ವರ್ತನೆಗಳಾವರ್ತನೆಗಳು
ಬೆಳೆಯುವ ಪೈರು
ಭಾಗ 4
ವರ್ತನೆಗಳ ಮೂಲ
ಒಂದು ಮಗುವಿನ ಸೂಕ್ಷ್ಮತೆಯು ಮತ್ತು ಸಂವೇದನಾಶೀಲ ಗುಣವು ಮಗುವಿನ ಜೈವಿಕ ಮತ್ತು ಪರಿಸರದ ಪ್ರಭಾವಗಳಿಂದ ರೂಪುಗೊಳ್ಳುತ್ತವೆ. ಜೈವಿಕವೆಂದರೆ ಮಗುವಿನ ಲಿಂಗ, ದೇಹದ ಆರೋಗ್ಯ, ದೇಹದ ಬೆಳವಣಿಗೆ, ಹಾರ್ಮೋನುಗಳ ಬದಲಾವಣೆ, ಮಗುವಿನ ದೇಹದಾರ್ಢ್ಯತೆ, ರೋಗನಿರೋಧಕ ಶಕ್ತಿ; ಇವುಗಳೆಲ್ಲದರ ಜೊತೆಗೆ ತಂದೆ, ತಾಯಿ, ಒಡಹುಟ್ಟುಗಳು; ಈ ಬಗೆಯ ಜೈವಿಕ ಸಂಬಂಧಗಳೂ ಕೂಡ ಸೇರುತ್ತವೆ. ಹಾಗೆಯೇ, ಪರಿಸರದ ಪ್ರಭಾವಗಳಲ್ಲಿ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕತೆ, ಕಲೆ, ಭೌಗೋಳಿಕತೆ, ಆರ್ಥಿಕತೆ, ಜೀವನಶೈಲಿಗಳೆಲ್ಲವೂ ಸೇರುತ್ತವೆ. ಹೀಗೆ ಜೈವಿಕತೆ ಮತ್ತು ಪರಿಸರಗಳೆರಡೂ ಮಗುವಿನ ಆಲೋಚನಾಕ್ರಮವನ್ನು, ಮನಸ್ಸಿನ ಸ್ವರೂಪವನ್ನು, ಒಲವು, ನಿಲುವುಗಳನ್ನು ರೂಪಿಸುತ್ತದೆ. ಮಗುವಿನ ಈ ಮನೋಗುಣಗಳ ಮೊತ್ತವೇ ವರ್ತನೆಗಳಾಗಿ ಬಿತ್ತರವಾಗುತ್ತವೆ. ನಿಮ್ಮ ಎದುರಿನ ಯಾವುದೇ ವ್ಯಕ್ತಿಯೊಬ್ಬನ ಆ ಕ್ಷಣದ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಯಾವುದೋ ಜೈವಿಕ ಅಥವಾ ಪರಿಸರದ ಯಾವುದೋ ಪ್ರಭಾವವನ್ನು ಪ್ರಸ್ತುತಪಡಿಸುತ್ತಿರುತ್ತಾರೆ. ಯಾವುದೇ ವ್ಯಕ್ತಿ ಮಗುವೊಂದರ ವಿಸ್ತೃತರೂಪವಷ್ಟೇ. ಅಷ್ಟೇಕೆ, ಸಮೂಹಗಳು ಕೂಡಾ ಅನೇಕ ಮಕ್ಕಳ ಸಂಕಲಿತ ರೂಪ. ಮಗುವನ್ನು ಯಶಸ್ವಿಯಾಗಿ ಸುಧಾರಿಸಬಲ್ಲವನು ಸಮೂಹಗಳನ್ನೂ ಸುಧಾರಿಸಬಲ್ಲ. ಹಟಮಾರಿ ಮಗುವೊಂದರ ಮನಸ್ಥಿತಿಯನ್ನು ಅರಿಯಬಲ್ಲವನು ಉದ್ರಿಕ್ತ ಸಮೂಹದ ಮನೋಭಾವವನ್ನು