varthabharthi


ಮುಂಬೈ ಮಾತು

ಮುಚ್ಚುತ್ತಿರುವ ಮರಾಠಿ ಶಾಲೆಗಳು!

ವಾರ್ತಾ ಭಾರತಿ : 19 Dec, 2017
ಶ್ರೀನಿವಾಸ್ ಜೋಕಟ್ಟೆ

ಗಿಡ ನೆಡುವ ದಾಖಲೆ!
ಮಹಾರಾಷ್ಟ್ರದ ಅರಣ್ಯ ಇಲಾಖೆಯು 5.43 ಕೋಟಿ ಗಿಡಗಳನ್ನು ಈ ಬಾರಿ ರಾಜ್ಯಾದ್ಯಂತ ನೆಡುವ ಕಾರ್ಯಕ್ರಮವು ಯಶಸ್ವಿಯಾಗಿದ್ದು ಇದು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ.

ಅರಣ್ಯ ಮಂತ್ರಿ ಸುಧೀರ್ ಮುನ್‌ಗಂಟೀವಾರ್ ಅವರು ಈ ವಿಷಯವಾಗಿ ಸಂತೋಷ ವ್ಯಕ್ತಪಡಿಸುತ್ತಾ ಇದಕ್ಕಾಗಿ ಅರಣ್ಯ ಇಲಾಖೆ, ಎಲ್ಲಾ ಸರಕಾರಿ ವಿಭಾಗ, ಸ್ಥಳೀಯ ಆಡಳಿತದ ಅಧಿಕಾರಿಗಳು, ನೌಕರರು, ಸಾಮಾಜಿಕ ಸಂಸ್ಥೆಗಳು, ವಿದ್ಯಾರ್ಥಿಗಳು, ಉದ್ಯಮಿಗಳ ಸಹಿತ ಸಮಾಜದ ಎಲ್ಲಾ ಸಮುದಾಯದವರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

ರಾಜ್ಯದ ಅರಣ್ಯ ಕ್ಷೇತ್ರವನ್ನು 20 ಪ್ರತಿಶತದಿಂದ ವಿಸ್ತರಿಸಿ 33 ಪ್ರತಿಶತ ತನಕ ಒಯ್ಯುವ ಉದ್ದೇಶದಿಂದ ಮಹಾರಾಷ್ಟ್ರದ ಅರಣ್ಯ ಮಂತ್ರಿಯವರ ಸಂಕಲ್ಪದಂತೆ 2017 ರಿಂದ 2019ರ ನಡುವೆ ಸುಮಾರು 50 ಕೋಟಿ ಗಿಡಗಳನ್ನು ನೆಡುವ ಗುರಿ ಇರಿಸಲಾಗಿದೆ. 2017ರಲ್ಲಿ ಜುಲೈ ಮೊದಲ ವಾರದಲ್ಲೇ ನಾಲ್ಕು ಕೋಟಿ ಸಸಿಗಳನ್ನು ನೆಡುವ ಗುರಿ ಇರಿಸಿದ್ದರು. ಈ ಗುರಿ ಯನ್ನು ಪೂರ್ಣಗೊಳಿಸಿದ್ದಲ್ಲದೆ 5.43 ಕೋಟಿ ಸಸಿಗಳನ್ನು ನೆಡಲಾಯಿತು. ಈ ಮಹಾ ಅಭಿಯಾನವು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ.
2018ರಲ್ಲಿ 13 ಕೋಟಿ ಮತ್ತು 2019ರಲ್ಲಿ 33 ಕೋಟಿ (ಒಟ್ಟು 50 ಕೋಟಿ) ಸಸಿಗಳನ್ನು ನೆಡುವ ಗುರಿ ಇರಿಸಲಾಗಿದೆ.

* * *

ಬೆಸ್ಟ್, ಮೋನೋ, ಮೆಟ್ರೋಗೆ ಒಂದೇ ಟಿಕೆಟ್!

