ಮನಸೆಂಬ ಭಾವಯಾನದ ಸುತ್ತ.....
ಈ ಹೊತ್ತಿನ ಹೊತ್ತಿಗೆ
‘ಓ ಮನಸೇ-ನೀನೊಂದು ಭಾವಯಾನ’ ಸುಪ್ರಿಯಾ ಗೋಪಿನಾಥ್ ಅವರ ಕಥಾ ಸಂಕಲನ. ಮಾನವೀಯತೆಯನ್ನೇ ಕೇಂದ್ರವಾಗಿಟ್ಟುಕೊಂಡು ಕಾದಂಬರಿ, ಕತೆಗಳಿಂದ ತನ್ನದೇ ಆದ ಓದುಗ ಬಳಗವನ್ನು ಹೊಂದಿದವರು ಗೋಪಿನಾಥ್. ಎಲ್ಲ ಬಗೆಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕತೆಗಳು ಇವು. ಮನುಷ್ಯನೊಳಗಿನ ಸಂಕಟ, ತೊಳಲಾಟ, ಆತನ ಅಸಹಾಯಕತೆಯೇ ಹೆಚ್ಚಿನ ಕತೆಗಳಿಗೆ ವಸ್ತು. ಇಲ್ಲಿ ಒಟ್ಟು ಆರು ಕತೆಗಳಿವೆ. ‘ಮೊದಲನೆಯದು ನೀ ಸಾಗರವೋ, ಸಮುದ್ರವೋ...’ ಎನ್ನುವುದು ಪಾಲಕರ ಜೊತೆಗೆ ಮಕ್ಕಳ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ತಾಯಿ ಮಕ್ಕಳ ಸಂಬಂಧ ಎಷ್ಟು ದೊಡ್ಡದು. ಮುಖ್ಯವಾಗಿ ಮಗುವನ್ನು ತಾನು ಹೆರದೇ, ಸಾಕಿದರೂ ಹೆಣ್ಣು ಅದಕ್ಕೆ ತಾಯಿಯ ಸಂಪೂರ್ಣ ವಾತ್ಸಲ್ಯವನ್ನು ಸುರಿಯಬಲ್ಲಳು. ಇಂತಹ ತಾಯಿಯ ವೃದ್ಧಾಪ್ಯದಲ್ಲಿ ಮಕ್ಕಳು ಪ್ರೀತಿಯನ್ನು ಪ್ರತಿಯಾಗಿ ಕೊಡಲು ಮೀನಮೇಷ ಎಣಿಸುವ ದುರಂತದ ಕುರಿತಂತೆ ಈ ಕತೆಯಲ್ಲಿ ಹೇಳುತ್ತಾರೆ. ‘ಅಹಂ ಹತೋಸ್ಮಿ’ ಇಲ್ಲಿರುವ ಇನ್ನೊಂದು ಮುಖ್ಯವಾದ ಕತೆ. ಹೆಣ್ಣಿನ ದೇಹ ಬದಲಾವಣೆಗಳಂತಹ ಸೂಕ್ಷ್ಮ ವಿಷಯವನ್ನು ಇಟ್ಟು ಕತೆ ಹೆಣೆದಿದ್ದಾರೆ. ಮದುವೆಯಾದರೂ ಮಕ್ಕಳಾಗದೆ, ಮುಟ್ಟಿನ ಕುರಿತಂತೆ ಹೇವರಿಕೆಯನ್ನು ತಾಳುತ್ತಾ ಬದುಕುವ ಹೆಣ್ಣಿನ ಬವಣೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಇದೇ ಸಂದರ್ಭದಲ್ಲಿ ಹಾವನ್ನು ಹೆಣ್ಣಿನ ಮನಸ್ಸಿಗೆ ರೂಪಕವಾಗಿಯೂ ಬಳಸಲಾಗಿದೆ. ಗಂಡಿನ ದರ್ಪ, ಸಂವೇದನಾಹೀನ ಮನಸ್ಸು ಹೆಣ್ಣನ್ನು ಹೇಗೆ ಕುಗ್ಗಿಸಬಹುದು ಎನ್ನುವುದನ್ನು ಈ ಕತೆ ಹೇಳುತ್ತದೆ. ಅಳಿವಿನಂಚಿನಲ್ಲಿ ಅಡಿವೆಮ್ಮ ಎನ್ನುವ ವೃದ್ಧೆಯನ್ನು ಕೇಂದ್ರವಾಗಿಟ್ಟು ಬರೆದ ಕತೆ. ಮಾನವೀಯತೆಯೇ ಈ ಕತೆಯ ಹಿರಿಮೆ. ಗರ್ಭಿಣಿಯೊಬ್ಬಳು ರಿಕ್ಷಾದಲ್ಲಿ ಇನ್ನೇನು ಹೆರಿಗೆಯಾಗುವ ಸ್ಥಿತಿಯಲ್ಲಿದ್ದಾಗ ಈಕೆ ಮುಂದೆ ನಿಂತು ಹೆರಿಗೆ ಮಾಡುತ್ತಾಳೆ. ಆ ಮೇಲೆ ಎಲ್ಲ ಗರ್ಭಿಣಿಯರಿಗೂ ನೆರವಾಗುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಆದರೆ ಆಧುನಿಕತೆ ವಿಸ್ತಾರವಾದಂತೆ ಈಕೆ ಮೂಲೆಗುಂಪಾಗುತ್ತಾಳೆ. ಈಕೆಯ ಋಣವನ್ನು ಸಮಾಜ ಮರೆಯುತ್ತದೆ. ಈ ವೃದ್ಧೆಯ ಮೂಲಕ, ಜಾತಿ, ಧರ್ಮಗಳಾಚೆಯ ಸಮಾಜದ ಕನಸೊಂದನ್ನು ಕತೆಗಾರ ಕಾಣುತ್ತಾರೆ. ಹೀಗೆ ಇಲ್ಲಿರುವ ಎಲ್ಲ ಕತೆಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ದೀರ್ಘ ಕಾಲ ಕಾಡುತ್ತದೆ. ಚಿಂತನೆಗೆ ಹಚ್ಚುತ್ತದೆ. ನಿದ್ರಿಸುತ್ತಿರುವ ನಮ್ಮಿಳಗಿನ ಮಾನವೀಯತೆಯನ್ನು ತಟ್ಟಿ ಎಚ್ಚರಿಸುತ್ತದೆ. ರಾಜರ್ಷಿ ಪ್ರಕಾಶನ ಬೆಂಗಳೂರು ಇವರು ಹೊರತಂದಿರುವ ಕೃತಿಯ ಮುಖಬೆಲೆ 120 ರೂ. ಆಸಕ್ತರು 91642 22202 ದೂರವಾಣಿಯನ್ನು ಸಂಪರ್ಕಿಸಬಹುದು.