ಸ್ವಾಗತಾರ್ಹ ನಿರ್ಧಾರ
ಮಾನ್ಯರೇ,
ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕಕ್ಕೆ ಮೂಗುದಾರ ಹಾಕಲು ಹೊರಟಂತೆ ಖಾಸಗಿ ಶಾಲೆಗಳ ಶುಲ್ಕದ ಮೇಲೂ ಸರಕಾರ ಕಣ್ಣಿರಿಸಿದ್ದು, ಹೆಚ್ಚಿನ ಖಾಸಗಿ ಶಾಲೆಗಳ ಅನಿಯಮಿತ ಶುಲ್ಕಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಸರಕಾರ ಮುಂದಿನ ವರ್ಷದಿಂದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶುಲ್ಕ ಪಟ್ಟಿ ಪ್ರಕಟಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶೀಘ್ರವೇ ನಿಯಮ ಜಾರಿಗೆ ತರಬೇಕು. ಈ ಕುರಿತಾದ ಕಾಯ್ದೆಗೆ ತಿದ್ದುಪಡಿ ತಂದು ನೂತನ ನಿಯಮಾವಳಿಯನ್ನು ಹೊಸ ವರ್ಷದಲ್ಲಿ ಜಾರಿಗೆ ತರಬೇಕು. ಈ ಮೂಲಕ ಬೇಕಾಬಿಟ್ಟಿ ಸರ್ವಾಧಿಕಾರಿ ಕ್ರಮದ ಮೂಲಕ ಫೀಸು ತೆಗೆದುಕೊಳ್ಳುವ ಖಾಸಗಿ ಶಾಲೆಗಳಿಗೆ ಮೂಗುದಾರ ತೊಡಿಸಬೇಕು. ಹೀಗಾದರೆ ಮಾತ್ರ ಶಿಕ್ಷಣ ಉಳ್ಳವರ ಸೊತ್ತಾಗುವುದನ್ನು ತಪ್ಪಿಸಬಹುದು. ಎಲ್ಲರಿಗೂ ಸಮಾನ ಶಿಕ್ಷಣ ಪಡೆಯುವ ಅವಕಾಶ ಸಿಗಬಹುದು. ಒಂದೊಮ್ಮೆ ಖಾಸಗಿ ಶಾಲೆಗಳು ಸರಕಾರಿ ನಿಯಮದಂತೆ ಫೀಸು ನಿಗದಿ ಮಾಡದಿದ್ದರೆ ಅಥವಾ ಶಾಲೆಯ ಸೂಚನಾ ಫಲಕದಲ್ಲಿ ಶುಲ್ಕದ ವಿವರ ಹಾಕದಿದ್ದರೆ ಅಂತಹವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.