varthabharthi


ಮುಂಬೈ ಮಾತು

ಮುಕ್ತಿಯ ನಿರೀಕ್ಷೆಯಲ್ಲಿರುವ ಹಳೆಯ ರೈಲುಗಳು

ವಾರ್ತಾ ಭಾರತಿ : 2 Jan, 2018
ಶ್ರೀನಿವಾಸ್ ಜೋಕಟ್ಟೆ

ಗಿಡಗಳನ್ನು ನೆಡುವ ಭರವಸೆ!

ಮುಂಬೈ ಮಹಾನಗರದ ಪ್ರಖ್ಯಾತ ಸಂಜಯ ಗಾಂಧಿ ನೇಷನಲ್ ಪಾರ್ಕ್‌ನಲ್ಲಿ ಅಕ್ರಮವಾಗಿ ಜೋಪಡಿ ಕಟ್ಟಿ ಸರಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿದ್ದ ಸುಮಾರು 50 ಹೆಕ್ಟೇರ್‌ನಷ್ಟು ಜಮೀನನ್ನು ಅರಣ್ಯ ಇಲಾಖೆಯು ಇತ್ತೀಚೆಗೆ ತನ್ನ ವಶಕ್ಕೆ ಪಡೆದಿದೆ. ಇದೀಗ ಈ ಜಮೀನಿನಲ್ಲಿ 20 ಸಾವಿರ ಗಿಡಗಳನ್ನು ಮೆಟ್ರೋ ರೈಲ್ ಕಾರ್ಪೊರೇಷನ್ ಲಿ. (ಎಂಎಂಆರ್‌ಸಿಎಲ್) ನೆಡಲು ಯೋಚಿಸುವ ಮೂಲಕ ಹೊಸ ಹೆಜ್ಜೆ ಇರಿಸಿದೆ.
ಮೆಟ್ರೋ 3 ಸುರಂಗ ಮಾರ್ಗದ ಮೂಲಕ ನಿರ್ಮಾಣವಾಗುವ ಕಾರಣ ಮುಂಬೈಯ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನಲ್ಲೂ ಇಳಿಕೆಯಾಗುತ್ತದೆ ಹಾಗೂ ಪರಿಸರಕ್ಕೂ ಹಾನಿ ಆಗುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದೀಗ ನ್ಯಾಶನಲ್ ಪಾರ್ಕ್ ನಲ್ಲಿ 20 ಸಾವಿರ ಗಿಡಗಳನ್ನು ನೆಡುವುದಲ್ಲದೆ ಏಳು ವರ್ಷ ಕಾಲ ಇದರ ಬಗ್ಗೆ ನಿಗಾ ಇರಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಇದಕ್ಕೂ ಒಂದು ಕಾರಣವಿದೆ. ಮೆಟ್ರೋ 3ರ ಮಾರ್ಗಕ್ಕಾಗಿ 10 ಸಾವಿರ ಮರಗಳನ್ನು ಎಂಎಂಆರ್‌ಸಿಎಲ್‌ನಿಂದ ಕಡಿಯಲಾಗುವುದು. ಇದರಿಂದ ಮುಂಬೈ ಮಹಾನಗರದಲ್ಲಿ ಪರಿಸರಕ್ಕೆ ಭಾರೀ ಹಾನಿ ಸಂಭವಿಸಲಿದೆ. ಈ ಕಾರಣ ಎಂಎಂಆರ್‌ಸಿಎಲ್ ತೀವ್ರ ಟೀಕೆಗೆ ಗುರಿಯಾಗಿತ್ತು. ಇದನ್ನು ಮುಂದಿಟ್ಟು ನೇಷನಲ್ ಪಾರ್ಕ್‌ನಲ್ಲಿ ಎರಡು ಪಟ್ಟು ಅಂದರೆ 20 ಸಾವಿರ ಗಿಡಗಳನ್ನು ನೆಡುವುದಾಗಿ ಅದು ಭರವಸೆ ನೀಡಿದೆ.

