ಬಿತ್ತುವ ವರ್ತನೆಗಳ ಬೆಳೆ
ಬೆಳೆಯುವ ಪೈರು
ಭಾಗ 2
ಒಂದು ಮಗುವಿನ ವರ್ತನೆಯ ಮಾದರಿಯನ್ನು ಅದರ ಸಂವಹನದ ಮುಖೇನ ಗುರುತಿಸಬಹುದು. ಅದು ಯಾವ ರೀತಿ ಸಂವಹನ ಮಾಡುತ್ತದೆ? ಅದಕ್ಕೆ ಎಷ್ಟರಮಟ್ಟಿಗೆ ಸಂವಹನ ಸಾಮರ್ಥ್ಯವಿದೆ? ಅದಕ್ಕೆ ಎಷ್ಟರಮಟ್ಟಿಗೆ ಕೇಳಿಸಿಕೊಳ್ಳುವಂತಹ ಸಾಮರ್ಥ್ಯವಿದೆ? ತನ್ನ ಸಂವಹನಕ್ಕೆ ಬಲ ಕೊಡುವ ಅಥವಾ ಸಮರ್ಪಕವಾಗಿ ಮಾಡಲು ಸಾಧ್ಯವಾಗುವ ಪದ ಸಂಪತ್ತು ಅಥವಾ ಶಬ್ದ ಭಂಡಾರ ಎಷ್ಟರ ಮಟ್ಟಿಗಿದೆ; ಈ ಎಲ್ಲವೂ ಮಗುವಿನ ವರ್ತನೆಯ ಮಾದರಿಯನ್ನು ಪರೀಕ್ಷಿಸಲು ನೆರವಾಗುತ್ತವೆ. ನೆನಪಿಡಿ, ಈ ವರ್ತನೆಗಳ ಮಾದರಿಗಳು ಉತ್ಪನ್ನವಾಗುವುದು ಪೋಷಕರ ಅಥವಾ ಕುಟುಂಬದ ತೀರಾ ನಿಕಟವರ್ತಿಗಳ ಪ್ರತಿಕ್ರಿಯೆಗಳಿಂದ.
►ನೋಡುವುದನ್ನೇ ಮಾಡುವುದು
ಮಕ್ಕಳ ವರ್ತನೆಗಳನ್ನು ರೂಪಿಸುವುದು ಅವರು ಸಾಕ್ಷೀಕರಿಸುವ ವರ್ತನೆಗಳೇ ಆಗಿರುತ್ತವೆ. ಮಕ್ಕಳು ಯಾಕೆ ಹೀಗೆ ವರ್ತಿಸುತ್ತವೆ ಎಂದು ಕಾರಣವನ್ನು ಅವರಲ್ಲಿ ಹುಡುಕಲು ಹೋಗಬೇಡಿ. ಏಕೆಂದರೆ ಯಾರದೋ ವರ್ತನೆಗಳ ಪರಿಣಾಮ ಮಾತ್ರವಷ್ಟೇ ಅವರಲ್ಲಿ ನೀವು ಕಾಣುತ್ತಿರುತ್ತೀರಿ. ವಾಸ್ತವವಾಗಿ, ಅವರ ಪರಿಸರದಲ್ಲಿ ಕಾಣ ಸಿಗುವ ವರ್ತನೆಗಳ ಮಾದರಿಗಳ ಸರಣಿಯೇ ಅವರಲ್ಲಿ ಮುಂದುವರಿದಿರುತ್ತವೆ. ಯಾವುದೇ ಮಗುವಿನ ವರ್ತನೆಯು ಅನಾರೋಗ್ಯಕರವಾಗಿದೆ ಮತ್ತು ಅನಪೇಕ್ಷಿತವಾಗಿದೆ ಎಂದರೆ ಅದು ಯಾವುದರ ಪ್ರಭಾವದಿಂದ ಹಾಗಾಗಿದೆ ಎಂದು ಮೂಲವನ್ನು ಹುಡುಕಬೇಕು. ಮಕ್ಕಳಲ್ಲಿ ವರ್ತನೆಗಳು ರೂಪುಗೊಳ್ಳಲು ಹಲವಾರು ಕಾರಣಗಳು ಇರುತ್ತವೆ. ಜೈವಿಕವಾದ ಅಂಶಗಳು, ಸಾಂಸ್ಕೃತಿಕ, ಸಾಂಸ್ಥಿಕ ಮತ್ತು ವ್ಯಕ್ತಿಗತವಾದಂತಹ ರೀತಿ ನೀತಿಗಳು; ಎಲ್ಲವೂ ಕಾರಣಗಳಾಗಿ ಒದಗಿರುತ್ತವೆ. ಅವುಗಳಲ್ಲಿ ಕೆಲವು ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಕೆಲವು ಕಡಿಮೆ ಪ್ರಭಾವಶಾಲಿಯಾಗಿರುತ್ತವೆಯಾದರೂ ಗುಪ್ತಗಾಮಿನಿಯಾಗಿರುವ ಸಾಧ್ಯತೆಗಳಂತೂ ಬಹಳ ಹೆಚ್ಚು.