ತಿಳಿಯಬಲ್ಲ. ಅದೇನೇ ಇರಲಿ, ಮಗುವಿನ ಮನೋವಿಜ್ಞಾನವನ್ನು ಅರಿಯುವುದು ಎಷ್ಟು ಉಪಯುಕ್ತವಾದದ್ದು ಮತ್ತು ಪ್ರಾಥಮಿಕ ಜ್ಞಾನವುಳ್ಳದ್ದು ಎಂದು ತಿಳಿಸುವುದು ಈ ಮಾತಿನ ಉದ್ದೇಶ. ಮಗುವಿನ ವರ್ತನೆಗಳನ್ನು ರೂಪಿಸುವುದಕ್ಕೆ ಬಹಳ ಮಹತ್ವ ನೀಡಬೇಕಾಗಿರುವುದು ಶಿಶುಪೋಷಣೆಯಲ್ಲಿ ಗಂಭೀರವಾದ ವಿಷಯ. ಏಕೆಂದರೆ ವರ್ತನೆಗಳ ಪ್ರತಿಫಲನಗಳೇ ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಲಯಗಳನ್ನು ರೂಪಿಸುವುದು ಮಾತ್ರವಲ್ಲದೇ ಆರೋಗ್ಯಕರವಾಗಿಡುವುದು. ಕುಟುಂಬದಿಂದ ವ್ಯಕ್ತಿ, ಪರಿಸರದಿಂದ ಸಮಾಜ
ಸುಮ್ಮನೆ ಗಮನಿಸಿ, ಒಂದು ಕುಟುಂಬದಲ್ಲಿ ತಂದೆ, ತಾಯಿ ಮತ್ತು ಇತರೇ ಕುಟುಂಬದ ಸದಸ್ಯರು ಯಾವ ರೀತಿಯಲ್ಲಿ ವರ್ತಿಸುತ್ತಾರೆಂಬುದರ ಮೇಲೆ ಇಡೀ ಕೌಟುಂಬಿಕ ಪರಿಸರ ನಿರ್ಮಾಣವಾಗಿರುತ್ತದೆ. ಒಂದು ಮನೆಯ ಭವ್ಯತೆ, ವಿಸ್ತಾರ, ಪೀಠೋಪಕರಣಗಳು ಮನೆಯವರ ಆರ್ಥಿಕ ಸ್ಥಿತಿಯನ್ನು ಹೇಳುತ್ತದೆ. ಆದರೆ, ಕೌಟುಂಬಿಕ ವಾತಾವರಣವು ನಿರ್ಮಾಣವಾಗುವುದು ಕುಟುಂಬದವರ ವರ್ತನೆಗಳಿಂದ. ಆ ಕೌಟುಂಬಿಕ ವಾತಾವರಣದಿಂದಲೇ ಮಗುವಿನ ವರ್ತನೆಗಳೂ ಕೂಡ ರೂಪುಗೊಳ್ಳುತ್ತಿರುತ್ತವೆ. ಒಟ್ಟಾರೆ ಮನೆಯವರ ವರ್ತನೆಗಳ ಸುತ್ತಲೂ ಮಗುವಿನ ವರ್ತನೆಯೂ ಗಿರಿಕಿ ಹೊಡೆಯುತ್ತಿರುತ್ತದೆ. ಅನಾರೋಗ್ಯಕರವಾದ ಮನೆಯ ಪರಿಸರದಲ್ಲಿ ಎಲ್ಲಾ ಸದಸ್ಯರೂ ಮುನ್ನೆಲೆಯಲ್ಲಿ ಇರುವುದಿಲ್ಲ. ಯಾರೋ ಒಬ್ಬ ವ್ಯಕ್ತಿಯು ತನ್ನ ಅಧೀನದಲ್ಲಿ ಕುಟುಂಬದ ಎಲ್ಲಾ ಸದಸ್ಯರ ನಡವಳಿಕೆ ಮತ್ತು ಚಟುವಟಿಕೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆಂದುಕೊಳ್ಳಿ. ಮಗುವು