ಈಗಾಗಲೇ ಗೋರೆಗಾಂವ್‌ನ ಆರೆಕಾಲನಿಯಲ್ಲಿ ಎಂಎಂಆರ್‌ಸಿಎಲ್ ನೆಟ್ಟಿರುವ ನೂರಾರು ಗಿಡಗಳನ್ನು ನೋಡುವವರಿಲ್ಲದೆ ಒಣಗಿ ಹೋಗಿದ್ದು ಇದಕ್ಕಾಗಿ ಎಂಎಂಆರ್‌ಸಿಎಲ್ ಟೀಕೆಗಳನ್ನು ಎದುರಿಸಿದೆ.

ಮೆಟ್ರೋ 3ರಲ್ಲಿ ಬರುವ ಬಾಂದ್ರಾ, ಕೊಲಬಾ- ಸೀಪ್ಜ್ ಈ ಮೂರೂ ಮಹಾನಗರದ ಔದ್ಯೋಗಿಕ ಕೇಂದ್ರವಾಗಿದೆ. ಹೀಗಾಗಿ ಇಲ್ಲಿ ಪ್ರತೀದಿನ 6 ಲಕ್ಷಕ್ಕೂ ಅಧಿಕ ಖಾಸಗಿ ವಾಹನಗಳು ಓಡಾಡುತ್ತವೆ. ಈ ವಾಹನ ಗಳಿಂದ ಪ್ರತೀದಿನ 15 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್‌ಹೊರಗೆ ಬರುತ್ತವೆ. ಇದು ಪರಿಸರವನ್ನು ಮಾಲಿನ್ಯ ಗೊಳಿಸುವುದು. ಆದರೆ ಮೆಟ್ರೋ 3 ಆರಂಭವಾದ ನಂತರ ರಸ್ತೆಯಲ್ಲಿ 5 ಲಕ್ಷ ವಾಹನಗಳು ಕಡಿಮೆ ಓಡಾಡಬಹುದು ಎಂದು ಹೇಳಲಾಗುತ್ತಿದೆ. ಇದರಿಂದ 8 ರಿಂದ 10 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್ ಹೊರಬರುವುದು ನಿಲ್ಲಲಿದೆಯಂತೆ.

* * *

‘ಭಿಕಾರಿ ಭಗಾವೋ’ ಅಭಿಯಾನ
ಮುಂಬೈಯ ಟ್ರಾಫಿಕ್ ಸಿಗ್ನಲ್, ಮಂದಿರ, ಮಸೀದಿಗಳ ಎದುರು, ಫುಟ್‌ಪಾತ್, ರೈಲ್ವೆ ಸ್ಟೇಷನ್, ಬಸ್‌ಸ್ಟ್ಯಾಂಡ್‌ಗಳಲ್ಲಿ ದೇವರ ಹೆಸರಲ್ಲಿ ಭಿಕ್ಷೆ ಬೇಡುವವರು ಸಾಕಷ್ಟು ಮಂದಿ ಕಂಡು ಬರುತ್ತಾರೆ. ಕನಿಕರದಿಂದ ಅನೇಕರು ಈ ಭಿಕ್ಷುಕರಿಗೆ ಒಂದಿಷ್ಟು ಹಣ ಕೊಡುತ್ತಾರೆ. ಆದರೆ ಈ ಉಪೇಕ್ಷಿತ ಜನರಲ್ಲಿ (ಭಿಕ್ಷುಕರು) ಕೆಲವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಇವರಿಂದಾಗಿ ಕಾನೂನು ಪಾಲನೆಗೆ ತೊಂದರೆಯಾಗುತ್ತದೆ. ಹೀಗಾಗಿ ಇವರ ಬಳಗದ ವಿರುದ್ಧ ಎಚ್ಚೆತ್ತುಕೊಳ್ಳುವುದು ಅಗತ್ಯವಿದೆ ಎಂದು ಮುಂಬೈ ಪೊಲೀಸರು ಹೇಳುತ್ತಿದ್ದಾರೆ.