ಮುಂಬೈ ಮಹಾನಗರದಲ್ಲಿ ಎಲ್ಲಾ ಸಾರಿಗೆ ಸೇವೆಗಳಿಗೆ ಒಂದೇ ಟಿಕೆಟ್ ವ್ಯವಸ್ಥೆ ಮುಂದಿನ ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ. ಇದಕ್ಕಾಗಿ ಡಿಸೆಂಬರ್ 25ರೊಳಗೆ ಟೆಂಡರ್ ಪ್ರಕ್ರಿಯೆ ಶುರುಮಾಡಲಾಗುವುದೆಂದು ಮುಂಬೈ ಮಹಾನಗರ ಕ್ಷೇತ್ರ ವಿಕಾಸ ಪ್ರಾಧಿಕರಣ (ಎಂಎಂಆರ್‌ಡಿಎ)ದ ವರಿಷ್ಟ ಅಧಿಕಾರಿ ತಿಳಿಸಿದ್ದಾರೆ. ಮುಂಬೈಯಲ್ಲಿ ಪ್ರಯಾಣಿಸುವುದಕ್ಕೆ ಬೇರೆ ಬೇರೆ ಸಾರಿಗೆ ಸಾಧನಗಳಿವೆ. ಆದರೆ ಬೆಸ್ಟ್, ಮೋನೋ, ಮೆಟ್ರೋಗಳಲ್ಲಿ ಪಯಣಿಸುವವರು ಬೇರೆ ಬೇರೆ ಟಿಕೆಟ್‌ಗಳನ್ನು ಪಡೆಯಬೇಕು. ಸಮಯವೂ ಹೆಚ್ಚು ಖರ್ಚಾಗುತ್ತದೆ. ಇದೀಗ ಶೀಘ್ರವೇ ಎಂಎಂಆರ್‌ಡಿಎ ಮುಂಬೈಕರ್‌ರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಲು ಮುಂದಾಗಿದೆ. ಇದಕ್ಕಾಗಿ ಇಂಟಿಗ್ರೇಟೆಡ್ ಟಿಕೆಟ್ ಸಿಸ್ಟಮ್ (ಒಂದೇ ಟಿಕೆಟ್ ವ್ಯವಸ್ಥೆ)ನ್ನು ಎಪ್ರಿಲ್ 2018ರಿಂದ ಆರಂಭಿಸಲಾಗುತ್ತದೆ. ಇದಕ್ಕಾಗಿ ಎಂಎಂಆರ್‌ಡಿಎಗೆ ವಿಸ್ತೃತ ಯೋಜನಾ ರಿಪೋರ್ಟ್ (ಡಿಪಿಆರ್) ದೊರಕಿದೆ. ಈ ಡಿಪಿಆರ್‌ನಲ್ಲಿ ಸೂಚಿಸಿದಂತೆ ಎಂಎಂಆರ್‌ಡಿಎ ಟೆಂಡರ್ ಪ್ರಕ್ರಿಯೆ ಆರಂಭಿಸುವುದು. ಎಂಎಂಆರ್‌ಡಿಎಯ ಹೆಚ್ಚುವರಿ ಆಯುಕ್ತ ಸಂಜಯ್ ಖಂಡಾರೆ ತಿಳಿಸಿದಂತೆ ಡಿಸೆಂಬರ್ 25ರೊಳಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಜನವರಿಯೊಳಗೆ ಐಟಿಎಸ್‌ಗಾಗಿ ಸಿಸ್ಟಮ್ ರೂಪಿಸುವುದು. ಅದನ್ನು ನೋಡಿಕೊಳ್ಳಲು ಗುತ್ತಿಗೆ ನೀಡಲಾಗುವುದು. ಎಪ್ರಿಲ್ 2018ರೊಳಗೆ ಈ ಸೌಲಭ್ಯ ಬೆಸ್ಟ್ ಬಸ್ಸುಗಳಲ್ಲಿ ಜಾರಿಗೆ ತರಲಾಗುವುದು. ಆನಂತರ ಮೋನೋದ ಎರಡೂ ಕ್ಷೇತ್ರಗಳಲ್ಲಿ ಹಾಗೂ ಮೆಟ್ರೋ ರೈಲಿನಲ್ಲೂ ಏಕಟಿಕೆಟ್ ಪ್ರಣಾಳಿಯನ್ನು ಬಳಸಲಾಗುವುದು. ಕೊನೆಯ ಹಂತವಾಗಿ ಲೋಕಲ್ ರೈಲುಗಳ ಪಾಸ್ ಧಾರಕರು ಐಟಿಎಸ್‌ನಲ್ಲಿ ಸೇರಿಕೊಳ್ಳುತ್ತಾರೆ.

