ಆರೋಗ್ಯ ಸೂಚಿಸುವ ನಾಲಿಗೆ!
ನಾಲಿಗೆ ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ ಎನ್ನುವುದು ಗೊತ್ತೇ? ನಾಲಿಗೆಯ ಬಣ್ಣವು ನಮ್ಮ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಶರೀರದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಹೇಳಬಲ್ಲುದು.
ಸಾಮಾನ್ಯವಾಗಿ ನಾಲಿಗೆಯು ಗುಲಾಬಿ ಬಣ್ಣದಲ್ಲಿದ್ದು, ರುಚಿಮೊಗ್ಗುಗಳನ್ನು ಹೊಂದಿ ರುತ್ತದೆ. ನಾಲಿಗೆಯು ಇದಕ್ಕಿಂತ ಭಿನ್ನವಾಗಿ ಕಂಡುಬಂದರೆ ಅದು ನಿಮ್ಮ ಶರೀರದ ಶೃತಿ ಎಲ್ಲೋ ತಪ್ಪಿದೆ ಎಂದು ಹೇಳಲು ಬಯಸುತ್ತಿದೆ ಎಂದೇ ಅರ್ಥ.
ನಿಮ್ಮ ನಾಲಿಗೆ ನಿಮಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ನೋಡೋಣ.
♦ ಕೆಂಪು ನಾಲಿಗೆ
ನಾಲಿಗೆಯು ಕೆಂಬಣ್ಣಕ್ಕೆ ತಿರುಗಿದ್ದರೆ ನಿಮಗೆ ವಿಟಾಮಿನ್ಗಳ ಕೊರತೆಯಿದೆ ಎಂದು ಅರ್ಥ. ಸಸ್ಯಾಹಾರಿಗಳು ವಿಟಾಮಿನ್ ಬಿ 12ರ ಕೊರತೆಗೆ ಬಹು ಸುಲಭವಾಗಿ ತುತ್ತಾಗುತ್ತಾರೆ. ಹೆಚ್ಚಿನ ಸಲ ವಿಟಾಮಿನ್ ಕೊರತೆಗೆ ಅಂತರ್ಗತ ಜೀರ್ಣ ಸಮಸ್ಯೆಯೂ ಕಾರಣವಾಗಿರುತ್ತದೆ. ಆಹಾರದ ಅಲರ್ಜಿ, ಗಂಟಲಿನ ಸೋಂಕಿನಿಂದ ಕೂಡ ನಾಲಿಗೆಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಿಮ್ಮ ನಾಲಿಗೆಯ ಮೇಲೆ ಕೆಂಪು ಪ್ಯಾಚ್ ನಿಮ್ಮ ಗಮನಕ್ಕೆ ಬಂದರೆ ಅಥವಾ ನಾಲಿಗೆ ಕೆಂಪುಬಣ್ಣಕ್ಕೆ ತಿರುಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಅದು ಎರಿತ್ರೋಪ್ಲಾಕಿಯಾದಂತಹ ಕ್ಯಾನ್ಸರ್ಪೂರ್ವ ಗಾಯವಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಬಯಾಪ್ಸಿ ಅಗತ್ಯವಾಗಬಹುದು.
♦ ಕಪ್ಪುಬಣ್ಣದ, ಕೂದಲಿನಿಂದ ಕೂಡಿದ ನಾಲಿಗೆ
ಕೂದಲಿನಂತಹ ನವಿರಾದ ಎಳೆಗಳಿಂದ ಕೂಡಿದ ಕಪ್ಪು ಅಥವಾ ಕಂದು ನಾಲಿಗೆಯು ನೀವು ಬಾಯಿಯ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಈ ಪರಿವರ್ತನೆ ಹಾನಿಕರವೇನಲ್ಲ ಮತ್ತು ತನ್ನಿಂತಾನೇ ಪರಿಹಾರಗೊಳ್ಳುತ್ತದೆ. ಕಪ್ಪು ಅಥವಾ ಕಂದು ಬಣ್ಣದ ನಾಲಿಗೆಗೆ ಧೂಮಪಾನ ಮತ್ತು ಔಷಧಿಯ ರಿಯಾಕ್ಷನ್ ಕೂಡ ಕಾರಣವಾಗಬಹುದು. ನಿಮ್ಮ ನಾಲಿಗೆ ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತಿದ್ದರೆ ನೀವು ಸರಿಯಾಗಿ ಹಲ್ಲುಜ್ಜುವ ಬಗ್ಗೆ ಮತ್ತು ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.
