ಮೇವಾನಿ ಎಂಬ ಮಿಂಚು
ವಾರದ ವ್ಯಕ್ತಿ
‘ಮೋದೀಜಿ, ನಾವು ಗೆದ್ದಿದ್ದೇವೆ, ನಿಮಗೆ ವಯಸ್ಸಾಗಿದೆ, ನಮಗೆ ಬೋರ್ ಹೊಡೆಸುತ್ತಿದ್ದೀರ. ನೀವೀಗ ಹಿಮಾಲಯಕ್ಕೆ ಹೋಗುವುದು ಮತ್ತು ರಾಮ ಮಂದಿರದ ಗಂಟೆ ಬಾರಿಸುವುದು ಸೂಕ್ತ’ ಎಂದಿದ್ದಾರೆ ಗುಜರಾತ್‌ನ ದಲಿತ ನಾಯಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ.
ಗುಜರಾತ್‌ನ ವಡ್ಗಾಮ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಜಿಗ್ನೇಶ್ ಮೇವಾನಿ, ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯ ಗಳಿಸಿದರು. ಜಿಗ್ನೇಶ್ ಮೇವಾನಿಯ ಗೆಲುವು ಅವರನ್ನು ಬೆಂಬಲಿಸಿದ ದಲಿತರಿಗೆ, ಅಸಹಾಯಕರಿಗೆ, ಬಡವರಿಗೆ ಧ್ವನಿಯಾಯಿತು. ಎಡಪಂಥೀಯ, ಪ್ರಗತಿಪರ ಮತ್ತು ಜಾತ್ಯತೀತ ವಿಚಾರಧಾರೆಗಳಿಗೆ ಬಲ ತಂದುಕೊಟ್ಟಿತು. ಮೋದಿ ಮತ್ತು ಅಮಿತ್ ಶಾ ಎಂಬ ಖಾಲಿ ಡಬ್ಬಾಗಳ ಅಬ್ಬರಕ್ಕೆ ತಕ್ಕ ಉತ್ತರ ನೀಡಿತು. ಅಷ್ಟೇ ಅಲ್ಲ, ಸಂಘ ಪರಿವಾರದ ಹಿಂದುತ್ವಕ್ಕೆ ಸಮರ್ಥ ಪ್ರತಿರೋಧವನ್ನು ಒಡ್ಡಿತು. ಈ ಎಲ್ಲ ಕಾರಣಗಳಿಂದ ಜಿಗ್ನೇಶ್ ಮೇವಾನಿ ಗೆಲುವು ಬಹಳ ಮುಖ್ಯವಾಗಿ, ದೇಶದ ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ ಬೆಳಕಾಗಿ ದಾರಿ ತೋರಲಿದೆ.
ಮೇವಾನಿ ಗೆದ್ದ ಎರಡನೇ ದಿನಕ್ಕೆ, ಮೋದಿ ಮೇಲೆ ಮಾಡಿದ ಮಾರ್ಮಿಕ ದಾಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಹಾಗೆ ನೋಡಿದರೆ, ತನ್ನದೇ ನೆಲದಲ್ಲಿ ಮೂರಂಕಿಯನ್ನು ದಾಟದ ಬಿಜೆಪಿಯ ಗೆಲುವೇ, ಮೋದಿಯ ಸೋಲನ್ನು ಸಾರುತ್ತಿತ್ತು. ಮೆರೆಯುತ್ತಿದ್ದ ಮೋದಿಗೆ ಅಷ್ಟೇ ಸಾಕಾಗಿತ್ತು. ಆದರೆ ಸುಮ್ಮನಾಗದ ಮೇವಾನಿ, ‘ಮೋದಿ ಅಪ್ರಸ್ತುತ, ವಯಸ್ಸಾಯಿತು, ಬೋರಿಂಗ್ ಪಾರ್ಟಿ’ ಎಂದಿದ್ದು ಸೂಕ್ತವಾಗಿತ್ತು, ಸುದ್ದಿಯಾಯಿತು.
