ಭೀಮಾ ಕೋರೆಗಾಂವ್: ಬರೀ ಸ್ಮಾರಕವಲ್ಲ, ಸಮಾನತೆಯ ಸಂಕೇತ
ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಭೀಮಾ ಕೋರೆಗಾಂವ್ ಮೂಲಕ ಹೊರ ಹೊಮ್ಮಿದ ದಲಿತ ಶಕ್ತಿ ನುಂಗಲಾರದ ತುತ್ತಾಗಿದೆ. ಮನುವಾದಿ ಪ್ರಾಬಲ್ಯದ ಹಿಂದೂ ರಾಷ್ಟ್ರ ನಿರ್ಮಾಣದ ತಮ್ಮ ಕನಸು ಭಗ್ನಗೊಳ್ಳುತ್ತಿದೆ ಎಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕಂಗಾಲಾಗಿದ್ದಾರೆ. ತಮ್ಮ ಬದುಕಿನ ಇಳಿಸಂಜೆಯಲ್ಲಿ ಹಿಂದೂ ರಾಷ್ಟ್ರವನ್ನು ಕಾಣಲು ಆಗಲಿಲ್ಲವೆಂದು ಪೇಜಾವರರು ದಿಗ್ಭ್ರಮೆಗೊಂಡಿದ್ದಾರೆ.
ಜನವರಿ 1ನೇ ತಾರೀಕು ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ದಲ್ಲಿ ನಡೆದ ಘಟನೆಗಳ ಬಗ್ಗೆ ನಾನಾ ವಿಶ್ಲೇಷಣೆಗಳು ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ 2019ರ ಲೋಕಸಭಾ ಚುನಾವಣೆಗೂ ಮುನ್ನ ದಲಿತರನ್ನು ಹಿಂದುತ್ವದ ಬುಟ್ಟಿಗೆ ಹಾಕಿಕೊಂಡು ಕೋಮು ಧ್ರುವೀಕರಣದ ಮೂಲಕ ಹಿಂದೂ ವೋಟ್ ಬ್ಯಾಂಕ್ ಸ್ಥಾಪಿಸಿ, ಮತ್ತೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು, ಆನಂತರ ಸಂವಿಧಾನಕ್ಕೆ ಚಟ್ಟ ಕಟ್ಟಲು ಸಂಘ ಪರಿವಾರ ನಡೆಸಿದ ಒಳಸಂಚಿಗೆ ದಲಿತರ ಈ ಜಾಗೃತಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಲೇ ಅಂದು ಶಾಂತಿಯುತವಾಗಿ ಸೇರಿದ ಜನಸಮೂಹದ ಮೇಲೆ ಮನುವಾದಿ ಶಕ್ತಿಗಳು ಕಲ್ಲು ತೂರಾಟ ಮಾಡಿದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಎದುರಿಗೆ ಸಿಕ್ಕವರ ಮೇಲೆ ಲ್ಲೆ ಮಾಡಿದರು. ಈ ಘಟನೆಯಲ್ಲಿ ಒಬ್ಬ ಸಾವಿಗೀಡಾಗಿ, ಅನೇಕರು ಗಾಯಗೊಂಡರು. ಇದು ಆಕಸ್ಮಿಕವಾಗಿ ನಡೆದ ಘಟನೆ ಯಲ್ಲ. ಅತ್ಯಂತ ಪೂರ್ವಯೋಜಿತವಾಗಿ ನವಪೇಶ್ವೆವಾದಿಗಳು ಅಸ್ಪಶ್ಯ ಸಮುದಾಯ ವನ್ನು ಬೆದರಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ದೇಶದಲ್ಲೇ ದಲಿತರು ಒಂದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಕಂಡು ಇವರಿಗೆ ಸಹಿಸಲು ಆಗುತ್ತಿಲ್ಲ.
