ವರ್ತನೆಗಳಿಂದ ಪರಿವರ್ತನೆಗಳು
ಬೆಳೆಯುವ ಪೈರು
ಭಾಗ-1
ಮಕ್ಕಳ ವಿಷಯದಲ್ಲಿ ಈ ಬದಲಾವಣೆ ಮತ್ತು ಪರಿವರ್ತನೆಗಳು ಬಹಳ ಮಹತ್ವದ ವಿಷಯಗಳಾಗಿ ಕಾಣುತ್ತವೆ. ಅವುಗಳು ಪ್ರಭಾವಶಾಲಿಯಾಗಿರುವುದು ಮತ್ತು ಪ್ರಕಟಗೊಳ್ಳುವುದು ಕೂಡ ಪರಸ್ಪರ ಪ್ರದರ್ಶಿಸುವ ವರ್ತನೆಗಳಲ್ಲಿ. ಆದ್ದರಿಂದ ಸಮಾಜದ ಮನಶಾಸ್ತ್ರೀಯ ವಿಷಯದಲ್ಲಿಯೂ ಮತ್ತು ಮಗುವಿನ ಮನಶಾಸ್ತ್ರೀಯ ವಿಷಯದಲ್ಲಿಯೂ ವರ್ತನೆಗಳನ್ನು ಕುರಿತ ಅಧ್ಯಯನ, ವಿಶ್ಲೇಷಣೆ ಮತ್ತು ಪ್ರಯೋಗಗಳು ಬಹಳ ಮುಖ್ಯ.
ವರ್ತನಾ ಶಾಸ್ತ್ರ
ನಮ್ಮ ಸಮಾಜದ ಮನೋಶಾಸ್ತ್ರೀಯ ವಿಷಯದಲ್ಲಿ ಅತ್ಯಂತ ಗಮನ ನೀಡಬೇಕಾದ ಸಂಗತಿಯೆಂದರೆ ವರ್ತನಾ ಶಾಸ್ತ್ರ. ಅತೀ ಸಾಮಾನ್ಯ ಜನರಲ್ಲಿರುವ ಬಹಳ ವಿಚಿತ್ರವಾದ ಸಂಗತಿಯೆಂದರೆ ತಮ್ಮ ವರ್ತನೆಯನ್ನು ಹೊರತಾಗಿ ಇತರರ ವರ್ತನೆಯನ್ನು ಯಾವಾಗಲೂ ವಿಮರ್ಶಿಸುತ್ತಿರುತ್ತಾರೆ. ಜೊತೆಗೆ ಇತರರಲ್ಲಿ ಪರಿವರ್ತನೆಯನ್ನು ಬಯಸುತ್ತಿರುತ್ತಾರೆ. ತಮ್ಮಲ್ಲಿನ ಪುನರಾವರ್ತಿತ ವರ್ತನೆಗಳನ್ನು ಹಾಗೆಯೇ ಉಳಿಸಿಕೊಂಡು ಇತರರಲ್ಲಿ ವರ್ತನೆಗಳಲ್ಲಿ ಬದಲಾವಣೆಗಳಾಗಲಿ ಮತ್ತು ಪರಿವರ್ತನೆಗಳಾಗಲಿ ಎಂದು ಬಯಸುತ್ತಾರೆ. ಆದರೆ ಅದು ಆಗುವುದೇಇಲ್ಲ. ಇವರಲ್ಲೂ ಆಗುವುದಿಲ್ಲ, ಅವರಲ್ಲೂ ಆಗುವುದಿಲ್ಲ. ಇಬ್ಬರೂ ಪರಸ್ಪರ ದೂರಿಕೊಂಡಿರುವುದರಲ್ಲೇ ಕತೆ ಮುಗಿದು ಹೋಗುತ್ತದೆ. ಇದೇ ಕಥೆ ಮಕ್ಕಳ ಮತ್ತು ಪೋಷಕರ ಹಾಗೂ ಶಿಕ್ಷಕರ ನಡುವೆಯೂ.
