varthabharthi


ನನ್ನೂರು ನನ್ನ ಜನ

ಸಮಾಜದ ಸ್ವಾಸ್ಥ ಕೆಡಿಸುವವರು ಯಾರು?

ವಾರ್ತಾ ಭಾರತಿ : 13 Dec, 2017
ಚಂದ್ರಕಲಾ ನಂದಾವರ

ಕಾಟಿಪಳ್ಳದಲ್ಲಿ ದೇವಸ್ಥಾನಗಳಿರಲಿಲ್ಲ ಎಂದು ಬರೆದಿದ್ದೆ. ಅದು ನಿಜವೂ ಹೌದು. ಆದರೆ ನಮ್ಮೆದುರೇ ಒಂದಲ್ಲ ಎರಡು ದೇವಸ್ಥಾನಗಳು ನಿರ್ಮಾಣಗೊಂಡದ್ದನ್ನು ನೋಡುವ ಅವಕಾಶವೂ ನಮಗೆ ಸಿಕ್ಕಿತ್ತು ಎನ್ನುವುದೂ ನಿಜವೇ. ಕಾಟಿಪಳ್ಳ ಎನ್ನುವ ಕೆಲವು ಬಸ್ಸುಗಳ ಕೊನೆಯ ನಿಲ್ದಾಣದ ಬಳಿಯಲ್ಲಿ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು ಖಾಲಿ ಜಾಗವಿತ್ತು. ಪೂರ್ವದಿಕ್ಕಿನಲ್ಲಿದ್ದುದು ಪದವಿನಂತೆ ಗಟ್ಟಿ ನೆಲದ ವಿಶಾಲ ಜಾಗ. ಅಲ್ಲಿ ಯುವಕರು ಹಲವು ತಂಡಗಳಾಗಿ ಕ್ರಿಕೆಟ್, ವಾಲಿಬಾಲ್ ಇತ್ಯಾದಿಗಳನ್ನು ಆಡುತ್ತಿದ್ದರು. ಇಲ್ಲಿ ಆಗಾಗ ಯಕ್ಷಗಾನ ಬಯಲಾಟಗಳೂ ನಡೆಯುತ್ತಿತ್ತು. ಯುವಕ ಮಂಡಲದ ವಾರ್ಷಿಕೋತ್ಸವಗಳೂ ನಡೆಯುತ್ತಿತ್ತು. ನಾಟಕಗಳೂ ನಡೆಯುತ್ತಿತ್ತು. ಇವುಗಳನ್ನು ನೋಡುವ ಅವಕಾಶಗಳು ಬೇರೆ ಬೇರೆ ಕಾರಣಗಳಿಂದ ನಮಗೂ ದೊರಕಿತ್ತು. ಉಳಿದಂತೆ ಮಳೆಗಾಲದ ವೇಳೆ ದನಕರು, ಆಡುಗಳು ಮೇಯುತ್ತಿದ್ದುವು. ಈ ಪದವಿನ ಪಡುದಿಕ್ಕಿನಲ್ಲಿ ಕಾಟಿಪಳ್ಳ ಅಂಚೆ ಕಚೇರಿಯ ಬಳಿಯೂ ಸ್ವಲ್ಪ ಜಾಗ ಇತ್ತು. ಮೂರು ನಾಲ್ಕು ಸೈಟುಗಳಷ್ಟು ಇರಬಹುದೇನೋ ಯಾಕೆಂದರೆ ಎದುರಿನ ಪದವಿನಷ್ಟು ವಿಶಾಲವಾಗಿರಲಿಲ್ಲ. ಇಲ್ಲಿಯೂ ದನಕರುಗಳು, ಆಡುಗಳು ಮೇಯುತ್ತಿದ್ದುದನ್ನು ಬಿಟ್ಟರೆ ಆ ಸ್ಥಳದಲ್ಲಿ ಚಿಕ್ಕ ಮಕ್ಕಳು ಆಡಿಕೊಳ್ಳುತ್ತಿದ್ದುದೂ ಬಹು ಅಪರೂಪ. ಯಾಕೆಂದರೆ ಅದು ಏರು ತಗ್ಗುಗಳಿಂದ ಕೂಡಿದ ನೀರು ಹರಿಯುವ ಜಾಗವಾಗಿತ್ತು. ಇಂತಹ ಈ ಸ್ಥಳದಲ್ಲಿ ಮುಂದೊಂದು ದಿನ ವಿಘ್ನ ನಿವಾರಕನಾದ ಗಣೇಶನಿಗೆ ದೇವಸ್ಥಾನ ನಿರ್ಮಾಣವಾಗುವುದು ಎಂಬುದನ್ನು ಯಾರೂ ಊಹಿಸಿರಲಾರರು.

