ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ.
-ಗಜೇಶಮಸಣಯ್ಯನವರ ಪುಣ್ಯಸ್ತ್ರೀ
ಗಜೇಶಮಸಣಯ್ಯನವರ ಪುಣ್ಯಸ್ತ್ರೀ ಹೆಸರು ಗೊತ್ತಾಗಿಲ್ಲ. ಅವರ ವಚನಗಳ ಹಸ್ತಪ್ರತಿಗಳಲ್ಲಿ ಹೆಸರು ಇಲ್ಲ. ಯಾವ ವಚನಕಾರರೂ ಅವರ ಹೆಸರನ್ನು ಹೇಳಿಲ್ಲ. ಮಸಣಯ್ಯನವರ ಪುಣ್ಯಸ್ತ್ರೀ ಆಗಿದ್ದರಿಂದ ಮಸಣಮ್ಮ ಎಂದು ಕೆಲವರು ಕರೆಯುವುದರಿಂದ ಆ ಹೆಸರು ರೂಢಿಯಲ್ಲಿದೆ. ಮಸಣಮ್ಮನ ಈ ವಚನ ಅನುಭಾವದ ನೆಲೆಯ ಮೇಲೆಯೇ ಜೀವನ್ಮುಖಿಯಾಗಿದೆ. ನಿರ್ಭಯ ಮತ್ತು ಸಂಯಮದಿಂದ ಕೂಡಿದ ತರ್ಕಪ್ರಧಾನ ವಚನವಿದು. ಸರಳ ಸಹಜ ಶಬ್ದಗಳ ಮೂಲಕ ಮಸಣಮ್ಮ ಶಕ್ತಿಶಾಲಿಯಾದ ವಚನ ರಚಿಸಿದ್ದಾಳೆ. ದೈನಂದಿನ ಬದುಕಿಗೆ ಅವಶ್ಯವಾಗಿ ಬೇಕಾಗಿರುವಂಥ ಎಲ್ಲವನ್ನೂ ನೈತಿಕದ ನೆಲೆಯಲ್ಲಿ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಮಸಣಮ್ಮ ವಾದಿಸುತ್ತಾಳೆ. ದೇವರು ಕೂಡ ಅವುಗಳ ಸದ್ಬಳಕೆಯನ್ನು ವಿರೋಧಿಸಲಾರ ಎಂಬುದು ಅವಳ ನಿಲುವಾಗಿದೆ.
ಅವಳ ವಿಚಾರ ವಾಸ್ತವದ ತಳಹದಿಯ ಮೇಲೆ ನಿಂತಿದೆ. ಬಸವಧರ್ಮವು ಸಂಸಾರಧರ್ಮ ಆಗಿರುವ ಕಾರಣ ಮಸಣಮ್ಮ ಲೌಕಿಕ ಜಗತ್ತಿನ ಯಾವುದನ್ನೂ ನಿರಾಕರಿಸಲಿಲ್ಲ. ದೇಹಕ್ಕೆ ಮತ್ತು ಜೀವಕ್ಕೆ ಬೇಕೆನಿಸಿದ್ದನ್ನು ಪಡೆಯುವುದರಲ್ಲಿ ತಪ್ಪೇನಿದೆ? ದೇವರನ್ನು ಒಲಿಸಿಕೊಳ್ಳಲು ಹೊನ್ನು, ಹೆಣ್ಣು, ಮಣ್ಣು ಮತ್ತು ಇಂದ್ರಿಯ ಸುಖಗಳನ್ನು ಏಕೆ ತ್ಯಜಿಸಬೇಕು? ಜಗತ್ತಿಗೆ ವಿಮುಖವಾಗಿ ಹಿಮಾಲಯ ಸೇರಬೇಕಿಲ್ಲ. ವಚನದಲ್ಲಿ ತಿಳಿಸಿದ ವಸ್ತುಗಳಿಗೆ ಮತ್ತು ಸಂಬಂಧಗಳಿಗೆ ದೇವರ ವಿರೋಧವಿಲ್ಲ ಎಂದು ಮಸಣಮ್ಮ ಪ್ರತಿಪಾದಿಸುತ್ತಾಳೆ. ಪ್ರಶ್ನಿಸುವುದರ ಮೂಲಕವೇ ತಿಳಿಸುವ ಕ್ರಮ ಅವಳ ಜೀವನಾನುಭವಕ್ಕೆ ಸಾಕ್ಷಿಯಾಗಿದೆ. ಮಸಣಮ್ಮ ಇದಿಷ್ಟೇ ಹೇಳಲಿಲ್ಲ. ತಾನು ಹೇಳಿದ ವಸ್ತುಗಳ ಬಳಕೆ ಮತ್ತು ಸಂಬಂಧಗಳು ದೇವಸಮ್ಮತಾಗಿರಬೇಕು ಎಂದು ಎಚ್ಚರಿಸುತ್ತಾಳೆ.