ಮೋದಿ ಬಗ್ಗೆ ಹೀಗೆ ಮಾತನಾಡಬಹುದೇ ಎಂದು ಆಶ್ಚರ್ಯಚಕಿತರಾದ ಉತ್ತರ ಭಾರತದ ಪತ್ರಕರ್ತರು, ಮೇವಾನಿ ಮೇಲೆ ಮುಗಿಬಿದ್ದರು. ವಿಚಲಿತರಾಗದ ಮೇವಾನಿ, ಹೇಳಿದ್ದು ಸರಿಯಾಗಿದೆ ಎಂದು ಸುಮ್ಮನಾದರು. ಸುಮ್ಮನಾಗದ ಆಜ್‌ತಕ್ ಟಿವಿ ಪತ್ರಕರ್ತೆ, ‘ನೀವೊಬ್ಬ ಶಾಸಕರಾಗಿ ಪ್ರಧಾನಮಂತ್ರಿಗಳ ಬಗ್ಗೆ ಹೀಗೆ ಮಾತನಾಡಬಹುದೇ?’ ಎಂದು ಪ್ರಶ್ನಿಸಿದರು.
‘ಶಾಸಕ ಎನ್ನುವುದಕ್ಕೂ ಮೊದಲು ನಾನೊಬ್ಬ ಈ ದೇಶದ ಪ್ರಜೆ. ಪ್ರಜೆಯಾಗಿ ಪ್ರಧಾನಿಗೆ ಪ್ರಶ್ನೆ ಕೇಳುವ ಹಕ್ಕಿದೆ. ಪ್ರಧಾನಮಂತ್ರಿಗಳು 8 ಕೋಟಿ ಯುವಕರಿಗೆ ಉದ್ಯೋಗ ನೀಡುವ ಆಶ್ವಾಸನೆ ನೀಡಿ ನಾಲ್ಕು ವರ್ಷವಾಗುತ್ತಾ ಬಂತು, ದೇಶದ ವಿದ್ಯಾವಂತ ಯುವಕರಿಗೆ ಪ್ರಧಾನಿ ಸುಳ್ಳು ಆಶ್ವಾಸನೆ ನೀಡಬಹುದಾ? ಪ್ರತಿಯೊಬ್ಬರ ಅಕೌಂಟಿಗೂ 15 ಲಕ್ಷ ರೂ. ಬಂದು ಬೀಳುತ್ತೆ ಅಂತ ಹೇಳಿ ಎಷ್ಟು ವರ್ಷವಾಯಿತು? ಅದು ಮೋಸವಲ್ಲವೇ? ಇನ್ನು ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ದೇಶದ ಅರ್ಥವ್ಯವಸ್ಥೆ ಕುಸಿದುಬಿತ್ತು. ಈ ಬಗ್ಗೆ ಯಾಕೆ ಮಾತನಾಡುವುದಿಲ್ಲ? ದೇಶವನ್ನು, ಬಹುಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ನನ್ನನ್ನು ನಿರಾಶೆಗೊಳಿಸಿದ್ದಾರೆ. ನನ್ನ ಪ್ರಕಾರ ಅವರು ಅಪ್ರಸ್ತುತ. ಬೋರಿಂಗ್ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ನಿವೃತ್ತಿ ಪಡೆದು ಹಿಮಾಲಯಕ್ಕೆ ಹೋಗುವುದು ಉತ್ತಮ’ ಎಂದರು.
‘ಕ್ಷಮೆ ಕೇಳಬೇಕೆಂಬ ಒತ್ತಾಯ ಬಂದರೆ?’
‘ಕ್ಷಮೆ ಕೇಳಬೇಕಾದ್ದು ನಾನಲ್ಲ, ಮೋದಿ. ಜನರಿಗೆ ಮೋಸ ಮಾಡಿ, ಸುಳ್ಳು ಹೇಳಿರುವ ಮೋದಿ ದೇಶದ ಜನರ ಕ್ಷಮೆ ಕೇಳಬೇಕು.’ ಜಿಗ್ನೇಶ್ ಮೇವಾನಿಯ ಮಾತಲ್ಲಿ ಖಚಿತತೆ ಇತ್ತು. ವಿಚಾರವಿತ್ತು. ಸತ್ಯವಿತ್ತು. ಅದನ್ನು ಅವರು ತಣ್ಣಗೆ ಹೇಳಿದ ರೀತಿ ಎಲ್ಲರ ಮನ ಮುಟ್ಟಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರಲ್ಲಿ ಜಾಗೃತಿಯನ್ನುಂಟು ಮಾಡಿತ್ತು. ಮೇವಾನಿಯನ್ನು ಮತೊ್ತಂದು ಎತ್ತರಕ್ಕೆ ಕೊಂಡೊಯ್ದಿತ್ತು.