ಪಟೇಲ್ ಶ್ರೀನಿವಾಸರಾಯರು ಪಣಂಬೂರಿನ ಊರಿಗೇ ಸೇರಿದವರು. ಅವರ ಮನೆ ಕುಳಾಯಿ ಚಿತ್ರಾಪುರದಲ್ಲಿದ್ದರಬೇಕು. ಅವರಿಗೆ ರಾಜಕೀಯದ ನಂಟೂ ಇತ್ತು ಎಂದು ನೆನಪು. ಇವರು ಯಾವ ಪ್ರೇರಣೆಯಿಂದಲೋ ಅಂಚೆ ಕಚೇರಿ ಬಳಿಯ ಖಾಲಿ ಜಾಗದಲ್ಲಿ ದೇವಸ್ಥಾನ ನಿರ್ಮಾಣದ ಕನಸನ್ನು ಕಂಡರು. ಅದಕ್ಕೆ ಸಂಬಂಧಿಸಿದ ಅನುಮತಿ ಇತ್ಯಾದಿಗಳನ್ನೆಲ್ಲಾ ಪಡೆದು ದೇವಸ್ಥಾನದ ಅಡಿಪಾಯ ಹಾಕಲಾಯಿತು. ದೇವಸ್ಥಾನ ನಿರ್ಮಾಣದ ಬಗ್ಗೆ ಮುಸ್ಲಿಮರಾಗಲಿ, ಕ್ರಿಶ್ಚಿಯನ್ನರಾಗಲಿ ಯಾವ ಮಾತನ್ನು ಆಡಿಲ್ಲ. ಆದರೆ ದೇವಸ್ಥಾನ ನಿರ್ಮಾಣದ ಬಗ್ಗೆ ಇದು ಅಗತ್ಯವಿಲ್ಲದ ಕೆಲಸ, ಅಧಿಕ ಪ್ರಸಂಗದ ಕೆಲಸ ಎಂಬ ಮಾತುಗಳು ಕೇಳಿ ಬಂದುದು ನನ್ನೂರಿನ ನನ್ನ ಮನೆಯ ಆಸುಪಾಸಿನ ಬ್ರಾಹ್ಮಣ ಸಮುದಾಯದ ಹಿರಿಯರಿಂದಲೇ ಎನ್ನುವುದು ನನಗೇ ಆಶ್ಚರ್ಯದ ವಿಷಯ. ಆಗ ಗೊತ್ತಾದುದು ಅವರು ಈ ಸಮುದಾಯದವರಲ್ಲ ಎಂಬುದು. ಬರೀ ಮಾತುಗಳು ನಡೆಯುವ ಕಾರ್ಯಗಳನ್ನು ತಡೆಯಲು ಸಾಧ್ಯವಿಲ್ಲವಲ್ಲಾ? ಅಂತೂ ನೋಡ ನೋಡುತ್ತಲೇ ದೇವಸ್ಥಾನದ ನಿರ್ಮಾಣ ಪೂರ್ತಿಯಾಯಿತು. ಅದರ ಉದ್ಘಾಟನಾ ಕಾರ್ಯಕ್ರಮಗಳು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಂಭ್ರಮದಿಂದಲೇ ನಡೆಯಿತು. ಮಾತಾಡಿದವರು ಕೂಡಾ ಹೋಗಿಯೇ ಹೋದರು. ಯಾಕೆಂದರೆ ಅದು ಗಣೇಶನ ದೇವಸ್ಥಾನ. ಗಣೇಶ ಎಂದರೆ ವಿಘ್ನ ನಿವಾರಕನೂ ಹೌದು. ವಿಘ್ನ ಕಾರಕನೂ ಹೌದಲ್ಲವೇ? ದೇವಸ್ಥಾನ ಒಟ್ಟು ಸ್ಥಳ ಬಹಳಷ್ಟು ವಿಶಾಲವಾಗಿಲ್ಲದೆ ಇದ್ದುದರಿಂದ ದೇವಸ್ಥಾನದ ಧ್ವಜಸ್ತಂಭ ರಸ್ತೆಗೆ ಸಮೀಪವೇ ಕಾಣಿಸುತ್ತಿತ್ತು.