ಮುಂಬೈ ಮಹಾನಗರದ ರೈಲ್ವೆ ಮೆಟ್ರೋ, ಮೋನೋ ಮತ್ತು ಬೆಸ್ಟ್ ಬಸ್ಸುಗಳಿಗಾಗಿ 2013ರಲ್ಲಿ ಏಕಟಿಕೆಟ್ ವ್ಯವಸ್ಥೆಯನ್ನು ಆರಂಭಿಸುವ ಘೋಷಣೆ ಮಾಡಲಾಗಿತ್ತು. ಅಂದಿನಿಂದಲೂ ಈ ಯೋಜನೆ ಕೇವಲ ಘೋಷಣೆಗಳಲ್ಲೇ ಇತ್ತು. ಆದರೆ ಯಶಸ್ಸನ್ನು ಎಂ.ಎಂ.ಆರ್.ಡಿ.ಎ. 2017 ರಲ್ಲಿ ಪಡೆದಿದೆ. ಒಂದು ವೇಳೆ ಈ ಸೌಲಭ್ಯ ಆರಂಭವಾದರೆ ಭಾರತವು ಐಟಿಎಸ್ ಸೌಲಭ್ಯ ಬಳಸುವ ನಾಲ್ಕನೇ ದೇಶವಾಗಲಿದೆ.

‘‘ಐಟಿಎಸ್ ವ್ಯವಸ್ಥೆ ಜಾರಿಗೆ ತರುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇದು ಎಂಎಂಆರ್‌ಡಿಎ ಮತ್ತು ಮುಂಬೈ ಮಹಾನಗರಕ್ಕಾಗಿ ದೊಡ್ಡ ಕೊಡುಗೆಯ ಲಾಭವಾಗಲಿದೆ. ಕೇವಲ ಮೂರು ದೇಶಗಳಲ್ಲಿ ಮಾತ್ರ ಈ ಸೌಲಭ್ಯ ಇದೆೆ. ಟೆಂಡರ್ ಪ್ರಕ್ರಿಯೆಯ ನಂತರ ಈ ವ್ಯವಸ್ಥೆ ದೊರೆಯಲು 90 ದಿನಗಳ ಸಮಯ ಬೇಕು’’ ಎನ್ನುತ್ತಾರೆ ಎಂಎಂಆರ್‌ಡಿಎ ಹೆಚ್ಚುವರಿ ಆಯುಕ್ತ ಸಂಜಯ್ ಖಂಡಾರೆ.

ಐಟಿಎಸ್ ಸೌಲಭ್ಯಕ್ಕಾಗಿ ಪ್ರವಾಸಿಗರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಈ ಪ್ರಯಾಣಿಕರಿಗೆ ‘ಎ’ ಸ್ಥಳದಿಂದ ‘ಬಿ’ ಸ್ಥಳದ ಮಾಹಿತಿ ನೀಡಬೇಕಾಗುವುದು. ಆನಂತರ ಪ್ರಯಾಣದ ಸಮಯ ಸಾರಿಗೆ ಸಾಧನಗಳ ಮಾಹಿತಿ ಸಿಗುವುದು. ಬಳಿಕ ಡಿಜಿಟಲ್ ಪೇಮೆಂಟ್‌ನ ಪರ್ಯಾಯ ಆಯ್ಕೆ ಮಾಡಬಹುದು ಅಥವಾ ಮ್ಯಾನ್ಯುವಲ್ ಪೇಮೆಂಟ್ ಸಲ್ಲಿಸಿ ಪ್ರಯಾಣಿಸಬಹುದಾಗಿದೆ.