ಭೀಮಾ ಕೋರೆಗಾಂವ್ ಘಟನೆಗಳ ಬಗ್ಗೆ ಸರಿಯಾಗಿ ವರದಿ ಬರಲಿಲ್ಲ. ಇದು ದಲಿತರು ಮತ್ತು ಮರಾಠರ ನಡುವಿನ ಘರ್ಷಣೆ ಎಂಬಂತೆ ಬಹುತೇಕ ಮುಖ್ಯವಾಹಿನಿಗಳು ಬಿಂಬಿಸಿದವು. ದಲಿತರ ಮೇಲೆ ಹಲ್ಲೆಗೆ ಜಾತಿ ಘರ್ಷಣೆಯ ಬಣ್ಣ ನೀಡಿದವು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜಿಗ್ನೇಶ್ ಮೇವಾನಿ ಮತ್ತು ಉಮರ್ ಖಾಲಿದ್ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದವು. ಭೀಮಾ ಕೋರೆಗಾಂವ್ ಸ್ಮಾರಕದ ಬಗ್ಗೆ ತಪ್ಪಾದ ವಿಶ್ಲೇಷಣೆಗಳು ನಡೆದವು.
1818ರಲ್ಲಿ ಪುಣೆ ಬಳಿಯ ಭೀಮಾ ಕೋರೆಗಾಂವ್‌ದಲ್ಲಿ ಚಿತ್ಪಾವನ ಬ್ರಾಹ್ಮಣ ಪಂಗಡದ ಪೇಶ್ವೆಯ ರಾಜ ಎರಡನೇ ಬಾಜೀರಾವ್‌ನ ಸೇನೆಯ ವಿರುದ್ಧ ಬ್ರಿಟಿಷ್ ಸೇನೆ ಯುದ್ಧ ನಡೆಸಿತು. ಈ ಸೇನೆಯಲ್ಲಿ ಮಹಾರ ಸಮುದಾಯದ ಸೈನಿಕರು ಹೆಚ್ಚಿನ ಸಂಖ್ಯೆ ಯಲ್ಲಿದ್ದರು. ಕೊನೆಗೆ ಜನವರಿ 1ರಂದು ಪೇಶ್ವೆ ಸೈ್ಯ ಸೋಲನ್ನು ಒಪ್ಪಿತು. ಮೂರನೇ ಆಂಗ್ಲೊ ಮರಾಠಾ ಯುದ್ಧವೆಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ವಿಶ್ಲೇಷಿಸಲ್ಪಡುವ ಭೀಮಾ ಕೋರೆಗಾಂವ್ ಸಮರ ವಿದೇಶಿ ಸಾಮ್ರಾಜ್ಯಶಾಹಿಗಳು ಮತ್ತು ರಾಷ್ಟ್ರೀಯ ವಾದಿಗಳ ಸಮರವೆಂದು ಹೇಳಿದರೆ ತಪ್ಪಾಗುತ್ತದೆ. ಈ ಸಮರ ನಡೆದಾಗ, ಭಾರತ ರಾಷ್ಟ್ರವಾಗಿರಲಿಲ್ಲ. ಆಗ ಪ್ರತೀ 10 ರಿಂದ 20 ಮೈಲಿಗೆ ಒಬ್ಬ ರಾಜರಿದ್ದರು. ಪುಣೆಯನ್ನು ರಾಜಧಾನಿ ಮಾಡಿಕೊಂಡಿದ್ದ ಪೇಶ್ವೆಗಳು ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ರಾಷ್ಟ್ರೀಯತೆಗಾಗಿ ಎಂದು ಬಿಂಬಿಸಿದರೆ, ತಪ್ಪಾಗುತ್ತದೆ. ಅದು ಅವರು ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಮಾಡಿದ ಹೋರಾಟ.