ಆ ವ್ಯಕ್ತಿಯ ವರ್ತನೆಗಳನ್ನು ಒಂದೋ ವಿರೋಧಿಸುವಂತೆ ಅಥವಾ ಸರಿತೂಗುವಂತೆ ತನ್ನ ವರ್ತನೆಗಳನ್ನು ರೂಢಿಸಿಕೊಳ್ಳುವುದು. ಆ ವ್ಯಕ್ತಿಗೂ ಮತ್ತು ಮಗುವಿಗೂ ಇರುವಂತಹ ಸಂಬಂಧದ ಮೇಲೆ ಮಗುವು ನಕಾರಾತ್ಮಕವಾಗಿ ಬೆಳೆಸಿಕೊಳ್ಳುವುದೋ, ವಿರೋಧಾತ್ಮಕವಾಗಿ ಬೆಳೆಸಿಕೊಳ್ಳುವುದೋ ಅಥವಾ ಅದಕ್ಕೆ ಪೂರಕವಾಗಿ ವರ್ತನಾಪ್ರತಿಯಾಗಿ ನಿಲ್ಲುವುದೋ ಅದು ನಿಜಕ್ಕೂ ಅವರಿಬ್ಬರ ಸಂಬಂಧದ ಮೇಲೆ ಆಧಾರಿತವಾಗಿರುತ್ತದೆ. ಅದೇ ರೀತಿ ಶಾಲೆಯಲ್ಲಿಯೂ ಕೂಡಾ ಶಿಕ್ಷಕರ ಮತ್ತು ಮೇಲಧಿಕಾರಿಗಳ ವರ್ತನೆಗಳಿಗೆ ಅನುಗುಣವಾಗಿ ಶೈಕ್ಷಣಿಕ ವಾತಾವರಣವು ರೂಪುಗೊಂಡಿರುತ್ತದೆ. ಅಲ್ಲಿ ಬೆಳೆಯುವ ಮಕ್ಕಳ ಸಾಮಾಜಿಕ ವರ್ತನೆಗಳೂ ಅವುಗಳಿಂದ ನೇರ ಪ್ರಭಾವಿತವಾಗಿರುತ್ತವೆ. ಸದ್ಯಕ್ಕೆ ಇಷ್ಟು ಗ್ರಹಿಸೋಣ. ಕುಟುಂಬದಿಂದ ಮಗುವು ವ್ಯಕ್ತಿಗತವಾದ ವರ್ತನೆಗಳನ್ನು ರೂಪಿಸಿಕೊಂಡರೆ, ಶಾಲೆಯಿಂದ ಸಾಮಾಜಿಕವಾದ ವರ್ತನೆಗಳನ್ನು ರೂಪಿಸಿಕೊಳ್ಳುತ್ತದೆ. ವರ್ತನೆಗಳು ಬರಿಯ ಕ್ರಿಯೆಯಲ್ಲ. ಆಗ ಪ್ರಾರಂಭವಾಗಿ ಇನ್ಯಾವಾಗಲೋ ಮುಗಿದುಹೋಗುವ ಭೌತಿಕ ಚಟುವಟಿಕೆಯಲ್ಲ. ವರ್ತನೆಗಳಿಗೆ ಸ್ಥೂಲವಾಗಿ ಭೌತಿಕ ಸ್ವರೂಪವಿದ್ದರೂ, ಸೂಕ್ಷ್ಮವಾಗಿ ಕಾಂತೀಯ ಪ್ರಭಾವವನ್ನು ಹೊಂದಿರುತ್ತದೆ. ವರ್ತನೆಗಳು ಆಕರ್ಷಣೆ ಮತ್ತು ವಿಕರ್ಷಣೆಗಳಿಗೆ ಕಾರಣ. ಯಾವುದೋ ಒಂದು ವಿಷಯದ ಶಿಕ್ಷಕ ಹೇಗೆ ವರ್ತಿಸುತ್ತಾನೆ ಎಂಬುದರ ಆಧಾರದಲ್ಲಿ ಮಗುವು ಆ ವಿಷಯದ ಬಗ್ಗೆ ಆಕರ್ಷಣೆ ಹೊಂದುವುದು ಅಥವಾ ವಿಕರ್ಷಣೆ ಹೊಂದುವುದು ಕೂಡ ನಾವೆಲ್ಲಾ ಗಮನಿಸುವಂತಹ ಸಾಧಾರಣ ವಿಷಯವೇ ಆಗಿದೆ.
