ವಿಶ್ವ ಬ್ಯಾರಿ ಸಮ್ಮೇಳನದ ಕನಸು ನನಸಾಗಿಸುವೆ: ಕರಂಬಾರು ಮುಹಮ್ಮದ್
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರಾಗಿ ಬಜ್ಪೆ ಸಮೀಪದ ಕರಂಬಾರ್ನ ಮುಹಮ್ಮದ್ ಅವರನ್ನು ನ.14ರಂದು ರಾಜ್ಯ ಸರಕಾರ ನೇಮಕಗೊಳಿಸಿದೆ. ಅವರೊಂದಿಗೆ 12 ಸದಸ್ಯರನ್ನು ಕೂಡ ಸರಕಾರ ನೇಮಿಸಿದೆ. ನ.17ರಂದು ಕರಂಬಾರ್ ಮುಹಮ್ಮದ್ ಅಧ್ಯಕ್ಷತೆಯ ಬ್ಯಾರಿ ಅಕಾಡಮಿಯ ನಾಲ್ಕನೇ ಅವಧಿಯ ತಂಡ ಅಧಿಕಾರ ವಹಿಸಿಕೊಂಡಿವೆ.
ಬಜ್ಪೆಯ ಕರಂಬಾರಿನಲ್ಲಿ ಹುಟ್ಟಿ ಬೆಳೆದ ಮುಹಮ್ಮದ್ ಪಿಯುಸಿವರೆಗೆ ಬಜ್ಪೆಯಲ್ಲೇ ವಿದ್ಯಾಭ್ಯಾಸ ಪಡೆದರು. ಬಳಿಕ ಚಿಕ್ಕಮಗಳೂರಿನಲ್ಲಿ ತನ್ನ ಬದುಕನ್ನು ಕಟ್ಟಿದ ಮುಹಮ್ಮದ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರು. ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿಯಾಗಿ, ಚಿಕ್ಕಮಗಳೂರು ತಾಲೂಕಿನ ಭೂ ಮಂಜೂರಾತಿ ಸಮಿತಿಯ ಸದಸ್ಯರಾಗಿ, ಚಿಕ್ಕಮಗಳೂರು ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿ, ಚಿಕ್ಕಮಗಳೂರು ತಾಲೂಕು ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷರಾಗಿ, ತೊಗರಿಹಂಕಲ್ ಗ್ರಾಪಂನ ಸದಸ್ಯ, ಅಧ್ಯಕ್ಷರಾಗಿ, ಬಿಂಡಿಗಾ ಮಂಡಲ ಪಂಚಾಯತ್ ಸದಸ್ಯ, ಪ್ರಧಾನರಾಗಿ, ಜಾಗರ ಜಿಪಂನ ಸದಸ್ಯ ಹಾಗೂ ಚಿಕ್ಕಮಗಳೂರು ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜಿಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬ್ಯಾರಿ ಸಮುದಾಯ ಪ್ರಪ್ರಥಮ ಜಿಪಂ ಅಧ್ಯಕ್ಷ ಎಂಬ ಖ್ಯಾತಿಯೊಂದಿಗೆ 2005ರಲ್ಲಿ ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕರಂಬಾರು ಮುಹಮ್ಮದ್ 2007ರಲ್ಲಿ ಚಿಕ್ಕಮಗಳೂರಿನಲ್ಲಿ ಜರುಗಿದ ನಾಲ್ಕನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ ಕೀರ್ತಿಯನ್ನೂ ಹೊಂದಿದ್ದಾರೆ. 2009ರಲ್ಲಿ ರಾಜ್ಯ ಸರಕಾರ ಸ್ಥಾಪಿಸಿದ್ದ ಬ್ಯಾರಿ ಸಾಹಿತ್ಯ ಅಕಾಡಮಿಯ ಪ್ರಥಮ ಅವಧಿಯ ಸದಸ್ಯರಾಗಿ ನೇಮಕಗೊಂಡಿದ್ದ ಮುಹಮ್ಮದ್ ಅವರನ್ನು ರಾಜಕೀಯ ಕಾರಣಕ್ಕಾಗಿ ಸದಸ್ಯತ್ವವನ್ನು ತೆರವುಗೊಳಿಸಿತ್ತು. ಇದೀಗ ಅಕಾಡಮಿಯ ನಾಲ್ಕನೇ ಅವಧಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಕರಂಬಾರು ಮುಹಮ್ಮದ್ ಅವರನ್ನು ‘ವಾರ್ತಾಭಾರತಿ’ ಸಂದರ್ಶಿಸಿತು.
ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರ ಬಿಚ್ಚು ನುಡಿ
ವಾ.ಭಾ.: ಕಾಂಗ್ರೆಸಿಗ ಎಂಬ ಕಾರಣಕ್ಕೆ ನಿಮ್ಮನ್ನು ಸರಕಾರ ನೇಮಿಸಿದೆ ಎಂಬ ಮಾತಿದೆ. ಒಪ್ಪಿಕೊಳ್ಳುವಿರಾ?
ಕೆ.ಮುಹಮ್ಮದ್: ಇಲ್ಲ. ಕಾಂಗ್ರೆಸಿಗ ಎಂಬ ಕಾರಣಕ್ಕಾಗಿ ನನ್ನನ್ನು ಸರಕಾರ ನೇಮಿಸಿಲ್ಲ. ನಾನೊಬ್ಬ ಬ್ಯಾರಿ ಚಳುವಳಿಯಲ್ಲಿ ತೊಡಗಿಸಿಕೊಂಡವ. 2005ರಲ್ಲಿ ಚಿಕ್ಕಮಗಳೂರಿನಲ್ಲಿ ಬ್ಯಾರಿ ಸಂಘಟನೆಯನ್ನು ಕಟ್ಟಿ ಬೆಳೆಸಿದವ. ಬ್ಯಾರಿ ಅಕಾಡಮಿಯ ಸ್ಥಾಪನೆಯ ಘೋಷಣೆ ಕೂಡ ಚಿಕ್ಕಮಗಳೂರಿನ ಮಣ್ಣಿನಲ್ಲೇ ಆಯಿತು. ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಒಡನಾಟವನ್ನು ಗಮನಿಸಿ ಸರಕಾರ ಈ ಸ್ಥಾನಕ್ಕೆ ನನ್ನನ್ನು ನೇಮಿಸಿದೆ ಎಂದು ನಾನು ಭಾವಿಸುತ್ತೇನೆ.
ವಾ.ಭಾ.: ರಾಜಕೀಯ ಕಾರಣಕ್ಕಾಗಿಯೇಮೊದಲ ಅವಧಿಯಲ್ಲಿ ಸದಸ್ಯರಾಗಿದ್ದ ನಿಮ್ಮನ್ನು ಅಂದಿನ ಸರಕಾರ ಸದಸ್ಯತ್ವದಿಂದ ಮುಕ್ತಗೊಳಿಸಿತು. ಈಗ ಮತ್ತೆ ಅಕಾಡಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದೀರಿ. ಏನನ್ನಿಸುತ್ತೆ?
ಕೆ.ಮುಹಮ್ಮದ್: ರಾಜಕೀಯ ಕಾರಣ ಕ್ಕಾಗಿ ನನ್ನನ್ನು ಅಂದಿನ ಸರಕಾರ ಸದಸ್ಯತ್ವದಿಂದ ಮುಕ್ತಗೊಳಿಸಿರ ಬಹುದು. ಅದನ್ನೆಲ್ಲಾ ನಾನು ಮನಸ್ಸಿಗೆ ಹಚ್ಚಿಕೊಂಡಿಲ್ಲ. ಹಾಲಿ ಸರಕಾರ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ನೇಮಿಸಿದೆ. ಅರ್ಹ ಸದಸ್ಯರನ್ನು ಒಳಗೊಂಡ ತಂಡ ವೊಂದನ್ನು ಕೊಟ್ಟಿದೆ. ಎಲ್ಲ ಸದಸ್ಯರ ಮತ್ತು ಬ್ಯಾರಿ ಸಮುದಾಯದ ಎಲ್ಲ ಕ್ಷೇತ್ರಗಳ ಸಾಧಕರ ಜೊತೆಗೂಡಿಕೊಂಡು ಕೆಲಸ ಮಾಡಲು ಮುಂದಾಗಿದ್ದೇನೆ.
ವಾ.ಭಾ.: ಅಕಾಡಮಿ ಅಸ್ತಿತ್ವಕ್ಕೆ ಬಂದು 10 ವರ್ಷಗಳಾಯಿತು. ತಾವು ನಾಲ್ಕನೇ ಅವಧಿಯ ಅಧ್ಯಕ್ಷರು. ಅಕಾಡಮಿಯ ಸ್ಥಾಪನೆಯ ಉದ್ದೇಶ ಈಡೇರಿದೆ ಎಂದು ನಿಮಗೆ ಅನಿಸುತ್ತಿದೆಯೇ?
ಕೆ.ಮುಹಮ್ಮದ್: ಕಳೆದ ಮೂರು ಅವಧಿಯ ಅಧ್ಯಕ್ಷರು ಅವರವರ ದೃಷ್ಟಿಕೋನಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದಾರೆ. ಈ ಅಧ್ಯಕ್ಷರು ಹಾಕಿಕೊಂಡ ಉತ್ತಮ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಸರಕಾರ ಯಾವ ಉದ್ದೇಶಕ್ಕಾಗಿ ಅಕಾಡಮಿಯನ್ನು ಸ್ಥಾಪಿಸಿದೆಯೋ ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ. ಬ್ಯಾರಿಗಳಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ.
ವಾ.ಭಾ.: ನಿಮ್ಮ ಅವಧಿಯಲ್ಲಿ ಕೈಗೆತ್ತಿಕೊಳ್ಳುವ ಮುಖ್ಯ ಯೋಜನೆ ಏನು?
ಕೆ.ಮುಹಮ್ಮದ್: ನಿಕಟಪೂರ್ವ ಅಧ್ಯಕ್ಷರು ಬ್ಯಾರಿ ಸಾಹಿತ್ಯ ಭವನ ನಿರ್ಮಾಣ ಮತ್ತು ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಯೋಜನೆ ರೂಪಿಸಿದ್ದಾರೆ. ಸಂಬಂಧಪಟ್ಟವರನ್ನು ಕಂಡು ಮೊದಲು ಆ ಎರಡು ಯೋಜನೆಗಳಿಗೆ ವೇಗ ನೀಡಲು ಪ್ರಯತ್ನಿಸುತ್ತೇನೆ.
ವಾ.ಭಾ.: ಅಕಾಡಮಿ ಸ್ಥಾಪನೆಯ ಬಳಿಕ ಬ್ಯಾರಿ ಸಾಹಿತ್ಯ ಸಮ್ಮೇಳನ ಸಂಘಟಿಸುವುದನ್ನು ಚಳವಳಿಯ ನಾಯಕರು ಮರೆತಂತಿವೆ. ಅಲ್ಲವೇ?
ಕೆ.ಮುಹಮ್ಮದ್: ಹಾಗೇನಿಲ್ಲ. 2007ರಲ್ಲಿ ನಾಲ್ಕನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಆಗಿದೆ. ಬಳಿಕ ಆಗಿಲ್ಲ ನಿಜ. ನನ್ನ ಅವಧಿಯಲ್ಲಿ ಐದನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಮತ್ತು ವಿಶ್ವ ಬ್ಯಾರಿ ಸಮ್ಮೇಳನ ನಡೆಸಬೇಕು ಎಂಬ ಉದ್ದೇಶವಿದೆ.
ವಾ.ಭಾ.: ಅಕಾಡಮಿಯ ಕಚೇರಿಯಲ್ಲಿ ಬ್ಯಾರಿ ಕೃತಿಗಳ ಸಾವಿರಾರು ಪ್ರತಿಗಳು ಧೂಳು ತಿನ್ನುತ್ತಿವೆ. ಅವುಗಳನ್ನು ಓದುಗರ ಕೈ ತಲುಪಿಸುವುದಿಲ್ಲವೇ?
ಕೆ.ಮುಹಮ್ಮದ್: ಹೌದು, ಕಳೆದ ಮೂರು ಅವಧಿಗಳಲ್ಲಿ ಪ್ರಕಟಿಸಲಾದ ಕೃತಿಗಳ ಸಾವಿರಾರು ಪ್ರತಿಗಳು ಇಲ್ಲೇ ಇವೆೆ. ರಾಜ್ಯದ ಎಲ್ಲ ಗ್ರಂಥಾಲಯಗಳು ವಿಶೇಷ ಯೋಜನೆಯಡಿ ಮತ್ತು ಬ್ಯಾರಿಗಳು ಅಧಿಕ ಸಂಖ್ಯೆಯಲ್ಲಿರುವ ಶಾಲಾ-ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಪ್ರಯತ್ನಿಸುತ್ತೇನೆ.ಅದಲ್ಲದೆ ಎಲ್ಲ ಮುಸ್ಲಿ ಶಿಕ್ಷಣ ಸಂಸ್ಥೆಗಳು ಕೂಡ ಕೃತಿಗಳನ್ನು ಖರೀದಿಸುವಂತೆ ಕೋರಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ಪತ್ರ ಬರೆಯಲಾಗುವುದು. ಜೊತೆಗೆ ಅಲ್ಲಲ್ಲಿ ನಡೆಯುವ ಬೃಹತ್ ಸಮ್ಮೇಳನ, ಉತ್ಸವ ಕಾರ್ಯಕ್ರಮದಲ್ಲೂ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.