ಹೊಸಗಾಲದ ಹೋರಾಟಗಾರ ಮೇವಾನಿ ಮುಂದುವರದು, ‘ಬಿಜೆಪಿ 150 ಸೀಟು ಗೆಲ್ಲುವುದಾಗಿ ಹೇಳಿಕೊಂಡಿತ್ತು. ಮೂರಂಕಿಯನ್ನೂ ದಾಟಲಾಗದೆ ಗರ್ವಭಂಗವಾಗಿದೆ, ನಮ್ಮ ಹೋರಾಟಕ್ಕೆ ಗೆಲುವಾಗಿದೆ. ಇದೇ 2019ರ ಲೋಕಸಭಾ ಚುನಾವಣೆಯಲ್ಲೂ ಮರುಕಳಿಸಲಿದೆ. ಈ ನಮ್ಮ ಹೋರಾಟವನ್ನು ಮುಂದಿನ ದಿನಗಳಲ್ಲಿ ಅಸೆಂಬ್ಲಿಯಲ್ಲಿ ಮತ್ತು ಬೀದಿಗಳಲ್ಲಿ ಇನ್ನಷ್ಟು ತೀವ್ರಗೊಳಿಸಲಿದ್ದೇವೆ. ಆ ಮೂಲಕ ಅವರನ್ನು ಕಟಿ್ಟಹಾಕಲಿದ್ದೇವೆ’ ಎಂದಿದ್ದಾರೆ.
ಹಾಗೆ ನೋಡಿದರೆ, ಜಿಗ್ನೇಶ್ ಮೇವಾನಿ ಇದ್ದಕ್ಕಿದ್ದಂತೆ ಎದ್ದುಬಂದ ನಾಯಕನಲ್ಲ. ಗುಜರಾತಿನ ಮೇವ್ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ ಡಿಸೆಂಬರ್ 11, 1982 ರಲ್ಲಿ ಜನಿಸಿದ ಮೇವಾನಿ, ಕಡು ಕಷ್ಟದಲ್ಲಿಯೇ ಓದಿ ಬೆಳೆದವರು. ಬೆಳೆಯುತ್ತಲೇ ದಲಿತರ ದಿಕ್ಕೆಟ್ಟ ಸ್ಥಿತಿಯನ್ನು, ಅವಮಾನವನ್ನು, ಶೋಷಣೆಯನ್ನು, ದೌರ್ಜನ್ಯವನ್ನು ಕಣ್ಣಾರೆ ಕಂಡವರು ಮತ್ತು ಅನುಭವಿಸಿದವರು. ಕಲಾ ವಿಭಾಗದಲ್ಲಿ ಪದವಿ ಪೂರೈಸಿದ ನಂತರ ಪತ್ರಿಕೋದ್ಯಮ ಡಿಪ್ಲೊಮ ಮಾಡಿ, ‘ಗುಜರಾತಿ ಅಭಿಯಾನ’ ಎಂಬ ನಿಯತಕಾಲಿಕದಲ್ಲಿ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿದವರು. ಆ ಮೂರು ವರ್ಷಗಳಲ್ಲಿ ಕೆಳ ವರ್ಗ-ಜಾತಿ ಜನರ ಸಮಸ್ಯೆಗಳ ಸುದ್ದಿಗಳಿಗೆ ಮುಖ್ಯವಾಹಿನಿಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಇಲ್ಲವೆಂಬುದು ಅರ್ಥವಾಯಿತು. ಇದಕ್ಕೆ ಬೇರೆಯದೇ ರೀತಿಯಲ್ಲಿ, ತಮಗೆ ತಾವೇ ತಯಾರಾಗಬೇಕೆಂದು ನಿರ್ಧರಿಸಿ, ಟ್ರೇಡ್ ಯೂನಿಯನ್ ಸೇರಿದರು. ವ್ಯವಸ್ಥೆಯ ವಿರುದ್ಧದ ಹೋರಾಟಗಾರನಾಗಿ ಗುರುತಿಸಿಕೊಳ್ಳುತ್ತಲೇ ಅಹಮದಾಬಾದ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲರಾದರು. ಆನಂತರ ಆಮ್ ಆದ್ಮಿ ಪಾರ್ಟಿ ಸೇರಿದರು. ಸರಿ ಇಲ್ಲವೆನಿಸಿದಾಗ ಬಿಟ್ಟರು.