ಈ ಪೋಷಕರು ಮತ್ತು ಶಿಕ್ಷಕರು ತಮ್ಮ ವರ್ತನೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ತಂದುಕೊಳ್ಳದೇ ಬರಿದೇ ಮಕ್ಕಳಲ್ಲಿ ಪರಿವರ್ತನೆಯನ್ನು ಬಯಸುತ್ತಿರುತ್ತಾರೆ. ಈಗ ಬಹಳ ಮುಖ್ಯವಾದ ವಿಷಯಕ್ಕೆ ಬರೋಣ. ಅದೇನೆಂದರೆ, ಮಕ್ಕಳಲ್ಲಿ ಪರಿವರ್ತನೆಯನ್ನು ಬಯಸುವುದೇ ಆದರೆ ಪೋಷಕರಲ್ಲಿ ಮತ್ತು ಶಿಕ್ಷಕರ ವರ್ತನೆಗಳು ಬದಲಾಗಬೇಕು. ಅದು ಆಗದಿದ್ದರೆ, ಮಕ್ಕಳಿಗೆ ಅವರ ಬಗ್ಗೆ ಇರುವಂತಹ ಅಭಿಪ್ರಾಯ ಮತ್ತು ಧೋರಣೆಗಳು ಹಾಗೆಯೇ ಉಳಿದಿರುತ್ತವೆ. ಯಾವಾಗ ವ್ಯಕ್ತಿಯ ಬಗ್ಗೆ ಅಭಿಪ್ರಾಯ ಮತ್ತು ಧೋರಣೆಗಳು ಹಾಗೆಯೇ ಉಳಿದಿರುತ್ತದೆಯೋ ಅವರ ಮಾತುಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಬಗ್ಗೆಯೂ ಹಳತರ ಪ್ರತಿಕ್ರಿಯೆಯನ್ನೇ ಉಳಿಸಿಕೊಂಡಿರುತ್ತದೆ. ವಯಸ್ಸಿಗೆ ಮತ್ತು ಮನಸ್ಸಿಗೆ ಅನುಗುಣವಾಗಿ ತಿರಸ್ಕಾರ ಅಥವಾ ಪುರಸ್ಕಾರದ ಗಾಢತೆ ಕಾಣಬಹುದು ಅಷ್ಟೇ. ನನ್ನ ಮಾತುಗಳನ್ನು ಸಣ್ಣ ವಯಸ್ಸಿನಲ್ಲಿದ್ದಾಗ ಕೇಳುತ್ತಿದ್ದ ಮತ್ತು ಚಾಚೂ ತಪ್ಪದೇ ಪಾಲಿಸುತ್ತಿದ್ದ ಮಗುವು ಈಗ ಸ್ವಲ್ಪ ದೊಡ್ಡದಾಗುತ್ತಾ ಕೇಳುತ್ತಿಲ್ಲ. ಉಲ್ಟಾ ಹೊಡೆಯುತ್ತಿದೆ ಎಂದು ದೂರುವ ಪೋಷಕರನ್ನು ಕಂಡಿದ್ದೇನೆ. ಆದರೆ, ಆ ಮಗುವಿನೊಂದಿಗೆ ಸಮಾಲೋಚನೆ ಮಾಡಿದರೆ ತಿಳಿಯುವುದು ಏನೆಂದರೆ ಆ ಮಗುವಿಗೆ ಆ ಪೋಷಕರ ಮಾತಿನ ಮತ್ತು ನಡವಳಿಕೆಯ ಬಗ್ಗೆ ಮೊದಲಿನಿಂದಲೂ ತಿರಸ್ಕಾರವೇ ಇದ್ದು, ಆಗ ವಯಸ್ಸು ಚಿಕ್ಕದಿದ್ದುದರಿಂದ ತಿರಸ್ಕರಿಸಿ ಅವರನ್ನು ಎದುರು ಹಾಕಿಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿ ಇರುತ್ತಿತ್ತು.