ವಾ.ಭಾ.: ಕೇವಲ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮಾತ್ರ ಅಕಾಡಮಿಯ ಕೆಲಸವೇ?
ಕೆ.ಮುಹಮ್ಮದ್: ಕಾರ್ಯಕ್ರಮಗಳ ಜೊತೆಗೆ ಭಾಷೆ, ಸಂಸ್ಕೃತಿ, ಜನಾಂಗಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ಅರ್ಹರಿಗೆ ಜವಾಬ್ದಾರಿ ವಹಿಸಿ ಕೊಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಿಂದ ಭಾಷೆಗೆ ಸಂಬಂಧಿಸಿ ಕಮ್ಮಟ, ಸಂಶೋಧನಾ ಕೃತಿಗಳ ಪ್ರಕಟನೆಗೆ ಆದ್ಯತೆ ನೀಡಲಾಗುವುದು.
ವಾ.ಭಾ.: ಅಕಾಡಮಿಯ ಕಾರ್ಯಕ್ರಮಕ್ಕೆ ಆಮಂತ್ರಿತರನ್ನೇ ಮತ್ತೆ ಮತ್ತೆ ಕರೆದು ಪುನರಾವರ್ತಿಸಲಾಗುತ್ತದೆ ಎಂಬ ಮಾತಿದೆ. ಅದಲ್ಲದೆ ವಿದೇಶದಲ್ಲಿ ನೆಲೆಸಿರುವ ಸಾಧಕ ಬ್ಯಾರಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸದೆ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪವಿದೆ. ಇದಕ್ಕೇನಂತೀರಿ?
ಕೆ.ಮುಹಮ್ಮದ್: ಇದೊಂದು ಸರಕಾರಿ ಅಧೀನದ ಸಂಸ್ಥೆಯಾದ ಕಾರಣ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮ ನಡೆಯುವ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿದೇಶದಲ್ಲಿ ನೆಲೆಸಿರುವ ಸಾಧಕ ಬ್ಯಾರಿಗಳಲ್ಲದೆ ಎಲ್ಲರನ್ನೂ ಅವರವರ ಅರ್ಹತೆಗೆ ತಕ್ಕಂತೆ ಆಹ್ವಾನಿಸುವೆ.
ವಾ.ಭಾ.: ಅಕಾಡಮಿಯ ಕಾರ್ಯಕ್ರಮ ಗಳನ್ನು ತಾವೂ ಕೂಡ ನಗರ ಕೇಂದ್ರಿತಗೊಳಿಸುವಿರಾ?
ಕೆ.ಮುಹಮ್ಮದ್: ಬ್ಯಾರಿ ಭಾಷೆ, ಸಂಸ್ಕೃತಿ, ಕಲೆ ಉಳಿದಿರುವುದು ನಗರದಲ್ಲಿ ಅಲ್ಲ. ಇಂದಿಗೂ ಹಳ್ಳಿಗಳಲ್ಲಿ ‘ಬ್ಯಾರಿ’ ಜೀವಂತವಾ ಗಿದೆ. ಹಾಗಾಗಿ ಅಕಾಡಮಿಯನ್ನು ಹಳ್ಳಿಗಳತ್ತ ಕೊಂಡೊಯ್ಯುವೆ. ಅದಕ್ಕೆ ಪೂರಕವಾಗಿ ಪ್ರತಿಯೊಂದು ಹಳ್ಳಿ, ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಬ್ಯಾರಿ ಸಂಘಟನೆಗಳು ಜನ್ಮ ತಾಳಬೇಕು, ಸಕ್ರಿಯವಾಗಬೇಕು. ಇದರಿಂದ ಅಕಾಡಮಿಗೆ ಜನರನ್ನು ತಲುಪಲು ಸುಲಭವಾಗಲಿದೆ.