ಈ ದಿನಗಳಲ್ಲಿ ಮುಂಬೈ ಪೊಲೀಸರು ‘ಭಿಕಾರಿ ಭಗಾವೋ’ ಅಭಿಯಾನ ಆರಂಭಿಸಿದ್ದಾರೆ. ಪೊಲೀಸರ ಅನುಸಾರ ಈ ಭಿಕ್ಷುಕರಲ್ಲಿ ಕೆಲವರು ಸ್ಲೀಪರ್ ಸೆಲ್ ರೀತಿಯಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆಯಂತೆ. ಈ ಬಂಧಿತ ಭಿಕ್ಷುಕರನ್ನು ಬೆಗ್ಗರ್ಸ್ ಹೋಮ್, ಅನಾಥಾಶ್ರಮ, ಜೈಲ್, ಸುಧಾರ್ ಗೃಹಗಳಿಗೆ ಕಳುಹಿಸುತ್ತಿದ್ದಾರೆ. ಮುಂಬೈಯ ಉತ್ತರ ವಲಯದಲ್ಲಿ ಪೊಲೀಸರು ಕಠಿಣ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿ ಬಂಧಿತರನ್ನು ಚೆಂಬೂರ್ ಬೆಗ್ಗರ್ಸ್ ಹೋಮ್‌ಗೆ ಕಳುಹಿಸಿದ್ದರು. 2011ರಲ್ಲಿ ಜನಗಣತಿಯ ಅನುಸಾರ ದೇಶದಲ್ಲಿ ಒಟ್ಟು 3.72 ಲಕ್ಷ ಭಿಕ್ಷುಕರಿದ್ದರು. ಇತ್ತೀಚೆಗೆ ರಾಜ್ಯಸಭೆಯಲ್ಲಿ ಸರಕಾರವು ಹೇಳಿದಂತೆ 4,13,670 ಭಿಕ್ಷುಕರಿದ್ದಾರೆ. 2.2 ಲಕ್ಷ ಪುರುಷರು ಮತ್ತು 1.9 ಲಕ್ಷ ಮಹಿಳೆಯರು ಇದರಲ್ಲಿ ಒಳಗೊಂಡಿದ್ದಾರೆ.

‘ಬಾಂಬೆ ಪ್ರಿವೆನ್ಶನ್ ಆಫ್ ಬೆಗ್ಗಿಂಗ್ ಆ್ಯಕ್ಟ್ 1959’ರ ಅನುಸಾರ, ಸಾರ್ವಜನಿಕ ಸ್ಥಳಗಳಲ್ಲಿ ಕುಣಿಯುವುದು, ಹಾಡುವುದರ ಮೂಲಕ ಅಥವಾ ಬೇರೆ ಇನ್ಯಾವ ರೀತಿಯಲ್ಲಿ ಭಿಕ್ಷೆ ಕೇಳುವುದು ಅಪರಾಧವಾಗಿದೆ. ಮೊದಲ ಬಾರಿ ಬಂಧಿಸಿದಾಗ ಒಂದು ವರ್ಷ, ಎರಡನೇ ಬಾರಿ ಸಿಕ್ಕಿ ಬಿಟ್ಟರೆ 3 ರಿಂದ 10 ವರ್ಷದ ತನಕವೂ ಜೈಲಿನಲ್ಲಿಡಬಹುದು. ವಾರಂಟ್ ಇಲ್ಲದೆಯೂ ಭಿಕ್ಷುಕರನ್ನು ಬಂಧಿಸಬಹುದು. ಮಹಿಳಾ ಭಿಕ್ಷುಕರು ಈಗ ಕಳ್ಳತನ ಪ್ರಕರಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

* * *

ವಿದೇಶಿ ರೋಗಿಗಳಿಗಾಗಿ ವೆಬ್‌ಸೈಟ್
ದೇಶದ ಹೊರಗಿನಿಂದ ಮುಂಬೈಗೆ ಶುಶ್ರೂಷೆಗೆ ಬರುವ ರೋಗಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮಹಾರಾಷ್ಟ್ರ ರಾಜ್ಯ ಸರಕಾರವು ಒಂದು ವೆಬ್‌ಸೈಟ್ ತಯಾರಿಸುತ್ತಿದೆ. ಈ ನೂತನ ವೆಬ್‌ಸೈಟ್ ಜನವರಿ 20ರ ನಂತರ ಆರಂಭವಾಗುವ ಸಾಧ್ಯತೆಗಳಿವೆ.