ಆದರೆ ಈಗ ಅದು ಕೊಂಚ ಬೆಳೆದಿರುವ ಕಾರಣದಿಂದ ದೈಹಿಕವಾಗಿ ಬೆಳೆದಿರುವುದೂ ಅದಕ್ಕೆ ಮಾನಸಿಕ ಶಕ್ತಿಯನ್ನು ನೀಡಿರುವುದರಿಂದ ಪೋಷಕರನ್ನು ಎದುರಿಸಲು ಸಾಧ್ಯವಾಗುತ್ತದೆ. ನಾನಂತೂ ಪೋಷಕರು ಮತ್ತು ಮಕ್ಕಳು; ಈ ಎರಡೂ ಕಡೆಗಳಿಂದ ಈ ಮಾತು ಕೇಳಿದ್ದೇನೆ. ‘‘ಇವರು ಯಾವಾಗಲೂ ಹಾಗೇನೇ. ಮೊದಲಿನಿಂದಲೂ ಇವರು ಹಾಗೆನೇ’’. ಮಕ್ಕಳು ದೈಹಿಕವಾಗಿ ಬೆಳೆದಿರುತ್ತಾರೆ. ಮಾನಸಿಕವಾಗಿ ಸಬಲೀಕರಣ ಹೊಂದಿರುತ್ತಾರೆ. ಹಾಗೆಯೇ ದೊಡ್ಡವರು ಹಣ್ಣಾಗಿರುತ್ತಾರೆ. ಭೌತಿಕವಾದಂತಹ ಹಲವಾರು ಬದಲಾವಣೆಗಳನ್ನು ಹೊಂದಿರುತ್ತಾರೆ. ಆದರೆ ಬಹುತೇಕ ಇಬ್ಬರ ವರ್ತನೆಗಳಲ್ಲಿಯೂ ಹೆಚ್ಚಿನ ಬದಲಾವಣೆಗಳೇನೂ ಕಾಣುವುದಿಲ್ಲ. ಪದಗಳ ವಿಷಯದಲ್ಲಿ ಬದಲಾವಣೆಗೂ ಮತ್ತು ಪರಿವರ್ತನೆಗೂ ಕೊಂಚ ವ್ಯತ್ಯಾಸವಿದೆ. ಬದಲಾವಣೆ ಎಂಬುದು ಬದಲಾಯಿಸುವುದು. ಭೌತಿಕವಾಗಿ, ಕ್ರಿಯಾತ್ಮಕವಾಗಿ, ಹೀಗಿದ್ದದ್ದು ಹೀಗಾಯಿತು. ಹಾಗೆ ಇದ್ದದ್ದು ಹೀಗಾಯಿತು, ಹಾಗೆ ಕೆಲಸ ಮಾಡುತ್ತಿದ್ದದ್ದು, ಹೀಗೆ ಕೆಲಸ ಮಾಡುತ್ತಿದೆ ಎಂದು. ಅಂದರೆ, ಸಣ್ಣಗಿದ್ದದ್ದು ದಪ್ಪಗಾಗುವುದೋ, ಕುಳ್ಳಗಿದ್ದದ್ದು ಎತ್ತರವಾಗುವುದೋ, ವೇಗವಾಗಿದ್ದು ನಿಧಾನವಾಗಿ ಆಗುವುದೋ; ಇತ್ಯಾದಿ ಬಾಹ್ಯ ಸ್ವರೂಪದಲ್ಲಿ ಕಾಣುವಂತಹ ಬದಲಾವಣೆ. ಆದರೆ ಪರಿವರ್ತನೆ ಎಂದರೆ, ಭೌತಿಕವಾಗಿ ಬದಲಾಗುವುದು ಅಲ್ಲ. ಗುಣ ಮತ್ತು ಸ್ವಭಾವಗಳಲ್ಲಿಯೂ ಕೂಡ ಬದಲಾವಣೆಯಾಗುವುದು. ಪರಿವರ್ತನೆ ಎಂಬುದು ಆಂತರಿಕವಾಗಿ ಉಂಟಾಗುವ ಬದಲಾವಣೆ.