ಈ ದೇವಸ್ಥಾನದ ವಿಶೇಷ ಎಂದರೆ ಗಣಪತಿಯ ವಾಹನ ಇಲಿಯ ಮೂರ್ತಿಯ ಸ್ಥಾಪನೆ. ಇಲಿಯ ಬಹುದೊಡ್ಡ ಮೂರ್ತಿಯನ್ನು ಧ್ವಜಸ್ತಂಭದ ಬಳಿಯೇ ಇರಿಸಲು ಸ್ಥಳಾವಕಾಶವಿಲ್ಲದೆ ಇದ್ದುದರಿಂದಲೋ ಏನೋ ಅದು ರಸ್ತೆಯ ಇನ್ನೊಂದು ಬದಿಯಲ್ಲಿ ದೇವರಿಗೆ ಮುಖಮಾಡಿ ಕುಳಿತ ಭಂಗಿಯಲ್ಲಿ ಸ್ಥಾಪಿಸಲ್ಪಟ್ಟಿತ್ತು. ಬಹುಶಃ ಗಣೇಶನ ದೇವಸ್ಥಾನದ ಎದುರಲ್ಲಿ ಇಲಿಯ ಮೂರ್ತಿ ಇರುವುದು ಇದೇ ಮೊದಲು ಎಂದು ನನ್ನ ತಿಳುವಳಿಕೆ. ಶಿವದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನಂದಿಯ ವಿಗ್ರಹ ಗರ್ಭಗುಡಿಯ ಒಳಗೇ ಇರುತ್ತದೆ. ಅಂತೂ ಒಂದು ಹೊಸ ಆಲೋಚನೆ ಕಾರ್ಯರೂಪಕ್ಕೆ ಬಂದು ಇಲಿಗೂ ಗೌರವ ಸಿಕ್ಕಿತು. ಮಾತ್ರವಲ್ಲ ಈ ಇಲಿಗೆ ನೈವೇದ್ಯ ಅರ್ಪಿಸಿದರೆ ನಮ್ಮ ಮನೆಗಳಲ್ಲಿ ಇಲಿಗಳ ಉಪದ್ರವ ಕಡಿಮೆಯಾಗುತ್ತವೆ ಎಂಬ ನಂಬಿಕೆಯೂ ಹುಟ್ಟಿಕೊಂಡಿತು. ನಿಧಾನಕ್ಕೆ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಿತು. ಭಕ್ತರು ಹೆಚ್ಚಿದಂತೆ ದೇವರ ಕಾರಣಿಕ ಮಹಾತ್ಮೆಯ ಕತೆಗಳೂ ಹುಟ್ಟಿಕೊಳ್ಳುವುದಕ್ಕೆ ಪ್ರಾರಂಭವಾಯಿತು.