ಒಟ್ಟಾರೆ ಒಂದು ಮಗುವಿನ ಸದ್ಯದ ವರ್ತನೆಯು ಕೌಟುಂಬಿಕ ಮತ್ತು ಸಾಮಾಜಿಕ ಪರಿಸರದಿಂದ ಎರವಲು ಪಡೆದಿದ್ದು, ಅದರ ಬಗ್ಗೆ ಯಾವುದೇ ಪರಾಮರ್ಶನ ಮಾಡಲು ಸಾಧ್ಯವಿರದಂತಹ ಮಗುವು ಅದನ್ನೇ ಪುನರಾವರ್ತಿತವಾಗಿಸಿಕೊಂಡು ತನ್ನದಾಗಿಸಿಕೊಳ್ಳುತ್ತದೆ. ಮಗುವಿನಲ್ಲಿ ಇಂತಹ ವರ್ತನೆಗಳ ಮಾದರಿಗಳನ್ನು ಗ್ರಹಿಸುತ್ತವೆ ಮತ್ತು ಕಲಿಯುತ್ತವೆ. ಈ ಗ್ರಹಿಕೆ ಮತ್ತು ಕಲಿಕೆಗಳೆರಡೂ ಅವರ ಐಚ್ಛಿಕವೇನಲ್ಲ. ಅಂತಹ ವರ್ತನೆಗಳು ಏಳೆಂಟು ವರ್ಷಗಳ ಹೊತ್ತಿಗೆ ಅವರ ಸ್ವಂತಿಕೆಯನ್ನು ಪಡೆದುಕೊಂಡಿರುತ್ತವೆ. ಹತ್ತು ಹನ್ನೆರಡು ವರ್ಷಗಳ ಹೊತ್ತಿಗೆ ಸಂಪೂರ್ಣವಾಗಿ ಅವರದೇ ಆಗಿಬಿಟ್ಟಿರುತ್ತದೆ. ಇನ್ನು ಮುಂದಿನ ವರ್ಷಗಳಲ್ಲಿ ಅದು ಬಲಿಯುತ್ತಾ ಹೋಗುವುದಷ್ಟೇ ಆಗಿರುತ್ತದೆ. ಆದರೆ ಯಾವುದೇ ರೀತಿಯ ವರ್ತನೆಯು ಬದಲಾಗಲು ಸಾಧ್ಯವಿದೆ. ಆಯಾ ವ್ಯಕ್ತಿಯು ತಾನೇ ಆಗಲಿ, ಅಥವಾ ಇನ್ನಾದರೂ ಗುರುತಿಸುವುದರ ಮೂಲಕವಾಗಲಿ ತನ್ನ ವರ್ತನೆಯ ಮಾದರಿಯನ್ನು ಕಂಡುಕೊಂಡು ಅದು ಅಪೇಕ್ಷಿತವೋ, ಅನಪೇಕ್ಷಿತವೋ ಎಂದು ಮನವರಿಕೆ ಮಾಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ತನ್ನ ತಾನೇ ತಿಳಿದುಕೊಂಡು, ತಿದ್ದಿಕೊಳ್ಳುವಂತಹ ಎಲ್ಲಾ ಸಾಧ್ಯತೆ ಗಳಿರುತ್ತವೆ. ಇದು ಸಾಧ್ಯವಾಗುವುದು ಮನವರಿಕೆಯಿಂದ ಮಾತ್ರ.
►ಸಂವಹನದ ರೀತಿ ವರ್ತನೆಗಳ ಪ್ರತಿಫಲನ
ಒಂದು ಮಗುವಿನ ವರ್ತನೆಯ ಮಾದರಿಯನ್ನು ಅದರ ಸಂವಹನದ ಮುಖೇನ ಗುರುತಿಸಬಹುದು. ಅದು ಯಾವ ರೀತಿ ಸಂವಹನ ಮಾಡುತ್ತದೆ? ಅದಕ್ಕೆ ಎಷ್ಟರಮಟ್ಟಿಗೆ ಸಂವಹನ ಸಾಮರ್ಥ್ಯವಿದೆ? ಅದಕ್ಕೆ ಎಷ್ಟರಮಟ್ಟಿಗೆ ಕೇಳಿಸಿಕೊಳ್ಳುವಂತಹ ಸಾಮರ್ಥ್ಯವಿದೆ? ತನ್ನ ಸಂವಹನಕ್ಕೆ ಬಲ ಕೊಡುವ ಅಥವಾ ಸಮರ್ಪಕವಾಗಿ ಮಾಡಲು ಸಾಧ್ಯವಾಗುವ ಪದ ಸಂಪತ್ತು ಅಥವಾ ಶಬ್ದ ಭಂಡಾರ ಎಷ್ಟರ ಮಟ್ಟಿಗಿದೆ; ಈ ಎಲ್ಲವೂ ಕೂಡ ಮಗುವಿನ ವರ್ತನೆಯ ಮಾದರಿಯನ್ನು ಪರೀಕ್ಷಿಸಲು ನೆರವಾಗುತ್ತದೆ. ನೆನಪಿಡಿ, ಈ ವರ್ತನೆಗಳ ಮಾದರಿಗಳು ಉತ್ಪನ್ನವಾಗುವುದು ಪೋಷಕರ ಅಥವಾ ಕುಟುಂಬದ ತೀರಾ ನಿಕಟವರ್ತಿಗಳ ಪ್ರತಿಕ್ರಿಯೆಗಳಿಂದ. ಮಗುವಿನ ಕುಟುಂಬದ ನಿಕಟವರ್ತಿಗಳು ಕೊಡುವ ಪ್ರತಿಕ್ರಿಯೆಗಳ ಮತ್ತು ಸಂವಹನದ ಗುಣಮಟ್ಟವು ಮಗುವಿನ ವರ್ತನೆಯ ಗುಣಮಟ್ಟವನ್ನು ನಿರ್ಧರಿಸುತ್ತದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ತನ್ನದೇ ಸಮಾಜದ ಇತರರ ವರ್ತನೆಗಳ ಮಾದರಿಯನ್ನು ಕಂಡುಕೊಳ್ಳುವ ಮತ್ತು ಅನುಸರಿಸಲು ಯತ್ನಿಸುವ ಮಟ್ಟಿಗೆ ಮಗುವು ಬೌದ್ಧಿಕವಾಗಿ ತೆರೆದುಕೊಂಡಿರುವುದಿಲ್ಲ. ಹಾಗಾಗಿ, ಪೋಷಕರು ಅತೀ ಹೆಚ್ಚಿನ ಎಚ್ಚರಿಕೆಯಿಂದ ತಮ್ಮ ವರ್ತನೆಗಳ ಮಾದರಿಯನ್ನು ಕಾಯ್ದುಕೊಳ್ಳಲೇಬೇಕು.
ಈಗ ಮಗುವೊಂದು ತಾನೇ ಯಾವುದೋ ಒಂದು ವರ್ತನೆಯನ್ನು ತೋರಿತೆಂದಿಟ್ಟುಕೊಳ್ಳೋಣ. ಆ ವರ್ತನೆಗೆ ಸಿಗುವಂತಹ ಪ್ರತಿಕ್ರಿಯೆಯ ಮೇಲೆ ತನ್ನ ಅದೇ ಬಗೆಯ ವರ್ತನೆಯನ್ನು ಮುಂದುವರಿಸುವುದು, ಒತ್ತರಿಸಿಕೊಳ್ಳುವುದು, ವಿಸ್ತಾರಗೊಳಿಸಿಕೊಳ್ಳುವುದು; ಎಲ್ಲಾ ಅವಲಂಬಿತವಾಗಿರುತ್ತದೆ. ತನ್ನ ವರ್ತನೆಯ ಬಗ್ಗೆ ಅದಕ್ಕೆ ಸಿಗುವ ಮೊದಲ ವಿಮರ್ಶೆ ಪೋಷಕರಿಂದಲೇ ಆಗಿರುತ್ತದೆ. ಆ ವಿಮರ್ಶೆಯಿಂದಲೇ ಅದರ ವರ್ತನೆಗಳು ತುಷ್ಟಿಗೊಳ್ಳುವುದು ಅಥವಾ ಬಲಹೀನವಾಗುವುದು. ಅವರಿಗೆ ತಮ್ಮ ವರ್ತನೆಗಳು ಮತ್ತು ಇತರರ ವರ್ತನೆಗಳಿಗೂ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಾಗುವುದೂ ಕೂಡ ತಮ್ಮ ವರ್ತನೆಗಳ ಬಗ್ಗೆ ಸಿಗುವ ವಿಮರ್ಶೆಯಿಂದಲೇ.