* * *

16 ಹೊಸ ಪಾಸ್‌ಪೋರ್ಟ್ ಕೇಂದ್ರ
ಮಹಾರಾಷ್ಟ್ರದಲ್ಲಿ 16 ಹೊಸ ಪಾಸ್‌ಪೋರ್ಟ್ ಕೇಂದ್ರ ಶುರುಮಾಡಲಾಗುತ್ತದೆ. ಇದರಲ್ಲಿ ಸಿಂಧುದುರ್ಗ, ವರ್ಧಾ, ಜಾಲ್ನಾ, ಲಾತೂರು, ಅಹ್ಮದ್ ನಗರ, ಪಂಢರಾಪುರ, ಸಾಂಗ್ಲಿ, ಬೀಡ್, ಮುಂಬೈ ನಾರ್ಥ್ ಸೆಂಟ್ರಲ್, ಮುಂಬೈ ಸೌಥ್ ಸೆಂಟ್ರಲ್, ಘಾಟ್‌ಕೋಪರ್, ನವಿ ಮುಂಬೈ, ಡೊಂಬಿವಲಿ, ಪನ್ವೇಲ್, ನಾಂದೇಡ್ ಮತ್ತು ಜಲ್‌ಗಾಂವ್ ಜಿಲ್ಲೆಗಳು ಸೇರಿವೆ.

ಈ ಹೊಸ 16 ಪಾಸ್‌ಪೋರ್ಟ್ ಕೇಂದ್ರ ಶುರು ಮಾಡಿದ ನಂತರ ರಾಜ್ಯದಲ್ಲಿ ಒಟ್ಟು ಪಾಸ್‌ಪೋರ್ಟ್ ಕೇಂದ್ರಗಳ ಸಂಖ್ಯೆ 27 ಆಗುವುದು. ದೇಶದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಪಾಸ್‌ಪೋರ್ಟ್ ಒದಗಿಸಲು ಕೇಂದ್ರ ಸರಕಾರವು ದೇಶಾದ್ಯಂತ 251 ಹೊಸ ಪಾಸ್‌ಪೋರ್ಟ್ ಕೇಂದ್ರ ಶುರುಮಾಡುವ ಯೋಜನೆ ಕೈಗೊಂಡಿತ್ತು. ಇದರಲ್ಲಿ ಮಹಾರಾಷ್ಟ್ರದಲ್ಲಿ 20 ಪಾಸ್‌ಪೋರ್ಟ್ ಕೇಂದ್ರ ಆರಂಭಿಸಲು ನಿರ್ಣಯಿಸಲಾಗಿದೆ. ಇದರಲ್ಲಿ ನಾಲ್ಕು ಕೇಂದ್ರಗಳನ್ನು ಔರಂಗಾಬಾದ್, ಕೊಲ್ಲಾಪುರ, ಸೋಲಾಪುರ, ಪಿಂಪ್ರಿ -ಚಿಂಚ್‌ವಾಡ್ ಇಲ್ಲಿ ಈಗಾಗಲೇ ತೆರೆಯಲಾಗಿದೆ.

