ವಸು ಮಳಲಿಯವರ ಒಡಲ ಬೆಂಕಿ
ಈ ಹೊತ್ತಿನ ಹೊತ್ತಿಗೆ
ಇತ್ತೀಚೆಗೆ ನಿಧನರಾಗಿರುವ ಡಾ. ವಸು ಮಳಲಿ ಅವರ ‘ಒಡಲ ಬೆಂಕಿ ಆರದಿರಲಿ-ಕಳ್ಳು ಬಳ್ಳಿ ಬರಹಗಳು’ ಸದ್ಯದ ರಾಜಕೀಯ ಸಂದರ್ಭಕ್ಕೆ ಸ್ಪಂದಿಸುವ ಶಕ್ತಿಯನ್ನು ಒಡಗೂಡಿಸಿಕೊಂಡಿದೆ. 30ಕ್ಕೂ ಅಧಿಕ ಲೇಖನಗಳನ್ನು ಒಳಗೊಂಡ ಈ ಕೃತಿ, ಮೂಲ ನಿವಾಸಿಗಳು, ಬುಡಕಟ್ಟು ಜನರು, ರಾಷ್ಟ್ರೀಯತೆಯ ಸೋಗು, ಭಾಷಾ ಮಾಧ್ಯಮ, ಬುದ್ಧ, ಬ್ರಾಹ್ಮಣೀಕರಣದ ಭ್ರಮೆಯೊಡ್ಡುವ ಹಳಗನ್ನಡ, ಪುರಾಣದೊಳಗಿನ ಚರಿತ್ರೆಯ ಹೂರಣ, ಮಹಾಕಾವ್ಯಗಳ ಬಹುಮುಖಿ ಜಗತ್ತು, ಅಂಬೇಡ್ಕರ್, ಮಾರ್ಕ್ಸ್‌ವಾದ, ಹಾಲಿವುಡ್, ಕೆಂಪು ದೀಪ, ಮಲ ಹೊರುವ ಪದ್ಧತಿ ಹೀಗೆ ಪುರಾಣ, ಚರಿತ್ರೆ, ವರ್ತಮಾನಗಳ ಬೇರೆ ೇರೆ ನೆಲೆಗಳನ್ನು ಚರ್ಚಿಸುತ್ತದೆ.
ವಸಾಹತುಶಾಹಿ ಬೆನ್ನಿಗೆ ಅಂಟಿಬಂದ ನಾಗರಿಕತೆಯ ಕುರುಡು ಅಹಂ ಕಾಡುಗಳನ್ನು, ಪ್ರಾಣಿಪಕ್ಷಿಗಳನ್ನು ಮಾತ್ರವಲ್ಲ ಸಾವಿರಾರು ಮಾನವ ಸಂಸ್ಕೃತಿಗಳನ್ನು ಹೊಸಕಿ ಹಾಕಿರುವ ಬರ್ಬರತೆಯನ್ನು ‘ನೆಲದವ್ವನ ಬೆಚ್ಚಗಿನ ಮಡಿಲ ಮಾರಲಾರೆ’ ಲೇಖನದಲ್ಲಿ ವಿವರಿಸುತ್ತಾರೆ. ‘ಕೇಳಬಾರದ ಕಥೆಯ ಕಟ್ಟಬಾರದು’ ಲೇಖನದಲ್ಲಿ ಹಿಟ್ಲರ್‌ನ ಭಾಷಣವನ್ನು ಮುಂದಿಟ್ಟು, ಹೇಗೆ ರಾಷ್ಟ್ರೀಯವಾದ ಸರ್ವಾಧಿಕಾರಿಯಾಗಬಲ್ಲ ವ್ಯಕ್ತಿಯನ್ನು ಧೀರೋದಾತ್ತ ನಾಯಕನಾಗಿ ಮೆರೆಸುತ್ತದೆ ಎನ್ನುವುದನ್ನು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಅಮೆರಿಕ ಎನ್ನುವ ದೊಡ್ಡ ಶಕ್ತಿ ಭಾರತವನ್ನು ನಿಯಂತ್ರಿಸುತ್ತಿರುವ ಬಗೆಯನ್ನೂ, ಭಾರತದ ಕುರಿತಂತೆ ಅದರ ದ್ವಂದ್ವ ನಿಲುವನ್ನೂ ಅವರು ಚರ್ಚಿಸುತ್ತಾರೆ. ಒಂದು ಕಡೆ ಸರ್ವಾಧಿಕಾರವನ್ನು ಪೋಷಿಸುತ್ತಾ, ತನಗೆ ವಿರುದ್ಧವಾಗಿ ನಿಂತಾಗ ಅದೇ ಸರ್ವಾಧಿಕಾರದ ಹೆಸರಲ್ಲಿ ವಿರೋಧಿಸುತ್ತಾ ರಾಜಕೀಯ ನಡೆಸುವ ಅಮೆರಿಕದ ಸಂಚುಗಳನ್ನು ಅವರು ಈ ಲೇಖನದಲ್ಲಿ ಎತ್ತಿ ಹಿಡಿಯುತ್ತಾರೆ. ಭಾರತದೊಳಗಿನ ಫ್ಯಾಶಿಸಂನ್ನು ಅಮೆರಿಕ ಪರೋಕ್ಷವಾಗಿ ಪೋಷಿಸುತ್ತಿರುವ ಅಂಶದ ಕಡೆಗೂ ಅವರು ಗಮನ ಸೆಳೆಯುತ್ತಾರೆ. ಸಂಸ್ಕೃತಿ ಸಾಮರಸ್ಯದ ಕುರಿತಂತೆ ಬರೆಯುತ್ತಾ, ನಮ್ಮ ಶಿಕ್ಷಣ ವ್ಯವಸ್ಥೆ ಈ ಸಾಂಸ್ಕೃತಿಕ ಸಾಮರಸ್ಯವನ್ನು ಮರೆಮಾಚುವ ಪ್ರಯತ್ನವನ್ನು ಹೇಗೆ ಮಾಡುತ್ತಿದೆ ಎನ್ನುವುದನ್ನು ಹೇಳುತ್ತಾರೆ. ಕಳೆದೆರಡು ಶತಮಾನಗಳಲ್ಲಿ ಸಂಸ್ಕೃತಿ ಕಲ್ಪನೆಯೇ ಅರಿವಳಿಕೆಯಾಗಿ ಕೆಲಸ ಮಾಡಿರುವಾಗ, ರಾಜ್ಯ ಸರಕಾರ ನಿರೂಪಿಸಲು ಹೊರಟಿರುವ ‘ಸಾಂಸ್ಕೃತಿಕ ನೀತಿ’ ಬಗ್ಗೆ ಅವರು ಆತಂಕ ವ್ಯಕ್ತಪಡಿಸುತ್ತಾರೆ. ಭಾಷಾ ಮಾಧ್ಯಮದ ಕುರಿತಂತೆ ಚರ್ಚಿಸುತ್ತಾ ಶಿಕ್ಷಣದ ಖಾಸಗೀಕರಣ ಹೇಗೆ ಭಾಷೆ ಎನ್ನುವುದು ಬಂಡವಾಳಗಾರ ಕೊಂಡು ಮಾರುವ ಸರಕಾಗಿದೆ ಎನ್ನುವುದನ್ನು ಹೇಳುತ್ತಾರೆ. ‘ಕನ್ನಡಿಗರಿಗೆ ಬೇಡವಾದನೇ ಬುದ್ಧ’ ಲೇಖನದಲ್ಲಿ ಬುದ್ಧ ಯಾಕೆ ಕನ್ನಡದಲ್ಲಿ ನೆಲೆ ನಿಲ್ಲಲಿಲ್ಲ ಎನ್ನುವ ಇತಿಹಾಸದ ಬೇರುಗಳನ್ನು ಬೆನ್ನು ಹತ್ತುತ್ತಾರೆ. ವಿಷಯವೊಂದರ ಆಳ ಬಗೆಯುತ್ತಾ ಅಂತಿಮದಲ್ಲದು ಜನಪದರ ಬದುಕಿನತ್ತ ಚಲಿಸಿ ಲಿಖಿತ ಚರಿತ್ರೆಯಿಂದ ದೂರ ಉಳಿದುಕೊಂಡ ಸಂಗತಿಗಳನ್ನೆಲ್ಲ ಮೊಗೆಯುವ ಶಕ್ತಿ ವಸು ಮಳಲಿ ಅವರ ಬರಹಗಳಿಗಿದೆ.
ಚಿಂತನ ಪುಸ್ತಕ ಹೊರತಂದಿರುವ ಕೃತಿಯ ಒಟ್ಟು ಪುಟಗಳು 194. ಮುಖ ಬೆಲೆ 140 ರೂಪಾಯಿ. ಆಸಕ್ತರು 99022 49150 ದೂರವಾಣಿಯನ್ನು ಸಂಪರ್ಕಿಸಬಹುದು.