ನಿಮ್ಮ ಮುಖದ ಈ ಭಾಗದಲ್ಲಿರುವ ಮೊಡವೆಗಳನ್ನು ಚಿವುಟಬೇಡಿ
ಇದು, ಅಪಾಯಕಾರಿ
ಮುಖದಲ್ಲಿ ಮೊಡವೆ ಹದಿಹರೆಯದ ಎಲ್ಲರೂ ಅನುಭವಿಸಲೇಬೇಕಾದ ಕಿರಿಕಿರಿಯಾಗಿದೆ. ಮೊಡವೆ ಹುಡುಗ-ಹುಡುಗಿ ಎಂದು ಭೇದವೆಣಿಸುವುದಿಲ್ಲ. ಅವರು ಷೋಡಷ ವಯಸ್ಸಿಗೆ ತಲುಪಿದಾಗ ಅದು ಅವರ ಮುಖವನ್ನು ಆಕ್ರಮಿಸಿಕೊಳ್ಳ ತೊಡಗುತ್ತದೆ. ಮೊಡವೆಯಿಂದ ಹೆಚ್ಚಿನ ಕಿರಿಕಿರಿಯಾಗುವುದು ಹುಡುಗಿಯರಿಗೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ ಮೊಡವೆಗಳನ್ನು ಚಿವುಟುತ್ತಲೇ ಇರುತ್ತಾರೆ. ಇದು ಕೆಲವೊಮ್ಮೆ ಮುಖದಲ್ಲಿ ಕಲೆಗಳಿಗೆ ಕಾರಣವಾಗುತ್ತದೆ.
ಮೊಡವೆಯನ್ನು ಚಿವುಟಲೂ ಒಂದು ಕಾಲವಿದೆ. ಅದಕ್ಕಾಗಿ ಸಹನೆ ಅಗತ್ಯವಿದೆ. ಮೊಡವೆ ಪಕ್ವಗೊಂಡಾಗ ಅದರ ಸುತ್ತಲೂ ಮೃದುವಾಗಿ ಒತ್ತಿ ಅದನ್ನು ನಿವಾರಿಸಬಹುದು. ಆದರೆ ಅವಸರಿಸಿ ಅದನ್ನು ಚಿವುಟಿದರೆ ಅದರಿಂದ ಚರ್ಮ ಇನ್ನಷ್ಟು ಕೆರಳಬಹುದು ಮತ್ತು ಕೆಂಪಾಗಬಹುದು. ಇದನ್ನು ಯಾರೂ ಬಯಸುವುದಿಲ್ಲ. ಆದರೆ ನಿಮ್ಮ ಮುಖದ ಒಂದು ಭಾಗದಲ್ಲಿಯ ಮೊಡವೆಗಳನ್ನು ಚಿವುಟಿ ತೆಗೆಯಲು ನೀವೆಂದಿಗೂ ಪ್ರಯತ್ನಿಸ ಬಾರದು.
ನೀವೇನೇ ಮಾಡಿ, ಆದರೆ ‘ಅಪಾಯಕಾರಿ ತ್ರಿಕೋನ’ ಎಂದೇ ಕರೆಯಲಾಗುವ, ಬಾಯಿಯ ಮೂಲೆಗಳಿಂದ ಮೂಗಿನ ಸೇತುವೆಯವರೆಗಿನ ಜಾಗದಲ್ಲಿ ಮೊಡವೆ ಮೂಡಿದ್ದರೆ ಅದರ ಸುದ್ದಿಗೆ ಹೋಗಲೇಬೇಡಿ. ಈ ಜಾಗದಲ್ಲಿ ಮಿದುಳಿನ ಪೊಳ್ಳಾದ ಸೈನಸ್ ಪ್ರದೇಶವನ್ನು ಸಂಪರ್ಕಿಸುವ ರಕ್ತನಾಳಗಳು ಹೆಚ್ಚಾಗಿರುತ್ತವೆ ಮತ್ತು ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ.
ಈ ಜಾಗದಲ್ಲಿ ಗಂಭೀರ ಸೋಂಕುಂಟಾಗಿದ್ದರೆ ಮತ್ತು ಅದಕ್ಕ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸೋಂಕು ನಂತರ ಮಿದುಳಿಗೆ ಹಬ್ಬಬಹುದು ಮತ್ತು ಅದು ಮಾರಣಾಂತಿಕವೂ ಆಗಬಹುದು ಎನ್ನುತ್ತಾರೆ ನ್ಯೂಯಾರ್ಕ್ ಲ್ಯಾಂಗೋನ್ ಮೆಡಿಕಲ್ ಸೆಂಟರ್‌ನ ಡರ್ಮಟಾಲಜಿ ವಿಭಾಗದ ಪ್ರೊ.ಡಾ.ಜೆರೆಮಿ ಬ್ರಾವರ್.
ಈ ಅಪಾಯಕಾರಿ ಜಾಗದಲ್ಲಿಯ ಮೊಡವೆಯನ್ನು ಚಿವುಟಿದಾಗ ಉಂಟಾಗುವ ಸೋಂಕನ್ನು ಆ್ಯಂಟಿ ಬಯೊಟಿಕ್‌ಗಳನ್ನು ನೀಡಿ ಗುಣಪಡಿಸಬಹುದು. ಹೀಗಾಗಿ ಸೋಂಕು ಉಂಟಾಗಿದೆ ಎಂದು ಅನಿಸಿದರೆ ಹೆದರಬೇಕಿಲ್ಲ. ಚರ್ಮ ಕೆಂಪಾಗುವಿಕೆ, ಬಾವು, ರಕ್ತ ಒಸರುವುದು ಮತ್ತು ನಿರಂತರ ಕೀವು ಆಗುತ್ತಲೇ ಇರುವುದು ಈ ಸೋಂಕಿನ ಲಕ್ಷಣಗಳಲ್ಲಿ ಸೇರಿವೆ. ಈ ಲಕ್ಷಣಗಳು ಉಳಿದುಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.