* * *

ಗೂಗಲ್‌ನಿಂದ ಭಾರತೀಯ ಕಲೆ-ಸಂಸ್ಕೃತಿಯ ಪ್ರದರ್ಶನ
ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲ್ವೆ ಸ್ಟೇಷನ್‌ನಲ್ಲಿ ಈ ಸಮಯ ಲೋಕಲ್ ರೈಲುಗಳ ನಿರೀಕ್ಷೆ ಮಾಡುವವರಿಗೆ ಮನೋರಂಜನೆಯ ಒಂದು ಹೊಸ ಸಾಧನ ದೊರೆತಿದೆ. ಗೂಗಲ್ ಸಂಸ್ಥೆಯು ಕಲೆ ಮತ್ತು ಸಂಸ್ಕೃತಿಯನ್ನು ವಿಸ್ತರಿಸುವುದಕ್ಕೆ ಇಲ್ಲಿ ವೀಡಿಯೊ ಸ್ಕ್ರೀನ್ ಅಳವಡಿಸಿದೆ. ಇದು ಎರಡು ತಿಂಗಳ ಕಾಲ ಇರುವುದು. ಇದರಲ್ಲಿ ಭಾರತದ ಪ್ರಮುಖ ಐತಿಹಾಸಿಕ ಸ್ಮಾರಕಗಳ ಪ್ರದರ್ಶನ ಮಾಡಲಾಗುತ್ತಿದೆ. 1887ರಲ್ಲಿ ಸ್ಥಾಪನೆಗೊಂಡಿರುವ ಸಿಎಸ್‌ಎಂಟಿ ಕಟ್ಟಡಕ್ಕೆ ಯುನೆಸ್ಕೋ ಮಾನ್ಯತೆ ದೊರೆತಿದೆ. ಮಧ್ಯರೈಲ್ವೆಯ ಮಹಾಪ್ರಬಂಧಕ ಡಿ.ಕೆ.ಶರ್ಮಾ, ಕಾರ್ಯದರ್ಶಿ ಆರ್.ಕೆ. ವರ್ಮಾ, ಮತ್ತು ಗೂಗಲ್ ಕಲಾ-ಸಂಸ್ಕೃತಿಯ ಸಂರಕ್ಷಕ ಬೆನ್‌ಗೋಮ್ಸ್ (ಉಪಾಧ್ಯಕ್ಷ) ಈ ವೀಡಿಯೊ ಪ್ರದರ್ಶನದ ಅನಾವರಣವನ್ನು ಮಾಡಿದರು. ಗೂಗಲ್ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನವು ಭಾರತೀಯ ರೈಲ್ವೆಯ ಐತಿಹಾಸಿಕ ಸಾಧನೆಗಳನ್ನು ತಿಳಿಸಿ ಪ್ರವಾಸಿಗರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯಲಿದೆ. ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರಯಾಣಿಕರಿಗೆ ತಿಳಿಸುತ್ತಿದೆ.