ಪರಂಜ್ಯೋತಿ, ಪರಮಕರುಣಾಳು ಮತ್ತು ಪರಮಶಾಂತ ದೇವರು ಹೊನ್ನು ಹೆಣ್ಣು ಮತ್ತು ಮಣ್ಣನ್ನು ವಿರೋಧಿಸುವುದಿಲ್ಲ. ಆದರೆ ಅವುಗಳ ಜೊತೆಗಿನ ನಮ್ಮ ಸಂಬಂಧ ಅಪವಿತ್ರವಾಗಿದ್ದರೆ ಆತನಿಗೆ ಕೋಪ ಬರುವುದು. ಆತನ ಕೋಪಕ್ಕೆ ಕಾರಣವಾದುದನ್ನು ಅರಿತು ನಮ್ಮ ಬದುಕನ್ನು ಸರಿಪಡಿಸಿಕೊಂಡರೆ, ಅಂದರೆ ಆತ್ಮಸಾಕ್ಷಿಯಂತೆ ನಡೆದುಕೊಂಡರೆ ದೇವರ ದರ್ಶನವಾದಂತೆಯೆ.
ಬಸವಧರ್ಮವು ಸಂಸಾರಧರ್ಮವಾದ ಹಾಗೆ ಸ್ತ್ರೀವಾದಿ ಧರ್ಮವೂ ಆಗಿದೆ. ಇಡೀ ಮಾನವಕುಲ ಸಸ್ತನಿ ವರ್ಗಕ್ಕೆ ಸೇರಿದ್ದು. ಸಸ್ತನಿ ವರ್ಗದ ಜೀವಿಗಳೆಲ್ಲ ತಾಯಿಯ ಹಾಲು ಕುಡಿದೇ ಬೆಳೆದವುಗಳಾಗಿವೆ. ಶರಣಸತಿ ಲಿಂಗಪತಿ ಪರಿಕಲ್ಪನೆಯು ಸ್ತ್ರೀವಾದವನ್ನು ಎತ್ತಿ ಹಿಡಿಯುವಂಥದ್ದೇ ಆಗಿದೆ. ಶರಣರು ಸತಿಯಾಗಿ ಲಿಂಗಪತಿಯನ್ನು ನೋಡುವ ಮೂಲಕ ಇಡೀ ಸ್ತ್ರೀವರ್ಗಕ್ಕೆ ಗೌರವ ಸೂಚಿಸಿದ್ದಾರೆ. ಈ ಜಗತ್ತಿನಲ್ಲಿ ಮಾತೃಹೃದಯದ ವಿಜಯವಾಗಬೇಕು. ಅಂದಾಗ ಮಾತ್ರ ಸರ್ವರಿಗೂ ನ್ಯಾಯ ಮತ್ತು ಸಮಾನತೆ ಸಹಜವಾಗಿಯೇ ಲಭಿಸುವವು ಎಂಬುದು ಶರಣರ ದೃಢನಂಬಿಕೆಯಾಗಿತ್ತು. ಶರಣರು ಲಿಂಗದ ಸತಿಯಾದಾಗ ಸಹಜವಾಗಿಯೇ ಜಗನ್ಮಾತೆಯರಾಗುವರು. ಅಂದರೆ ವಿಶಾಲವಾದ ಮಾತೃಹೃದಯ ಹೊಂದುವರು. ಜಗತ್ತಿನ ಪ್ರತಿಯೊಂದು ಜೀವಿಯನ್ನು ಆಯಾ ಜೀವಿಯ ತಾಯಿಯಂತೆ ನೋಡುವರು. ಯಾವ ಜೀವಿಯ ತಾಯಿ ತನ್ನ ಮಗುವಿನ ರಕ್ಷಣೆಯನ್ನು ಕಡೆಗಣಿಸುವಳು? ಹಾಗೆಯೆ ಶರಣರು ತಾಯಿ ಸ್ವರೂಪದಲ್ಲಿ ನಿಂತು ಎಲ್ಲ ಜೀವಿಗಳ ರಕ್ಷಣೆಯನ್ನು