ಆಂತರಿಕವಾಗಿ ಉಂಟಾಗಿರುವ ಬದಲಾವಣೆಯಿಂದ ಹೊರಗೂ ತೋರುವ ಪ್ರತಿಕ್ರಿಯೆಗಳು, ನಡವಳಿಕೆಗಳು ಸಹಜವಾಗಿ ವ್ಯತ್ಯಾಸವನ್ನು ತೋರುತ್ತವೆ. ವ್ಯಕ್ತಿಗಳಲ್ಲಿ ಮತ್ತು ಸಮಾಜದಲ್ಲಿ ಕಾಣುವ ಬದಲಾವಣೆಗಳು ಮತ್ತು ಪರಿವರ್ತನೆಗಳಿಗೂ ವ್ಯತ್ಯಾಸವಿರುತ್ತದೆ. ಆಗ ನಡೆದುಕೊಂಡು ಹೋಗುತ್ತಿದ್ದರು, ಈಗ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಆಗ ಕೊಳ್ಳುವುದಕ್ಕೆ ಕಡಿಮೆ ವಸ್ತುಗಳಿದ್ದವು. ಈಗ ದೊಡ್ಡದೊಡ್ಡ ವ್ಯಾಪ್ತಿಯ ಮಾರಾಟದ ಸರಕುಗಳು ಇರುವಲ್ಲಿಯೇ ದೊರಕುತ್ತವೆೆ. ಆಗ ಪತ್ರ ಬರೆದು ತಿಳಿಸುತ್ತಿದ್ದುದ್ದನ್ನು, ಈಗ ಮೊಬೈಲಲ್ಲಿ ಪಟ್‌ಎಂದು ಎಲ್ಲರಿಗೂ ತಿಳಿಸುತ್ತೇವೆ. ಆಗ ಅಪರಿಚಿತರಿಗೆ ಪತ್ರ ಬರೆದು ಹವ್ಯಾಸ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಈಗ ಅದನ್ನೇ ಫೇಸ್‌ಬುಕ್‌ಗಳಲ್ಲಿ ಮಾಡುತ್ತೇವೆ; ಇವೆಲ್ಲಾ ಬದಲಾವಣೆ. ಆದರೆ ಪರಿ ವರ್ತನೆ ಎಂದರೆ, ಜೀವನ ಶೈಲಿಯಲ್ಲಿ, ಸ್ವಭಾವದಲ್ಲಿ, ಚಿಂತನಾ ಕ್ರಮದಲ್ಲಿ, ಒಲವು ನಿಲುವುಗಳಲ್ಲಿ, ಸ್ವಭಾವದಲ್ಲಿ, ತೆಗೆದುಕೊಳ್ಳುವ ನಿರ್ಧಾರ ಗಳಲ್ಲಿ, ಅಭಿಪ್ರಾಯಗಳನ್ನು ಪ್ರಕಟಿಸುವ ಕ್ರಮಗಳಲ್ಲಿ; ಹೀಗೆ ಎಲ್ಲದರ ಲ್ಲಿಯೂ ಬದಲಾವಣೆಯಾಗಿರುತ್ತದೆ. ಒಟ್ಟಾರೆ ಸ್ವರೂಪದಲ್ಲಿ ಆಗುವ ಬದಲಾವಣೆಯನ್ನು ಬರಿದೇ ಬದಲಾವಣೆ ಎನ್ನುವುದಾದರೆ, ಸ್ವಭಾವ ದಲ್ಲಿ ಆಗುವ ಬದಲಾವಣೆ ಪರಿವರ್ತನೆ ಎಂದು ಸ್ಥೂಲವಾಗಿ ಹೇಳಬಹುದು. ಮಕ್ಕಳ ವಿಷಯದಲ್ಲಿ ಈ ಬದಲಾವಣೆ ಮತ್ತು ಪರಿವರ್ತನೆಗಳು ಬಹಳ ಮಹತ್ವದ ವಿಷಯಗಳಾಗಿ ಕಾಣುತ್ತವೆ. ಅವುಗಳು ಪ್ರಭಾವಶಾಲಿಯಾಗಿರುವುದು ಮತ್ತು ಪ್ರಕಟಗೊಳ್ಳುವುದೂ ಕೂಡ ಪರಸ್ಪರ ಪ್ರದರ್ಶಿಸುವ ವರ್ತನೆಗಳಲ್ಲಿ. ಆದ್ದರಿಂದ ಸಮಾಜದ ಮನಶಾಸ್ತ್ರೀಯ ವಿಷಯದಲ್ಲಿಯೂ ಮತ್ತು ಮಗುವಿನ ಮನಶಾಸ್ತ್ರೀಯ ವಿಷಯದಲ್ಲಿಯೂ ವರ್ತನೆಗಳನ್ನು ಕುರಿತ ಅಧ್ಯಯನ, ವಿಶ್ಲೇಷಣೆ ಮತ್ತು ಪ್ರಯೋಗಗಳು ಬಹಳ ಮುಖ್ಯ.
