ಹಾಡೊಂದರ ಸಾಲಿನ ಹಿಂದೆ.....
‘ಪರ್ದಾ ಹೈ.. ಪರ್ದಾ... ಹೈ...’’ ಕಾಡುವ ಹಾಡಿನ ಹಿಂದಿದೆ ಹೀಗೊಂದು ರೋಚಕ ಕತೆ!
ಭಾರತೀಯ ಚಿತ್ರರಂಗದ ಮಹಾನ್ ಗಾಯಕರಲ್ಲಿ ಒಬ್ಬರಾದ ಮುಹಮ್ಮದ್ ರಫಿ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ. ಇತ್ತೀಚೆಗಷ್ಟೇ (ಡಿ.24) ಸಂಗೀತ ಪ್ರೇಮಿಗಳು ಪದ್ಮಶ್ರೀ ಪುರಸ್ಕೃತ ಗಾನಲೋಕದ ದಿಗ್ಗಜನ 93ನೇ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಕನ್ನಡ, ಕೊಂಕಣಿ, ಮಲಯಾಳಂ ಸೇರಿದಂತೆ 14 ಭಾರತೀಯ ಹಾಗೂ 4 ವಿದೇಶಿ ಭಾಷೆಗಳಲ್ಲಿ ಹಾಡಿರುವ ರಫೀ ಜಿ ತನ್ನ ಸುಮಧುರ ಕಂಠದಿಂದ 26,000ಕ್ಕಿಂತಲೂ ಅಧಿಕ (ಆದರೆ ಅಧಿಕೃತ ದಾಖಲೆಗಳಿರುವುದು 7,400 ಹಾಡುಗಳದ್ದು ಮಾತ್ರ) ಗೀತೆಗಳಿಗೆ ಜೀವ ತುಂಬಿದ್ದಾರೆ. ಅವರ ಜನಪ್ರಿಯ ಗೀತೆಗಳ ಪೈಕಿ ಸದಾ ನೆನಪಾಗಿ ಕಾಡುವ ಹಾಡುಗಳು ಅಪಾರ. ಅವುಗಳಲ್ಲೊಂದು ‘‘ಪರ್ದಾ ಹೈ ಪರ್ದಾ...’’ ಎಂಬ ಹಿಂದಿ ಖವಾಲಿ.
‘‘ಪರ್ದಾ ಹೈ ಪರ್ದಾ...’’ 1977ರಲ್ಲಿ ತೆರೆಕಂಡ ‘ಅಮರ್ ಅಕ್ಬರ್ ಆಂಟ್ಯನಿ’ ಹಿಂದಿ ಚಲನಚಿತ್ರದ ಗೀತೆ. ಮುಹಮ್ಮದ್ ರಫಿಗೆ ಸಾಕಷ್ಟು ಹೆಸರು ತಂದಿತ್ತ ಹಾಡುಗಳಲ್ಲಿ ಇದೂ ಒಂದು. 1977ರಲ್ಲಿ ‘ಬಿನಾಕಾ ಗೀತ್‌ಮಾಲ್’ ಹಿಟ್‌ಲಿಸ್ಟ್‌ನಲ್ಲಿ ಇದು ದ್ವಿತೀಯ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಹಾಡಿಗಾಗಿ ರಫೀ 1977ರ ಫಿಲ್ಮ್‌ಫೇರ್ ಅತ್ಯುತ್ತಮ ಗಾಯಕ ಪ್ರಶಸ್ತಿಗೂ ಹೆಸರಿಸಲ್ಪಟ್ಟಿದ್ದರು. ಆ ಕಾಲದಲ್ಲಿ ದಕ್ಷಿಣ ಏಶ್ಯದ ಅತ್ಯುತ್ತಮ ಹಾಡುಗಳಲ್ಲಿ ಒಂದಾಗಿಯೂ ಜನಪ್ರಿಯವಾಗಿತ್ತು. ಆನಂದ್ ಬಕ್ಷಿ ಅವರ ಸಾಹಿತ್ಯದ ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದವರು ಖ್ಯಾತ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಪ್ಯಾರೇಲಾಲ್. 1977ನೆ ಸಾಲಿನ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಿರುವ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಲಕ್ಷ್ಮೀಕಾಂತ್‌ರಿಗೆ ‘ಅಮರ್ ಅಕ್ಬರ್ ಆಂಟ್ಯನಿ’ ತಂದಿತ್ತಿತ್ತು.