ಶಿಶು ಸನ್ನಿಧಾನದಲ್ಲಿ ಆತ್ಮಾವಲೋಕನ
ಮಗುವೊಂದರ ಜೊತೆಯಲ್ಲಿ ಯಾವುದೇ ರೀತಿಯಲ್ಲಿ ವ್ಯವಹರಿಸುತ್ತಿದ್ದೇವೆಂದರೆ ಒಮ್ಮಿಂದೊಮ್ಮೆಲೇ ನಾವು ಪ್ರಜ್ಞಾಪೂರ್ವಕವಾಗಿ ಗಮನಿಸಿಕೊಳ್ಳಬೇಕಾಗಿರುವುದು ನಮ್ಮ ವರ್ತನೆಗಳನ್ನು. ಆತ್ಮಾವಲೋಕನ ಮಾಡಿಕೊಳ್ಳದ ಹೊರತು, ಸ್ವವಿಮರ್ಶೆಗೆ ತೆರೆದುಕೊಳ್ಳದ ಹೊರತು ಯಾರೊಬ್ಬರಿಗೂ ಮಗುವಿನೊಡನೆ ವ್ಯವಹರಿಸಲು ಯೋಗ್ಯರಾಗಿರುವುದಿಲ್ಲ. ಹಿರಿಯರ ಎದುರು ಸಿಗರೆಟ್ ಸೇದಬಾರದು. ಹಿರಿಯ ಸನ್ನಿಧಿಯಲ್ಲಿ ಕುಡಿಯಬಾರದು. ಯಪರಾತಪರಾ ಮಾತನಾಡಬಾರದು. ಲಘುವಾಗಿ ವರ್ತಿಸಬಾರದು; ಹೀಗೆಲ್ಲಾ ಸಾಮಾನ್ಯವಾಗಿ ರೂಢಿಯಲ್ಲಿ ಕಾಣುತ್ತೇವೆ. ಆದರೆ ಇದು ನಿಜವಾಗಿ ಆಗಬೇಕಾಗಿರುವುದು ಮಕ್ಕಳ ಸನ್ನಿಧಿಯಲ್ಲಿ. ಮಕ್ಕಳಿಗಾಗಿ, ಮಕ್ಕಳ ಇರುವಿಕೆಯಲ್ಲಿ ಯಾರೊಬ್ಬರೂ ಬಹಳ ಎಚ್ಚರಿಕೆಯಿಂದ ಇರಬೇಕಾದುದ್ದು. ಯಾವುದೇ ಒಂದು ಮಗುವನ್ನು ನೋಡಿದ ಕೂಡಲೇ ಅದಕ್ಕೆ ನಮ್ಮ ನಗುವಿನ ಮುಖವನ್ನು ತೋರಿಸುತ್ತಾ, ಮಧುರವಾದ ದನಿಯಲ್ಲಿ ನಮಸ್ಕಾರಗಳನ್ನು ತಿಳಿಸಿ, ಗಂಭೀರ ಮತ್ತು ಘನತೆಯಿಂದ ಎಷ್ಟುಬೇಕೋ ಅಷ್ಟು ಮಾತನಾಡಿದ ಪಕ್ಷದಲ್ಲಿ, ನಮ್ಮ ವರ್ತನೆ ಆ ಮಗುವಿನ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದೇ ಅರ್ಥ. ಅದೇ ರೀತಿಯಲ್ಲಿ ಯಾವುದೇ ಮಗುವಿಗೆ ಚೇಷ್ಟೆ ಮಾಡಲು, ತರಲೆ ಮಾಡುತ್ತಾ, ಬಾಯಿಗೆ ಬಂದಂತೆ ಮಾತನಾಡುವ, ಅವಹೇಳನ ಮಾಡುವ, ಗದರಿಸುವ, ಮೂದಲಿಸುವ ಕೆಲಸ ಮಾಡಿದ್ದೇ ಆದರೆ, ಅಲ್ಲಿಗೆ ಸ್ಪಷ್ಟವಾಗಿ ತಿಳಿಯಬಹುದು, ಆ ಮಗುವು ನಾನಾ ರೀತಿಯ ಕಾಂಪ್ಲೆಕ್ಸಿಟಿಗಳಿಗೆ ಒಳಗಾಗುತ್ತಿದೆ ಎಂದು. ಈ ಎರಡೂ ಸಂದರ್ಭಗಳಲ್ಲಿ ಮಗುವಿನ ವರ್ತನೆಗಳು ರೂಪುಗೊಳ್ಳುತ್ತಿರುತ್ತವೆ.