 ರಾಜ್ಯದಲ್ಲಿ ಮೆಡಿಕಲ್ ಟೂರಿಸಂನ್ನು ಬೆಂಬಲಿಸಲು ಸರಕಾರವು ಅನೇಕ ರೀತಿಯ ಕೆಲಸಗಳನ್ನು ಮಾಡುತ್ತಿದೆ. ಈ ಸಾಲಲ್ಲಿ ರೋಗಿಗಳಿಗೆ ಸೌಲಭ್ಯ ನೀಡುವುದಕ್ಕೆ ವೆಬ್‌ಸೈಟ್‌ನ್ನು ತಯಾರಿಸಲಾಗುತ್ತಿದೆ. ಸ್ವಾಸ್ಥ್ಯ ವಿಭಾಗದಿಂದ ದೊರೆತ ಮಾಹಿತಿಯಂತೆ ಈ ವೆಬ್‌ಸೈಟ್‌ನಲ್ಲಿ ಆಸ್ಪತ್ರೆಗಳ ಮಾಹಿತಿ ಸಹಿತ ಶುಶ್ರೂಷೆಗೆ ತಗಲುವ ವೆಚ್ಚ ಕೂಡಾ ವಿವರವಾಗಿ ತಿಳಿಸಲಾಗುವುದು. ಇದರಿಂದ ಸ್ವಾಸ್ಥ್ಯ ಕ್ಷೇತ್ರದಲ್ಲಿ ಪಾರದರ್ಶಿತ್ವ ಬರುವ ಸಾಧ್ಯತೆಗಳಿವೆ. ಹಾಗೂ ರೋಗಿಗಳಿಗೆ ಬಹಳಷ್ಟು ನೆರವು ಸಿಗಲಿದೆ.

2017 ರ ಫೆಬ್ರವರಿಯಲ್ಲಿ ಮುಂಬೈಗೆ ಶುಶ್ರೂಷೆಗೆ ಈಜಿಪ್ಟ್‌ನಿಂದ ಬಂದಿರುವ ಅತೀ ತೂಕದ ಮಹಿಳೆ ಇಮಾನ್ ಅವರ ಕುಟುಂಬದವರು ಮುಂಬೈಯ ಆಸ್ಪತ್ರೆಯ ಮೇಲೆ ಆರೋಪ ಮಾಡಿದ್ದರು. ಆನಂತರ ಸರಕಾರವು ಇಂತಹ ಸಮಸ್ಯೆಗಳಿಂದ ಎದ್ದೇಳಲು ವೆಬ್‌ಸೈಟ್‌ನ ಅಗತ್ಯವನ್ನು ಮನಗಂಡಿತ್ತು. ರಾಜ್ಯಕ್ಕೆ ಪ್ರತೀ ವರ್ಷ ಹೊರ ದೇಶಗಳಿಂದ ಸುಮಾರು 50 ಸಾವಿರದಷ್ಟು ರೋಗಿಗಳು ಹೃದಯ, ಕ್ಯಾನ್ಸರ್, ಎಲುಬು ರೋಗಗಳಿಗೆ ಸಂಬಂಧಿಸಿ ಚಿಕಿತ್ಸೆಗೆ ಬರುತ್ತಾರೆ.

* * *

ಹೊಸ ವರ್ಷದಲ್ಲಿ 36 ಹೊಸ ಕಾಲೇಜುಗಳು
ಮುಂಬೈ ವಿಶ್ವವಿದ್ಯಾನಿಲಯಕ್ಕೆ ನೂತನ 2018ರಲ್ಲಿ ಮೂರು ಡಜನ್ (36) ಹೊಸ ಕಾಲೇಜುಗಳು ದೊರೆಯಲಿವೆ. ವಿಶ್ವವಿದ್ಯಾಲಯವು 36 ಹೊಸ ಕಾಲೇಜುಗಳ ಮಾನ್ಯತೆಗಾಗಿ ರಾಜ್ಯ ಸರಕಾರದ ಬಳಿ ಪ್ರಸ್ತಾವ ಕಳುಹಿಸಿದೆ. ಕಳೆದ ಡಿಸೆಂಬರ್‌ನಲ್ಲಿ 47 ಶೈಕ್ಷಣಿಕ ಸಂಸ್ಥೆಗಳು ಮುಂಬೈ ವಿಶ್ವವಿದ್ಯಾನಿಲಯದ ಬಳಿ ಹೊಸ ಕಾಲೇಜುಗಳ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 36 ಪ್ರಸ್ತಾವಗಳನ್ನು ವಿ.ವಿ. ಆಯ್ಕೆ ಮಾಡಿದ್ದು ರಾಜ್ಯ ಸರಕಾರದ ಸಂಬಂಧಿತ ವಿಭಾಗಕ್ಕೆ ಕಳುಹಿಸಿದೆ. ಸರಕಾರದ ವಿಭಾಗವು ಹೊಸ ಕಾಲೇಜುಗಳಿಗಾಗಿ ಒಂದು ಸಮಿತಿ ರಚಿಸಿತ್ತು. ಈ ಸಮಿತಿಯು ಎಲ್ಲಿ ಕಾಲೇಜುಗಳ ಅಗತ್ಯವಿದೆಯೋ ಅಲ್ಲಿ ಆದ್ಯತೆ ನೀಡಿದೆ.

