನ್ಯರಿಂದ ದೂರವಾದರು.

ಈಗ ಮತ್ತೊಂದು ಚುನಾವಣೆ ಎದುರಾಗಿರುವ ಈ ಹೊತ್ತಿನಲ್ಲಿ, ಹೈಕಮಾಂಡ್‌ನ ಇಂಗಿತ, ರಾಜ್ಯ ನಾಯಕರ ನಡೆ, ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನು ಅರ್ಥ ಮಾಡಿಕೊಂಡು, ಬದಲಾಗಲು ಮನಸ್ಸು ಮಾಡಿದಂತಿದೆ. ಕಳೆದ ವಾರ ಪರಮೇಶ್ವರ್ ತಮ್ಮ ಸ್ವಕ್ಷೇತ್ರ ಕೊರಟಗೆರೆಗೆ ತೆರಳಿ, ಜನರೊಟ್ಟಿಗೆ ಬೆರೆತು, ಪಕ್ಷದ ಕಾರ್ಯಕರ್ತರ ಹೆಗಲ ಮೇಲೆ ಕೈ ಹಾಕಿ, ಅವರ ಬೈಕ್ ಹಿಂದೆ ಕೂತು ಊರೂರು ಸುತ್ತಿದ್ದಾರೆ. ಸಾಲದು ಎಂದು ಜನ ಕರೆದಲ್ಲಿಗೆ ಹೋಗಿ ಆತ್ಮೀಯತೆ ತೋರಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ, ಕೊರಟಗೆರೆಯ ಜನ ಪರಮೇಶ್ವರ್ ಅವರನ್ನು ಯಾವಾಗಲೂ ಸೆಕ್ಯೂರಿಟಿ, ಎಸ್ಕಾರ್ಟ್ ಎಂಬ ಬಿಗಿ ಭದ್ರತೆಯಲ್ಲಿ ಕಂಡು, ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದವರು, ಈಗ ತಮ್ಮಿಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ಗುಮಾನಿಯಿಂದ ನೋಡುವಂತಾಗಿದೆ. ಒಟ್ಟಿನಲ್ಲಿ ಪರಮೇಶ್ವರ್, ಕಳೆದ ಬಾರಿ ಚುನಾವಣೆಯಲ್ಲಿ ಹಂಗಿದ್ದರು, ಆಗಲೂ ಸಿಎಂ ಕುರ್ಚಿ ಸಿಗಲಿಲ್ಲ. ಈಗ ಹಿಂಗಾಗಿದ್ದಾರೆ, ಈಗಲೂ ಸಿಗುವಂತೆ ಕಾಣುತ್ತಿಲ್ಲ. ಇದು ಯಾರ ಪ್ರಾಬ್ಲಂ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)