►ಶಿಸ್ತಿನ ವರ್ತನೆಗಳು
ಇನ್ನು ಶಾಲೆಗಳಲ್ಲಿ ಶಿಕ್ಷಕರು ವರ್ತನಾಶಾಸ್ತ್ರವನ್ನು ತಿಳಿದು ಕೊಳ್ಳದಿದ್ದರಂತೂ ಮಕ್ಕಳಿಗೆ ಬಹಳ ಸಮಸ್ಯೆಯಾಗುತ್ತದೆ. ಏಕೆಂದರೆ, ಒಂದೊಂದು ಮಗುವೂ ಭಿನ್ನವಾದಂತಹ ಕುಟುಂಬ, ಸಂಸ್ಕೃತಿ, ಸಮುದಾಯ; ಹೀಗೆ ಹಲವು ವೈವಿಧ್ಯಮಯವಾದಂತಹ ಹಿನ್ನೆಲೆಗಳಿಂದ ಬಂದಿರುತ್ತವೆ. ಸ್ಥೂಲವಾಗಿ ಎಲ್ಲರನ್ನೂ ಶಿಸ್ತಿಗೆ ಒಳಪಡಿಸಬಹುದು. ಆದರೆ, ಮಾನಸಿಕವಾದಂತಹ ಶಿಸ್ತು ಮತ್ತು ತಿಳುವಳಿಕೆಯನ್ನು ಈ ಸ್ಥೂಲವಾದ ಅಥವಾ ಬಾಹ್ಯ ಶಿಸ್ತುಗಳಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಬದಲಾಗಿ ಒಂದು ರೀತಿಯ ತೋರಿಕೆಯ ಶಿಸ್ತನ್ನು ಹೊಂದಿರುತ್ತಾರೆ. ಅದನ್ನು ಹೊಂದಿರುವಂತಹ ವರ್ತನೆಯನ್ನು ತೋರಿದರೆ ತಮಗೆ ಸಿಗುವಂತಹ ಪ್ರತಿಕ್ರಿಯೆ ಏನೆಂದು ತಿಳಿದಿರುವ ಕಾರಣದಿಂದ ಅಪೇಕ್ಷಿತ ಪ್ರತಿಕ್ರಿಯೆಯ ಅಂದಾಜಿನಿಂದ ತಮ್ಮ ವರ್ತನೆಯನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಅದು ಅಲ್ಪ ಕಾಲಕ್ಕೆ ಮಾತ್ರವೇ ಆಗಿರುತ್ತದೆ. ದೀರ್ಘಕಾಲ ಮಕ್ಕಳಿಗೆ ಅದನ್ನು ಸಮದೂಗಿಸಿಕೊಂಡು ಬರಲು ಆಗುವುದಿಲ್ಲ. ಉದಾಹರಣೆಗೆ ಶಾಲೆಯಲ್ಲಿ ಶಿಸ್ತಾಗಿ ವರ್ತಿಸುವುದು ಅನಿವಾರ್ಯವೂ ಹೌದು, ಅಪೇಕ್ಷಿತವೂ ಹೌದು. ಆದ್ದರಿಂದ ಶಿಕ್ಷಕರ ಬಳಿ ವಿನಯವಾಗಿ ನಡೆದುಕೊಳ್ಳುವುದು, ಮೆದುವಾಗಿ ಮಾತಾಡುವುದು, ಅಚ್ಚುಕಟ್ಟಾಗಿ ಬರೆದು ಒಪ್ಪಿಸುವುದು ಇತ್ಯಾದಿ. ಆದರೆ, ಇಂತಹ ವರ್ತನೆಯನ್ನು ತೋರುವ ಮಕ್ಕಳು ಸದಾ ಹಾಗೆಯೇ ಇರುತ್ತಾರೆಂದೂ, ಶಾಲೆಯ ಪರಿಸರದಿಂದ ಹೊರತಾಗಿಯೂ ಹಾಗೆಯೇ ಇರುತ್ತಾರೆಂದು ಹೇಳಲು ಆಗುವುದಿಲ್ಲ. ಸಾಂಸ್ಥಿಕವಾದ ಯಾವುದೇ ಸ್ಥಳದಲ್ಲಿ ಅವರು ಹಾಗೆ ಇರುತ್ತಾರೆ. ಆದರೆ ಕುಟುಂಬ ಮತ್ತು ವ್ಯಕ್ತಿಗತ ಕ್ಷೇತ್ರಗಳಲ್ಲಿ ಅವರು ಹಾಗೆ ಇರುತ್ತಾರೆಂದು ಹೇಳಲು ಸಾಧ್ಯವಾಗದು. ಅದು ಆ ಮಗುವಿನ ಆಂತರಿಕ ಸಮ್ಮತಿ ಇದ್ದು, ಸ್ವಯಂ ಶಿಸ್ತಿಗೆ ಒಳಪಡುವ ಗುಣವಿದ್ದರೆ ತನ್ನ ಆಂತರಿಕ ಸಮ್ಮತಿಗೆ ತಾನೇ ಬದ್ಧವಾಗಿರುತ್ತದೆ. ಇಲ್ಲವಾದರೆ ಸಮಯ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ತನ್ನನ್ನು ಪ್ರದರ್ಶಿಸಿಕೊಳ್ಳುವಷ್ಟು ಚಾಲಾಕಿ ಅಷ್ಟೇ ಆಗುತ್ತದೆ. ಮಗುವು ತನ್ನ ಗ್ರಹಿಕೆ ಮತ್ತು ಕಲಿಕೆಯ ಸಂದರ್ಭಗಳಲ್ಲಿ ಎಷ್ಟೋ ವಿಷಯಗಳನ್ನು ಗಮನಿಸುತ್ತದೆ. ದೊಡ್ಡವರ ಪ್ರಶಂಸೆ ಮತ್ತು ತಿರಸ್ಕಾರಗಳ ಹೊರತಾಗಿ ತಾನು ಕೆಲವು ಅಂಶಗಳನ್ನು ಗ್ರಹಿಸುತ್ತದೆ ಮತ್ತು ಕಲಿಯುವ ಪ್ರಯತ್ನ ಮಾಡುತ್ತದೆ. ಇನ್ನು ವರ್ತನೆಗಳಲ್ಲಿ ಸ್ವಾಭಾವಿಕ ವರ್ತನೆಗಳು, ರೂಢಿಗತ ವರ್ತನೆಗಳು, ಸಾಂಸ್ಕೃತಿಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಪ್ರಭಾವ ದಿಂದಾಗುವ ಸಾಮಾಜಿಕ ವರ್ತನೆಗಳು, ಆನುವಂಶಿಕ ವರ್ತನೆಗಳು, ಅಪೇಕ್ಷಿತ ವರ್ತನೆಗಳು, ಅನಿವಾರ್ಯದ ವರ್ತನೆಗಳು, ಅನಿ ಯಂತ್ರಿತ ವರ್ತನೆಗಳು ಮತ್ತು ಸಮಸ್ಯೆಗಳಿಂದುಂಟಾಗುವ ವರ್ತನೆಗಳು.