ಬಯಸಿದರು. ಅಂತೆಯೆ ಶರಣ ಸಂಕುಲದಲ್ಲಿ ಮಹಿಳೆಯರಿಗೆ ಮಾತನಾಡುವ ಸಾಮರ್ಥ್ಯ ಬಂದಿತು. ಪ್ರಶ್ನಿಸುವ ಧೈರ್ಯ ಬಂದಿತು. ಭಾರತದ ಪುರುಷ ಪ್ರಧಾನ ಸಮಾಜದಲ್ಲಿ ಯುಗಯುಗಗಳಿಂದ ಅಭಿಪ್ರಾಯ ಸ್ವಾತಂತ್ರ್ಯವೂ ಇಲ್ಲದೆ ಬದುಕಿದ ಮಹಿಳೆ, ಶರಣರ ಸಮೂಹದಲ್ಲಿ ಎಷ್ಟು ಅದ್ಭುತವಾಗಿ ಮಾತನಾಡತೊಡಗಿದಳು ಎನ್ನುವುದಕ್ಕೆ ವಚನಕಾರ್ತಿಯರ ವಚನಗಳೇ ಸಾಕ್ಷಿಯಾಗಿವೆ.
ವಚನಕಾರ್ತಿಯರು ಸಾತ್ವಿಕವಾದ ಸಾಂಸಾರಿಕ ಬದುಕಿಗೆ ಬಹಳ ಬೆಲೆ ಕೊಟ್ಟಿದ್ದಾರೆ. ವ್ರತ ಪ್ರಜ್ಞೆಯ ಮೂಲಕ ಅನೈತಿಕ ಬದುಕನ್ನು ನಿಕೃಷ್ಟವಾಗಿ ಕಂಡಿದ್ದಾರೆ. ವಚನಕಾರ್ತಿಯರು ಜೀವನಮೌಲ್ಯಗಳ ಸಾಕಾರರೂಪವಾಗಿದ್ದಾರೆ. ಈ ಬದುಕನ್ನು ಪವಿತ್ರವಾಗಿ ಬದುಕಬೇಕು ಎಂಬುದು ಅವರ ಛಲವಾಗಿದೆ. ಈ ಛಲದಿಂದಲೇ ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ ಇಂಥ ವಚನಗಳನ್ನು ಬರೆದಿದ್ದಾಳೆ. ಹೆಣ್ಣು, ಹೊನ್ನು, ಮಣ್ಣು, ಅಂಗ, ಇಂದ್ರಿಯ ಮತ್ತು ಜಗತ್ತು ಲಿಂಗತತ್ತ್ವಕ್ಕೆ ವಿರುದ್ಧವಾಗಿಲ್ಲ ಎಂಬುದನ್ನು ಈಕೆ ಪ್ರತಿಪಾದಿಸುವ ಕ್ರಮ ಪ್ರಾಂಜಲ ಮನಸ್ಸಿನಿಂದ ಮತ್ತು ದೃಢನಿರ್ಧಾರದಿಂದ ಕೂಡಿದೆ. ಅವಳು ಹಾಕುವ ಎಲ್ಲ ಪ್ರಶ್ನೆಗಳಲ್ಲೇ ‘ಇಲ್ಲ’ ಎಂಬ ಉತ್ತರ ಧ್ವನಿಸುತ್ತದೆ. ಆ ಧ್ವನಿ ನಮಗೆ ಅರಿವಾಗದಂತೆಯೆ ನಮ್ಮ ಅಂತಃಕರಣಕ್ಕೆ ಮುಟ್ಟುತ್ತದೆ. ಈ ಸತ್ಯವನ್ನು ಅರಿತು ಕೊಂಡು ನಾವು ಅವಳ ಮುಂದೆ ಮೌನವಾಗಿ ನಿಲ್ಲುವುದೊಂದೇ ಗೌರವಯುತವಾದ ನಿಲವು.