ಈ ಪೇಶ್ವೆಗಳು ಶಿವಾಜಿಯ ಸಾವಿನ ನಂತರ ಅರಸೊತ್ತಿಗೆ ಹಿಡಿದು ಕೂತರು. ಛತ್ರಪತಿ ಶಿವಾಜಿ, ಜಾತಿ, ಮತ ಮತ್ತು ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ರಾಜನೆಂದು ಅನ್ನಿಸಿದರೆ, ಮೋಸ ಮಾಡಿ ಅಧಿಕಾರಕ್ಕೆ ಬಂದ ಪೇಶ್ವೆಗಳು ಮನುಸ್ಮತಿ ಆಧರಿಸಿ ರಾಜ್ಯಭಾರ ನಡೆಸುತ್ತಿದ್ದರು. ದಲಿತರನ್ನು ಊರಾಚೆ ಇಟ್ಟಿದ್ದರು. ಪುಣೆಯಂತಹ ಊರಿನಲ್ಲಿ ದಲಿತರು ಪ್ರವೇಶಿಸಬೇಕಾದರೆ, ಅವರ ಉಗುಳು ಕೆಳಗೆ ಬೀಳದಂತೆ ಕೊರಳಿಗೆ ಗಡಿಗೆ ಕಟ್ಟಿಕೊಂಡು ಬರಬೇಕಿತ್ತು. ಅವರ ಹೆಜ್ಜೆ ನೆಲದ ಮೇಲೆ ಮೂಡದಂತೆ ಕಾಲಿಗೆ ಪೊರಕೆ ಕಟ್ಟಿಕೊಳ್ಳಬೇಕಿತ್ತು. ಇಂತಹ ಸನ್ನಿವೇಶದಲ್ಲಿ ಬ್ರಿಟಿಷರು ದಾಳಿ ಮಾಡಲು ಬಂದಾಗಲೂ ತಮ್ಮನ್ನು ಪಶುಗಳಂತೆ ಕೀಳಾಗಿ ಕಂಡ ಪೇಶ್ವೆರಾಜ ಬಾಜೀರಾವ್‌ನ ಬಳಿ ಹೋದ ದಲಿತರು, ಸೇನೆಯಲ್ಲಿ ಸೇರ್ಪಡೆ ಮಾಡಿಕೊಂಡರೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದರು. ಆದರೆ ಇದರಿಂದ ಕೆಂಡಾಮಂಡಲನಾದ ಬಾಜೀರಾವ್, ನಿಮ್ಮ ಸಹಾಯ ಬೇಕಾಗಿಲ್ಲ. ನೀವು ಮನುಧರ್ಮದ ಪ್ರಕಾರ, ಊರಾಚೆ ಇರಬೇಕು ಎಂದು ಓಡಿಸಿದ. ದಲಿತ ನಾಯಕ ಸಿದ್ದನಾಕನನ್ನು ಬೇಟಿಗೆ ಕಳುಹಿಸಿದ ತನ್ನ ಕೆಳಗಿನ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ. ಇದರಿಂದ ರೋಸಿ ಹೋದ ದಲಿತರು, ತಮಗೆ ಅವಕಾಶ ನೀಡಿದ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯನ್ನು ಸೇರಿದರು. ಕೇವಲ 500 ಮಂದಿಯಿದ್ದ ಮಹಾರ ಸೈನಿಕರು 30 ಸಾವಿರ ಸೈನಿಕರಷ್ಟು ಇದ್ದ ಪೇಶ್ವೆಯ ಸೈನಿಕರನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಇದು ಭೀಮಾ ಕೋರೆಗಾಂವ್‌ನ ಅಂದಿನ ಇತಿಹಾಸ.
ಈ ಭೀಮಾ ಕೋರೆಗಾಂವ್‌ನಲ್ಲಿ ಮಹಾರ ಸೇನೆಯ ಗೆಲುವಿಗಾಗಿ ಸ್ಥಾಪಿಸಲಾದ ವಿಜಯಸ್ತಂಭಕ್ಕೆ ಗೌರವ ಸಲ್ಲಿಸಲು ಬಂದಿದ್ದ ಸಹಸ್ರಾರು ದಲಿತರನ್ನು ಕಂಡು ಮಹಾರಾಷ್ಟ್ರದ ಬಿಜೆಪಿ ಸರಕಾರ ನಡುಗಿತು. ಶಾಂತಿಯುತವಾಗಿ ವಿಜಯಸ್ತಂಭಕ್ಕೆ ಗೌರವ ಸಲ್ಲಿಸುತ್ತಿದ್ದ ದಲಿತರ ಮೇಲೆ ಕೇಸರಿ ಬಾವುಟ ಹಿಡಿದ ಗೂಂಡಾಗಳು ಕಲ್ಲು ತೂರಿದರು. ಇದಕ್ಕೆ ಸಂಘ ಪರಿವಾರದ ಸಂಬಾಜಿ ಬೀಢೆ ಮತ್ತು ಬಿಜೆಪಿಯ ಮಾಜಿ ಪಾಲಿಕೆ ಸದಸ್ಯ ಮಿಲಿಂದ್ ಏಕಬೋಟೆಯವರ ಪ್ರಚೋದನೆಯೇ ಕಾರಣವೆಂದು ಪ್ರಕಾಶ ಅಂಬೇಡ್ಕರ್ ಆರೋಪಿಸಿದ್ದಾರೆ. ಈ ಸಂಬಾಜಿ ಭೀಡೆ, ಪ್ರಧಾನಿ ಮೋದಿ ಯವರ ನಿಕಟವರ್ತಿ.