* * *

ಮುಖ್ಯಮಂತ್ರಿಗೆ ಬೇಡವಾದ ಮನಪಾ ಮೇಯರ್
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹಸ್ತದಿಂದ ಮುಂಬೈ ಮಹಾನಗರಪಾಲಿಕೆಯ ಹೊಸ ಆ್ಯಪ್ ‘ಎಂಸಿಜಿಎಂ 24x7’ ಉದ್ಘಾಟನೆಗೊಂಡಿತ್ತು. ಆದರೆ ಈ ಸಮಾರಂಭಕ್ಕೆ ಮೇಯರ್‌ರನ್ನು ಕರೆಯಲೇ ಇಲ್ಲ. ಇದರಿಂದ ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳು ಸಿಟ್ಟುಗೊಂಡಿದ್ದರು ಹಾಗೂ ಮೇಯರ್‌ರನ್ನು ಕರೆಯದೆ ಉದ್ಘಾಟನೆ ಮಾಡಿರುವುದು ಮೇಯರ್‌ಗೆ ಮಾಡಿದ ಅವಮಾನ ಎಂದರು. ನಂತರ ಈ ಬಗ್ಗೆ ಎದ್ದ ವಿವಾದದ ನಡುವೆ ಆಯುಕ್ತ ಅಜಯ್ ಮೆಹ್ತಾರನ್ನು ಮನಪಾ ಸದನಕ್ಕೆ ಕರೆಯಲಾಯಿತು. ಸ್ವಲ್ಪಹೊತ್ತಲ್ಲಿ ಆಗಮಿಸಿದ ಮನಪಾ ಆಯುಕ್ತರು ಕಳೆದ 34 ವರ್ಷಗಳಿಂದ ತಾನು ಈ ಸೇವೆಯಲ್ಲಿದ್ದೇನೆ. ಎಲ್ಲರ ಅಧಿಕಾರವೂ ತನಗೆ ತಿಳಿದಿದೆ ಎಂದರು. ನಂತರ ಮೇಯರ್ ವಿಶ್ವನಾಥ ಮಹಾಡೇಶ್ವರ ವಿವಾದವನ್ನು ಸಮಾಪ್ತಿಗೊಳಿಸಿದರು. ಮನಪಾ ಸಭಾಗೃಹ ನಾಯಕ ಯಶವಂತ್ ಜಾಧವ್ ಈ ವಿಷಯ ಎತ್ತಿದಾಗ ಬಿಜೆಪಿ ಹೊರತುಪಡಿಸಿ ಇತರೆಲ್ಲಾ ನಗರ ಸೇವಕರು ಬೆಂಬಲಿಸಿದ್ದರು. ಶಿವಸೇನೆ ಈ ವಿಷಯದಲ್ಲಿ ಮೊದಲಿಗೆ ಆಕ್ರಮಣ ರೂಪ ತಾಳಿ ನಂತರ ಮೃದುವಾದದ್ದು ಇತರ ನಗರ ಸೇವಕರಿಗೆ ಆಶ್ಚರ್ಯವಾಯಿತು. ಶಿವಸೇನೆ ಎಷ್ಟೇ ಪ್ರಯತ್ನಿಸಿದರೂ ಸರಕಾರದ ಮೇಲೆ ಆಕ್ರಮಣಕಾರಿ ನಿಲುವು ತಳೆಯಲು ಸಾಧ್ಯವಾಗಲೇ ಇಲ್ಲ!

* * *

5,002 ಮರಾಠಿ ಶಾಲೆಗಳಲ್ಲಿ ಹತ್ತಕ್ಕೂ ಕಡಿಮೆ ವಿದ್ಯಾರ್ಥಿಗಳು
‘ಎಲ್ಲರಿಗೂ ಓದಿಸಿ, ದೇಶ ಮುನ್ನಡೆಸಿ’ ಎಂಬ ಸ್ಲೋಗನ್ ನೀಡಿ ಮುಂದುವರಿಯುತ್ತಿರುವ ಮಹಾರಾಷ್ಟ್ರದ ಬಿಜೆಪಿ ಸರಕಾರ ತನ್ನದೇ ಸರಕಾರಿ ಶಾಲೆಗಳಿಗೆ ಬೀಗ ಜಡಿಯುತ್ತಿದೆ! ಫಡ್ನವೀಸ್ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಪ್ರಯತ್ನಿಸುವ ಬದಲು ಸರಕಾರಿ ಶಾಲೆಗಳನ್ನು ಬಂದ್ ಮಾಡುವಲ್ಲಿ ಹೆಚ್ಚಿನ ಉತ್ಸಾಹವು ಕಂಡು ಬರುತ್ತದೆ. ಹೀಗಾಗಿ ಖಾಸಗಿ ಶಾಲೆಗಳ ಸಂಖ್ಯೆ ವೃದ್ಧಿಸುವಂತಾಗಲೂ ಸರಕಾರವೂ ಪರೋಕ್ಷ ಕಾರಣವಾಗಿದೆ ಎಂಬ ಟೀಕೆಗಳು ಬರುತ್ತಿವೆ.

