ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ
ಡಿಸಿ ಕಚೇರಿ ಎದುರಿನ ಮರಗಳ ಮಾರಣಹೋಮ
► ತೆಂಗು ಸೇರಿ ವಿವಿಧ ಜಾತಿಯ ಮರಗಳು ತೆರವುಗೊಳು್ಳವ ಆತಂಕ
► ಪಾರ್ಕಿಂಗ್‌ನ ಜಾಗವೂ ಚತುಷ್ಪಥಕ್ಕೆ ಬಲಿ
► ಕಾರಂಜಿ ಎತ್ತಂಗಡಿ ಸಾಧ್ಯತೆ
ಕಾರವಾರ, ಡಿ.28: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣವಾಗುತ್ತಿದ್ದು, ವಿವಿಧ ಜಾತಿಯ ಸುಮಾರು 25ಕ್ಕೂ ಹೆಚ್ಚು ಗಿಡ-ಮರಗಳ ಮಾರಣಹೋಮವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ನ್ನು ವಿಸ್ತರಿಸಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಜಿಲ್ಲೆಯ ಕರಾವಳಿಯುದ್ದದ ತಾಲೂಕುಗಳಲ್ಲಿ ನಡೆಯುತ್ತಿದೆ. ಈಗಾಗಲೇ ಕೆಲ ಭಾಗಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದು, ನಗರದಲ್ಲಿ ಕೂಡ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ಇದೀಗ ಜಿಲ್ಲಾಧಿಕಾರಿ ಕಚೇರಿ ಎದುರಿನ ಭಾಗವನ್ನು ಸರ್ವಿಸ್ ರಸ್ತೆಗೆ ತೆರವುಗೊಳಿಸುತ್ತಿದ್ದು, ಇದು ಜಿಲ್ಲಾಧಿಕಾರಿ ಕಚೇರಿಯ ಸೌಂದರ್ಯಕ್ಕೆ ಕುಂಟಿತವಾಗಲಿದೆ.
ಕಳೆದ ಸುಮಾರು ಎರಡು ವರ್ಷಗಳ ಹಿಂದೆಯೇ ಸರ್ವೇ ನಡೆದಾಗ ಕಚೇರಿ ಎದುರಿನ ಪಾರ್ಕಿಂಗ್ ಜಾಗದ ಬಳಿ ಇರುವ ತೆಂಗು ಸೇರಿದಂತೆ ಇತರ ಜಾತಿಯ ಬೃಹತ್ ಮರಗಳು ತೆರವುಗೊಳ್ಳುವ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತ ಮನವಿ ಮೇರೆಗೆ ಇಲ್ಲಿವರೆಗೆ ಸುಮ್ಮನಿದ್ದ ಗುತ್ತಿಗೆ ಪಡೆದ ಕಂಪೆನಿ ಇದೀಗ ಅದನ್ನು ತೆರವುಗೊಳಿಸಲು ಮುಂದಾಗಿದೆ. ಇದರಿಂದ ನಿತ್ಯ ನೂರಾರು ಜನರಿಗೆ ನೆರಳನ್ನು ಒದಗಿಸುತ್ತಿದ್ದ ಮರಗಳು ಧರೆಗುರುಳಿ ಮುಂದಿನ ದಿನಗಳಲ್ಲಿ ನಿರಾಸೆ ಮೂಡಲಿದೆ.
ಈಗಾಗಲೇ ಕಚೇರಿ ಎದುರಿನ ತೆಂಗಿನಮರಗಳನ್ನು ತೆರವುಗೊಳಿಸಿದ್ದು, ಬುಧವಾರ ಜಿಲ್ಲಾಧಿಕಾರಿ ಎದುರು ಚರಂಡಿ ನಿರ್ಮಾಣಕ್ಕೆ ಕಾಲುವೆ ತೆಗೆದಿದೆ. ಅಲ್ಲದೆ, ಇಲ್ಲಿದ್ದ ಕಾರಂಜಿ ಕೂಡ ತೆರವುಗೊಳ್ಳಲಿದೆ. ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವವರಿಗೆ ಪಾರ್ಕಿಂಗ್‌ಗೆ ಅನುಕೂಲವಾಗಿದ್ದ ಜಾಗವಿದೀಗ ಚತುಷ್ಪಥಕೆ್ಕ ಬಲಿಯಾಗಿದೆ.
ಜಿಲ್ಲಾಧಿಕಾರಿ ದ್ವಾರದ ಬಳಿ ಇರುವ ಬೃಹತ್ ಮರವೂ ಕೆಲವೇ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಬಲಿಯಾಗಲಿದೆ. ಈ ಮರದಡಿಯ ನೆರಳಿನಲ್ಲಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಜನ ಪ್ರತಿಭಟನೆ, ಮನವಿ ಸಲ್ಲಿಸುವುದು, ಧರಣಿಗಳನ್ನು ನಡೆಸುತ್ತಿದ್ದರು. ಮುಂದಿನ ದಿನದಲ್ಲಿ ಜನ ಬಿಸಿಲಿನಲ್ಲೇ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಆಗ್ರಹಿಸಬೇಕಾಗಿದೆ.