ಕೆಂಡ ಹಾಯುವ ಪವಾಡ...
ನರೇಂದ್ರ ನಾಯಕ್ ಜೀವನ ಕಥನ
ಭಾಗ 25
ಕೆಂಡ ಹಾಯುವುದನ್ನು ಕಂಡಾಗ ಕೆಲವರಿಗಂತೂ ಅಚ್ಚರಿಯೋ ಅಚ್ಚರಿ. ಕೆಂಪಾಗಿ ಉರಿಯುವ ಕೆಂಡದ ಮೇಲೆ ಹಾಯುವುದೆಂದರೆ ಅದೇನು ಸುಲಭದ ಕೆಲಸವೇ? ಇದಕ್ಕೆ ಶುದ್ಧ ಆಚಾರ ವಿಚಾರದ ಪ್ರಶ್ನೆ. ಆದರೆ ಈ ಕೆಂಡ ಹಾಯುವುದನ್ನು ಯಾರು ಬೇಕಾದರೂ ಮಾಡಬಹುದು ಎಂದು ನಾವು ಹೇಳಿದಾಗ ಮಾತ್ರ ನಂಬುವವರೇ ಇಲ್ಲ. ಬಳಿಕ ನಾವೇ ಕೆಂಡದ ಮೇಲೆ ನಡೆದು ತೋರಿಸಿದಾಗ ಅಚ್ಚರಿಪಟ್ಟವರು ಹಲವರು!
ಮೇಘಾಲಯದ ಶಿಲ್ಲಾಂಗ್ನಲ್ಲಿ ಸೇನೆಯ ಪ್ರಾದೇಶಿಕ ಕಚೇರಿಯಲ್ಲಿಯೊಂದರಲ್ಲಿ ನಮ್ಮ ಕಾರ್ಯಕ್ರಮ ನಡೆಯಿತು. ಕೊನೆಗೆ ಕೆಂಡ ಹಾಯುವ ಪ್ರಾತ್ಯಕ್ಷಿಕೆ ಮಾಡಿದೆವು. ಆದರೆ ಕೆಂಡದ ಮೇಲೆ ಮೊದಲು ನಡೆಯುವುದು ಯಾರು ಎಂಬ ಪ್ರಶ್ನೆ ಉದ್ಭವವಾಯಿತು. ಅಲ್ಲಿನ ಅತ್ಯಂತ ಹಿರಿಯ ಅಧಿಕಾರಿಯವರಾದ ಕರ್ನಲ್ ಶರ್ಮಾ ಅವರು ಮುಂದೆ ಬಂದರು. ಸೇನೆಯಲ್ಲಿ ತಾವು ಯಾವತ್ತೂ ಮುಂಚೂಣಿಯಲ್ಲಿದ್ದು ಮುಂದಾಳತ್ವ ನೀಡುವುದಾಗಿ ಅವರು ಹೇಳಿದರು. ಅವರೇ ಕೆಂಡದ ಮೇಲೆ ನಡೆದರು. ಅವರು ಕೆಂಡದ ಮೇಲೆ ನಡೆಯುವುದನ್ನು ನೋಡಿ ಅಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರು, ಹಿರಿಯರು ಕೆಂಡದಲ್ಲಿ ನಡೆದರು. ಯಾರಿಗೂ ಏನೂ ಅಪಾಯವಾಗಲಿಲ್ಲ.
ಮೇಘಾಲಯದಲ್ಲಿ ಇನ್ನೊಂದು ಘಟನೆ ನಡೆಯಿತು. ಚಿರಾಪುಂಜಿ ಎಂಬ ಊರಿನಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಂಡ ಹಾಕಿದ್ದು, ಅದರಲ್ಲಿ ಅಲ್ಲಿದ್ದ ಕೆಲವರು ನಡೆದರು. ಕೊನೆಗೆ ಸುಮಾರು 12ರ ಹರೆಯದ ಬಾಲಕಿ ನನ್ನನ್ನು ಬಂದು ಅಪ್ಪಿಕೊಂಡಳು. ‘ಅಂಕಲ್ ನಿಮ್ಮನ್ನು ಯಾವತ್ತೂ ಮರೆಯುವುದಿಲ್ಲ’ ಎಂದಳು. ‘ಯಾಕಮ್ಮಾ’ ಎಂದು ಆಕೆಯನ್ನು ಪ್ರಶ್ನಿಸಿದರೆ, ‘ನಾನು ಇಷ್ಟೊಂದು ಉರಿಯುವ ಕೆಂಡದ ಮೇಲೆ ನಡೆಯುವುದು ಯಾರಿಗೂ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ ಇವತ್ತು ನೀವು ನಡೆದು ತೋರಿಸಿದ್ದೀರಿ. ಮಾತ್ರವಲ್ಲ ನನ್ನನ್ನೂ ನಡೆಸಿದಿರಿ. ಇದೊಂದೇ ಕಾರಣಕ್ಕಾಗಿ ನಿಮ್ಮನ್ನು ಜನ್ಮವಿಡೀ ನೆನಪಿಸಿಕೊಳ್ಳುತ್ತೇನೆ’ ಎಂದಿದ್ದಳು.
ಚಿತ್ರದುರ್ಗದ ಕಡೆ ಒಂದು ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಕೊನೆಯಲ್ಲಿ ಕೆಂಡದ ಮೇಲೆ ನಡೆಯಲಾಯಿತು. ಅಲ್ಲಿಯೇ ನಾನು ಸುಮಾರು ಒಂದು ದಶಕದ ಹಿಂದೆ ಕಾರ್ಯಕ್ರಮ ನೀಡಿದ್ದಾಗ ಸಮೀಪದ ಹಾಸ್ಟೆಲ್ನ ಹೆಣ್ಣು ಮಕ್ಕಳು ಬಂದು ಕೆಂಡದ ಮೇಲೆ ನಡೆದಿದ್ದರು. ನಡೆಯುವಾಗ ತೆಗೆದ ಫೋಟೊಗಳಲ್ಲಿ ಒಂದು ಅತ್ಯಾಕರ್ಷಕವಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಘಟಕರು ಅದನ್ನು ಕರಪತ್ರಗಳಲ್ಲಿ ಅಚ್ಚು ಹಾಕಿಸಿದ್ದರು ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರಿದ್ದರು. ಕೊನೆಗೆ ಕೆಂಡ ಸಿದ್ಧವಾದಾಗ ಯಾರೂ ನಡೆಯಲು ಸಿದ್ಧರಿರಲಿಲ್ಲ. ನಾನು ಮೊದಲು ನಡೆದೆ. ನಂತರ ಪ್ರೇಕ್ಷಕರಲ್ಲಿ ಒಬ್ಬರು ನಡೆದರು. ನಂತರ ಹತ್ತು ಮಂದಿ ಹಾಯ್ದರು. ಕೊನೆಗೆ ಜನಜಂಗುಳಿಯಲ್ಲಿ ಪ್ರತಿಯೊಬ್ಬರೂ ಕೆಂಡ ಹಾಯಲು ಮುಂದಾದರು. ಕೊನೆಗೆ ಗಲಾಟೆ ತಡೆಯಲಾಗದೆ ಅಗ್ನಿಶಾಮಕದವರನ್ನು ಕರೆಸಿ ಕೆಂಡವನ್ನು ನಂದಿಸಬೇಕಾಯಿತು.
ನಮ್ಮ ಕಾರ್ಯಕ್ರಮ ನೋಡಿ ಕಲಿತು ತಾವೂ ಪವಾಡ ಬಿಡಿಸಿದರು...
ನಮ್ಮ ಕಾರ್ಯಕ್ರಮ ನೋಡಿ ಅದರಿಂದ ಹಲವಾರು ಪಾಠಗಳನ್ನು ಕಲಿತು ತಮ್ಮ ಊರಿನಲ್ಲಿ ಪವಾಡಗಳನ್ನು ಬಯಲಿಗೆಳೆದವರು ಹಲವಾರು ಮಂದಿ. ಧಾರವಾಡ ಜಿಲ್ಲೆಯ ಸವಣೂರು ಹತ್ತಿರದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಪವಾಡ ನಡೆಸುತ್ತಿದ್ದರು. ಇದನ್ನು ಕಂಡ ಊರಿನವರು ಆಕೆಯನ್ನು ‘ಪವಾಡ ಮಹಿಳೆ’ ಎಂದೇ ಕರೆಯುತ್ತಿದ್ದರು. ಮನೆಯಿಂದ ಮನೆಗೆ ಆಕೆಯನ್ನು ಕರೆದು ಆಕೆಗೆ ಪೂಜೆ ಮಾಡಿ ದಕ್ಷಿಣೆಯನ್ನೂ ನೀಡಲಾಗುತ್ತಿತ್ತು. ಈ ಪವಾಡದ ಸುದ್ದಿಯು ನಮ್ಮ ಕಾರ್ಯಕ್ರಮ ನೋಡಿದ ಕೆಲವು ಕಾಲೇಜಿನ ಮಕ್ಕಳಿಗೆ ತಲುಪಿತು. ಇವರೂ ಆ ಪವಾಡ ಮಹಿಳೆ ಬಳಿ ಹೋದರು. ಆಕೆ ಜನರ ಮಧ್ಯೆ ಕುಳಿತಿದ್ದಳು. ಆಕೆಯ ವಿಶೇಷವೆಂದರೆ ತಾನು ಮಹಿಳೆಯಾಗಿದ್ದರೂ ಬೇರೆ ಮಹಿಳೆಯನ್ನು ಹತ್ತಿರ ಬರಲು ಬಿಡುತ್ತಿರಲಿಲ್ಲ. ಈಕೆಯ ಸುತ್ತಲು ಪುರುಷರಿಗೆ ಮಾತ್ರವೇ ಬರಲು ಅವಕಾಶ. ಆಕೆ ಮಗುವಿಗೆ ಹಾಲುಣಿಸುತ್ತಿದ್ದಳು. ಹಾಲು ಕುಡಿಸುವ ವೇಳೆ ಶಿವಲಿಂಗಗಳು ಪ್ರತ್ಯಕ್ಷವಾಗುತ್ತಿದ್ದವು. ಇದು ಆ ಮಹಿಳೆಯ ಪವಾಡವಾಗಿತ್ತು. ಆಕೆ ಮಗುವಿಗೆ ಹಾಲುಣಿಸುವ ವೇಳೆ ಪುರುಷರ ನೋಟವೆಲ್ಲಾ ಒಂದು ಕಡೆ ಕೇಂದ್ರೀಕೃತವಾಗಿದ್ದರೆ, ಈಕೆ ತನ್ನ ರವಿಕೆ ಒಳಗಿನಿಂದ ಶಿವಲಿಂಗಗಳನ್ನು ಪ್ರತ್ಯಕ್ಷ ಮಾಡುತ್ತಿದ್ದಳು. ಈ ಪವಾಡದ ರಹಸ್ಯವನ್ನು ಕಾಲೇಜಿನ ಮಕ್ಕಳು ಅರಿತುಕೊಂಡರು. ಆದರೆ ಇದನ್ನು ಹೇಗೆ ಬಯಲು ಮಾಡುವುದೆಂದು ತಿಳಿಯದೆ ಕೊನೆಗೆ ಸ್ಥಳೀಯ ತಹಶೀಲ್ದಾರರ ಸಹಾಯ ಪಡೆದರು. ಮಕ್ಕಳು ಆಕೆಯನ್ನು ಪೂಜೆ ಮಾಡಲಿಕ್ಕೆಂದು ಮನೆಗೆ ಕರೆಸಿಕೊಂಡರು. ಅಲ್ಲಿ ಬಂದೊಡನೆ, ಆಕೆಯನ್ನು ಮಹಿಳಾ ಪೊಲೀಸರ ವಶಕ್ಕೆ ನೀಡಿ ಆಕೆಯ ತಪಾಸಣೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆಕೆ ತಾಳಿಯನ್ನು ಕಚ್ಚಿ ತುಂಡರಿಸಿ ಅದರ ತುಂಡನ್ನು ಪ್ರತ್ಯಕ್ಷ ಮಾಡಿ ತೋರಿಸಿಬಿಡಬೇಕೇ?
ಆದರೆ ಈಕೆಯ ಪವಾಡ ರಹಸ್ಯ ಅದಾಗಲೇ ಬಯಲಾಗಿದ್ದರಿಂದ ಈಕೆಯ ಈ ಪವಾಡ ಮಾತ್ರ ಮುಂದುವರಿಯಲಿಲ್ಲ.
