ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ
ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ
ಮಾದಲಾಂಬಿಕಾನಂದನನು?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ
ಮಾದರಸನ ಮೋಹದ ಮಗನು?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ
ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ?
- ಗಂಗಾಂಬಿಕೆ
ಬಸವಣ್ಣನವರ ಹಿರಿಯ ಸತಿ ಗಂಗಾಂಬಿಕೆಯ ಈ ವಚನ ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯದ ಔನ್ನತ್ಯವನ್ನು ಅರಿತುಕೊಳ್ಳುವಲ್ಲಿ ಬಹು ಮುಖ್ಯವಾಗಿದೆ. ಬಸವಣ್ಣನವರ ತಾಯಿ ಮಾದಲಾಂಬಿಕೆ; ತಂದೆ ಮಾದರಸ. ಬಸವಣ್ಣನವರು ಉತ್ಕಟ ದಾಸೋಹಂ ಭಾವದಿಂದ ಶಿವಶರಣರ ಸೇವೆಯನ್ನು ಮಾಡುತ್ತಿದ್ದರು. ಪ್ರಧಾನಿಯಾಗಿ ಬಿಜ್ಜಳನ ಅರಮನೆಯಲ್ಲಿ ನ್ಯಾಯನಿಷ್ಠುರತೆಯಿಂದ ಮತ್ತು ಉನ್ನತ ಕಾರ್ಯತತ್ಪರತೆಯಿಂದ ಸೇವೆ ಸಲ್ಲಿಸುತ್ತಿದ್ದರು. ಉತ್ಕಟ ಭಕ್ತಿಭಾವದಿಂದ ಲಿಂಗಾರ್ಚನೆ ಮಾಡುತ್ತಿದ್ದರು. ಅತ್ಯುನ್ನತವಾದ ಲಿಂಗಾಂಗಸಾಮರಸ್ಯದ ಆನಂದವನ್ನು ಅನುಭಾವಿಸುತ್ತಿದ್ದರು. ಬಸವಣ್ಣನವರು ಇದನ್ನೆಲ್ಲ ಏಕಕಾಲಕ್ಕೆ ಅದು ಹೇಗೆ ಸಾಧಿಸುತ್ತಾರೆ ಎಂದು ಸತಿಯಾದ ಗಂಗಾಂಬಿಕೆ ಆಶ್ಚರ್ಯಾನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಮಪ್ರಭುಗಳು ಬಸವಣ್ಣನವರಿಗೆ ‘ಯುಗದ ಉತ್ಸಾಹ’ ಎಂದು ಕರೆದಿದ್ದಾರೆ. ತಮಗೆ ಆಯಾಸವಿಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ತಮ್ಮನ್ನು ಲೋಕಕ್ಕೆ ಅರ್ಪಿಸಿಕೊಂಡವರು ಹೇಗೆ ಇರುತ್ತಾರೆ ಎಂಬುದಕ್ಕೆ ಬಸವಣ್ಣನವರು ಸಮಂಜಸವಾದ ಉದಾಹರಣೆಯಾಗಿದ್ದಾರೆ.
ಬಸವಣ್ಣನವರು ಕರ್ತವ್ಯ ಪ್ರಜ್ಞೆಯೊಂದಿಗೆ ಪ್ರಫುಲ್ಲವಾದ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಮತ್ತು ಆತ್ಮಿಕ ಆನಂದವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದವರಾಗಿದ್ದರು ಎಂಬುದಕ್ಕೆ ಮೇಲಿನ ವಚನ ಸಾಕ್ಷಿಯಾಗಿದೆ. ಬಸವಣ್ಣನವರು ಬಿಜ್ಜಳನ ಪ್ರಧಾನಿಯಾಗಿ ರಾಜ್ಯಭಾರದ ಹೊಣೆಯನ್ನು ಹೊತ್ತುಕೊಂಡು ನ್ಯಾಯನಿಷ್ಠೆಯಿಂದ ಕರ್ತವ್ಯ ಪಾಲನೆ ಮಾಡಿದರು. ‘‘ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ’’ ಎಂದು ಜನ ಉದ್ಗಾರ ತೆಗೆಯುವ ಹಾಗೆ ಆರ್ಥಿಕ ವ್ಯವಸ್ಥೆಯನ್ನು ಸುಭದ್ರಗೊಳಿಸಿದರು.
‘‘ನಾನು ಪರಸೇವೆಯ ಮಾಡುವೆನಯ್ಯ ಜಂಗಮದಾಸೋಹಕ್ಕೆಂದು’’ ಎಂದು ಹೇಳುವ ಬಸವಣ್ಣನವರು ಸಮಾಜಸೇವೆಯ ಉದ್ದೇಶದಿಂದಲೇ ಪ್ರಧಾನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಮ್ಮದೆಲ್ಲವನ್ನೂ ಶರಣಸಂಕುಲಕ್ಕಾಗಿಯೇ ಅರ್ಪಿಸಿದ್ದರು. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ಅನುಪಮವಾದ ಶರಣಸಂಕುಲವು ಲೋಕಕ್ಕೇ ಮಾದರಿಯಾದ ನವಮಾನವರ ಸಮಾಜವಾಗಿತ್ತು. ಕಲ್ಯಾಣ ರಾಜ್ಯದ ಪ್ರಧಾನಿ ಬಸವಣ್ಣನವರು ಈ ನವಸಮಾಜದ ನೇತಾರರೂ ಆಗಿದ್ದರು. ಹೀಗೆ ಹಳೆಯ ಸಾಮಾಜಿಕ ವ್ಯವಸ್ಥೆಯಲ್ಲಿ ಸೇವೆಸಲ್ಲಿಸುತ್ತಾ ಹೊಸ ಸಮಾಜ ವ್ಯವಸ್ಥೆಗಾಗಿ ತನುಮನಧನಗಳನ್ನು ಅರ್ಪಿಸುತ್ತಿದ್ದರು. ‘ಕಳ್ಳನಾಣ್ಯ ಸಲುಗೆಗೆ ಸಲ್ಲದು’ ಎಂದು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸುವುದರ ಜೊತೆಗೇ ಹೊಸ ಸಮಾಜ ನಿರ್ಮಿಸುವ ಬಸವಣ್ಣನವರ ವ್ಯಕ್ತಿತ್ವ ಅತ್ಯುನ್ನತವಾಗಿದೆ. ಏಕೆಂದರೆ ಪ್ರಧಾನಿಯೊಬ್ಬ ಇಷ್ಟು ಸಮರ್ಪಕವಾಗಿ ಹಳೆಯ ವ್ಯವಸ್ಥೆಯನ್ನು ನಿಭಾಯಿಸುತ್ತ ಹೊಸ ವ್ಯವಸ್ಥೆಯನ್ನು ರೂಪಿಸಿದ ಉದಾಹರಣೆ ಜಗತ್ತಿನಲ್ಲಿ ಇನ್ನೊಂದಿಲ್ಲ.
ಸಾಂದ್ರವಾಗಿ ಹರಗಣಭಕ್ತಿಯನ್ನು ಮಾಡುವುದೆಂದರೆ, ಕಾಯಕ ಪ್ರಜ್ಞೆಯಿಂದ ಕೂಡಿದ ತಮ್ಮ ನಡೆ ನುಡಿ ಸಿದ್ಧಾಂತವನ್ನು ನಂಬಿ ವಿವಿಧ ಕಡೆಗಳಿಂದ ಬಂದು, ಶಿವಶರಣರಾಗಿ ಶರಣ ಸಂಕುಲವನ್ನೇ ನಿರ್ಮಿಸಿದ ಕಾಯಕಜೀವಿಗಳ ಸೇವೆಯನ್ನು ಸಮರ್ಥವಾಗಿ ಮಾಡುವುದು. ಅವರ ಲೌಕಿಕ ಮತ್ತು ಅನುಭಾವದ ಬದುಕಿಗೆ ಚ್ಯುತಿ ಬರದಂತೆ ಸಾಂಘಿಕ ವ್ಯವಸ್ಥೆ ಮಾಡುವುದು. ಅವರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಅವರವರ ಕಾಯಕದ ಮೂಲಕವೇ ಅವರೆಲ್ಲ ನಡೆ ನುಡಿ ಸಿದ್ಧಾಂತವನ್ನು ರೂಪಿಸುವಂಥ ವಾತಾವರಣ ಸೃಷ್ಟಿಸುವುದು. ಅವರೆಲ್ಲ ಆರ್ಥಿಕವಾಗಿ ಮತ್ತು ಪಾರಮಾರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು.