ಈ ಪುಣ್ಯಸ್ತ್ರೀ ಹಾಕುವ ಪ್ರಶ್ನೆಗಳು ಮಾನವ ಸಂಸ್ಕಾರದ ಪರಿಧಿಯಲ್ಲಿವೆ. ಭೌತಿಕ ಮತ್ತು ಇಂದ್ರಿಯ ಸಂಬಂಧಗಳು ಮರ್ಯಾದೆಯ ನೆಲೆಯಲ್ಲೇ ಇರಬೇಕು ಎಂಬುದು ಆಕೆಯ ಷರತ್ತಾಗಿದೆ. ಹಾಗೆ ಆಗದಿದ್ದರೆ ಜನ ಸ್ವೇಚ್ಛಾಚಾರಿಗಳಾಗುವರು ಮತ್ತು ವಸ್ತುಮೋಹಿಗಳಾಗಿ ಕಂಡದ್ದೆಲ್ಲವೂ ತಮಗೇ ಬೇಕು ಎಂಬ ದುರಾಸೆಗೆ ಒಳಗಾಗುವರು. ಆಗ ಜಗತ್ತು ಎಲ್ಲ ತೆರನಾದ ಅನೈತಿಕ ವಾತಾವರಣದಿಂದ ಕಲುಷಿತಗೊಂಡು ಸಾತ್ವಿಕ ಬದುಕನ್ನು ಬದುಕಲು ಅನರ್ಹವಾಗುವುದು. ಅಂಥ ಬದುಕು ದೇವಸಮ್ಮತವಾದುದಲ್ಲ. ಆದ್ದರಿಂದ ಲಿಂಗ ಮೆಚ್ಚುವಂತೆ ಬದುಕಬೇಕು. ಲೈಂಗಿಕ ದಾಹ ಮತ್ತು ಭೌತಿಕ ದುರಾಸೆಗಳಿಂದ ಅಸಹ್ಯವಾಗಿ ಬದುಕಿದರೆ, ಶಾಂತಲಿಂಗಕ್ಕೆ ಕೋಪತಾಪಗಳುಂಟಾಗುವುವು. ಆದ್ದರಿಂದ ಹೀಗಾಗದಂತೆ ಎಚ್ಚರಿಕೆ ವಹಿಸಿ ಅರಿವನ್ನು ಗುರುವಾಗಿಸಿಕೊಂಡು ಸಾತ್ವಿಕವಾಗಿ ಭೌತಿಕ ಜಗತ್ತನ್ನು ಅನುಭವಿಸುವುದರಲ್ಲಿ ತಪ್ಪಿಲ್ಲ ಎಂಬುದನ್ನು ಈ ವಚನಕಾರ್ತಿ ಮನಕ್ಕೆ ನಾಟುವಂತೆ ತಿಳಿಸಿದ್ದಾಳೆ. ‘ಇಂದ್ರಿಯ ನಿಗ್ರಹವ ಮಾಡಿದರೆ ಕಾಡುವವು ದೋಷಂಗಳು’ ಎಂಬ ಬಸವಣ್ಣನವರ ಮಾತು ಮಸಣಮ್ಮನ ಈ ವಚನಕ್ಕೆ ರಕ್ಷಾ ಕವಚದಂತಿದೆ.
***