ಅಂಬೇಡ್ಕರ್ ನೆನಪಲ್ಲಿ ನೀಲಿ ಮಳೆ
ಈ ಹೊತ್ತಿನ ಹೊತ್ತಿಗೆ
ಕನ್ನಡದಲ್ಲಿ ಕಾವ್ಯ ಖಡ್ಗವಾಗಬೇಕು ಎಂಬ ಹಂಬಲಿಕೆಯ ಕಾಲಘಟ್ಟದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಕಾವ್ಯ ಬರೆಯದ ಕವಿಯೇ ಇರಲಿಲ್ಲವೇನೋ. ದಲಿತ, ಬಂಡಾಯ ಸಾಹಿತ್ಯಗಳು ಜನಸಾಮಾನ್ಯರ ನೋವು ದುಮ್ಮಾನಗಳನ್ನು ತೆರೆದಿಟ್ಟಾಗ, ಅರಿವಿಲ್ಲದೆಯೇ ಅಲ್ಲಿ ಅಂಬೇಡ್ಕರ್ ರೂಪಕಗಳು ಹರಡಿಕೊಳ್ಳುತ್ತವೆ. ನೋವು, ಶೋಷಣೆಯನ್ನು ಹೇಳ ಹೊರಟ ಕವಿ ಒಂದಲ್ಲ ಒಂದು ಬಾರಿ ಅಂಬೇಡ್ಕರ್‌ರನ್ನು ಬರೆದೇ ಬರೆದಿರುತ್ತಾನೆ. ಅದು ಆ ಕಾಲಘಟ್ಟಕ್ಕಷ್ಟೇ ಮುಗಿದುಹೋಗಿಲ್ಲ. ಇಂದು ಅಂಬೇಡ್ಕರ್ ಹಿಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಮನುವಾದಿ ಮತ್ತು ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಗಾಂಧೀಜಿ ತುಸು ಹಿಂದೆ ಸರಿದಿದ್ದಾರೆ ಮತ್ತು ವರ್ತಮಾನದ ಸವಾಲನ್ನು ಎತ್ತಿಕೊಳ್ಳಲು ಅಂಬೇಡ್ಕರ್ ಮುಂದೆ ನಿಂತಿದ್ದಾರೆ. ಹೊಸ ತಲೆಮಾರುಗಳು ಅಂಬೇಡ್ಕರ್ ಅವರನ್ನು ಬೇರೆ ಬೇರೆ ನೆಲೆಗಳಲ್ಲಿ ಮತ್ತೆ ಬರೆಯತೊಡಗಿವೆ. ಹೊಸದಾಗಿ ಓದ ತೊಡಗಿವೆ. ಇಂತಹ ಹೊತ್ತಿನಲ್ಲಿ ಹಂದಲಗೆರೆ ಗಿರೀಶ್ ಅವರ ಸಂಪಾದಕತ್ವದಲ್ಲಿ ‘ಅರಿವೇ ಅಂಬೇಡ್ಕರ್’ ಕವನ ಸಂಕಲನವನ್ನ್ನು ಹೊರತರಲಾಗಿದೆ. ಅವಿರತ ಪುಸ್ತಕ ಈ ಸಂಕಲನವನ್ನು ಹೊರತಂದಿದೆ. ಅಂಬೇಡ್ಕರ್ ಅವರನ್ನು ವಸ್ತುವಾಗಿಟ್ಟುಕೊಂಡು ನಾಡಿನ ಹಿರಿಯ ಕಿರಿಯ ಕವಿಗಳು ಬರೆದಿುವುದನ್ನು ಇಲ್ಲಿ ಸಂಗ್ರಹಿಸಲಾಗಿದೆ.
ನಟರಾಜ್ ಹುಳಿಯಾರ್ ಅವರು ಹೇಳುವಂತೆ, ಬಾಬಾ ಸಾಹೇಬ ಎಂದು ಎದೆ ತುಂಬಿ ಬರೆದ ಕನ್ನಡ ಕಾವ್ಯದ ವಿವಿಧ ಘಟ್ಟಗಳ ಮೂರು ತಲೆಮಾರು ಅಂಬೇಡ್ಕರ್ ವ್ಯಕ್ತಿತ್ವ, ಚಿಂತನೆ, ರಾಜಕಾರಣಗಳಿಗೆ ಮಿಡಿದ ವಿಶಿಷ್ಟ ಬಗೆಗಳನ್ನು ಈ ಸಂಕಲನ ದಾಖಲಿಸುತ್ತದೆ. ಈ ಕವಿತೆಗಳಲ್ಲಿ ಬಾಬಾ ಸಾಹೇಬರು ಭೀಮಜ್ಯೋತಿಯಾಗಿ ಸಂಘಟನೆಗಳ ಬೆಳಕಾಗುತ್ತಾರೆ. ನಾಡ ನಡುವಿನಿಂದ ಸಿಡಿದ ನೋವಿನ ಕೂಗಾಗುತ್ತಾರೆ. ದಿಕ್ಕು ತಪ್ಪಿದ ಸಮಾಜ, ಸಂಘಟನೆಗಳ ಬಗ್ಗೆ ದೂರೊಪ್ಪಿಸುವ ನ್ಯಾಯಾಲಯವೂ ಆಗುತ್ತಾರೆ. ಭಾವಗೀತೆಯ ಸೆಲೆಯೇ ಬತ್ತಿದ ಕಾಲದಲ್ಲಿ ಅಂಬೇಡ್ಕರ್ ಕನ್ನಡ ಕವಿಗಳ ಎದೆಗಳಲ್ಲಿ ಭಾವಗೀತೆಯನ್ನುಕ್ಕಿಸುತ್ತಾರೆ. ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ನೋಡಲೇ ಬೇಕಾದ ತುರ್ತನ್ನು ಕವಿಗಳೊಳಗೆ ಆ ಮೂಲಕ ಓದುಗರೊಳಗೆ ಪ್ರಚೋದಿಸುತ್ತಾರೆ.
ಸುಮಾರು 125 ಕವಿತೆಗಳು ಇಲ್ಲಿವೆ. ಕಂಬಾರ, ಹನುಮಂತಯ್ಯ, ಅಡಿಗ, ಚಂಪಾ, ನಾಗವಾರ, ಬರಗೂರು ಮೊದಲಾದ ಹಿರಿಯರಿಂದ ಹಿಡಿದು, ಹೆತ್ತೂರು, ದೀಪಾ ಗಿರೀಶ್, ಹುಲಿಕುಂಟೆ ಮೊದಲಾದ ಹೊಸ ತಲೆಮಾರಿನವರೆಗಿನ ಬರಹಗಾರರು ಇಲ್ಲಿ ಅಂಬೇಡ್ಕರ್‌ರನ್ನು ವಿಭಿನ್ನವಾಗಿ ಪರಿಚಯಿಸುತ್ತಾರೆ. 248 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 94499 35103 ದೂರವಾಣಿಯನ್ನು ಸಂಪರ್ಕಿಸಬಹುದು.