ಜಿಗ್ನೇಶ್ 10 ವರ್ಷದ ಹುಡುಗನಾಗಿದ್ದಾಗಿನಿಂದಲೂ ಗುಜರಾತಿನಲ್ಲಿ ಬಿಜೆಪಿಯ ಆಡಳಿತವಿದೆ. ‘ಹಿಂದೂ ನಾವೆಲ್ಲ ಒಂದು’ ಎಂದು ಹೇಳಿಕೊಂಡೇ 22 ವರ್ಷಗಳ ಕಾಲ ನಿರಂತರವಾಗಿ ಆಳಿದ ಬಿಜೆಪಿ, ಹಿಂದೂಗಳಾದ ದಲಿತರನ್ನು ಪಶುಗಳಿಗಿಂತಲೂ ಕಡೆಯಾಗಿ ಕಂಡಿದೆ. ಬರ್ಬರವಾಗಿ ಕೊಂದಿದೆ. ಅದರ ಮುಂದುವರಿದ ಭಾಗವಾಗಿ ಉನಾ ಘಟಿಸಿತು. ಅದನ್ನು ಜಿಗ್ನೇಶ್ ಮೇವಾನಿ ದಲಿತರ ಅಸ್ತಿತ್ವ ಮತ್ತು ಅಸ್ಮಿತೆಯ ಜನಾಂದೋಲನವನ್ನಾಗಿ ರೂಪಿಸಿದರು. ಅದಕ್ಕೆ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳು ನೀಡಿದ ಪ್ರಚಾರದಿಂದಾಗಿ ದಲಿತರಿಗೆ ಧೈರ್ಯ ಬಂದು ಉಸಿರಾಡುವಂತಾದರು. ಆಗಸ್ಟ್ 15, 2016ರಂದು ಉನಾದಿಂದ ಅಹಮದಾಬಾದ್‌ವರೆಗೆ, ದಲಿತ ಅಸ್ಮಿತಾ ಯಾತ್ರೆಯ ಮುಂದಾಳತ್ವ ವಹಿಸಿಕೊಂಡ ಜಿಗ್ನೇಶ್, 20 ಸಾವಿರ ದಲಿತರನ್ನು ಸಂಘಟಿಸಿ ಬೀದಿಗಿಳಿಸಿ, ದಲಿತರ ಪಾರಂಪರಿಕ ಕೆಲಸವಾದ ಸತ್ತ ದನಗಳನ್ನು ತೆರವುಗೊಳಿಸುವ ಕೆಲಸವನ್ನು ಮಾಡುವುದಿಲ್ಲವೆಂದು ಅಂಬೇಡ್ಕರ್ ಹೆಸರಿನಲ್ಲಿ ಶಪಥ ಮಾಡಿಸಿದರು. ಇದು ಜಡಗೊಂಡ ಗುಜರಾತಿನ ಆಡಳಿತಯಂತ್ರಕ್ಕೆ ಚಳಿಬಿಡಿಸಿತು. ದಲಿತರು ಸೆಟೆದು ನಿಂತರೆ ಏನಾಗುತ್ತದೆ ಎಂಬುದನ್ನು ದೇಶಕ್ಕೆ ಸಾರಿತು.
ಇಲ್ಲಿಂದ ಗುಜರಾತಿನ ವಿಧಾನಸಭಾ ಚುನಾವಣೆವರೆಗೆ, ಸುಮಾರು 18 ತಿಂಗಳುಗಳ ಕಾಲ ಮೇವಾನಿ, ಉನಾ ಹೋರಾಟದ ಕಿಚ್ಚನ್ನು ಆರದಂತೆ ಜತನದಿಂದ ಕಾಪಾಡಿಕೊಂಡು ಬಂದರು. ಅದೇ ಹುರುಪಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಸಮಾಜಮುಖಿ ಹೋರಾಟಗಾರನ ಬೆನ್ನಿಗೆ ನಿಂತ ಕಾಂಗ್ರೆಸ್-ಕಮ್ಯುನಿಸ್ಟ್ ಪಕ್ಷಗಳು, ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಎದುರಾಳಿ ಬಿಜೆಪಿಯಂತೂ ಹಣ-ಅಧಿಕಾರವನ್ನೆಲ್ಲ ತಂದು ಸುರಿಯಿತು. ಕೆಟ್ಟ ತಂತ್ರ-ಕುತಂತ್ರಗಳಿಗೆ ಕೈ ಹಾಕಿತು. ಆದರೆ ಬಿಜೆಪಿ ಆಡಳಿತದ ನಿರಂತರ ದೌರ್ಜನ್ಯವನ್ನು ಸಹಿಸಿ ಸಾಕಾಗಿದ್ದ ದಲಿತರು, ಮುಸ್ಲಿಮರು ಮತ್ತು ಹಿಂದುಳಿದವರು ಒಂದಾದರು. ಮೇವಾನಿಗೆ ಮತ ನೀಡಿದರು. ತಮ್ಮ ಅಸ್ತಿತ್ವ-ಅಸ್ಮಿತೆಯನ್ನು ಗೆಲ್ಲಿಸಿಕೊಂಡರು.