* * *

ಬ್ಲಡ್ ಬ್ಯಾಂಕ್‌ಗಳ ಲೈಸನ್ಸ್ ರದ್ದು
ಬ್ಲಡ್ ಬ್ಯಾಂಕ್‌ಗಳು ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸಿದ ಮಹಾರಾಷ್ಟ್ರದ 15 ಬ್ಲಡ್ ಬ್ಯಾಂಕ್‌ಗಳ ಲೈಸನ್ಸ್ ರದ್ದು ಗೊಳಿಸಲಾಗಿದೆ ಎಂದು ಎಫ್‌ಡಿಎಯಿಂದ ಮಾಹಿತಿ ದೊರಕಿದೆ. ಕಳೆದ ಮಾರ್ಚ್ ತಿಂಗಳಿನಿಂದ ಡಿಸೆಂಬರ್ ತನಕದ ಹತ್ತು ತಿಂಗಳಲ್ಲಿ ಈ ದೃಶ್ಯ ಕಾಣಿಸಿದೆ.

24 ಗಂಟೆ ಕಾಲ ಬ್ಲಡ್ ಬ್ಯಾಂಕ್ ತೆರೆದಿರುವುದಕ್ಕೆ ಕನಿಷ್ಠ 3 ಬ್ಲಡ್ ಟ್ರಾನ್ಸ್‌ಫ್ಯೂಜನ್ ಆಫೀಸರ್ ಅಗತ್ಯವಿರುತ್ತದೆ. 122 ಬ್ಲಡ್ ಬ್ಯಾಂಕ್‌ಗಳ ತಪಾಸಣೆ ನಡೆಸಿದ ನಂತರ ನಿಯಮಗಳನ್ನು ನಿರ್ಲಕ್ಷಿಸಿದ 15 ಬ್ಲಡ್ ಬ್ಯಾಂಕ್‌ಗಳ ಲೈಸನ್ಸ್ ರದ್ದುಗೊಳಿಸಲಾಯಿತು. 40ರಷ್ಟು ಬ್ಲಡ್ ಬ್ಯಾಂಕ್‌ಗಳಿಗೆ ‘ಕಾರಣ್ ಬತಾವೋ’ ನೋಟಿಸ್ ನೀಡಲಾಗಿದೆ. ಈ 15 ಬ್ಲಡ್ ಬ್ಯಾಂಕ್‌ಗಳಲ್ಲಿ ಒಂದು ಮುಂಬೈ, ಒಂದು ನವಿಮುಂಬೈ, 2 ನಾಸಿಕ್ ಹಾಗೂ 11 ಪುಣೆಯದ್ದಾಗಿರುತ್ತದೆ.