ಇತಿಹಾಸ ಕಾಲದಲ್ಲೂ ದೇವಸ್ಥಾನಗಳ ಮಹಾತ್ಮೆಗಳೂ ಹೀಗೆಯೇ ಹುಟ್ಟಿ ಬೆಳೆದಿರಬೇಕು ಎನ್ನುವುದು ವಾಸ್ತವದ ಅರಿವಾಯಿತು. ಗಣೇಶ ಚೌತಿ, ಪ್ರತಿಷ್ಠಾ ದಿನ, ವಾರ್ಷಿಕ ಜಾತ್ರೆ ಹೀಗೆಲ್ಲಾ ಸಾಂದರ್ಭಿಕವಾದ ವಿಶೇಷ ಕಾರ್ಯಕ್ರಮಗಳು ನಡೆಯುತ್ತಾ ಬಂದಂತೆ ಊರಿನ ಜನರ ಆಸ್ತಿಕತೆಗೆ ಒಂದು ರೂಪ ದೊರಕಿದಂತಾಯ್ತು. ಅಬ್ರಾಹ್ಮಣ ಸಮುದಾಯದ ಜನರಿಗೆ ಯಾವ ದೇವರಾದರೇನು? ಯಾವ ಪಂಗಡದ ಬ್ರಾಹ್ಮಣ ಅರ್ಚಕರಾದರೇನು? ಆ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಈ ವೈದಿಕ ದೇವದೇವತೆಗಳು ಅವರನ್ನು ಭಯಗೊಳಿಸುವುದಿಲ್ಲ. ಅವರನ್ನು ಭಯಗೊಳಿಸುವುದು ಅಥವಾ ಸಂರಕ್ಷಿಸುವುದು ಅವರು ನಂಬಿದ ದೈವಗಳು. ಅದು ಜುಮಾದಿ, ಬಂಟ, ಕಲ್ಲುರ್ಟಿ, ಗುಳಿಗ, ಧೂಮಾವತಿ, ಮಂತ್ರದೇವತೆ ಇತ್ಯಾದಿ. ಏನೇ ಇರಲಿ ಊರಿಗೊಂದು ದೇವಸ್ಥಾನ ಎನ್ನುವುದು ಊರಿನ ಕೊರತೆಯನ್ನು ನೀಗಿಸಿತು. ಮಾತ್ರವಲ್ಲ ಭೌಗೋಳಿಕ ಕಾರಣದಿಂದ ಇದ್ದ ಬಹಳ ಹಳೆಯ ಹೆಸರು ಕಾಟಿಪಳ್ಳ ಗಣೇಶಪುರವಾದುದು ಕೂಡಾ ಒಂದು ಸ್ಥಿತ್ಯಂತರವೇ.

ಇದರ ಜೊತೆಗೆ ನಮ್ಮ ಸಮುದಾಯದ ಒಂದು ವರ್ಗ ಹೀಗೆ ದೇವಸ್ಥಾನ ನಿರ್ಮಿಸಿ ಮೆರೆದಾಗ ನಾವು ಸುಮ್ಮನಿರುವುದು ಸರಿಯಲ್ಲ. ಹಾಗೆ ಆ ದೇವಸ್ಥಾನ ಕೂಡಾ ನಮ್ಮ ದಿನ ನಿತ್ಯದ ಭೇಟಿಗೆ ದೂರವಾದುದೇ ತಾನೇ? ಆದ್ದರಿಂದ ನಮ್ಮ ನಂದನೇಶ್ವರನ ಬದಲಿಗೆ ನಾವೂ ಒಬ್ಬ ದೇವರನ್ನು ಹೊಂದಲೇಬೇಕು. ಅಂದರೆ ಇನ್ನೊಂದು ದೇವಸ್ಥಾನ ನಿರ್ಮಾಣವಾಗಬೇಕೆಂಬುದು 5 ಮತ್ತು 7ನೆಯ ಬ್ಲಾಕ್‌ನ ಬ್ರಾಹ್ಮಣ ಸಮುದಾಯದ ಹಿರಿಯರು ನಿರ್ಧಾರ ಮಾಡಿದರು. ಈ ಬಗ್ಗೆ ಸೂಕ್ತವಾದ ಆಡಳಿತಾತ್ಮಕವಾದ ವ್ಯವಹಾರಗಳನ್ನು ಮಾಡಲು ಒಂದು ತಂಡವನ್ನು ರೂಪಿಸಿಕೊಂಡರು. ದೇವಸ್ಥಾನದ ನಿರ್ಮಾಣಕ್ಕೆ ಮುಖ್ಯರಸ್ತೆಯಲ್ಲಿ ಎಲ್ಲೂ ಜಾಗ ಖಾಲಿ ಇರಲಿಲ್ಲ. 7ನೇ ಬ್ಲಾಕಿನಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರದಿಂದ ಒಳಗಡೆ ಸಾಗಿದಂತೆ ದಿಣ್ಣೆಯಂತಹ ಎತ್ತರದ ಸ್ಥಳ ಒಂದಿಷ್ಟು ವಿಶಾಲವಾಗಿ ಖಾಲಿ ಇತ್ತು. ಈ ಸ್ಥಳವೇ ಪ್ರಶಸ್ತ ಅನ್ನಿಸಿತ್ತು. ಪೂರ್ವ ದಿಕ್ಕಿಗೆ ಮುಖ ಮಾಡುವುದಕ್ಕೆ ಸಾಧ್ಯವಿರುವುದರಿಂದ ಹತ್ತಿರದಲ್ಲಿ ಹಿಂದೂಗಳ ಮನೆಗಳೇ ಇರುವುದು ಕೂಡಾ ಆಯ್ಕೆಗೆ ಕಾರಣವಾದ ಅಂಶ. ಇನ್ನು ಇದು ಒಬ್ಬ ವ್ಯಕ್ತಿಯ ಶ್ರಮವಲ್ಲದೆ ಇರುವುದರಿಂದ ಬೇರೆ ಬೇರೆ ಕಾರ್ಯಗಳಿಗೆ ಹಿರಿಯ ಕಿರಿಯರನ್ನು ಸೇರಿಸಿಕೊಂಡು ತಂಡ ರಚಿಸಲಾಯಿತು. ಹಾಗೆಯೇ ಧನ ಸಂಗ್ರಹಕ್ಕೂ ಮನೆ ಮನೆಗಳಿಗೆ ತೆರಳಿದರು. ನನ್ನ ಸಹೋದ್ಯೋಗಿ ಮಿತ್ರರೂ ಈ ಕಾರ್ಯಗಳಲ್ಲಿ ತೊಡಗಿಸಿಕೊಂಡದ್ದರಿಂದ ವಿಷಯ ತಿಳಿಯುತ್ತಿತ್ತು. ಇನ್ನು ಯಾವ ದೇವರಿಗೆ ದೇವಸ್ಥಾನ ಎಂಬ ಬಗ್ಗೆ ಪ್ರಶ್ನೆ ಇಟ್ಟು ಕೇಳಲಾಯಿತಂತೆ.