ದೂರದಿಂದ ನಿಂತು ನೋಡುವವರಿಗೆ ಇದು ಪ್ರಗತಿಪರರ ಸಾಂಕೇತಿಕ ಜಯದಂತೆ; ತತ್ವ-ಸಿದ್ಧಾಂತಗಳಿಗೆ ಬೆಲೆ ಬಂದಂತೆ; ಹೋರಾಟಕ್ಕೆ ಸಿಕ್ಕ ಗೆಲುವಿನಂತೆ- ಹೀಗೆ ಏನೇನೋ ಅದ್ಭುತ, ಅಮೋಘವಾಗಿ ಕಾಣುವುದು ಸಹಜ. ಆದರೆ ಉನಾ ಘಟನೆಯಲ್ಲಿ ಖುದ್ದು ನೊಂದ ಕುಟುಂಬದಿಂದ ಬಂದ ಬಾಬುಬಾಯ್ ಸರ್ವಯ್ಯ, ‘ಜಿಗ್ನೇಶ್ ರಾಜಕಾರಣಕ್ಕೆ ಬರಬೇಕೆಂದು ತನ್ನನ್ನೇ ತಾನು ಮಾರಿಕೊಂಡದ್ದು ಸರಿಯಲ್ಲ. ಅಷ್ಟಕ್ಕೂ ಗೆದ್ದು ನಮ್ಮ ದಲಿತರಿಗೆ ಏನು ತಾನೆ ಮಾಡಿಯಾರು? ಕಳೆದ ಸಲ 13 ಜನ ದಲಿತ ಶಾಸಕರಿದ್ದರು. ದಲಿತರ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಗಳನ್ನು ಎತ್ತಿಡುವುದು, ಖರ್ಚು ಮಾಡುವುದು 1947ರಿಂದ ನಡೆಯುತ್ತಲೇ ಇದೆ. ಆದರೂ ಸತ್ತ ದನ ಎತ್ತುವುದು, ಕೊಳಕು ಬಾಚುವುದು ನಿಲ್ಲಲಿಲ್ಲ. ಈಗ ಜಿಗ್ನೇಶ್ ಒಬ್ಬನಿಂದ ಏನು ಮಾಡಲು ಸಾಧ್ಯ?’ ಎಂದಿರುವುದು ಸದ್ಯದ ದೇಶದ ದಲಿತರ ಸ್ಥಿತಿಯನ್ನು ಧ್ವನಿಸುವಂತಿದೆ. ದಲಿತರ ಉದ್ಧಾರ ಎಂಬ ನಾಟಕವನ್ನು ನಗ್ನಗೊಳಿಸಿದೆ. ಇದನ್ನು ಪುಷ್ಟೀಕರಿಸುವಂತೆ, ದಿಕ್ಕೆಟ್ಟ ಸ್ಥಿತಿಯಿಂದ ಬಂದ, ಕಷ್ಟ-ನಷ್ಟ ಉಂಡ ದಲಿತ ಹೋರಾಟಗಾರರು-ನಾಯಕರು ಸಣ್ಣಪುಟ್ಟ ಅಧಿಕಾರದಾಸೆಗೆ ಸಮುದಾಯವನ್ನು ದಾರಿ ತಪ್ಪಿಸಿದ್ದು; ರಾಜಕೀಯ ನಾಯಕರಿಗೆ ಬೇಕಾದ ಸಮಯಕ್ಕೆ ಬೇಕಾದ ದಾಳಗಳಂತೆ ಬಳಕೆಯಾಗಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿ ಅಣಕಿಸುತ್ತಿವೆ.