ಪುಣೆಯಿಂದ 16 ಕಿ.ಮೀ. ದೂರದ ಭೀಮಾ ನದಿ ತೀರದಲ್ಲಿರುವ ಸಣ್ಣಹಳ್ಳಿ ಕೋರೆಗಾಂವ್. ಇಲ್ಲಿ ಭೀಮಾ ನದಿ ಹರಿಯುವ ಕಾರಣ ಇದಕ್ಕೆ ಭೀಮಾ ಕೋರೆಗಾಂವ್ ಎಂಬ ಹೆಸರು ಬಂದಿದೆ. ಇಂತಹ ಪುಟ್ಟ ಹಳ್ಳಿ 200 ವರ್ಷಗಳ ಹಿಂದೆ ಎಲ್ಲೆಡೆ ಸುದ್ದಿ ಯಾದಂತೆ ಈಗಲೂ ದೇಶವ್ಯಾಪಿ ಸುದ್ದಿಯಾಗಿದೆ. ಮಹಾರ ಸೈನಿಕರು ಆಗ ಪೇಶ್ವೆಗಳನ್ನು ಸೋಲಿಸಿರದಿದ್ದರೆ, ಬ್ರಿಟಿಷ್ ಸಾಮ್ರಾಜ್ಯ ಇಲ್ಲಿ ಸ್ಥಾಪನೆಯಾಗುತ್ತಿರಲಿಲ್ಲ ಎಂಬ ವಿಶ್ಲೇಷಣೆಯೂ ಇದೆೆ. ಹಾಗೆಂದು ಪೇಶ್ವೆಗಳೇನೂ ದೇಶಕ್ಕಾಗಿ ಹೋರಾಡಿದವರಲ್ಲ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದಾಗ, ಈ ಪೇಶ್ವೆಗಳು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಅಂತಲೇ ಮಹಾರ ಸೈನಿಕರು ಬ್ರಿಟಿಷ್ ಸೇನೆ ಸೇರಿ ಪೇಶ್ವೆಗಳ ವಿರುದ್ಧ ಹೋರಾಟ ನಡೆಸಿರುವುದು ತಪ್ಪು ಎಂದು ಹೇಳುವುದು ಸರಿಯಲ್ಲ. ಅವರಿಗೆ ಆಗ ಬೇರೆ ಆಯ್ಕೆಗಳು ಇರಲಿಲ್ಲ. ತಮ್ಮನ್ನು ನಾಯಿ, ನರಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಮನುವಾದಿ ಪೇಶ್ವೆಗಳಿಗಿಂತ ಬ್ರಿಟಿಷರು ಸೇನೆಯಲ್ಲಾದರೂ ಸೇರಿಸಿಕೊಂಡರಲ್ಲ ಎಂದು ಅವರು ಈ ಯುದ್ಧದಲ್ಲಿ ಪಾಲ್ಗೊಂಡರು.