ಮಹಾರಾಷ್ಟ್ರ ಸರಕಾರದ ಶಿಕ್ಷಣ ಇಲಾಖೆಯು ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಒಂದು ಸರ್ವೇ ನಡೆಸಿತ್ತು. ಇದರಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಸರ್ವೇಯ ಅನುಸಾರ ರಾಜ್ಯದ 5,002 ಶಾಲೆಗಳಲ್ಲಿ 10ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 4,353 ಶಾಲೆಗಳು ಜಿಲ್ಲಾ ಪರಿಷತ್ ಮತ್ತು 69 ಶಾಲೆಗಳು ಖಾಸಗಿ ಅನುದಾನಿತ ಶಾಲೆಗಳಾಗಿವೆ. ಈ ಎಲ್ಲ ಶಾಲೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆದಿವಾಸಿ ಕ್ಷೇತ್ರ, ಅನುದಾನ ರಹಿತ, ಸಾಮಾಜಿಕ ನ್ಯಾಯ ವಿಭಾಗದ 580 ಶಾಲೆಗಳಿದ್ದು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದ್ದ ಹೊರತೂ ಈ ಶಾಲೆಗಳನ್ನು ಬಂದ್ ಮಾಡುವಂತಿಲ್ಲ. ಯಾಕೆಂದರೆ ಈ ಶಾಲೆಗಳು ದೂರದೂರದಲ್ಲಿವೆ.

ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ ಹೇಳುವಂತೆ ಶಿಕ್ಷಣದ ಅಧಿಕಾರ (ರೈಟ್ ಟು ಎಜ್ಯುಕೇಶನ್) 2009ರ ಅನ್ವಯ ಯಾವ ಶಾಲೆಯಲ್ಲಿ 20ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೋ ಹಾಗೂ ಒಂದು ಕಿ.ಮೀ. ಅಂತರದಲ್ಲಿ ಮತ್ತೊಂದು ಶಾಲೆ ಇದೆಯೋ ಆಗ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆ ಬಂದ್ ಮಾಡಿ ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸಬಹುದು. ಆದರೆ ಬೆಟ್ಟ ಮತ್ತು ಅರಣ್ಯ ಪರಿಸರದ, ಆದಿವಾಸಿ ಕ್ಷೇತ್ರದಲ್ಲಿ ಒಂದು ಕಿ.ಮೀ. ಅಂತರದ ಪ್ರತ್ಯೇಕ ನಿಯಮ ಜಾರಿಯಲ್ಲಿದೆ. ಅಕ್ಟೋಬರ್ 2001ರಲ್ಲಿ ಸುಮಾರು 20 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 12ಸಾವಿರ ಶಾಲೆಗಳನ್ನು ಗುರುತಿಸಲಾಗಿತ್ತು.

ಮಹಾರಾಷ್ಟ್ರದ ಅನೇಕ ಸರಕಾರಿ ಶಾಲೆಗಳಲ್ಲಿ ಶೂನ್ಯದಿಂದ ಹಿಡಿದು 10 ವಿದ್ಯಾರ್ಥಿಗಳ ಸಂಖ್ಯೆ ಇರುವ 4,422 ಶಾಲೆಗಳಲ್ಲಿ ಸುಮಾರು 28,412 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ 1,314 ಶಾಲೆಗಳ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗಳಿಗೆ ಹಸ್ತಾಂತರಿಸಲಾಗಿದೆ. ‘‘ವಾಹನ ವ್ಯವಸ್ಥೆ ಇದ್ದ ಕ್ಷೇತ್ರಗಳಲ್ಲಿ ಕಡಿಮೆ ವಿದ್ಯಾರ್ಥಿಗಳ ಶಾಲೆಯನ್ನು ಮತ್ತೊಂದು ಶಾಲೆಗೆ ಶಿಫ್ಟ್ ಮಾಡಲಾಗುತ್ತಿದೆ. ಯಾವ ಶಾಲೆಯೂ ಬಂದ್ ಆಗೋದಿಲ್ಲ’’ ಎಂದು ವಿದ್ಯಾಮಂತ್ರಿ ವಿನೋದ್ ತಾವ್ಡೆ ಹೇಳಿದ್ದಾರೆ. ಆದರೆ 909 ಶಾಲೆಗಳ ವಿದ್ಯಾರ್ಥಿಗಳನ್ನು ಇನ್ನೊಂದು ಶಾಲೆಗೆ ಶಿಫ್ಟ್ ಮಾಡುವುದಕ್ಕೆ ಆಗುತ್ತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)