ಈ ರೀತಿ ಭರ್ಜರಿ ಸದ್ದು ಮಾಡಿದ್ದ ‘‘ಪರ್ದಾ ಹೈ.. ಪರ್ದಾ...’’ ಹಾಡಿಗೆ ನೀವು ಕೇಳಿರದ ಸ್ವಾರಸ್ಯಕರ ಹಿನ್ನೆಲೆಯೊಂದಿದೆ. ಎಲ್ಲರೂ ತಿಳಿದಿರುವಂತೆ ಈ ಹಾಡನ್ನು ರಫಿ ಒಬ್ಬರೇ (ಸೋಲೊ ಸಾಂಗ್) ಹಾಡಿದ್ದಲ್ಲ. ರಫಿ ಅವರ ಸಮಕಾಲೀನ ಮತ್ತು ಅಷ್ಟೇ ಖ್ಯಾತ ಗಾಯಕರೊಬ್ಬರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ಅದೂ ಮುಹಮ್ಮದ್ ರಫಿಯವರ ಗೆಳೆತನಕ್ಕೆ ಕಟ್ಟುಬಿದ್ದು! ಆದರೆ ಚಿತ್ರದ ಹಾಡಿನ ಟೈಟಲ್ ಕಾರ್ಡ್‌ನಲ್ಲೆಲ್ಲೂ ಮುಹಮ್ಮದ್ ರಫಿ ಅವರ ಹೆಸರು ಬಿಟ್ಟರೆ ಮತ್ತೊಬ್ಬ ಗಾಯಕನ ಹೆಸರು ಕಾಣಿಸದು!
‘ಅಮರ್ ಅಕ್ಬರ್ ಆಂಟ್ಯನಿ’ಯಲ್ಲಿ ನೀತೂ ಸಿಂಗ್ ಅವರನ್ನು ತನ್ನತ್ತ ಸೆಳೆಯಲು ರಿಷಿ ಕಪೂರ್ ‘‘ಪರ್ದಾ ಹೈ ಪರ್ದಾ... ಪರ್ದೆ ಕೇ ಪೀಚೆ... ಪರ್ದೆ ನಶೀನ್ ಹೈ..’’ ಎಂಬ ಖವಾಲಿ ಹಾಡುತ್ತಾ ಪರದೆಯ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಆದರೆ ಈ ಗೀತೆಯನ್ನು ಹಾಡುವ ವೇಳೆ ಮುಹಮ್ಮದ್ ರಫಿ ಒಂದು ಪ್ರಮಾದ ಎಸಗಿದ್ದರು!
ಈ ಹಾಡಿನ ಮಧ್ಯದಲ್ಲಿ ಅಮಿತಾಭ್ ಬಚ್ಚನ್‌ಗಾಗಿ ಒಂದೆರಡು ಕಡೆ ಹಾಡುವ ದೃಶ್ಯಗಳಿವೆ. ಅವರು ‘‘ಅಕ್ಬರ್ ತೇರಾ ನಾಮ್ ನಹೀ ಹೈ’’ ಎಂದು ಹಾಡುತ್ತಾರೆ. ಆದರೆ ಈ ಸಾಲನ್ನು ರಫಿ ‘‘ಅಕ್ಬರ್ ಮೇರಾ ನಾಮ್ ನಹೀ ಹೈ’’ ಎಂದು ತಪ್ಪಾಗಿ ಹಾಡಿದ್ದರು. ಹಾಡಿನಲ್ಲಿ ಹಲವು ಬಾರಿ ‘‘ಅಕ್ಬರ್ ಮೇರಾ ನಾಮ್ ನಹೀ ಹೈ’’ ಎಂಬ ಸಾಲುಗಳಿರುವುದರಿಂದ ರಫಿ ಜೀ ಈ ಎಡವಟ್ಟು ಮಾಡಿಕೊಂಡಿದ್ದರು. ರೆಕಾರ್ಡಿಂಗ್ ವೇಳೆ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರಿಗೂ ಈ ಪ್ರಮಾದ ಅರಿವಿಗೆ ಬಂದಿರಲಿಲ್ಲ. ಅಂತೆಯೇ ರೆಕಾರ್ಡಿಂಗ್ ಪೂರ್ಣಗೊಂಡಿತು. ಮುಂದೆ ಹಾಡಿನ ಚಿತ್ರದ ದೃಶ್ಯಾವಳಿಗೆ ವೀಡಿಯೊ ಸಂಕಲನ ಮಾಡುವ ವೇಳೆ ಈ ‘ಮೇರಾ’, ‘ತೇರಾ’ ಎಡವಟ್ಟು ಗಮನಕ್ಕೆ ಬಂದಿದೆ. ಕೂಡಲೇ ಈ ವಿಚಾರವನ್ನು ರಫಿ ಅವರಿಗೆ ತಿಳಿಸಲಾಯಿತು. ಆದರೆ ಅ್ಟರಲ್ಲಿ ರಫಿ ಲಂಡನ್‌ಗೆ ಹಾರಿಯಾಗಿತ್ತು.
