ಅರಣ್ಯ ಸಚಿವರಿಗೊಂದು ಬಹಿರಂಗ ಪತ್ರ
ಕರ್ನಾಟಕ ಸರಕಾರದ ಅರಣ್ಯ ಸಚಿವರೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆದಂತಹ ಬಿ.ರಮಾನಾಥ ರೈಯವರಿಗೆ ಸವಿನಯ ನಮಸ್ಕಾರಗಳು
ಮಾನ್ಯರೇ,
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ನೂತನ ಕಟ್ಟಡ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿರುವುದು ಸಂತಸದ ವಿಚಾರ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಳಪೆ ಗ್ರಾಮದ ಪಡೀಲ್ ಎಂಬಲ್ಲಿ 5.89 ಎಕ್ರೆ ಸ್ಥಳವನ್ನು ಸದ್ರಿ ಯೋಜನೆಗೆ ಗುರುತಿಸಿರುವುದು ತಮಗೆ ತಿಳಿದ ವಿಚಾರ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಆ ಸ್ಥಳವನ್ನು ತಾವೇ ಅನುಮೋದಿಸಿರಲೂಬಹುದು. ಆ ಪ್ರದೇಶದಲ್ಲಿ ಸದ್ರಿ ಯೋಜನೆಯ ಅನುಷ್ಠಾನಕ್ಕಾಗಿ 666 ಮರಗಳನ್ನು ಕಡಿಯಬೇಕಾಗುತ್ತದೆ. ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯೆಯ ಅನುಸಾರ ಇಷ್ಟು ದೊಡ್ಡ ಪ್ರಮಾಣದ ಮರಗಳಿರುವ ಪ್ರದೇಶ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೊಳಪಡುತ್ತದೆ. ಅಭಿವೃದ್ಧಿ ಯೋಜನೆಯ ಕಾರಣಗಳನ್ನು ಮುಂದಿಟ್ಟುಕೊಂಡು ಡೀಮ್ಡ್ ಫಾರೆಸ್ಟನ್ನು ನಾಶಗೊಳಿಸುವುದು ನ್ಯಾಯ ಸಮ್ಮತವಲ್ಲ. ಇಷ್ಟು ಅಗಾಧ ಪ್ರಮಾಣದ ಮರಗಳನ್ನು ಕಡಿಯುವುದರಿಂದ ನೈಸರ್ಗಿಕ ಸಮತೋಲನ ತಪ್ಪುತ್ತದೆ. ಹಸಿರು ಪರಿಸರದ ನಾಶದಿಂದ ಮಳೆ ಕುಂಠಿತಗೊಳ್ಳುವುದು ಮತ್ತು ತಾಪಮಾನ ಏರಿಕೆಯ ಸಾಧ್ಯತೆ ನಿಚ್ಚಳ. ಈಗಾಗಲೇ ಹಸಿರು ಪರಿಸರ ನಾಶದಿಂದ ಜಗತ್ತಿನ ವಿವಿದೆಡೆ ಆಗಿರುವ ಅನಾಹುತಗಳ ಬಗ್ಗೆ ತಮಗೆ ತಿಳಿದೇ ಇದೆ.
ಇಷ್ಟು ಅಗಾಧ ಪ್ರಮಾಣದ ಮರಗಳಿರುವ ಪ್ರದೇಶದಲ್ಲಿ ವೈವಿಧ್ಯಮಯ ವನ್ಯ ಜೀವಿ ಸಂಕುಲಗಳಿದ್ದೇ ಇರುತ್ತವೆ. ಅರಣ್ಯ ನಾಶದಿಂದಾಗಿ ಅಲ್ಲಿನ ಜೀವ ಸಂಕುಲಗಳ ಆವಾಸ ಸ್ಥಾನ ಇಲ್ಲವಾಗುತ್ತದೆ. ಪ್ರಕೃತಿಯ ಮೇಲೆ ನಮಗಿರುವಷ್ಟೇ ಹಕ್ಕು ಇತರ ಜೀವ ಸಂಕುಲಗಳಿಗೂ ಇದೆ. ಈಗಾಗಲೇ ನಮ್ಮ ಜಿಲ್ಲೆಯ ಬಹಳಷ್ಟು ಹಸಿರು ಪರಿಸರವನ್ನು ವಿಶೇಷ ಆರ್ಥಿಕ ವಲಯಗಳಿಗೆ ಧಾರೆಯೆರೆದು ಕೊಡಲಾಗಿದೆ. ಇದು ಇದೇರೀತಿ ಮುಂದುವರಿದರೆ ನಮ್ಮ ಮುಂದಿನ ತಲೆಮಾರುಗಳಿಗೆ ನಾವು ಕಾಡನ್ನು ಉಳಿಸಲು ಖಂಡಿತ ಸಾಧ್ಯವಿಲ್ಲ. ಮುಂದಿನ ತಲೆಮಾರುಗಳಿಗೆ ಕಾಡೆಂದರೆ ಚಿತ್ರಪಟದಲ್ಲಿರುವ ಕಲ್ಪನೆಗಳಷ್ಟೇ ಎಂದೆಣಿಸಬಹುದು. ಇವಿಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಮರಗಳನ್ನು ನಾಶಪಡಿಸದೇ ನಿರ್ಮಿಸಲು ಸಾಧ್ಯವಾಗುವಂತಹ ಪ್ರದೇಶವನ್ನು ಆಯ್ಕೆ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಅರಣ್ಯ ಸಂಪತ್ತನ್ನು ರಕ್ಷಿಸಲು ಅರಣ್ಯ ಖಾತೆ ಸಚಿವರಾಗಿರುವ ತಾವು ಬದ್ಧತೆ ತೋರುವಿರೆಂದು ನಂಬುತ್ತೇನೆ.