♦ ಬಿಳಿಬಣ್ಣದ ನಾಲಿಗೆ
ಆಹಾರದ ಅವಶೇಷಗಳು ತೆಳುವಾಗಿ ಅಂಟಿಕೊಳ್ಳುವುದರಿಂದ ನಾಲಿಗೆಯು ಬಿಳಿಬಣ್ಣಕ್ಕೆ ತಿರುಗುತ್ತದೆ ಮತ್ತು ಅದನ್ನು ಟಂಗ್ಕ್ಲೀನರ್ ಬಳಸಿ ತೆಗೆಯಬಹುದಾಗಿದೆ. ಯೀಸ್ಟ್ನ ಸೋಂಕು, ಕ್ಯಾಂಡಿಡಿಯಾಸಿಸ್ ಮತ್ತು ಲುಕೊಪ್ಲಾಕಿಯಾದಂತದ ವೈದ್ಯಕೀಯ ಸ್ಥಿತಿಗಳೂ ನಾಲಿಗೆಯನ್ನು ಬಿಳಿಯ ಬಣ್ಣಕ್ಕೆ ತಿರುಗಿಸುತ್ತವೆ. ಯೀಸ್ಟ್ ಮತ್ತು ಕ್ಯಾಂಡಿಡಾ ಸೋಂಕುಗಳನ್ನು ಬೂಸ್ಟ್ ನಿರೋಧಕ ಔಷಧಿಗಳ ಮೂಲಕ ಗುಣಪಡಿಸಬಹುದಾಗಿದೆ. ಆದರೆ ಲುಕೊಪ್ಲಾಕಿಯಾ ನಾಲಿಗೆ, ಕೆನ್ನೆ ಅಥವಾ ಬಾಯಿಯ ಯಾವುದೇ ಮೃದು ಮೇಲ್ಮೈನ ಮೇಲೆ ಕಾಣಿಸಿಕೊಳ್ಳಬಹುದಾದ ಬಿಳಿಯ ಪ್ಯಾಚ್ ಆಗಿದ್ದು, ಅದನ್ನು ಕೆರೆಸಿ ತೆಗೆಯಲಾಗುವುದಿಲ್ಲ. ಅದು ಕ್ಯಾನ್ಸರ್ಪೂರ್ವ ಲಕ್ಷಣವೂ ಆಗಿರಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವೈದ್ಯರನ್ನು ಕಾಣುವುದು ಒಳ್ಳೆಯದು.
♦ ನೀಲಿ ನಾಲಿಗೆ
ನಾಲಿಗೆಯು ನೀಲಿ ಬಣ್ಣಕ್ಕೆ ತಿರುಗಿದ್ದರೆ ಹೆಚ್ಚಿನ ಕಳವಳಕ್ಕೆ ಕಾರಣವಾಗುತ್ತದೆ. ಇದು ಶರೀರದಲ್ಲಿ ಆಮ್ಲಜನಕದ ಕೊರತೆಯು ಕಾರಣವಾಗಿರುವ ಸೈನೊಸಿಸ್ನಿಂದ ಆಗಿರಬಹುದು. ಹೃದಯ ಮತ್ತು ಶ್ವಾಸಕೋಶಗಳಲ್ಲಿ ಸಮಸ್ಯೆ ಅಥವಾ ಪಾದರಸ ವಿಷಪ್ರಾಶನವೂ ಸೈನೊಸಿಸ್ಗೆ ಕಾರಣವಾಗುತ್ತದೆ. ಸಿ ವಿಟಾಮಿನ್ನ ತೀವ್ರ ಕೊರತೆಯೂ ಇದಕ್ಕೆ ಕಾರಣವಾಗಬಹುದು. ಅದೇನೇ ಇರಲಿ....ನಿಮ್ಮ ನಾಲಿಗೆಯು ನೀಲಿ ಬಣ್ಣಕ್ಕೆ ತಿರುಗಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.
♦ ಪೇಲವ ನಾಲಿಗೆ
ನಾಲಿಗೆಯ ಬಣ್ಣವು ಪೇಲವವಾಗಿದ್ದರೆ ಅದು ರಕ್ತಹೀನತೆಯನ್ನು ಸೂಚಿಸುತ್ತದೆ. ರಕ್ತದಲ್ಲಿ ಹಿಮೊಗ್ಲೋಬಿನ್ ಕೊರತೆಯು ನಾಲಿಗೆಯನ್ನು ಪೇಲವ ಮತ್ತು ಮೃದುಗೊಳಿಸುತ್ತದೆ. ಧೂಮಪಾನ, ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದು, ನಿರ್ಜಲೀಕರಣ ಮತ್ತು ದುರ್ಬಲ ರೋಗ ನಿರೋಧಕ ವ್ಯವಸ್ಥೆಯೂ ಪೇಲವ ನಾಲಿಗೆಗೆ ಕಾರಣವಾಗಬಹುದು
ನಾಲಿಗೆಯ ಬಣ್ಣದಲ್ಲಿ ಯಾವುದೇ ಬದಲಾವಣೆಯು ಶರೀರದಲ್ಲಿಯ ಗಂಭೀರ ರೋಗದತ್ತ ಬೆಟ್ಟು ಮಾಡಬಹುದು. ಇಂತಹ ಬದಲಾವಣೆಗಳ ಮೇಲೆ ಕಣ್ಣಿರಿಸಿದರೆ ಹಲವಾರು ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚಬಹುದು.