ಅಪರಾಧ ಜಗತ್ತಿನ ವಿವರಗಳು
ಈ ಹೊತ್ತಿನ ಹೊತ್ತಿಗೆ
‘ಒತ್ತಿ ಬರುವ ಕತ್ತಲ ದೊರೆಗಳು’ ಕೃತಿ ಶ್ರೀನಿವಾಸ ಜೋಕಟ್ಟೆಯವರು ಬರೆದಿರುವ ಅಪರಾಧ ಜಗತ್ತಿನ ಲೇಖನಗಳು. ಕಾಯಕನಗರವೆಂದು ಖ್ಯಾತಿ ಪಡೆದಿರುವ ಮುಂಬೈ ಶಹರ ಅಪರಾಧ ಅಥವಾ ಭೂಗತ ಚಟುವಟಿಕೆಗಳ ನಗರವೂ ಹೌದು. ಮುಂಬೈಯಲ್ಲಿ ಬದುಕುವ ಜನರ ಜೀವನದ ಮೇಲೆ ಈ ಭೂಗತ ಮಾಫಿಯಾ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿಯೇ ಇರುತ್ತದೆ. ಹೀಗಿರುವಾಗ ಒಬ್ಬ ಬರಹಗಾರನಾಗಿ, ಈ ಜಗತ್ತಿನ ಕಡೆಗೆ ಶ್ರೀನಿವಾಸ ಜೋಕಟ್ಟೆಯವರು ಗಮನ ಹರಿಸುವುದು ಸಹಜವೇ ಆಗಿದೆ. ಈ ಅಪರಾಧ ಜಗತ್ತನ್ನು ವಿವರಿಸುವ ಮೂಲಕವೇ ಮುಂಬೈ ಮತ್ತು ಅದನ್ನು ಹೊಂದಿಕೊಂಡಿರುವ ದೇಶದ ವಿದ್ಯಮಾನಗಳನ್ನು ಚರ್ಚಿಸಲು ಯತ್ನಿಸುತ್ತಾರೆ. ಇಲ್ಲಿ ಹಿಂಸೆಯ ಬೇರೆ ಬೇರೆ ಆಯಾಮಗಳನ್ನು ಚರ್ಚಿಸಿದ್ದಾರಾದರೂ, ಹಲವು ಲೆೀಖನಗಳ ಕೇಂದ್ರ ಮುಂಬೈ ಆಗಿದೆ.
ಇಲ್ಲಿ ಸುಮಾರು 36 ಲೇಖನಗಳಿವೆ. ಮಾಯಾನಗರಿಯೆಂಬ ಮುಂಬೈ ಭೂಗತ ಜಗತ್ತಿನ ಗ್ಲಾಮರ್, ನಕ್ಸಲೈಟ್ ಕ್ರಾಂತಿಯ ಉಗಮಸ್ಥಾನ, ಐಬಿ ಸುಳಿಯಲ್ಲಿರುವ ಎನ್‌ಜಿಒ, ಶಾಂತಿಪಾಲನೆಯಲ್ಲಿ ಭಾಗಿಯಾಗುವ ಖಬರಿಗಳು, ಮಾನವೀಯತೆ ಮರೆತ ಪೊಲೀಸರು, ಖಾಸಗಿ ಗೂಢಚಾರ, ಸಣ್ಣ ಶಸ್ತ್ರಗಳ ಭಯೋತ್ಪಾದನೆ, ಅಫೀಮು ಅಮಲು, ಇಸ್ಲಾಮಿಕ್ ಸ್ಟೇಟ್, ಮಧ್ಯಭಾರತದ ಅಫೀಮ್ ಬೆಳೆ, ಕಾಮಾಟಿಪುರ, ಮೃತ ಡಕಾಯಿತನಿಗೊಂದು ಮಂದಿರ...ಹೀಗೆ ಅಪರಾಧಗಳು ಮತ್ತು ಹಿಂಸೆಯ ನೆಲೆಗಳನ್ನು ಹುಡುಕುತ್ತಾ ಸಾಗುವ ಜೋಕಟ್ಟೆಯವರ ಹೆಚ್ಚಿನ ಲೇಖನಗಳು ವಿಶ್ಲೇಷಣೆಗಳಲ್ಲ. ಬದಲಿಗೆ ಮಾಹಿತಿಗಳು. ಇಲ್ಲಿ ಅಪರಾಧ ಮತ್ತು ಹಿಂಸೆಯ ಹಿಂದಿರುವ ಮನಶ್ಶಾಸ್ತ್ರೀಯ, ರಾಜಕೀಯ, ಸಾಮಾಜಿಕ ನೆಲೆಗಳನ್ನು ಅವರು ಚರ್ಚಿಸುವುದಿಲ್ಲ. ಅವುಗಳ ಇತಿಹಾಸ, ವರ್ತಮಾನಗಳ ಮೇಲೆ ಅವುಗಳು ಬೀರುತ್ತಿರುವ ಪರಿಣಾಗಳಿಗಷ್ಟೇ ಹೆಚ್ಚಿನ ಲೇಖನಗಳು ಸೀಮಿತವಾಗುತ್ತವೆ. ಆದುದರಿಂದಲೇ, ಒಟ್ಟಂದದಲ್ಲಿ ಅವರು ಹಿಂಸೆ ಅಪರಾಧಗಳ ಕುರಿತಂತೆ ಲೇಖಕನಾಗಿ ಎಂತಹ ನಿಲುವುಗಳನ್ನು ತಾಳಿದ್ದಾರೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಒಟ್ಟಿನಲ್ಲಿ ನಾವು ತಿಳಿಯದ ಕತ್ತಲ ಜಗತ್ತಿನ ಹಲವು ಕುತೂಹಲಕಾರಿ ಮಾಹಿತಿಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಆದರೆ ಈ ಕತ್ತಲನ್ನು ಸೀಳಿ ಅಲ್ಲಿ ಬೆಳಕಿನ ಬೀಜಗಳನ್ನು ಬಿ್ತುವ ದಾರಿ ತೆರೆದುಕೊಳ್ಳುವುದಿಲ್ಲ.
ಸಾಧನಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಪ್ರಕಟಿಸಿದೆ.262 ಪುಟಗಳ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 9869394694 ದೂರವಾಣಿಯನ್ನು ಸಂಪರ್ಕಿಸಬಹುದು.