ಆದರೆ ಇದೇ ಮಾನದಂಡವನ್ನು ಬಳಸಿ ಜಿಗ್ನೇಶ್ ಮೇವಾನಿಯನ್ನು ಅಳೆಯುವ, ಅಲ್ಲಗಳೆಯುವ ಅಗತ್ಯವಿಲ್ಲ. ಮೋದಿಯ ನೂರೆಂಟು ತಪ್ಪುಗಳನ್ನು ಮುಚ್ಚಿ, ಮೆಚ್ಚಿ ಮಾತನಾಡುವ ಸಂಘ ಪರಿವಾರದವರಂತೆ; ಅಮಿಶ್ ಶಾ ಮಗನ ದಿಢೀರ್ ಶ್ರೀಮಂತಿಕೆಯನ್ನು ಮರೆಮಾಚಿ, ಬೇಡದ ಸುದ್ದಿ ಪ್ರಸಾರ ಮಾಡುವ ಮಾಧ್ಯಮದವರಂತೆ; ಗೋಮಾಂಸ ಮಾರಿ ಶ್ರೀಮಂತರಾಗಿ, ಗೋಹತ್ಯೆಯ ನೆಪದಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಬಡಿಯಲು ಪ್ರೇರೇಪಿಸುವವರಂತೆ; ದೇಶ-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುವವರಂತೆ ಈ ದೇಶದ ಬಹುಸಂಖ್ಯಾತರು ಕೂಡ ಮೇವಾನಿಯ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸಿ, ಆತನ ಹೋರಾಟ, ವಿಚಾರ, ಸಂಘಟನಾ ಚತುರತೆ, ದೃಢತೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಮತ್ತು ಆತನನ್ನು ಮೆಚ್ಚಿ ಮಾತನಾಡಬೇಕಾದ ಅನಿವಾರ್ಯತೆ ಇದೆ.
ಶಾಸಕನಾಗಿ ಆಯ್ಕೆಯಾದ ಮರುದಿನವೇ, ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಪಲನ್‌ಪುರ್ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಜಿಗ್ನೇಶ್ ಮೇವಾನಿ, ಮುಂದಿನ 15 ದಿನಗಳಲ್ಲಿ ರಸ್ತೆಗಳನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೋದಿಯ ಬಗ್ಗೆ ತರ್ಕಬದ್ಧವಾಗಿ ಮಾತಾಡಿ ಸಂಚಲನ ಉಂಟು ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕರ್ನಾಟಕಕ್ಕೆ ಬರಲಿದ್ದೇನೆ ಎಂದಿದ್ದಾರೆ.
ಈಗ ಎಡಪಂಥೀಯರ ಮುಂದಿರುವ ಪ್ರಶ್ನೆ ಜಿಗ್ನೇಶ್ ಮೇವಾನಿಯ ಮಿಂಚನ್ನು, ಕರ್ನಾಟಕದ ಗೆಲುವನ್ನಾಗಿ ಮಾಡಿಕೊಳ್ಳುವ ಬಗೆ ಹೇಗೆ ಎಂದು ಚಿಂತಿಸುವುದು ಮತ್ತು ಆ ಮಾರ್ಗದಲ್ಲಿ ಮುಂದಡಿ ಇಡುವುದು. ಗುಜರಾತಿನಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್, ಎಸ್‌ಡಿಪಿಐ ಮೇವಾನಿ ಪರವಾಗಿದ್ದವು. ಇದರಿಂದ ಬಿಜೆಪಿ ಬೊಬ್ಬೆಗೆ ಬ್ರೇಕ್ ಬಿತ್ತು. ಇದನ್ನೇ ಕರ್ನಾಟಕದಲ್ಲೂ ಚಾಲ್ತಿಗೆ ತಂದರೆ, ಕಾಂಗ್ರೆಸ್-ಜೆಡಿಎಸ್-ಬಿಎಸ್ಪಿ-ಎಸ್‌ಡಿಪಿಐಗಳ ಸಮಾನಮನಸ್ಕ ನಾಯಕರು ತಮ್ಮ ಅಹಂ ಅದುಮಿಟ್ಟು ಹೊಂದಾಣಿಕೆ ಮಾಡಿಕೊಂಡರೆ, ಮುಸ್ಲಿಮರು ಮತ್ತು ದಲಿತರು ಒಂದಾದರೆ ಮೋದಿಗೆ ಮಣ್ಣುಮುಕ್ಕಿಸಬಹುದು. ಇಲ್ಲದಿ್ದರೆ..