ಸಾಂದ್ರವಾಗಿ ಬಿಜ್ಜಳನ ಅರಮನೆಯ ನ್ಯಾಯವನ್ನು ನೋಡಿಕೊಳ್ಳುವುದೆಂದರೆ, ಬಿಜ್ಜಳನ ಪ್ರಧಾನಿಯಾಗಿ ಅರಮನೆಯ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುವುದು. ಬಿಜ್ಜಳನ ಭಂಡಾರಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು. ಸಾಮಾಜಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು. ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು. ಅರಮನೆಯೊಳಗಿನ ರಾಜಕೀಯವನ್ನು ನಿಯಂತ್ರಿಸುವುದು. ವೈರಿಗಳು ದೇಶದ ಮೇಲೆ ದಾಳಿ ಮಾಡಲು ಸಾಧ್ಯವಾಗದಂತೆ ಕಟ್ಟೆಚ್ಚರ ವಹಿಸುವುದು. ದೇಶದೊಳಗೆ ದಂಗೆಗಳಾಗದಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಶರಣಸಂಕುಲವನ್ನು ನೋಡಿಕೊಳ್ಳುವುದು ಮತ್ತು ಪ್ರಧಾನಿ ಹುದ್ದೆಯನ್ನು ನಿಭಾಯಿಸುವುದು ತದ್ವಿರುದ್ಧವಾದ ಕರ್ತವ್ಯಗಳಾಗಿವೆ. ಇವೆರಡನ್ನೂ ಬಸವಣ್ಣನವರು ಅದು ಹೇಗೆ ನಿಭಾಯಿಸಿರಬಹುದು? ಏತನ್ಮಧ್ಯೆ ಲಿಂಗಾಂಗ ಸಾಮರಸ್ಯವನ್ನು ಅದು ಹೇಗೆ ಪಡೆದಿರಬಹುದು?
ಗಂಗಾಂಬಿಕೆ ವ್ಯಕ್ತಪಡಿಸುವ ಆಶ್ಚರ್ಯದಲ್ಲೇ ಬಸವಣ್ಣನವರ ವಿರಾಟ್ ವ್ಯಕ್ತಿತ್ವದ ದರ್ಶನವಾಗುವುದು. ಬಿಜ್ಜಳನ ಹಳೆಯ ಸಾಮಾಜಿಕ ವ್ಯವಸ್ಥೆಯನ್ನು ಪ್ರಧಾನಿಯಾಗಿ ನಿಭಾಯಿಸುವ ಬಸವಣ್ಣನವರು ಅದರೊಳಗೇ ಇರುವ ಹೊಸ ಸಮಾಜದ ಪ್ರತೀಕವಾದ ಶರಣಸಂಕುಲಕ್ಕೂ ನಾಯಕರಾಗಿದ್ದಾರೆ.
ಬಸವಣ್ಣನವರ ತಾಯಿ ತಂದೆಗಳ ಹೆಸರನ್ನು ಹೇಳಿದ್ದರಿಂದ ಈ ವಚನಕ್ಕೆ ಹೆಚ್ಚಿನ ಮಹತ್ವವಿದೆ.
***