ಒಡೆದ ಕನ್ನಡಿ- ಜಗತ್ಪ್ರಸಿದ್ಧ ವ್ಯಕ್ತಿಗಳ ನುಡಿ ಚಿತ್ರಗಳು
ಈ ಹೊತ್ತಿನ ಹೊತ್ತಿಗೆ
ಬದುಕನ್ನೇ ಪ್ರಯೋಗಕ್ಕೊಡ್ಡಿ ತೀವ್ರವಾಗಿ ಬರೆಯುವುದು ಎಂದರೆ, ಬೆಂಕಿಯ ಮೋಹಕ್ಕೆ ಸಿಕ್ಕ ಚಿಟ್ಟೆಯ ಸ್ಥಿತಿಯಾಗುತ್ತದೆ ಬರಹಗಾರನದು. ಹೀಗೆ ಬರೆಯುತ್ತಾ ಬರೆಯುತ್ತಾ ಸುಟ್ಟು ಹೋದ ಹಲವು ಮಹತ್ವದ ಲೇಖಕರು ವಿಶ್ವದಲ್ಲಿ ಆಗಿ ಹೋಗಿದ್ದಾರೆ. ಅವರು ಬದುಕಿದ ರೀತಿಯೇ ಅವರನ್ನು ಶ್ರೇಷ್ಠ ಬರಹಗಾರರಾಗಿ ರೂಪಿಸಿತ್ತು. ಆದುದರಿಂದಲೇ ಅವರ ಬರಹ ಮತ್ತು ಬದುಕನ್ನು ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ ಎನ್ನುವಷ್ಟು ಅವುಗಳು ಅನ್ಯೋನ್ಯವಾಗಿವೆ. ಇಂತಹ ಜಗತ್ಪ್ರಸಿದ್ಧ ಮಹಾನ್ ವ್ಯಕ್ತಿಗಳ ಒಳಹೊರಗಿನ ವಿವರಗಳನ್ನು ‘ಒಡೆದ ಕನ್ನಡಿ’ ಕೃತಿಯಲ್ಲಿ ಮುಕ್ತವರಂ ಪಾರ್ಥಸಾರಥಿ ಅವರು ಕಟ್ಟಿಕೊಟ್ಟಿದ್ದಾರೆ. ತೆಲುಗು ಮೂಲದ ಈ ಕೃತಿಯನ್ನು ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕೆ ಇಳಿಸಿದ್ದಾರೆ. ಸುಮಾರು 34 ಮಂದಿ ಖ್ಯಾತನಾಮರ ನುಡಿಚಿತ್ರಗಳು ಈ ಕೃತಿಯಲ್ಲಿವೆ. ‘ವೇಶ್ಯೆಗಿಂತಲೂ ತಲೆಹಿಡುಕ ಹೆಚ್ಚು ನೀಚ. ಮೈ ಮಾರಿಕೊಳ್ಳುವ ನತದೃಷ್ಟೆಯ ಸಂಪಾದನೆಯ ಮೇಲೆ ಬದುಕುವ ಮನುಷ್ಯನಿಗಿಂತಲೂ ನಿಕೃಷ್ಟ ಯಾರಿರುತ್ತಾನೆ?’ ಎಂದು ಕೇಳಿದ ಕ್ರಿಸ್ಟೋಫರ್ ಕಾಡ್ವೆಲ್, ಬಡವರ ಕಣ್ಣಲ್ಲಿ ಮಾನವ ಸಮಾಜವನ್ನು ಕಟ್ಟಿದ ಕಾರ್ಲ್‌ಮಾರ್ಕ್ಸ್, ಕಷ್ಟಗಳ ಕಡಲಲ್ಲಿ ಈಜಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್, ಹಾಸ್ಯ-ವಿಷಾದಗಳ ನಡುವೆ ಬರಹಗಳನ್ನು ಕೊಟ್ಟ ಮಾರ್ಕ್ ಟ್ವೇನ್, ಬಡತನ ಬಂಧಿಖಾನೆಯ ನಡುವೆ ಬರೆದ ಸರ್ವಾಂಟೀಸ್, ಬಿಳಿಯರ ನಾಗರಿಕತೆಯ ಕ್ರೌರ್ಯವನ್ನು ತೆರೆದಿಟ್ಟ ಡೀ ಬ್ರೌನ್ ಇವರೆಲ್ಲರ ಜೊತೆಗೆ ಚೆಕಾಫ್, ಮೊಪಾಸಾ, ನೀಷೆ, ಓ ಹೆನ್ರಿ, ವಿಕ್ಟರ್ ಹ್ಯೂಗೋ, ಲೂ ಷೂನ್, ಟಾಲ್‌ಸ್ಟಾಯ್, ಜಾಕ್ ಲಂಡನ್, ಆಸ್ಕರ್ ವೈಲ್ಡ್, ವಿಕ್ಟರ್ ಯಾರಾ ಮೊದಲಾದವರನ್ನು ಮುಷ್ಟಿಯೊಳಗೆ ಲೇಖಕರು ಕಟ್ಟಿಕೊಡುತ್ತಾರೆ. ಸರಳವಾಕ್ಯಗಳಲ್ಲಿ, ಆಕರ್ಷವಾಗಿ ಟಿಪ್ಪಣಿ ರೂಪದಲ್ಲಿವೆ ಇಲ್ಲಿನ ಎಲ್ಲ ಬರಹಗಳು. ಇದೊಂದು ರೀತಿಯಲ್ಲಿ ಒಬ್ಬ ವ್ಯಕ್ತಿಯ ಮೊದಲ ಪರಿಚಯವಾಗಿದೆ. ಇದರಿಂದ ಕುತೂಹಲಗೊಂಡು ಆತನನ್ನು ಇನ್ನಷ್ಟು ಓದಲು ಹೊರಟರೆ ಅದೇ ಈ ಕೃತಿಯ ಸಾರ್ಥಕ್ಯ. ಇಲ್ಲಿ ಬರವಣಿಗೆ ಯಾವುದೇ ಪೂರ್ವಾಗ್ರಹ ಹೊಂದಿಲ್ಲ ಅಥವಾ ಲೇಖಕರ ಕುರಿತಂತೆ ಓದುಗನಲ್ಲಿ ಪರೋಕ್ಷವಾಗಿ ಯಾವುದನ್ನೂ ಹೇರುವುದಿಲ್ಲ. ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಪುಟ್ಟ ಕೃತಿಯ ಮುಖಬೆಲೆ 80 ರೂಪಾಯಿ.