ವರ್ತನೆಗಳ ವಿಧಗಳು
ವರ್ತನೆಗಳಲ್ಲಿಯೂ ಹಲವು ವಿಧಗಳಿವೆ.
1.ಸಹಜ ವರ್ತನೆಗಳು.
2.ರೂಢಿಗತ ವರ್ತನೆಗಳು.
3.ಪ್ರದರ್ಶಕ ವರ್ತನೆಗಳು.
4.ಕ್ರಿಯೆಗೆ ಪ್ರತಿಕ್ರಿಯೆಯಾಗಿ ತೋರುವ ವರ್ತನೆಗಳು.
5.ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಂದ ತಲೆದೋರಿರುವ ವರ್ತನೆಗಳು.
6.ಗುಣ ಅಥವಾ ಸ್ವಭಾವದ ಅನೈಚ್ಛಿಕ ಪ್ರದರ್ಶನಗಳು.
7.ಆಂತರಿಕ ಸಮಸ್ಯೆಗಳಿಂದ ತಲೆದೋರಿಸುವಂತಹ ವರ್ತನೆಗಳು.
8.ತಮ್ಮ ಒಪ್ಪಿಗೆ, ನಿರಾಕರಣೆಗಳ ತೀವ್ರತೆಯನ್ನು ಬಿಂಬಿಸುವಂತಹ ವರ್ತನೆಗಳು.
9.ಉದ್ದೇಶ ಮತ್ತು ಸ್ಥಾನಬಲ ತೋರಿಸುವಂತಹ ವರ್ತನೆಗಳು.
10.ತಮ್ಮ ಮಾನ್ಯತೆ, ಪ್ರಾತಿನಿಧ್ಯ ಅಥವಾ ಸ್ಥಾನಗಳನ್ನು ತೋರ್ಪಡಿಸುವಂತಹ ವರ್ತನೆಗಳು.
11.ಅನಿಯಂತ್ರಿತ ಅಥವ ಅನೈಚ್ಛಿಕ ವರ್ತನೆಗಳು.
12.ಸಾಮ್ಯತಾನುಸರಣ ವರ್ತನೆಗಳು.