ಇದರಿಂದ ಚಿತ್ರದ ನಿರ್ಮಾಪಕರು ಕಂಗಾಲಾದಾಗ ರಫೀ ಜಿ ಒಂದು ಸಲಹೆ ನೀಡಿದರು. ಅದೇನೆಂದರೆ ತಪ್ಪಾಗಿರುವ ಆ ಒಂದು ಸಾಲನ್ನು ಕಿಶೋರ್ ಕುಮಾರ್ ಅವರಿಂದ ಹಾಡಿಸಿ ಎಂದು ಕೂಲಾಗಿ ಹೇಳಿದರು!. ಇದನ್ನು ಕೇಳಿದ ಸಂಗೀತ ನಿರ್ದೇಶಕರು ಮಾತ್ರ ಕುಳಿತಲ್ಲೇ ಬೆವರಲಾರಂಭಿಸಿದರು. ರಫಿ ಹಾಡಿರುವ ಹಾಡಿನ ಒಂದು ಸಾಲನ್ನು ಅದೂ ಕರೆಕ್ಷನ್‌ಗಾಗಿ ಕಿಶೋರ್ ಕುಮಾರ್‌ರಂತಹ ಗಾಯಕ ಹಾಡುವರೇೀ? ಅದಲ್ಲದೇ ರಫಿ ಅವರಂತೆಯೇ ಖ್ಯಾತರಾಗಿದ್ದ ಕಿಶೋರ್ ಕುಮಾರ್ ಅವರನ್ನು ಈ ಬಗ್ಗೆ ಮಾತನಾಡಿಸುವುದು ಯಾರು? ರಫಿ ಅವರ ಈ ಸಲಹೆ ಚಿತ್ರತಂಡದ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಜಟಿಲಗೊಳಿಸಿತು.
ಕೊನೆಗೆ ಇದಕ್ಕೊಂದು ಪರಿಹಾರ ಕಾಣದೆ ಸಂಗೀತ ನಿರ್ದೇಶಕರು ಮತ್ತೆ ರಫಿ ಅವರನ್ನು ಸಂಪರ್ಕಿಸಿ ಈ ‘ಧರ್ಮ ಸಂಕಟ’ವನ್ನು ಅವರ ಮುಂದಿಟ್ಟರು. ಕಿಶೋರ್ ಕುಮಾರ್ ಅವರನ್ನು ಹಾಡಲು ಒಪ್ಪಿಸುವಂತೆ ಅವರಲ್ಲೇ ಕೇಳಿಕೊಂಡರು. ಅದರಂತೆ ರಫಿ ಅವರು ಕಿಶೋರ್ ಕುಮಾರ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಗೆಳೆಯ ರಫಿ ಅವರ ಕೋರಿಕೆಯನ್ನು ಅಷ್ಟೇ ಗೌರವದಿಂದ ಮನ್ನಿಸಿದ ಕಿಶೋರ್ ಕುಮಾರ್ ಸ್ಟುಡಿಯೋಗೆ ಆಗಮಿಸಿದರು. ‘‘ಅಕ್ಬರ್ ತೇರಾ ನಾಮ್ ನಹೀ ಹೈ’’ ಎಂಬ ಆ ಒಂದು ಸಾಲನ್ನು ತಿದ್ದಿ ಹಾಡಿದರು. ಹಾಡು ಪೂರ್ಣಗೊಂಡಿತು. ‘ಅಮರ್ ಅಕ್ಬರ್ ಆಂಟ್ಯನಿ’ ಸಿನೆಮಾ ಬಿಡುಗಡೆಗೊಂಡಿತು. ‘‘ಪರ್ದಾ ಹೈ ಪರ್ದಾ... ಪರ್ದೆ ಕೇ ಪೀಚೆ... ಪರ್ದೆ ನಶೀನ್ ಹೈ..’’ ಹಾಡು ಸೂಪರ್ ಹಿಟ್ ಆಯಿತು. ಆದರೆ ‘ಪರ್ದೆ ಕೇ ಪೀಚೆ ಕಿ ಯೇ ಕಹಾನಿ’ ಯಾರ ಅರಿವಿಗೂ ಬರಲಿಲ್ಲ!
*(ಆಧಾರ: ರೇಡಿಯೋ ಮೂಲ)