►ಅಪೇಕ್ಷಿಕ ವರ್ತನೆಗಳು
ಎಲ್ಲಾ ಬಗೆಯ ವರ್ತನೆಗಳ ಮಾದರಿಗಳ ಪ್ರಭಾವವು ಮಕ್ಕಳ ಮೇಲಾಗುವುದಲ್ಲದೇ ಅವುಗಳನ್ನು ಅವರಲ್ಲಿ ಗಮನಿಸಬಹುದು. ಹಾಗೆಯೇ ಅವರೂ ಕೂಡಾ ಅವರಿಗೆ ಅರಿವಿಲ್ಲದಂತೆ ಈ ಎಲ್ಲಾ ಬಗೆಯ ವರ್ತನೆಗಳನ್ನು ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಗ್ರಹಿಸುತ್ತಾ ಕಲಿಯುತ್ತಾ ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಅವು ಮುಂದೊಂದು ದಿನ ಅಪೇಕ್ಷಿತ ವರ್ತನೆಗಳ ಮನವರಿಕೆಗೆ ಬಂದು ತಲುಪಿದಾಗ, ಅದರಲ್ಲಿಯೂ ತಾವು ಅಪೇಕ್ಷಿಸುವುದೋ ಅಥವಾ ಸಮಾಜ ಅಪೇಕ್ಷಿಸುತ್ತಿರುವುದೋ ಎಂಬ ವಿಷಯವನ್ನು ಗುರುತಿಸುವಷ್ಟು ಮಾನಸಿಕವಾಗಿ ಸಬಲರಾಗುತ್ತಾರೆ. ತಾನು ಹೇಗೆ ವರ್ತಿಸಿದರೆ ತನ್ನ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ ತನ್ನನ್ನು ಗುರುತಿಸುತ್ತದೆ, ಪ್ರಶಂಸಿಸುತ್ತದೆ ಅಥವಾ ತಿರಸ್ಕರಿಸುತ್ತದೆ ಎಂಬುದನ್ನು ಗಮನಿಸುತ್ತದೆ. ಹಾಗೆಯೇ ತನಗೆ, ತನ್ನ ಇಷ್ಟಕ್ಕೆ ಎಂತಹ ವರ್ತನೆ ಬೇಕು ಅಥವಾ ಬೇಡ ಎಂಬುದನ್ನೂ ಕೂಡ ಕೆಲವು ಮಾದರಿಗಳನ್ನು ಗ್ರಹಿಸಿ ಕಲಿಯಲು ಇಷ್ಟಪಡುತ್ತದೆ. ಅದು ಕೆಲವೊಮ್ಮೆ ಸಾಧ್ಯವಾಗುತ್ತದೆ ಅಥವಾ ಸಾಧ್ಯವಾಗುವುದಿಲ್ಲ. ಕನಿಷ್ಠ ಪಕ್ಷ ತಾನು ಪ್ರಶಂಸೆ ಮಾಡುವ ಕೆಲವು ವರ್ತನೆಗಳ ಮಾದರಿಗಳನ್ನು ಅನುಸರಿಸಲಾಗದಿದ್ದರೂ ಅವುಗಳನ್ನು ತೋರುವಂತಹ ವ್ಯಕ್ತಿಗಳನ್ನು ಗೌರವಿಸುವುದು, ಅನುಸರಿಸಲು ಯತ್ನಿಸುವುದು, ಅಭಿಮಾನದಿಂದ ಕಾಣುವುದು ಮತ್ತು ರಕ್ಷಿಸುವುದು ಇತ್ಯಾದಿಗಳನ್ನು ಸ್ವಇಚ್ಛೆಯ ವ್ಯಕ್ತಿಯಾಗಿ ಮಾಡುತ್ತಾನೆ.
ಕೆಲವು ಬಗೆಯ ವರ್ತನೆಗಳು ಸಾಮಾಜಿಕವಾಗಿ, ಬಹುಜನರಿಂದ ಮನ್ನಣೆ ಪಡೆದಿರುವ ಕಾರಣದಿಂದ ಅವುಗಳನ್ನು ತಾನಾಗಿಯೇ ತೋರುತ್ತದೆ ಅಥವಾ ತೋರಲೇ ಬೇಕೆಂದು ತೋರುತ್ತದೆ. ಆತ್ಮಕೇಂದ್ರಿತ ವ್ಯಕ್ತಿಗಳಾಗಿ ರೂಪುಗೊಂಡಿರುವ ಮಕ್ಕಳಾಗಲಿ, ದೊಡ್ಡವರಾಗಲಿ ಬಹಳಷ್ಟು ಬಾರಿ ಅಪೇಕ್ಷಿತವಾದಂತಹ ವರ್ತನೆಗಳನ್ನು ತೋರಲೇ ಬೇಕೆಂಬ ಅನಿವಾರ್ಯತೆಗೆ ಒಳಗಾಗದೇ ತಾವು ಸಹಜವಾಗಿ ನೀಡುವ ಪ್ರತಿಕ್ರಿಯೆಗಳನ್ನೇ ತಮ್ಮ ವರ್ತನೆಗಳಲ್ಲಿ ಅಭಿವ್ಯಕ್ತಿಸುತ್ತಾರೆ. ಅದನ್ನುಸಾಕ್ಷೀಕರಿಸುವವರಲ್ಲಿ ಒಪ್ಪುವವರೂ ಇರುತ್ತಾರೆ, ಒಪ್ಪದವರೂ ಇರುತ್ತಾರೆ.