ವರ್ತನೆಗಳ ಮಾದರಿಗಳು
ಮೊದಲಿಗೆ ವರ್ತನೆ ಎಂದರಾದರೂ ಏನು? ಯಾವುದೇ ವ್ಯಕ್ತಿಯು ತನ್ನ ಮಾನಸಿಕ ಸ್ಥಿತಿಯನ್ನು, ಭಾವುಕತೆಯನ್ನು ದೈಹಿಕವಾಗಿ ಮತ್ತು ನಡವಳಿಕೆಯ ಮೂಲಕ ಪ್ರಕಟಗೊಳಿಸುವುದೇ ವರ್ತನೆ ಆಗಿದೆ. ಇದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು, ಒಲವು ಮತ್ತು ನಿಲುವನ್ನು ಪ್ರಕಟಗೊಳಿಸುವುದು, ತಿರಸ್ಕಾರ ಅಥವಾ ಸ್ವೀಕರಗಳನ್ನು ಸ್ಪಷ್ಟಪಡಿಸುವುದು; ಎಲ್ಲವೂ ಸೇರಿರುತ್ತವೆ. ಮಕ್ಕಳು ತಮ್ಮ ಮೊತ್ತ ಮೊದಲ ಆವರಣವಾದ ಕುಟುಂಬ, ಪರಿಸರ, ಶಾಲೆ, ಸಮಾಜ; ಇವುಗಳೆಲ್ಲದರ ವರ್ತನೆಗಳನ್ನು ನೋಡಿಕೊಂಡು ತನ್ನ ಅಭಿಪ್ರಾಯ, ಒಲವು, ನಿಲುವುಗಳನ್ನು ರೂಪಿಸಿಕೊಳ್ಳುತ್ತಿರುತ್ತಾರೆ. ಅವರಿಗೆ ಅದು ಸರಿ ಅಥವಾ ತಪ್ಪು ಎನ್ನುವುದು ತಿಳಿಯುವುದೂ ಕೂಡ ಮತ್ತೊಂದು ಬಗೆಯ ವರ್ತನೆಯ ಮಾದರಿಗಳನ್ನು ನೋಡಿದಾಗಲೇ. ಒಂದು ಮಗುವಿನ ವ್ಯಕ್ತಿತ್ವವನ್ನು ಸಾಮಾಜಿಕವಾಗಿ ಮತ್ತು ವ್ಯಕ್ತಿಗತವಾಗಿ ರೂಪಿಸುವುದು ವರ್ತನೆಗಳ ಮಾದರಿಗಳೇ. ಎಂತಹ ಮಾದರಿಗಳ ವರ್ತನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ, ಹೆಚ್ಚಿನ ಆವರ್ತಗಳಲ್ಲಿ ಮಕ್ಕಳು ನೋಡುತ್ತಿರುತ್ತಾರೋ, ಅಷ್ಟರ ಮಟ್ಟಿಗೆ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಪ್ರಭಾವಕ್ಕೆ ಒಳಗಾದಂತೆ ಅವರ ಸ್ವಭಾವವೂ ರೂಪುಗೊಳ್ಳುತ್ತಾ ಹೋಗುತ್ತದೆ. ಅವರ ಸ್ವಭಾವಕ್ಕೆ ತಕ್ಕಂತೆ ವರ್ತನೆಗಳನ್ನೂ ಪ್ರದರ್ಶಿಸುತ್ತಿರುತ್ತಾರೆ. ಇವರ ವರ್ತನೆಗಳು ಇತರರಿಗೆ, ಸಾಮಾನ್ಯವಾಗಿ ಚಿಕ್ಕವರಿಗೆ ಅಥವಾ ಸಮವಯಸ್ಕರಿಗೆ ಮಾದರಿ ವರ್ತನೆಗಳಾಗಿ ದೊರಕುತ್ತಿರುತ್ತವೆ.
