ಕೃಷಿಯ ಕುರಿತಂತೆ ಪ್ರಾಥಮಿಕ ಮಾಹಿತಿ
ಈ ಹೊತ್ತಿನ ಹೊತ್ತಿಗೆ
ಕೃಷಿಯೆನ್ನುವುದು ಬದುಕಿಗೆ ಹೆಚ್ಚು ಹತ್ತಿರವಾಗಿರುವ ವಿಜ್ಞಾನ. ಈ ವಿಜ್ಞಾನವನ್ನು ಪ್ರೋತ್ಸಾಹಿಸುತ್ತಾ, ಗೌರವಿಸುತ್ತಾ, ಅಭಿಮಾನಿಸುತ್ತಾ ನಮ್ಮ ನಾಗರಿಕತೆ ಬೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಯು ಆರ್ಥಿಕವಾಗಿ ಹೆಚ್ಚು ಲಾಭದಾಯಕವಲ್ಲ ಎನ್ನುವಂತಹ ಮನಸ್ಥಿತಿ ನಮ್ಮ ಯುವಜನರಲ್ಲಿ ತುಂಬಿದೆ. ಐಟಿ ತಂತ್ರಜ್ಞಾನ ಬಿತ್ತಿರುವ ಹುಸಿ ಭ್ರಮೆಗಳಲ್ಲಿ ತಲೆಮಾರು ಕಳೆದು ಹೋಗಿದೆ. ಆದರೆ ಕಂಪ್ಯೂಟರ್ ಡಾಟಾಗಳನ್ನು ಉಣ್ಣುವುದಕ್ಕಾಗುವುದಿಲ್ಲ. ಕಂಪ್ಯೂಟರ್‌ನಿಂದ ಭತ್ತ ಉದುರಿಸುವುದಕ್ಕಾಗುವುದಿಲ್ಲ. ಮನುಷ್ಯ ಕಂಪ್ಯೂಟರ್‌ಗಳಿಲ್ಲದೆ ಬದುಕಬಲ್ಲ. ಆದರೆ ರೊಟ್ಟಿಯಿಲ್ಲದೆ ಒಂದು ದಿನ ಬದುಕುವುದೂ ಕಷ್ಟ. ಬದುಕಿನ ಮೂಲವಾಗಿರುವ ಕೃಷಿಯ ಕುರಿತಂತೆ ತಿಳಿದುಕೊಳ್ಳುವುದೆಂದರೆ ಮನುಷ್ಯ ಈ ಪ್ರಕೃತಿಯನ್ನು, ತನ್ನನ್ನು ತಾನು ತಿಳಿದುಕೊಂಡಂತೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿಗೆ ಕೃಷಿಯನ್ನು ಆಸಕ್ತಿದಾಯಕವಾಗಿ ಕಲಿಸುವ ಪುಸ್ತಕಗಳು, ಬರಹಳು ಹೆಚ್ಚು ಹೆಚ್ಚು ಬರಬೇಕಾಗಿದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ‘ಕೃಷಿ ವಿಜ್ಞಾನ’ ಕೃತಿಯನ್ನು ಡಾ. ಜಿ.ಕೆ. ವೀರೇಶ್ ಮತ್ತು ಅಡ್ಡೂರು ಕೃಷ್ಣರಾವ್ ಜಂಟಿಯಾಗಿ ರಚಿಸಿದ್ದಾರೆ. ಕೃಷಿ ವಿಜ್ಞಾನವನ್ನು ಸರಳವಾಗಿ ಮಕ್ಕಳಿಗೆ ಬೋಧಿಸುವ ಪಠ್ಯ ಪುಸ್ತಕವನ್ನು ಬರೆಯುವುದು ಅಷ್ಟು ಸುಲಭವಲ್ಲ. ಕೃಷಿ ಎನ್ನುವುದು ಒಣ, ಸೃಜನಶೀಲ ರಹಿತ ವಿಷಯ ಎನ್ನುವ ತಪ್ಪುಕಲ್ಪನೆ ಎಲ್ಲರಲ್ಲೂ ಇದೆ. ಹೀಗಿರುವಾಗ ಅದನ್ನು ಒಂದು ಸೃಜನಶೀಲ ವಿಷಯವಾಗಿಯೂ ನಿರೂಪಿಸುವ ಹೊಣೆಗಾರಿಕೆ ಲೇಖಕರಿಗಿದೆ. ಇಲ್ಲಿಯ ಕೃಷಿಯ ಆರಂಭದಿಂದ ಹಿಡಿದು, ಅದು ಭಾರದದಲ್ಲಿ ಬೆಳೆದು ಬಂದ ಬಗೆಯಿಂದ ವಿವರಗಳು ಆರಂಭವಾಗುತ್ತದೆ. ಕರ್ನಾಟಕದಲ್ಲಿ ಕೃಷಿ, ಮಣ್ಣಿನ ಕುರಿತಂತೆ ವಿಜ್ಞಾನ, ಗೊಬ್ಬರದ ಕುರಿತ ವಿವರಗಳು, ಅದನ್ನು ತಯಾರಿಸುವ ವಿಧಾನ, ಜೈವಿಕ ಗೊಬ್ಬರಗಳ ಕುರಿತ ಮಾಹಿತಿ, ಸಸ್ಯ ಸಂರಕ್ಷಣೆಯ ಸ್ವರೂಪ, ತರಕಾರಿಗಳ ಕುರಿತ ಮಾಹಿತಿ, ಪುಷ್ಪ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಜೇನ್ನೊಣ ಸಾಕಣೆ, ಮೀನುಗಾರಿಕೆ, ಇವೆಲ್ಲವುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಕೃಷಿಯ ಬಗ್ಗೆ ಆಸಕ್ತಿಯಿರುವ ಯಾರಿಗಾದರೂ ಇದು ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡುತ್ತದೆ. ಕೃಷಿಯ ಕುರಿತಂತೆ ಕೃಷಿ ಮಾಡುವವರಷ್ಟೇ ಅಲ್ಲ, ಪ್ರತೀದಿನ ಕೃಷಿಯ ಪ್ರಯೋಜನವನ್ನು ಪಡೆಯುವ ಎಲ್ಲರೂ ಮಾಹಿತಿಗಳನ್ನು ತಮ್ಮದಾಗಿಸಿಕೊಳ್ಳಬೇಕು. ರೈತರನ್ನು ಜೊತೆ ಜೊತೆಗೆ ತೆಗೆದುಕೊಂಡು ಹೋಗದ ಯಾವ ಅಭಿವೃದ್ಧಿಯೂ ಪೂರ್ಣವಲ್ಲ. ಆದುದರಿಂದ ಕೃಷಿಯ ಕುರಿತಂತೆ ಕುತೂಹಲ ಹುಟ್ಟಿಸುವಲ್ಲಿ ಈ ಕೃತಿ ನಮಗೆ ಸಹಾಯ ಮಾಡಬಹುದು. 120 ಪುಟಗಳ ಈ ಕೃತಿಯ ಮುಖಬೆಲೆ 75 ರೂಪಾಯಿ.