ತಮ್ಮ ವರ್ತನೆಗಳ ಕಾರಣ ಮತ್ತು ಅದರ ಪರಿಣಾಮಗಳ ಅರಿವು ಯಾವುದೇ ವ್ಯಕ್ತಿಗೆ ಬಂದಿದ್ದೇ ಆದರೆ, ಆ ವರ್ತನೆಗಳು ಎಷ್ಟೇ ಅಪೇಕ್ಷಿತವಾಗಿರಲಿ, ಅನಿವಾರ್ಯವಾಗಿರಲಿ, ಅದರ ಬಗ್ಗೆ ಅರಿವನ್ನು ಹೊಂದಿರುವ ಕಾರಣದಿಂದ ಅವುಗಳು ಸಾಧ್ಯವಾದಷ್ಟು ಅವರ ನಿಯಂತ್ರಣದಲ್ಲಿ ಇರುವುದು. ತಮ್ಮ ವರ್ತನೆಗಳ ಮಾದರಿಗಳನ್ನು ಗುರುತಿಸುವುದು, ಅವುಗಳ ಮೂಲವನ್ನು ಗುರುತಿಸುವುದು, ಅವುಗಳ ಕ್ರಿಯಾಸ್ವರೂಪದ ಚಿತ್ರಣವನ್ನು ಅರಿಯುವುದು, ಅವುಗಳ ಪರಿಣಾಮದಿಂದಾಗುವ ಸಾಧಕ ಬಾಧಕಗಳನ್ನು ಅಂದಾಜಿಸುವುದು; ಇತ್ಯಾದಿಗಳನ್ನು ಮಾಡುವಷ್ಟು ತಿಳುವಳಿಕೆ ಬಂದಿದ್ದೇ ಆದರೆ ವರ್ತನೆಗಳು ಅನಿಯಂತ್ರಿತವಾಗಿ ಪ್ರಕಟಗೊಳ್ಳುವುದಿಲ್ಲ. ಮಕ್ಕಳಲ್ಲಿ ಏಕೆ ಬಹಳಷ್ಟು ದೊಡ್ಡವರಲ್ಲಿಯೂ ಕೂಡ ಭಾವನಾತ್ಮಕವಾಗಿ ತಮ್ಮಿಡನೆ ಇರುವಂತಹ ಸಂಬಂಧಗಳನ್ನು ತೃಪ್ತಿಪಡಿಸುವ ಸಲುವಾಗಿ ವರ್ತನೆಗಳನ್ನು ರೂಢಿಸಿಕೊಂಡಿರುತ್ತಾರೆ. ದೊಡ್ಡವರು ಅಂತಹ ವರ್ತನೆಗಳನ್ನು ಪುರಸ್ಕರಿಸುವುದರಿಂದ ಮಕ್ಕಳಿಗೆ ಅನಿವಾರ್ಯವಾಗಿ ಅಂತಹ ವರ್ತನೆಗಳನ್ನು ಗ್ರಹಿಸಲು ಮತ್ತು ಪ್ರಕಟಗೊಳಿಸುವುದನ್ನು ಕಲಿಯಲು ಪ್ರಾರಂಭಿಸುತ್ತಾರೆ.