ಪಣಂಬೂರಿನಲ್ಲಿ ಬಿಟ್ಟು ಬಂದಿರುವ ದೇವರು ನಂದನೇಶ್ವರ ಅಂದರೆ ಶಿವನಾಗಿದ್ದುದರಿಂದ ಇಲ್ಲಿಯೂ ಶಿವನನ್ನೇ ಪ್ರತಿಷ್ಠಾಪಿಸುವ ನಿರ್ಧಾರವಾಗಿ ಒಬ್ಬೊಬ್ಬ ದೇವರಿಗೂ ಹಲವಾರು ಹೆಸರು ಇರುವುದರಿಂದ ದೇವರ ಹೆಸರೂ ಕೂಡಾ ಮುಖ್ಯವೇ ಆಗಿತ್ತು. ಕೊನೆಗೆ ವಿಶ್ವಕ್ಕೇ ಒಡೆಯನಾದ ವಿಶ್ವನಾಥನೆಂಬ ಹೆಸರು ಸ್ವೀಕಾರವಾಯಿತು. ದೇವಸ್ಥಾನದ ನಿರ್ಮಾಣದ ಕಾರ್ಯ ಪ್ರಾರಂಭವಾಯಿತು. ದೇವಸ್ಥಾನದ ಸ್ಥಳಕ್ಕೆ ಪಾವಿತ್ರ ಒದಗುವಂತೆ ಒಂದು ದಿನ ಭಜನಾ ಕಾರ್ಯಕ್ರಮಗಳೂ ಪ್ರಾರಂಭವಾದುವು. ಸಹೋದ್ಯೋಗಿ ಮಿತ್ರರ ಮನೆಗೆ, ಇನ್ನೊಬ್ಬ ನಮ್ಮ ರಿಕ್ಷಾ ಪಯಣದ ಜೊತೆಗಾತಿ ಮೂಲ್ಕಿ ಮೆಡಲಿನ್ ಶಾಲೆಯ ಶಿಕ್ಷಕಿಯ ಮನೆಗೆ ಹೋಗುವ ನೆಪದಲ್ಲಿ ದೇವಸ್ಥಾನದ ನಿರ್ಮಾಣ ಹಂತದ ಕೆಲಸಗಳನ್ನು ನೋಡುವ ಅವಕಾಶ ಸಿಗುತ್ತಿತ್ತು. ಕೊನೆಗೂ ವಿಶ್ವನಾಥ ದೇವಸ್ಥಾನವೂ ವಿಧಿಯುಕ್ತವಾಗಿ ಉದ್ಘಾಟನೆಗೊಂಡಿತು. ಆಸ್ತಿಕ ಭಕ್ತರಿಗೆ ದೇವರೊಬ್ಬ ನಾಮ ಹಲವು ಎನ್ನುವವರಿಗೆ ಎರಡು ದೇವಸ್ಥಾನಗಳು ಊರಲ್ಲೇ ಇದ್ದು ದೇವರೇ ಕಾಲ ಬುಡಕ್ಕೆ ಬಂದ ಹಾಗೆ ಆದುದು ಸಾಮಾನ್ಯವಲ್ಲ. ಇದು ಊರಿನ ಪುಣ್ಯ ಎಂದೇ ನಂಬುವವರೇ ಎಲ್ಲರು.

ನಮ್ಮ ಮನೆಯ ರಸ್ತೆಯನ್ನು ಬಾರಗ ರಸ್ತೆ ಎಂದು ನಮ್ಮವರು ನಮ್ಮ ಮನೆಯ ವಿಳಾಸದಲ್ಲಿ ಬರೆಯುತ್ತಿದ್ದರು. ಇದಕ್ಕೆ ಕಾರಣ ನಮ್ಮ ರಸ್ತೆಯ ಕೊನೆಯಲ್ಲಿ ಕೋರ್ದಬ್ಬು ಬಾರಗ ದೈವದ ದೈವಸ್ಥಾನ ಇತ್ತು. ಇದು ದಲಿತರಲ್ಲದ ಉಳಿದ ಅಬ್ರಾಹ್ಮಣರಿಗೆ ನಿತ್ಯದ ಆರಾಧನಾ ಕೇಂದ್ರವಲ್ಲದಿದ್ದರೂ ವರ್ಷಂಪ್ರತಿ ನಡೆಯುವ ಜಾತ್ರೆ ಅದು ಊರಿನ ಜಾತ್ರೆಯಂತೆಯೇ ಮುಖ್ಯವಾಗಿತ್ತು. ಪ್ರತೀ ಮನೆಯಿಂದಲೂ ಹಿರಿಯರು ಕಿರಿಯರು ಎರಡು ದಿನ ನಡೆಯುವ ಜಾತ್ರೆಗೆ ಹೋಗುತ್ತಿದ್ದರು. ಅವರ ಮನೆಗಳಿಗೆ ನೆಂಟರಿಷ್ಟರು ಬರುವುದೂ ಇತ್ತು. ನಮ್ಮ ರಸ್ತೆ ಜಾತ್ರೆಯ ಅಂದರೆ ವಾರ್ಷಿಕ ಕೋಲಕ್ಕೆ ವಿದ್ಯುದ್ದೀಪಗಳಿಂದ ಬೆಳಗುತ್ತಿತ್ತು. ರಸ್ತೆಯುದ್ದಕ್ಕೂ ರಾತ್ರಿಯಿಡೀ ಜನ ಸಂಚಾರ ಮಾತ್ರವಲ್ಲ ಸಂತೆಯೇ ಸೇರುತ್ತಿತ್ತು. ಚಿಕ್ಕ ಮಕ್ಕಳಿಗೆ ಈ ಜಾತ್ರೆಯ ಖರ್ಚಿಗೆ ಹಿರಿಯರಿಂದ ದುಡ್ಡು ಕಾಸೂ ಸಿಗುತ್ತಿತ್ತು. ಎಲ್ಲರ ಮನೆಯಲ್ಲೂ ಕೋಳಿಯ ಊಟ. ಈ ಜಾತ್ರೆಯ ನೆಪದಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಗೆದ್ದ ಕೋಳಿಯ ಯಜಮಾನರಿಗೆ ಸತ್ತ ಕೋಳಿಯೂ ಸಿಕ್ಕಿ ಅಂತಹವರ ಮನೆಗಳಲ್ಲಿ ಎರಡೂ ದಿನವೂ ಕೋಳಿಯ ವಿವಿಧ ಅಡುಗೆ ಜೊತೆಗೆ ಅಕ್ಕಿಯಿಂದ ತಯಾರಿಸಿದ ಕಡುಬು ‘ಪುಂಡಿ’ ಇರಲೇಬೇಕು. ಮೂರನೇ ದಿನದ ಬೆಳಗ್ಗೆ ಗುಳಿಗ ದೈವಕ್ಕೆ ಕೋಲ. ಗುಳಿಗ ಎಂದರೆ ಊರು ಕಾಯುವ ದೈವ ಎಂಬ ನಂಬಿಕೆಯೂ ಇದೆ. ಆದುದರಿಂದ ಪ್ರತಿಯೊಂದು ಮನೆಯಿಂದಲೂ ಒಂದು ಹುಂಜದ ಬಲಿ. ಗುಳಿಗ ದೈವ ಬಾಯಲ್ಲೇ ಕಚ್ಚಿ ಕೋಳಿಯನ್ನು ಸ್ವೀಕರಿಸುವುದಂತೆ. ಹೀಗೆ ಬಲಿ ನೀಡಿದ ಕೋಳಿಗಳನ್ನು ಆ ಮನೆಯವರೇ ಪ್ರಸಾದ ರೂಪದಲ್ಲಿ ಮನೆಗೆ ಒಯ್ದು ಮತ್ತೆ ಅಡುಗೆಗೆ ಉಪಯೋಗಿಸುವರು.

