ಶಿವಮೊಗ್ಗ: ಅವಘಡದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು
ಶಿವಮೊಗ್ಗ, ಜ. 4: ರಸ್ತೆ ಅವಘಡದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಯೊರ್ವರು ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ನಿವಾಸಿ ನಾರಾಯಣಪ್ಪ ಮೃತಪಟ್ಟವರೆಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇವರು ಸಂಬಂಧಿಯೋರ್ವರ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಸಾಗರದ ಕಾಗೇಹಳ್ಳ ಕ್ರಾಸ್ ಬಳಿ ಎದುರಿನಿಂದ ಆಗಮಿಸಿದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಘಟನೆಯಲ್ಲಿ ನಾರಾಯಣಪ್ಪ ಹಾಗೂ ಅವರ ಸಂಬಂಧಿ ಗಣೇಶ್ರವರು ಗಾಯಗೊಂಡಿದ್ದರು.
ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನಾರಾಯಣಪ್ಪರನ್ನು ಸ್ಥಳೀಯ ಆಸ್ಪತ್ರೆಗೆ ನಂತರ ಶಿವಮೊಗ್ಗದ ಮೆಗ್ಗಾನ್ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಮನೆಗೆ ಅವರನ್ನು ಕರೆತರಲಾಗಿದ್ದು, ಮೃತಪಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.