ಅದು ಅವರಿಗೇ ಅರಿವಿಲ್ಲದಂತೆ ಅವರ ವ್ಯಕ್ತಿತ್ವದ ಭಾಗವಾಗಿ ರೂಪುಗೊಳ್ಳಬಹುದು. ಕೆಲವೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವ ವ್ಯಕ್ತಿಗಳು ತಮ್ಮ ವರ್ತನೆಗಳ ಪದರಗಳನ್ನು, ಬದಲಾಯಿಸುವ ವರ್ತನೆಗಳ ಮಾದರಿಗಳನ್ನು ಗುರುತಿಸಿಕೊಂಡಿರುತ್ತಾರೆ. ಒಟ್ಟಾರೆ ವರ್ತನೆಗಳ ಅಧ್ಯಯನ ಮಕ್ಕಳ ಮನಃಶಾಸ್ತ್ರದಲ್ಲಿ, ಅವರ ಬೆಳವಣಿಗೆಯಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತದೆ. ಇದರಲ್ಲಿರುವ ಬಹಳ ದೊಡ್ಡ ಮತ್ತು ಮುಖ್ಯವಾದ ವಿಷಯವೆಂದರೆ, ಹಿರಿಯರು ಮಕ್ಕಳಿಗಾಗಿ ಈ ವರ್ತನಾ ಶಾಸ್ತ್ರವನ್ನು ಅಧ್ಯಯನ ಮಾಡುವುದರಿಂದ ತಮ್ಮದೇ ಆದ ವ್ಯಕ್ತಿತ್ವದ ಅನಾವರಣ ಮಾಡಿಕೊಳ್ಳುತ್ತಾರೆ. ಅವರದೇ ಆದಂತಹ ಮಾನಸಿಕ ಸ್ಥಿತಿಗತಿಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮದೇ ವರ್ತನೆಗಳ ಕಾರಣ ಮತ್ತು ಪರಿಣಾಮಗಳ ತಿಳುವಳಿಕೆ ಮೂಡುತ್ತದೆ. ಇಷ್ಟಾದರೆ, ಇನ್ನು ಮಕ್ಕಳ ವರ್ತನೆಗಳ ಬಗ್ಗೆ ಅಧ್ಯಯನ ಮತ್ತು ಪ್ರಯೋಗಗಳನ್ನು ಮಾಡಲು ಇನ್ನೂ ಅವರ ಹಾದಿ ಸುಗಮವಾಗುತ್ತದೆ. ಆದ್ದರಿಂದಲೇ ಶಿಶುವನ್ನು ಸಮಾಜದ ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡಲು ಪ್ರಾರಂಭಿಸಿದರೆ, ವ್ಯಕ್ತಿಗಳೂ, ಕುಟುಂಬಗಳೂ, ವ್ಯವಸ್ಥೆಗಳೂ, ಸಾಂಸ್ಥಿಕ ರೂಪಗಳೂ; ಎಲ್ಲವೂ ಪರಿವರ್ತನೆ ಹೊಂದುತ್ತವೆೆ. ಅದು ಸಾಧ್ಯವಾಗುವುದು ಮಗುವಿನ ದೃಷ್ಟಿಯಲ್ಲಿ ತಮ್ಮ ವರ್ತನೆಗಳ ಮಾದರಿಗಳು ಹೇಗೆ ಇವೆ ಎಂದು ನೋಡಿಕೊಳ್ಳುವುದರಿಂದ, ಈ ವರ್ತನೆಗಳ ಮಾದರಿಗಳು ಅವರ ಮೇಲೆ ಎಂತಹ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಆಲೋಚಿಸುವುದರಿಂದ ಮತ್ತು ಈ ವರ್ತನೆಗಳ ಮಾದರಿಗಳು ಭವಿಷ್ಯದಲ್ಲಿ ಇದೇ ಮಕ್ಕಳಲ್ಲಿ ಹೇಗೆ ಪ್ರಕಟಗೊಳ್ಳುತ್ತವೆ ಎಂಬ ದೂರದೃಷ್ಟಿಯನ್ನು ಹೊಂದುವುದರಿಂದ. ಒಟ್ಟಾರೆ ಪೋಷಕರು ಮತ್ತು ಶಿಕ್ಷಕರು ಮಾತ್ರವಲ್ಲದೇ, ಮಗುವಿನ ಸಾಂಗತ್ಯವನ್ನು ಹೊಂದಿರುವ ಹಿರಿಯರು ತಮ್ಮ ವರ್ತನೆಗಳನ್ನು ಪರಾಮರ್ಶೆಗೆ ಒಳಪಡಿಸದಿದ್ದರೆ ತಾವೆಂತಹ ಕಸವನ್ನು ಮಕ್ಕಳ ಜಗತ್ತಿನಲ್ಲಿ ಎಸೆಯುತ್ತಿದ್ದೇವೆ ಎಂಬ ಅಂದಾಜಿರುವುದಿಲ್ಲ. ತಾವು ಎಂತಹ ರಸವನ್ನು ಎರೆಯುತ್ತಿದ್ದೇವೆ ಎಂಬ ಅರಿವಿರುವುದಿಲ್ಲ.