ಹೀಗೆ ಸತ್ತ ಕೋಳಿಯನ್ನು ಕೊಂಡು ಹೋಗುವಾಗ ಅದರ ರೆಕ್ಕೆ ಪುಕ್ಕಗಳನ್ನು ಕೀಳುತ್ತಾ ದಾರಿ ಸಾಗುತ್ತಾರೆ. ನಮ್ಮ ರಸ್ತೆಯಿಡೀ ಸಂತೆಯ ಕಸದೊಂದಿಗೆ ಕೋಳಿ ಪುಕ್ಕಗಳಿಂದ ಜಾತ್ರೆ ಮುಗಿದ ಬಳಿಕ ನೋಡಲು ಅಸಹ್ಯ ಅನ್ನಿಸುವುದು ನನ್ನಂತಹವಳಿಗೆ ಮಾತ್ರ. ಯಾಕೆಂದರೆ ಇಂತಹ ದೃಶ್ಯ ನಾನು ಯಾವತ್ತೂ ನೋಡಿರದೆ ಇರುವುದರಿಂದ, ಉಳಿದವರಿಗೆ ಇದು ಹಾಗನ್ನಿಸುವುದಿಲ್ಲ. ಮಾತ್ರವಲ್ಲ ಈ ಕಸ, ಪುಕ್ಕಗಳು ಗಾಳಿಗೆ ತಾವೇ ಹಾರಿಕೊಂಡು ರಸ್ತೆ ಸ್ವಚ್ಛವಾಗಬೇಕಲ್ಲದೆ ರಸ್ತೆಯ ಸ್ವಚ್ಛತೆಯ ಕಲ್ಪನೆ ಇಂತಹ ಆಚರಣೆಗಳಲ್ಲಿ ಅಂದು ಇರಲಿಲ್ಲ. ಇಂದು ಇರಬಹುದೋ ಏನೋ? ಒಟ್ಟಿನಲ್ಲಿ ಭಿನ್ನ ಆಚರಣೆಗಳೇ ನಮ್ಮನ್ನು ಪ್ರತ್ಯೇಕಿಸುವ ಅಂಶಗಳಾಗಿರುವುದರಿಂದಲೇ ಒಂದೇ ಧರ್ಮ ಎನ್ನುವ ತಾತ್ವಿಕತೆಗೆ ಬಲವಾದ ಸಾಕ್ಷಿಗಳನ್ನು ಒದಗಿಸುವಲ್ಲಿ ಉಂಟಾಗುವ ಸೋಲು, ದಿನ ನಿತ್ಯದ ಬದುಕಿನ ಜಂಜಾಟದಲ್ಲಿಯೂ ಪ್ರಕಟವಾಗುವಂತಹುದು. ರಾಮಾಯಣ, ಮಹಾಭಾರತ, ಭಗವದ್ಗೀತೆಗಳೆಂಬ ಧರ್ಮ ಗ್ರಂಥಗಳು ಈ ಜನಪದೀಯ ಮಂದಿಗೆ ಕಣ್ಣಿಗೂ ಕಾಣ ಸಿಗದವುಗಳೆಂದಾದರೆ ಅವುಗಳು ತಿಳಿಸುವ ಆರ್ಷೇಯ ಸಂದೇಶಗಳು ಆ ಮೂಲಕ ದೊರೆಯುವ ಸಂಸ್ಕಾರ ಹೇಗೆ ಸಾಧ್ಯ? ಯಕ್ಷಗಾನಗಳ ಮೂಲಕ ಒಂದಿಷ್ಟು ಪೌರಾಣಿಕ ಕತೆಗಳ ಪರಿಚಯವಿದ್ದರೂ ಬಹಳಷ್ಟು ಮಂದಿಗೆ ದೈವಗಳ ಸಂಧಿ, ಪಾಡ್ದನಗಳಷ್ಟು ಅವು ಮುಖ್ಯವಾಗದಿರುವುದೂ ಸಹಜವೇ! ಆದರೂ ವಿವಿಧ ನಂಬಿಕೆಯ, ವಿವಿಧ ಆಚರಣೆಯ ಜನ ಸಮೂಹಗಳು ಸಾಮಾಜಿಕವಾಗಿ ತಾವು ಮೊದಲು ಮಾನವರು ಎನ್ನುವುದನ್ನು ಒಪ್ಪಿಕೊಂಡು ಮಾನವೀಯತೆಯನ್ನೇ ಮೊದಲ ಧರ್ಮವಾಗಿಸಿಕೊಂಡರೆ ಸೌಹಾರ್ದ, ಸಾಮರಸ್ಯಗಳು ನೆಲೆಸುವುದಕ್ಕೆ, ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಅಡ್ಡಿಯಾಗುವ ಅಂಶಗಳು ಯಾವುವು ಎನ್ನುವುದೇ ಪ್ರಶ್ನೆಯಾದಂತೆ ಸಮಾಜದ ಸ್ವಾಸ್ಥ ಕೆಡಿಸುವವರು ಯಾರು ಎನ್ನುವುದು ಉತ್ತರವಾದೀತೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)