ಎರಡನೇ ಬಾಜೀರಾವ್ ವಿರುದ್ಧ ಹೋರಾಡಲು ಮಹಾರ ಸೈನಿಕರನ್ನು ಬಳಸಿಕೊಂಡ ಬ್ರಿಟಿಷರು ನಂತರ ನಂಬಿಕೆ ದ್ರೋಹ ಮಾಡಿದರು. 1926ರಲ್ಲಿ ಬ್ರಿಟಿಷ್ ಸರಕಾರ ಒಂದು ವಿಚಿತ್ರ ಆದೇಶ ಹೊರಡಿಸಿತು. ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇರುವ ಮಹಾರರನ್ನು ಈ ಆದೇಶದ ಮೂಲಕ ತೆಗೆದು ಹಾಕಿತು. ಇದಕ್ಕೆ ಆರ್ಥಿಕ ಬಿಕ್ಕಟ್ಟಿನ ನೆಪ ಹೇಳಿತು. ಈ ನಂಬಿಕೆ ದ್ರೋಹದಿಂದ ದಲಿತರು ಆಘಾತಗೊಂಡರು. ಆಗ ದಮನಿತ ಸಮುದಾಯದ ನಾಯಕರಾಗಿ ಹೊರಹೊಮ್ಮಿದ ಬಾಬಾ ಸಾಹೇಬ್ ಅಂಬೇಡ್ಕರ್ ಈ ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾದರು. ಅದೇ ವರ್ಷದ ಜನವರಿ 1ರಂದು ಭೀಮಾ ಕೋರೆಗಾಂವ್‌ನ ರಣಸ್ತಂಭದ ಮುಂದೆ ಬಹಿರಂಗ ಸಭೆಯನ್ನು ಕರೆದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಬಂಡಾಯದ ಕಹಳೆ ಊದಿದರು. ಬ್ರಿಟಿಷರ ಆದೇಶಕ್ಕೆ ಹೆದರಬೇಡಿ. ನಾವು ನಮ್ಮ ಆಕ್ರೋಶ ವ್ಯಕ್ತಪಡಿಸಬೇಕು. ಕುರಿಗಳನ್ನು ಬಲಿ ನೀಡಿದಂತೆ ಸಿಂಹಗಳನ್ನು ಬಲಿ ನೀಡುವುದಿಲ್ಲ. ನಾವು ಸಿಂಹ ಶಕ್ತಿ ಪಡೆದುಕೊಳ್ಳಬೇಕು ಎಂದರು. ಇದಕ್ಕೆ ಬೆದರಿದ ಬ್ರಿಟಿಷರು ಆದೇಶವನ್ನು ಹಿಂಪಡೆದರು. ಪುನಃ ದಲಿತರ ನೇಮಕಾತಿ ಮುಂದುವರಿಯಿತು. ಆಗಿನಿಂದ ಪ್ರತೀ ವರ್ಷ ಜನವರಿ 1ರಂದು ಅಂಬೇಡ್ಕರ್ ಕೋರೆಗಾಂವ್‌ಗೆ ಬಂದು ವಿಜಯಸ್ತಂಭಕ್ಕೆ ಗೌರವ ಸಲ್ಲಿಸಿ ಹೋಗುತ್ತಿದ್ದರು. ಈಗಲೂ ಕೂಡ ದಮನಿತ ಸಮುದಾಯದ ಜನರು ಇಲ್ಲಿಗೆ ಬರುತ್ತಾರೆ. ಗೌರವ ಸಲ್ಲಿಸುತ್ತಾರೆ.
ಭೀಮಾ ಕೋರೆಗಾಂವ್ ಇಂದು ದಲಿತರ ಸ್ವಾಭಿಮಾನದ ಸಂಕೇತವಾಗಿದೆ. ಇದಕ್ಕಾಗಿ ಅವರು ರಣಸ್ತಂಭ ಸೇವಾ ಸಮಿತಿ ಮಾಡಿಕೊಂಡಿದ್ದಾರೆ. ದಲಿತ ಸಮುದಾಯ ತನ್ನ ರಾಜಕೀಯ ಅಸ್ಮಿತೆಗಾಗಿ ಈ ಭೀಮಾ ಕೋರೆಗಾಂವ್‌ನ ವೀರರ ಹೋರಾಟ ಸ್ಮರಿಸುತ್ತ ಬಂದಿದೆ. ಈಗ ದಲಿತರು ದೇಶದಲ್ಲಿ ಒಂದು ರಾಜಕೀಯ ಶಕ್ತಿಯಾಗಿದ್ದಾರೆ. ಅಂತಲೇ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರನ್ನು ಬಿಟ್ಟರೆ, ದಲಿತರ ಮೇಲೆ ಹೆಚ್ಚು ಹಲ್ಲೆಗಳು ನಡೆದಿವೆ. ದಲಿತ ಸಮುದಾಯವನ್ನು ತಮ್ಮ ತಕ್ಕೆಗೆ ತೆಗೆದುಕೊಂಡು ಮನುವಾದಿ ರಾಷ್ಟ್ರ ನಿರ್ಮಿಸುವ ಮಸಲತ್ತು ವಿಫಲಗೊಂಡಿದೆ.
200 ವರ್ಷಗಳ ಹಿಂದೆ ಮಹಾರ ಸೈನಿಕರ ಕೈಯಲ್ಲಿ ಸೋಲು ಒಪ್ಪಿದ ಪೇಶ್ವೆಶಾಹಿ ಶಕ್ತಿಗಳು ಈಗ ಹಿಂದುತ್ವದ ವೇಷ ಹಾಕಿ, ಹಿಂದೂ ಹೆಸರನ್ನು ಇಟ್ಟುಕೊಂಡು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಸಂಚು ರೂಪಿಸಿವೆ. ತಮ್ಮ ಈ ಗುರಿ ಸಾಧನೆಗೆ ಅಡ್ಡಿಯಾಗಿರುವ ಡಾ. ಅಂಬೇಡ್ಕರ್ ಅವರ ಸಂವಿಧಾನ ಬದಲಿಸಲು ಬಹಿರಂಗ ಕರೆ ಕೊಡುತ್ತಿದ್ದಾರೆ. ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಪ್ರಧಾನಿ ಮೋದಿ ನೇತೃತ್ವದ ಸರಕಾರಕ್ಕೆ ಜನರ ಬಳಿ ಹೋಗಲು ಮುಖವಿಲ್ಲ. ಮತ್ತೆ ಹಿಂದುತ್ವದ ಉನ್ಮಾದ ಕೆರಳಿಸಿ, 2019ರ ಚುನಾವಣೆ ಗೆಲ್ಲಲು ಅದು ಹುನ್ನಾರ ನಡೆಸಿದೆ. ಜನರನ್ನು ಧರ್ಮದ ಆಧಾರದಲ್ಲಿ, ಜಾತಿ ಆಧಾರದಲ್ಲಿ ವಿಭಜಿಸಲು ಯತ್ನ ನಡೆಸಿದೆ.
ಹಿಂದೂಗಳನ್ನು ಅಲ್ಪಸಂಖ್ಯಾತರ ವಿರುದ್ಧ ಮತ್ತು ದಲಿತರನ್ನು ಮರಾಠರ ವಿರುದ್ಧ ಎತ್ತಿಕಟ್ಟುವ ಮಸಲತ್ತು ನಡೆದಿದೆ.
ಮಹಾರಾಷ್ಟ್ರದಲ್ಲಿ ಮರಾಠಾ ಯುವಕರು ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಶೈಕ್ಷಣಿಕ ಅವಕಾಶಗಳು ಕಡಿಮೆಯಾಗಿವೆ. ಇಂತಹ ಯುವಕರನ್ನು ಬಳಸಿಕೊಂಡು ಅವರ ತಲೆಯಲ್ಲಿ ಮರಾಠದ ವೈಭವದ ದಿನಗಳ ನಶೆ ಏರಿಸಿ, ದಲಿತರನ್ನು ಅವರ ಮೇಲೆ ಛೂ ಬಿಡುವ ಸಂಚು ವ್ಯವಸ್ಥಿತವಾಗಿ ನಡೆದಿದೆ. ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರ ಇದಕ್ಕೆ ಒಂದು ಉದಾಹರಣೆ. ಅಂತಲೇ ಮಹಾರಾಷ್ಟ್ರದ ದಲಿತರು, ರಾಜ್ಯಾದ್ಯಂತ ಬಂದ್ ನಡೆಸಿ, ಸರಿಯಾದ ತಿರುಗೇಟು ನೀಡಿದರು.