ಇಂತಹ ವರ್ತನೆಗಳ ಮಾದರಿಗಳಿಂದಲೇ ಪ್ರಚೋದನೆ, ಪ್ರೇರಣೆ, ಪ್ರಲೋಭನೆಗಳಂತಹ ಪ್ರಭಾವಗಳು ಆಗುವುದು. ಅಪೇಕ್ಷಿತ ಅಥವಾ ಅಗತ್ಯದ ವರ್ತನೆಗಳಿಗೆ ಹೊರತಾಗಿ ಮತ್ತೊಂದು ಬಗೆಯ ವರ್ತನೆಗಳನ್ನು ವ್ಯಕ್ತಿಯಲ್ಲಿ ಅಥವಾ ಸಮಾಜದಲ್ಲಿ ಕಾಣುತ್ತಿದ್ದು, ಅದರಲ್ಲಿ ಬದಲಾವಣೆ ಕಾಣಬೇಕೆಂದರೆ, ವ್ಯಕ್ತಿಯಲ್ಲಿ ಅಥವಾ ಸಮಾಜದಲ್ಲಿ ಪರಿವರ್ತನೆ ಆಗಬೇಕು. ಸ್ವಭಾವದಲ್ಲಿ ಬದಲಾವಣೆ ಆಗಬೇಕು. ಸ್ವಭಾವದ ಬದಲಾವಣೆಯಾಗುವುದಕ್ಕೂ ಮುಖ್ಯ ಪರಿಕರವೆಂದರೆ ವರ್ತನೆಗಳ ಮಾದರಿಗಳು. ಒಟ್ಟಾರೆ ಇಷ್ಟು ತಿಳಿಯೋಣ. ಪರಿವರ್ತನೆಗೆ ಮುಖ್ಯಕಾರಣ ವರ್ತನೆಗಳ ಮಾದರಿಗಳು. (ಮಾದರಿ ವರ್ತನೆಗಳು ಅಲ್ಲ. ವರ್ತನೆಯ ಮಾದರಿಗಳು ಮಾದರಿ ವರ್ತನೆಗಳಾಗಿವೆಯೇ ಇಲ್ಲವೇ ಅದು ಬೇರೊಂದು ಅಧ್ಯಯನ. ವರ್ತನೆಗಳ ಮಾದರಿಗಳು ಎಂದರೆ ಸ್ಯಾಂಪಲ್‌ಗಳು. ಮಾದರಿ ವರ್ತನೆಗಳು ಎಂದರೆ ಆದರ್ಶಪ್ರಾಯವಾಗಿರುವ ಅಥವಾ ಐಡಿಯಲ್ ಮಾದರಿಗಳು ಎಂದರ್ಥ. ನಾವೀಗ ಗಮನ ನೀಡಬೇಕಾಗಿರುವುದು ಸ್ಯಾಂಪಲ್‌ಗಳ ಬಗ್ಗೆ. ಆದರ್ಶ ಪ್ರಾಯವಾಗಿರುವಂಥದ್ದರ ಬಗ್ಗೆ ಅಲ್ಲ.) ಮಕ್ಕಳ ವಿಷಯದಲ್ಲಿ ವರ್ತನೆಗಳ ಮಾದರಿಗಳು ಅದೆಷ್ಟು ಮುಖ್ಯವಾದದ್ದು ಮತ್ತು ಪರಿಣಾಮಕಾರಿಯಾಗಿರುವುದು ಎಂದರೆ ಅವರ ಬದುಕು, ಭವಿಷ್ಯ, ಚಿಂತನಾಕ್ರಮ, ಜೀವನ ಶೈಲಿ, ಜೀವನಕ್ರಮ; ಎಲ್ಲವನ್ನೂ ನಿರ್ಧರಿಸುತ್ತದೆ.
ಅವರು ಯಾವುದೋ ಕಾರಣಕ್ಕೆ, (ಪ್ರೀತಿಯಿಂದಲೋ, ಒತ್ತಡದಿಂದಲೋ, ಸಮ್ಮೋಹನಕ್ಕೊಳಗಾಗಿಯೋ) ಒಂದು ಅಥವಾ ಹಲವು ವರ್ತನೆಗಳ ಮಾದರಿಗಳನ್ನು ಮಾದರಿ ವರ್ತನೆಯಾಗಿ (ಆದರ್ಶವಾಗಿ) ಸ್ವೀಕರಿಸುತ್ತಾರೆ. ಈ ಸ್ವೀಕಾರ ಕೆಲವೊಮ್ಮೆ ಐಚ್ಛಿಕವಾಗಿ ಆಗಿರಬಹುದು, ಅನೈಚ್ಛಿಕವಾಗಿಯೂ ಆಗಿರಬಹುದು. ಎಚ್ಚರಿಕೆಯ ಸ್ಥಿತಿಯಲ್ಲಿಯೇ ಆಗಿರಬಹುದು. ಎಚ್ಚರಿಕೆ ಇಲ್ಲದ ಸ್ಥಿತಿಯಲ್ಲಿಯೂ ಆಗಿರಬಹುದು. ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿರಬಹುದು ಅಥವಾ ಅಪ್ರಜ್ಞಾವಸ್ಥೆಯಲ್ಲಿ ಆಗಿರಬಹುದು. ಒಟ್ಟಾರೆ ವರ್ತನೆಗಳ ಮಾದರಿಗಳಲ್ಲಿ ಒಂದು ಅಥವಾ ಹಲವು ಮಗುವಿನ ಮಾದರಿ ವರ್ತನೆಯಾಗಿರುತ್ತದೆ. ಇದು ಒಮ್ಮಿಂದೊಮ್ಮೆಲೇ ಆಗಬಹುದು. ಪ್ರಕ್ರಿಯೆಯ ಮೂಲಕವೂ ಆಗಬಹುದು. ಮಗುವಿಗೆ ಪ್ರಾಥಮಿಕ ಹಂತದಲ್ಲಿ ಈ ಬಗೆಯ ವರ್ತನೆಗಳ ಮಾದರಿಗಳು ಸಿಗುವ ಮೊದಲ ತಾಣವೆಂದರೆ ಮನೆ, ನಂತರ ಮನೆಯಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ, ಶಾಲೆ. ಮಗುವು ಬೆಳೆದ ಮೇಲೆ ತನ್ನ ಓದಿನಲ್ಲಿ, ಅಧ್ಯಯನದಲ್ಲಿ, ಸುದ್ಧಿಗಳಲ್ಲಿ ಪ್ರಭಾವಶಾಲಿಯಾಗಿ ಸುಳಿದಾಡುವ ವ್ಯಕ್ತಿತ್ವಗಳಲ್ಲಿ, ಸಿನೆಮಾವೇ ಮೊದಲಾದ ಪ್ರದರ್ಶಕ ಕಲೆಗಳಲ್ಲಿ, ಈಗ ಸಾಮಾಜಿಕ ಜಾಲತಾಣಗಳಲ್ಲಿ ವರ್ತನೆಗಳ ಮಾದರಿಗಳನ್ನು ಕಂಡುಕೊಳ್ಳುತ್ತದೆ. ಅವುಗಳಲ್ಲಿ ಯಾವ ಮಾದರಿಗಳು ಪ್ರಭಾವಶಾಲಿಯಾಗಿರುವುದೋ, ಸಮೊ್ಮೀೀಹಕವಾಗಿರುವುದೋ ಅದನ್ನು ತನ್ನ ಆದರ್ಶವನ್ನಾಗಿ ಇಟ್ಟುಕೊಳ್ಳುತ್ತದೆ. ತನ್ನ ವ್ಯಕ್ತಿತ್ವದ ಪೋಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತದೆ. ಆದರೆ ಅಗತ್ಯದ ಮಾದರಿ ಹೌದೋ ಅಲ್ಲವೋ ಎಂದು ಸಾಮಾನ್ಯವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ಗೊತ್ತಾಗುವುದಿಲ್ಲ. ಸಮಾಜದಲ್ಲಿ ಮತ್ತು ವ್ಯಕ್ತಿಗತ ಜೀವನದಲ್ಲಿ ಮುಂದಾಗುವ ಎಲ್ಲಾ ಸಕಾರಾತ್ಮಕ ಅಥವಾ ನಕಾರಾತ್ಮಕ ವಿಷಯಗಳಿಗೆ ಇವು ಕಾರಣವಾಗುತ್ತವೆ ಎಂದರೆ ಗಾಬರಿ ಬೀಳಬೇಕಾಗಿಲ್ಲ. ಗಮನಿಸಿ ನೋಡಬೇಕಷ್ಟೇ.