ಪ್ರಯಾಣಿಕರ ಅಳಲು!
ಮುಂಬೈಯಲ್ಲಿ ಹೆಚ್ಚಿನ ಲೋಕಲ್ ರೈಲುಗಳು ಬಾಂಬಾರ್ಡಿಯರ್ ಮತ್ತು ಸೀಮನ್ಸ್ ಕಂಪೆನಿಯದ್ದಾಗಿದೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ನೀಡುವಂತಹ ರೈಲುಗಳು. ಆದರೆ ಈಗಲೂ ಹಳೆ ಮಾದರಿಯ ಕೆಲವು ಲೋಕಲ್ ರೈಲುಗಳೂ ನಡುನಡುವೆ ಓಡಾಡುತ್ತಿವೆ. ಅದರೊಳಗೆ ಸರಿಯಾಗಿ ಗಾಳಿಯೂ ಬರೋದಿಲ್ಲ. ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ದೂರದಲ್ಲಿ ಹಳೇ ಮಾದರಿ ರೈಲು ಬರುತ್ತಿರುವುದು ಕಂಡರೆ ಪ್ಲ್ಯಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರ ಮೂಡ್ ಹಾಳಾಗಿ ಬಿಡುತ್ತದೆ. ಇನ್ನು ಕೆಲವು ಪ್ರಯಾಣಿಕರಂತೂ ಈ ದಿನಗಳಲ್ಲಿ ಹಳೇ ಮಾದರಿಯ ರೈಲು ಬಂದರೆ ಅದನ್ನು ಹತ್ತುವುದಿಲ್ಲ. ಅದರ ನಂತರದ ರೈಲು ಹತ್ತುವುದಕ್ಕೆ ಇಚ್ಛಿಸುತ್ತಾರೆ. ಈ ಹಳೆಯ ಮಾದರಿ ರೈಲುಗಳು ಬಿಎಚ್‌ಇಎಲ್ ಕಂಪೆನಿಯದ್ದಾಗಿದೆ. ಇವುಗಳ ಓಡಾಟ ನಿಲ್ಲಿಸಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

ಪಶ್ಚಿಮ ರೈಲ್ವೆಯ ಲೋಕಲ್ ರೈಲು ಮಾರ್ಗದಲ್ಲಿ ಪ್ರತೀದಿನ 37 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಓಡಾಡುತ್ತಿದ್ದಾರೆ. ಸದ್ಯಕ್ಕೆ ಹತ್ತು ಬಿಎಚ್‌ಇಎಲ್ ಕಂಪೆನಿಯ ರೈಲುಗಳು ಪಶ್ಚಿಮ ರೈಲ್ವೆಯಲ್ಲಿ ಇದ್ದರೂ ಇವುಗಳಲ್ಲಿ 6 ಅಥವಾ 8 ರ್ಯಾಕ್‌ಗಳು ಮಾತ್ರ ಪ್ರಯಾಣಿಕರ ಸೇವೆಯಲ್ಲಿರುತ್ತವೆ. ಈ ಎಲ್ಲಾ ಹಳೆ ಮಾದರಿಯ ಲೋಕಲ್ ರೈಲುಗಳು ದಿನಕ್ಕೆ 60ರಿಂದ 80 ರಷ್ಟು ಬಾರಿ ಓಡಾಟ ನಡೆಸುತ್ತಿವೆ. ಆದರೆ ಪೀಕ್ ಅವರ್ಸ್‌ನಲ್ಲಿ ಅದೂ ಸಂಜೆಗೆ ಪ್ಲ್ಯಾಟ್‌ಫಾರ್ಮ್‌ನ ಪ್ರಯಾಣಿಕರಿಗೆ ಇದು ಬಂದರೆ ಮಾತ್ರ ತೀವ್ರ ನಿರಾಶೆಯಾಗುತ್ತದೆ. ಹಾಗೂ ಹಲವರು ಆ ರೈಲು ಬಿಟ್ಟುಬಿಡುತ್ತಾರೆ.

ಪಶ್ವಿಮ ರೈಲ್ವೆಯಲ್ಲಿ 95 ಪ್ರತಿಶತದಷ್ಟು ಲೋಕಲ್ ರೈಲುಗಳು ಹೊಸ ಮಾದರಿಯವು. ಆದರೆ ಈಗಲೂ ಹಳೇ ಬಿಎಚ್‌ಇಎಲ್ ಕಂಪೆನಿಯ ರೈಲುಗಳನ್ನು ಯಾಕೆ ಓಡಿಸುತ್ತೀರಿ? ಎಂದು ಪ್ರಯಾಣಿಕರು ರೈಲ್ವೆಗೆ ಪ್ರಶ್ನಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)