ಈ ಬಾರಿ ಭೀಮಾ ಕೋರೆಗಾಂವ್ ಸಂಭ್ರಮಕ್ಕೆ ಹೊಸ ಸ್ವರೂಪ ನೀಡಿದ ಮಹಾರಾಷ್ಟ್ರದ ದಲಿತ ಸಂಘಟನೆಗಳು, ಹಿಂದುತ್ವದ ವೇಷ ಹಾಕಿಕೊಂಡು ಬಂದ ನವಪೇಶ್ವೆವಾದಿ ಶಕ್ತಿಗಳ ವಿರುದ್ಧ ಪುಣೆಯ ಶನಿವಾರವಾಡದಲ್ಲಿ ಬೃಹತ್ ಸಮಾವೇಶ ನಡೆಸಿದವು. ಈ ಸಮಾವೇಶಕ್ಕೆ ಗುಜರಾತ್‌ನ ಹೊಸ ಪೀಳಿಗೆಯ ದಲಿತ ನಾಯಕ ಮತ್ತು ಇತ್ತೀಚೆಗೆ ವಿಧಾನಸಭೆಗೆ ಚುನಾಯಿತರಾದ ಜಿಗ್ನೇಶ್ ಮೇವಾನಿ ಬಂದಿದ್ದರು. ಜಿಗ್ನೇಶ್ ಮೇವಾನಿ ಮತ್ತು ಉಮರ್ ಖಾಲಿದ್ ಇಲ್ಲಿ ಬಂದಿದ್ದನ್ನು ಸಹಿಸದ ಕೋಮುವಾದಿ ಶಕ್ತಿಗಳು ಅವರ ವಿರುದ್ಧವೂ ಅಪಪ್ರಚಾರ ನಡೆಸಿದವು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮೇವಾನಿಯವರು, ಎಡಪಂಥೀಯರು ನಮ್ಮ ಸಹಜ ಮಿತ್ರರು. ಬಲಪಂಥೀಯರು ನಮ್ಮ ಪ್ರಧಾನ ಶತ್ರುಗಳು ಎಂದರು. ಆಗ ಕೆಲ ವರದಿಗಾರರು, ಅಂಬೇಡ್ಕರ್ ಆ ರೀತಿ ಹೇಳಿಲ್ಲವಲ್ಲ ಎಂದು ಪ್ರಶ್ನಿಸಿದಾಗ, ಆಗ ಆ ಸನ್ನಿವೇಶ ಇರಲಿಲ್ಲ.
ಈಗ ಪರಿಸ್ಥಿತಿ ಬದಲಾಗಿದೆ. ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟ ಬಲಪಂಥೀಯರನ್ನು ಹಿಮ್ಮೆಟ್ಟಿಸಲು ದಲಿತ ಸಂಘಟನೆಗಳು ಎಡಪಂಥೀಯ ಶಕ್ತಿಗಳೊಡನೆ ಕೈ ಜೋಡಿಸಬೇಕಿದೆ ಎಂದರು. ಇದನ್ನೇ ನೆಪ ಮಾಡಿಕೊಂಡು ಅವರ ವಿರುದ್ಧ ಅಪಪ್ರಚಾರ ನಡೆದಿದೆ. ಈ ಅಪಪ್ರಚಾರಕ್ಕೆ ಸಂಘ ಪರಿವಾರ ಪ್ರಚೋದನೆ ನೀಡುತ್ತಿದೆ. ದಲಿತ ಶಕ್ತಿಯನ್ನು ಒಡೆಯಲು ಹುನ್ನಾರ ನಡೆದಿದೆ.
ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಭೀಮಾ ಕೋರೆಗಾಂವ್ ಮೂಲಕ ಹೊರ ಹೊಮ್ಮಿದ ದಲಿತ ಶಕ್ತಿ ನುಂಗಲಾರದ ತುತ್ತಾಗಿದೆ. ಮನುವಾದಿ ಪ್ರಾಬಲ್ಯದ ಹಿಂದೂ ರಾಷ್ಟ್ರ ನಿರ್ಮಾಣದ ತಮ್ಮ ಕನಸು ಭಗ್ನಗೊಳ್ಳುತ್ತಿದೆ ಎಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕಂಗಾಲಾಗಿದ್ದಾರೆ. ಮ್ಮ ಬದುಕಿನ ಇಳಿಸಂಜೆಯಲ್ಲಿ ಹಿಂದೂರಾಷ್ಟ್ರವನ್ನು ಕಾಣಲು ಆಗಲಿಲ್ಲವೆಂದು ಪೇಜಾವರರು ದಿಗ್ಭ್ರಮೆಗೊಂಡಿದ್ದಾರೆ.