ಉಡುಪಿಯ ಆಸ್ಪತ್ರೆಯಲ್ಲಿ ತಾಯಿ ತೊರೆದು ಹೋಗಿದ್ದ ಮಗು ಇಂದು ಸ್ವಿಝರ್ ಲ್ಯಾಂಡ್ ನ ಸಂಸದ!
ಹೊಸದಿಲ್ಲಿ, ಡಿ.14: ಸುಮಾರು ನಾಲ್ಕು ದಶಕಗಳ ಹಿಂದೆ ಉಡುಪಿಯ ಬಾಸೆಲ್ ಮಿಶಲ್ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ತಾಯಿಯೊಬ್ಬರು ಬಿಟ್ಟು ಹೋಗಿದ್ದರು. ಅನಾಥವಾಗಿದ್ದ ಆ ಮಗುವನ್ನು ಕೇರಳದ ತಲಶ್ಶೇರಿಯಲ್ಲಿ ಅನಾಥಾಶ್ರಮವನ್ನು ನಡೆಸುತ್ತಿದ್ದ ಸ್ವಿಸ್ ದಂಪತಿಯೊಂದು ತಮ್ಮೊಡನೆ ಕರೆದೊಯ್ದಿತ್ತು. ಇಂದು ಅದೇ ಮಗು ಸ್ವಿಝರ್ ಲ್ಯಾಂಡ್ ನ ಸಂಸತ್ತಿನಲ್ಲಿ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಹೆಸರು ನಿಕ್ ಗುಗ್ಗರ್. 1970 ಮೇ 1ರಂದು ಇವರು ಉಡುಪಿಯ ಬಾಸೆಲ್ ಮಿಶನ್ ಆಸ್ಪತ್ರೆಯಲ್ಲಿ ಜನಿಸಿದರು. ಆದರೆ ತಾಯಿ ಬಿಟ್ಟು ಹೋಗಿದ್ದರಿಂದ ನಿಕ್ ಅನಾಥರಾದರು. ಹೀಗೆ ಅನಾಥರಾಗಿದ್ದ ನಿಕ್ ಬಾಳಲ್ಲಿ ಬೆಳಕಾದವರು ಸ್ವಿಸ್ ದಂಪತಿ. ತಲಶೇರಿಯಲ್ಲಿ ಅನಾಥಾಶ್ರಮವನ್ನು ನಡೆಸುತ್ತಿದ್ದ ಈ ದಂಪತಿ ಮಗುವನ್ನು ತಮ್ಮ ಜೊತೆಗೊಯ್ದರು. ಸುಮಾರು 4 ವರ್ಷದವರೆಗೆ ನಿಕ್ ತಲಶ್ಶೇರಿಯಲ್ಲೇ ಇದ್ದರು. ತಲಶ್ಶೇರಿಯ ನೆಟ್ಟೂರ್ ನಲ್ಲಿ ಅವರು ಬಾಲ್ಯವನ್ನು ಕಳೆದರು. ನಾಲ್ವು ವರ್ಷಗಳ ನಂತರ ಪೋಷಕರು ನಿಕ್ ರನ್ನು ತಮ್ಮ ಜೊತೆ ಸ್ವಿಝರ್ ಲ್ಯಾಂಡ್ ಗೆ ಕರೆದೊಯ್ದರು.
ಇಂದಿಗೂ ಗುಗ್ಗರ್ ತಲಶ್ಶೇರಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ತಲಶ್ಶೇರಿಗೆ ಆಗಮಿಸಲಿದ್ದಾರೆ.
ಸ್ವಿಝರ್ ಲ್ಯಾಂಡ್ ನ 6ನೆ ಅತೀ ದೊಡ್ಡ ನಗರವಾದ ವಿಂಟರ್ ತರ್ ನ ನಗರ ಪಾರ್ಲಿಮೆಂಟ್ ನ ಕೌನ್ಸಿಲರ್ ಆಗುವ ಮೂಲಕ ನಿಕ್ ರಾಜಕೀಯವನ್ನು ಪ್ರವೇಶಿಸಿದರು. ಸ್ವಿಸ್ ಪಾರ್ಲಿಮೆಂಟ್ ನ ಅತೀ ಕಿರಿಯ ಸದಸ್ಯರಲ್ಲಿ ನಿಕ್ ಕೂಡ ಒಬ್ಬರಾಗಿದ್ದಾರೆ. ತಾನು ಸಾಮಾಜಿಕ ಸೇವೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರಲ್ಲಿ ತನ್ನ ಸಾಕುತಂದೆಯ ಪಾತ್ರ ಮಹತ್ವದ್ದಾಗಿದೆ ಎಂದು ನಿಕ್ ಹೇಳುತ್ತಾರೆ.
ಸಾಮಾಜಿಕ ಕಾರ್ಯಕ್ರಮಗಳ ಮೂಲಕವೇ ನಿಕ್ ರಾಜಕೀಯ ಪ್ರವೇಶಿಸಿದ್ದು. ಬಾಸೆಲ್ ನ ಸೆಂಟರ್ ಫಾರ್ ಅಗೋಜಿಕ್ಸ್, ಯುನಿವರ್ಸಿಟಿ ಆಫ್ ಆಮ್ಸ್ ಟರ್ ಡ್ಯಾಮ್ ಹಾಗು ಝುರಿಕ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದರು.
ಇವಾಂಜೆಲಿಕಲ್ ಪಾರ್ಟಿಯ ಅಭ್ಯರ್ಥಿಯಾದ ನಿಕ್ ಸ್ವಿಸ್ ಪಾರ್ಲಿಮೆಂಟ್ ಗೆ ಆಯ್ಕೆಯಾಗಿರುವ ನಿಕ್ ವಿವಾಹಿತರಾಗಿದ್ದು, ಪತ್ನಿ ಹಾಗು ಮೂವರು ಮಕ್ಕಳಿದ್ದಾರೆ.