ಏಕೆ ಹೀಗಾಯ್ತೋ ನಾ ಕಾಣೆ
‘‘ಇವನು/ಇವಳು ಯಾಕೆ ಹೀಗಾಡ್ತಾಳೆ? ಹಾಗಿದ್ದ ಮಗು ಹೀಗೇಕೆ ಆಯಿತು? ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಏಕಾಯ್ತು?’ ಎಂದೆಲ್ಲಾ ಇನ್ನು ಪೋಷಕರು ಗೊಣಗುವುದನ್ನು ನಿಲ್ಲಿಸಬೇಕು. ವರ್ತನೆಗಳ ಮಾದರಿಗಳು ಮಾದರಿ ವರ್ತನೆಗಳಾಗಿ ಮಕ್ಕಳಲ್ಲಿ ಪರಿವರ್ತನೆಯನ್ನು ತರುವ ಬಗೆಯನ್ನು ತಿಳಿಯಬೇಕು. ಬಹಳ ಮುಖ್ಯವಾಗಿ ತಿಳಿಯಬೇಕಾಗಿರುವುದು ಏನೆಂದರೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಪರಿವರ್ತನೆ ಎಂಬುದು ಉಂಟಾಗುವುದು ವರ್ತನೆಗಳ ಮಾದರಿಗಳಿಂದ ಎಂಬ ಸೂಕ್ಷ್ಮವನ್ನು ಗುರುತಿಸಬೇಕು. ಪರಿವರ್ತಿತ ಸಮಾಜವನ್ನು ಕಾಣಬೇಕಾದರೆ ಮಕ್ಕಳಲ್ಲಿ ಪರಿವರ್ತನೆ ಉಂಟುಮಾಡುವ ವರ್ತನೆಗಳನ್ನು ಪೋಷಕರು ಮತ್ತು ಶಿಕ್ಷಕರು ತೋರಬೇಕು. ಇಷ್ಟನ್ನು ಹೇಳಬಲ್ಲೆ. ಇಂದು ಯಾವುದೇ ಸಮಾಜ, ದೇಶ ಕ್ಷೋಭೆ ಉಂಟಾಗಿದ್ದರೆ, ಅವ್ಯವಸ್ಥೆಯಿಂದ ಕೂಡಿದ್ದರೆ, ಅಂದು ಮಕ್ಕಳಿಗೆ ಸರಿಯಾದ ವರ್ತನೆಗಳ ಮಾದರಿಗಳನ್ನು ಒದಗಿಸಿಲ್ಲ ಮತ್ತು ಅವರ ಆಂತರಿಕ ಪೋಷಣೆಯ ಸೂಕ್ಷ್ಮತೆಯನ್ನು ಅರಿಯುವುದರಲ್ಲಿ ವಿಫಲರಾಗಿದ್ದಾರೆ ಎಂದೇ ಅರ್ಥ. ಕುಟುಂಬ, ಸಮಾಜ ಮತ್ತು ಆಡಳಿತ ವ್ಯವಸ್ಥೆ ಮಕ್ಕಳ ವಿಷಯದಲ್ಲಿ ಬಹು ಮುಖ್ಯವಾಗಿ ಎಡವಿರುವುದಕ್ಕೆ ಮುಖ್ಯ ಕಾರಣವೆಂದರೆ ಸಮಾಜದ ಹಲವು ವಿದ್ಯಮಾನಗಳು ಮತ್ತು ವಿಷಯಗಳು ಶಿಶುಕೇಂದ್ರಿತವಾಗಿದ್ದರೂ ಅದನ್ನು ಗುರುತಿಸದೇ ಹೋಗಿರುವುದು. ಅಲ್ಲದೇ ಪೀಳಿಗೆಗಳ ಕುರಿತಾಗಿ ದೂರದೃಷ್ಟಿಯನ್ನು ಹೊಂದಿದ್ದು, ಅದರ ಪ್ರಕಾರ ಪ್ರಸ್ತುತ ವಿಷಯಗಳನ್ನು ವಿಶ್ಲೇಷಿಸಲು ಬರದಿರುವುದು. ವಿವೇಚಿಸಲು ಬರದಿರುವುದು. ಯಾವ ಸಮಾಜವು ಮಕ್ಕಳ ವಿಷಯದಲ್ಲಿ ಸೂಕ್ಷ್ಮತೆಯನ್ನು ಹೊಂದಿರುವುದಿಲ್ಲವೋ ಅದು ಹೊರಾವರಣದ ವಿಷಯಗಳಲ್ಲಿ ಬಡಿದಾಡಿಕೊಂಡಿರುತ್ತದೆ. ಹಾಗಾದರೆ ಈಗ ನಾವು ಏನು ಮಾಡಬಹುದು? ವರ್ತ ನಾಶಾಸ್ತ್ರದ ಅನುಗುಣವಾಗಿ ಮಕ್ಕಳಿಗೆ ವ್ಯಕ್ತಿತ್ವ, ಬದುಕು ಮತ್ತು ಭವಿಷ್ಯಗಳನ್ನು ರೂಪಿಸುವುದು ಹೇಗೆ? ಮುಂದೆ ವಿವರವಾಗಿ ತಿಳಿಯುವ ಪ್ರಯತ್ನ ಮಾಡೋಣ.