ಈ ವರ್ತನೆಗಳ ಬಗೆಗಳು ಮಗುವಿನಲ್ಲಿ ಹಂತಹಂತವಾಗಿ ಪರಿಚಿತವಾಗುವುದಿಲ್ಲ. ಆದರೆ ಹಂತಹಂತವಾಗಿ ಮಗುವಿನಿಂದ ಗ್ರಹಿಸಲ್ಪಡುತ್ತದೆ. ಹೇಗೆಂದರೆ, ಮಗುವಿಗೆ ಹಿರಿಯರದೇ ವರ್ತನೆಗಳ ಮಾದರಿಗಳೆಂದು ತಿಳಿದಿದ್ದೇವೆ. ಈ ವರ್ತನೆಗಳ ಮಾದರಿಗಳನ್ನು ಹಿರಿಯರು ಮಗುವಿನ ಮುಂದೆ ಆಯ್ಕೆಗಳಿಗನುಸಾರವಾಗಿ ಅಥವಾ ಇಚ್ಛೆಗನುಸಾರವಾಗಿ ಪ್ರದರ್ಶಿಸುವುದಿಲ್ಲ. ಮಗುವಿನ ಮುಂದೆ ಎಲ್ಲಾ ವಿಧಗಳ ವರ್ತನೆಗಳೂ ಕಲಸುಮೇಲೋಗರವಾಗಿ ಪ್ರದರ್ಶಿತಗೊಳ್ಳುತ್ತಿರುತ್ತವೆ. ಆದರೆ ಮಗುವು ತನ್ನ ಮೇಲೆ ಆಗುವ ಗಾಢ ಪ್ರಭಾವಗಳಿಗೆ ಅನುಸಾರವಾಗಿ ಆ ವರ್ತನೆಗಳ ಮಾದರಿಗಳನ್ನು ಹೆಕ್ಕಿಕೊಳ್ಳುತ್ತಾ ಹೋಗುತ್ತದೆ. ಆಯಾಯ ವರ್ಗಗಳ ಗಾಢತೆಯು ಮಗುವಿನಲ್ಲಿ ವರ್ತನೆಗಳನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ವರ್ತನೆಗಳು ಬಹು ಬೇಗನೆ ವ್ಯಕ್ತಿತ್ವದ ಭಾಗವಾಗಿಬಿಡುವುದರಿಂದ ಅನೇಕ ಬಗೆಯ ವರ್ತನೆಗಳು ವ್ಯಕ್ತಿತ್ವದ ಗುರುತಾಗಿಯೇ ಪ್ರದರ್ಶಿತಗೊಳ್ಳುತ್ತಿರುತ್ತದೆ, ಅಂದರೆ ಐಡೆಂಟಿಕಲ್ ಆಗಿಬಿಡುತ್ತದೆ. ಈ ಐಡೆಂಟಿಕಲ್ ವರ್ತನೆಗಳು ವ್ಯಕ್ತಿಯ ಒಲವು, ನಿಲುವುಗಳಿಂದ ರೂಪುಗೊಂಡಿರುತ್ತವೆ ಎಂದರೂ ನಿಜವೇ, ಒಲವು, ನಿಲುವುಗಳಿಂದ ವರ್ತನೆಗಳು ರೂಪುಗೊಳ್ಳುತ್ತವೆ ಎಂದರೂ ನಿಜವೇ. ವ್ಯಕ್ತಿಯ ಆಸಕ್ತಿ, ಅಭಿರುಚಿ, ಧೋರಣೆಗಳೆಲ್ಲವೂ ವರ್ತನೆಗಳಲ್ಲಿ ಅಭಿವ್ಯಕ್ತಿಗೊಳ್ಳುವುದು ಎಷ್ಟು ನಿಜವೋ, ಅವುಗಳ ವ್ಯಾಪ್ತಿ ಮತ್ತು ಉದ್ದೇಶವೂ ಕೂಡಾ ಅಷ್ಟೇ ಸ್ಪಷ್ಟವಾಗಿರುತ್ತದೆ. ಉದಾಹರಣೆಗೆ ಟಿವಿ ಚಾನೆಲ್‌ಗಳು ಪ್ಯಾನೆಲ್ ಡಿಬೇಟ್‌ಗೆ ಎಂದು ಕರೆಯುವಾಗ ನಿರ್ದಿಷ್ಟ ವಿಷಯಗಳಿಗೆ ನಿರ್ದಿಷ್ಟ ವ್ಯಕ್ತಿಗಳನ್ನು ಕರೆಯುತ್ತಾರೆ. ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಯಾರ್ಯಾರು ಯಾವ್ಯಾವ ವಿಷಯದ ಪರ ಅಥವಾ ವಿರೋಧವಾಗಿ ಮಾತನಾಡುತ್ತಾರೆ ಎಂದು. ಅಷ್ಟೇ ಅಲ್ಲ ಅವರಿಗೆ ಯಾರ್ಯಾರೆಲ್ಲಾ ಅಬ್ಬರಿಸಿ ಬೊಬ್ಬಿರಿಯುತ್ತಾರೆಂದೂ, ಯಾರ್ಯಾರು ವಿಷಯ ಮಂಡನೆ ಮಾತ್ರ ಮಾಡುವರೆಂದೂ, ಯಾರ್ಯಾರನ್ನೆಲ್ಲಾ ಇತರರ ವಾಗ್ದಾಳಿಗೆ ಒಡ್ಡಿ ಮುಖಭಂಗ ಮಾಡಬಹುದೆಂದೂ ತಿಳಿದಿರುತ್ತದೆ. ಇವುಗಳನ್ನೆಲ್ಲಾ ತಿಳಿಯುವುದು ಅವರ ಹಿಂದಿನ ವರ್ತನೆಗಳ ಮಾದರಿಗಳಿಂದ. ವ್ಯಕ್ತಿಗಳ ವೈಚಾರಿಕ ಒಲವು, ನಿಲುವು, ಧೋರಣೆಗಳನ್ನು ಮಾತ್ರವಲ್ಲದೇ ಅವರ ವರ್ತನೆಗಳ ಮಾದರಿಗಳನ್ನು ಅನುಸರಿಸಿ ವಿಷಯಗಳ ಮಂಡನೆ ಮತ್ತು ಖಂಡನೆಗಳಿಗೆ ಆಹ್ವಾನಿಸುತ್ತಾರೆ. ಇದೇ ರೀತಿಯಲ್ಲಿ ವರ್ತನೆಗಳ ಸಿದ್ಧ ಮಾದರಿಗಳನ್ನು ಮಗುವೂ ಕೂಡ ಸಾಕ್ಷೀಕರಿಸುತ್ತಾ ತನ್ನದಾಗಿಸಿಕೊಳ್ಳುತ್ತಾ ಹೋಗುತ್ತದೆ. ಒಂದು ಮಗುವು ಸ್ವತಂತ್ರ ವ್ಯಕ್ತಿಯಾಗಲು, ಸಾಮಾಜಿಕ ವ್ಯಕ್ತಿಯಾಗಿ ಪ್ರಸ್ತುತಗೊಳ್ಳಲು ಮೇಲ್ಕಾಣಿಸಿದ ಹನ್ನೆರಡೂ ಬಗೆಯ ವರ್ತನೆಗಳ ಸಮಗ್ರ ಮೊತ್ತವನ್ನುಹೊಂದುತ್ತದೆ. ಹನ್ನೆರಡೂ ಬಗೆಯ ವರ್ತನೆಗಳ ಮಾದರಿಗಳನ್ನು ವಿವರವಾಗಿ ನೋಡುವ ಮುನ್ನ ವರ್ತನೆಗಳ ಆವರ್ತನೆಗಳೆಂದರೇನೆಂದು ತಿಳಿದುಕೊಂಡು ಇಲ್ಲಿಗೆ ವಿರಮಿಸೋಣ.
ವರ್ತನಾವರ್ತನವೆಂದರೇನು?