ಕಪಟ ಸನ್ಯಾಸಿಯನ್ನು ಜನರೇ ಓಡಿಸಿದರು...
ಬಿಜಾಪುರ ಜಿಲ್ಲೆಯ ಒಂದು ಹಳ್ಳಿಯಿಂದ ನನಗೆ ಪತ್ರವೊಂದು ಬಂದಿತ್ತು. ಪತ್ರ ಬರೆದಾತ ನನ್ನ ಪವಾಡ ರಹಸ್ಯ ಬಯಲು ಪುಸ್ತಕ ಓದಿದಾತ. ನಾನು ಆತನನ್ನು ಭೇಟಿಯಾಗಿರಲಿಲ್ಲ. ಆತ ನನ್ನ ಕಾರ್ಯಕ್ರಮವನ್ನೂ ನೋಡಿರಲಿಲ್ಲ. ಆದರೂ ಆತ ಪವಾಡ ರಹಸ್ಯ ಬಯಲು ಮಾಡಲು ಕಲಿತಿದ್ದ!
ಆತನ ಊರಿಗೊಬ್ಬ ಸನ್ಯಾಸಿ ಬಂದಿದ್ದ. ಆತ ಕೆಲವೆಲ್ಲಾ ಪವಾಡ ಮಾಡಿ ಜನರನ್ನು ಆಕರ್ಷಿಸಿದ್ದ. ಜನರೂ ಆತನಿಗೆ ಉಪಚರಿಸುತ್ತಿದ್ದರು. ಕೊನೆಗೊಂದು ದಿನ ಆತ ತಾನು ಅಗ್ನಿ ಪ್ರವೇಶ ಮಾಡುವುದಾಗಿ ಹೇಳಿದ. ಆತನ ದುರದೃಷ್ಟವೆಂದರೆ ಆತ ನಿರ್ಧರಿಸಿದ ಹಿಂದಿನ ದಿನ ನನ್ನ ಪುಸ್ತಕ ಓದಿದಾತ ತನ್ನ ಊರಿಗೆ ತೆರಳಿದ್ದ. ಊರಿನವರಿಂದ ಈ ಪವಾಡದ ಬಗ್ಗೆ ಅರಿತ ಆತನಿಗೆ ಅದರ ಹಿಂದಿನ ಅಸಲಿಯತ್ತು ಅರ್ಥವಾಗಿತ್ತು.
ಮರುದಿನ ರಾತ್ರಿ ಆ ಸನ್ಯಾಸಿ ಕೆಂಡದ ರಾಶಿ ಹಾಕಿ, ಅದರ ಮೇಲೆ ಒಂದು ಕಡೆಯಿಂದ ಇನ್ನೊಂದೆಡೆ ನಡೆದು ನಿಂತು ಬಿಟ್ಟ. ಅಲ್ಲಿ ನಿಂತು ತನ್ನ ಶಕ್ತಿಯ ಬಗ್ಗೆ ನೆರೆದಿದ್ದವರಿಗೆ ಭಾಷಣ ಮಾಡಿದ. ಇದನ್ನು ನೋಡಿದ ನನ್ನ ಪುಸ್ತಕ ಓದಿದ್ದ ವ್ಯಕ್ತಿ ಇದನ್ನು ಯಾರು ಬೇಕಾದರೂ ಮಾಡಬಹುದು ಎಂದು ತಾನೇ ಕೆಂಡದ ಮೇಲೆ ನಡೆದು ತೋರಿಸಿದ. ಅಲ್ಲಿ ನೆರೆದವರಿಗೆ ಅಚ್ಚರಿಯೋ ಅಚ್ಚರಿ. ರೊಚ್ಚಿಗೆದ್ದ ಜನ ಸನ್ಯಾಸಿಗೆ ಚೆನ್ನಾಗಿ ಹೊಡೆದು, ಆತನನ್ನು ಕಟ್ಟಿ ಹಾಕಿ ಮರುದಿನ ಊರಿನಿಂದ ಓಡಿಸಿಬಿಟ್ಟರಂತೆ.