ಮಗುವಿನ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ವರ್ತನೆಯ ಆವರ್ತನೆಗಳನ್ನು ತಿಳಿಯೋಣ. ಯಾವುದೇ ವರ್ತನೆಗಳು ಪುನರಾವರ್ತನೆಗಳಾಗುತ್ತಿದ್ದರೆ ಮಗುವು ಆ ವರ್ತನೆಗಳನ್ನು ಹೆಕ್ಕಿಕೊಂಡು ತನ್ನದಾಗಿಸಿಕೊಂಡುಬಿಡುವುದಿಲ್ಲ. ಆ ವರ್ತನೆಗಳಿಂದ ಉಂಟಾಗುವ ಹಿತ ಮತ್ತು ಅಹಿತಗಳ ಆಧಾರದ ಮೇಲೆ ತನ್ನ ವರ್ತನೆಗಳನ್ನು ರೂಪಿಸಿಕೊಳ್ಳುತ್ತದೆ. ಯಾವ ವರ್ತನೆಗಳಿಂದ ಹಿತವು ಪುನರಾವರ್ತಿತವಾಗುತ್ತದೋ ಆ ವರ್ತನೆಯನ್ನು ತನಗೇ ಗೊತ್ತಿಲ್ಲದಂತೆ ಅಳವಡಿಸಿಕೊಳ್ಳುವುದು ಮಾತ್ರವಲ್ಲದೇ ಆ ವರ್ತನೆ ತೋರುವವರ ಬಗ್ಗೆ ಆಸಕ್ತಿ ಮತ್ತು ಒಲವನ್ನೂ ಕೂಡಾ ಬೆಳೆಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ ಯಾವ ವರ್ತನೆಗಳಲ್ಲಿ ಮಗುವಿಗೆ ಅಹಿತವೂ, ಖೇದವೂ ಪುನರಾವರ್ತಿತವಾಗಿ ಉಂಟಾಗುತ್ತಿರುತ್ತದೆಯೋ ಆ ವರ್ತನೆಗಳ ವಿಷಯದ ವಿರೋಧವಾದಂತಹ ವರ್ತನೆಗಳನ್ನು ರೂಢಿಸಿಕೊಳ್ಳುತ್ತದೆ. ಅಂದರೆ, ವರ್ತನೆಗಳು ಉಂಟು ಮಾಡುವ ಹಿತ ಮತ್ತು ಅಹಿತಗಳ ಆವರ್ತನೆಗಳು ಮಗುವಿನಲ್ಲಿ ವ್ಯಕ್ತಿತ್ವದ ಮಾದರಿಯನ್ನು ನಿರ್ಮಿಸುತ್ತದೆ. ಹಿತ ಅಹಿತಗಳನ್ನು ಮೀರಿ ವರ್ತನೆಗಳನ್ನು ಮನ್ನಿಸುವುದು ಮತ್ತು ಅದರ ಬಗ್ಗೆ ಆಸಕ್ತಿ ಮತ್ತು ಅಧ್ಯಯನಗಳನ್ನು ಮಾಡುವುದು, ಸಹಿಸಿಕೊಳ್ಳುವುದು, ಅವುಗಳ ಕಾರಣ ಪರಿಣಾಮಗಳ ಬಗ್ಗೆ ಆಲೋಚಿಸುವುದು ಇವೆಲ್ಲಾ ಆಗುವುದು ವ್ಯಕ್ತಿಗತವಾಗಿ ಪ್ರಬುದ್ಧರಾದ ಮೇಲೆ. ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಕೆಲವೊಂದು ವಿಷಯಗಳನ್ನು ಆಯ್ದುಕೊಳ್ಳುವ ವ್ಯಕ್ತಿಗಳು ತಮ್ಮ ಮತ್ತೊಂದ್ಯಾವುದೋ ಮುಂದಿನ ನಿರ್ಣಾಯಕ ಫಲಿತಾಂಶಗಳನ್ನು ಇದಿರು ನೋಡುತ್ತಿರುತ್ತಾರೆ. ಅದು ಬೇರೆಯದೇ ಅಧ್ಯಯನದ ವಿಭಾಗ. ಈಗ ಮಗುವಿನ ವಿಷಯದಲ್ಲಿ ಇಷ್ಟು ಅರ್ಥ ಮಾಡಿಕೊಳ್ಳೋಣ. ಯಾವ್ಯಾವ ವರ್ತನೆಗಳಿಂದ ಹಿತ ಮತ್ತು ಅಹಿತ ಅನುಭವಗಳು ಪುನರಾವರ್ತನೆಯಾಗುತ್ತಿರುವುವೋ ಮಕ್ಕಳು ಆಯಾ ವರ್ತನೆಗಳ ಪ್ರಭಾವಗಳಿಗೆ ಒಳಗಾಗುತ್ತಾರೆ ಮತ್ತು ಅವುಗಳನ್ನು ಕೇಂದ್ರೀಕರಿಕೊಂಡಂತೆ ತಮ್ಮ ವರ್ತನೆಗಳನ್ನು ರೂಪಿಸಿಕೊಂಡು ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.