varthabharthi


ಮುಂಬೈ ಮಾತು

ಜನಜೀವನ ಅಸ್ತವ್ಯಸ್ತಗೊಳಿಸಿದ ಕೋರೆಗಾಂವ್ ಹಿಂಸಾಚಾರ

ವಾರ್ತಾ ಭಾರತಿ : 9 Jan, 2018
ಶ್ರೀನಿವಾಸ್ ಜೋಕಟ್ಟೆ

ಪುಣೆಯ ಭೀಮಾ ಕೋರೆಗಾಂವ್‌ನಲ್ಲಿ ಕಾಣಿಸಿದ್ದ ಜಾತೀಯ ಹಿಂಸೆಯ ದೃಶ್ಯ ಮಹಾರಾಷ್ಟ್ರಾದ್ಯಂತ ವಿಸ್ತರಿಸಿ ಜನವರಿ 3ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಾಗಿದ್ದರೂ ಅಂದು ಮಧ್ಯಾಹ್ನದ ನಂತರ ಬಂದ್ ಹಿಂದೆಗೆಯಲಾಗಿತ್ತು. ಬಂದ್‌ನ ಘೋಷಣೆ ಮಾಡಿದವರು ಭಾರತೀಯ ರಿಪಬ್ಲಿಕ್‌ನ ಪಕ್ಷದ ಬಹುಜನ ಮಹಾಸಂಘದ ನೇತಾ ಪ್ರಕಾಶ್ ಅಂಬೇಡ್ಕರ್. ಎಂದಿನಂತೇ ಮುಂಬೈ ಮಹಾನಗರದಲ್ಲಿ ಬೆಳಗ್ಗೆ ಬೇಗ ಕೆಲಸಕ್ಕೆ ಹೊರಟವರು ಆಫೀಸ್ ತಲುಪಿದ್ದರು. ಮಧ್ಯಾಹ್ನ ಹೊರಟವರೆಲ್ಲ ದಾರಿ ನಡುವೆ ಸಿಲುಕಿಕೊಂಡಿದ್ದರು.

ವ್ಯಾಪಾರಿ ಸಂಘಟನೆ ಮತ್ತು ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ಅನುಸಾರ ಎರಡು ದಿನಗಳಲ್ಲಿ ಸುಮಾರು 3 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಆ ದಿನ ಮುಂಬೈಯ ರೈಲು ಓಡಾಟ, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾಜ್ಯದಲ್ಲಿ ಕಂಡು ಬಂದ ಈ ಜಾತೀಯ ಹಿಂಸಾಚಾರಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅನುಸಾರ ಹೊರಗಿನ ಜನರ ಕೈವಾಡವಿದೆ. ಭೀಮಾ ಕೋರೆಗಾಂವ್ ಊರಿನವರೂ ‘‘ನಾವಿಲ್ಲಿ ದಲಿತ ಮರಾಠರು ಚೆನ್ನಾಗಿದ್ದೇವೆ. ಇದು ಹೊರಗಿನವರ ಕೈವಾಡ’’ ಅನ್ನುವ ಹೇಳಿಕೆ ನೀಡಿದ್ದಾರೆ. ಇದೀಗ ಮುಂಬೈ ಪೊಲೀಸರು ಸಿಸಿಟಿವಿ ಫುಟೇಜ್‌ನಿಂದ ಗಲಭೆಕೋರರನ್ನು ಗುರುತಿಸುತ್ತಿದ್ದಾರೆ, ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ 50ರಷ್ಟು ಗಲಭೆಗೆ ಪ್ರಚೋದನೆ ನೀಡಿದ ಪೋಸ್ಟ್‌ಗಳನ್ನು ಲ್ಯಾಬ್‌ನ ಟೀಮ್ ತನಿಖೆಗೊಳಪಡಿಸುತ್ತಿದೆ. ಈ ಎಲ್ಲ ಪೋಸ್ಟ್‌ಗಳನ್ನು ಬ್ಲಾಕ್ ಮಾಡಲಾಗಿದೆ.

ದಲಿತರಾಗಲಿ, ಕಮ್ಯುನಿಸ್ಟ್‌ರಾಗಲಿ ಮಹಾತ್ಮಾ ಫುಲೆ, ಶಾಹು ಮಹಾರಾಜ್, ಡಾ. ಬಿ.ಆರ್. ಅಂಬೇಡ್ಕರ್.....ಮೊದಲಾದವರ ಸಾಲಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನೂ ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೆನೆಯುತ್ತಾರೆ, ಫೋಟೊ ಅಳವಡಿಸುತ್ತಾರೆ. ಮಹಾರಾಷ್ಟ್ರದಲ್ಲಿ ಯಾರೇ ಕಾರ್ಯಕ್ರಮ ಮಾಡುವಾಗಲೂ ಶಿವಾಜಿ ಮಹಾರಾಜರ ಫೋಟೊ ಅಳವಡಿಸುತ್ತಾರೆ. ಅಳವಡಿಸಲೇಬೇಕು! ಅದು ಅನಿವಾರ್ಯವೂ ಹೌದು. ಶಿವಾಜಿ ಮಹಾರಾಜರನ್ನು ನೆನೆಯದಿದ್ದರೆ ಮುಂದೆ ಆಗುವ ಅನಾಹುತ ದಲಿತ ಸಂಘಟನೆಗಳಿಗೂ ಗೊತ್ತಿದೆ. ಭೀಮಾ ಕೋರೆಗಾಂವ್‌ನಲ್ಲಿ ‘ಶೌರ್ಯ ದಿವಸ’ ಆಚರಿಸಿದ ಸಂದರ್ಭದಲ್ಲೂ ಶಿವಾಜಿ ಮಹಾರಾಜರ ಫೋಟೋ ಅಳವಡಿಸಿದ್ದರು. ಅವರನ್ನೂ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ದರೂ ಕಲ್ಲು ತೂರಾಟ ಹೇಗೆ ಕಾಣಿಸಿತು!

ಇದೀಗ 1818ರ ಯುದ್ಧದಲ್ಲಿನ ವಿಜಯದ ನೆನಪನ್ನು 2018ರಲ್ಲಿ ಅರ್ಥಾತ್ 200 ವರ್ಷಗಳ ನಂತರ ಮತ್ತೆ ನೆನಪಿಸಿಕೊಂಡರೆ ನಿಜಕ್ಕೂ ನಾವು ಈ ಬಾರಿಯ ಜಾತಿಹಿಂಸೆಯ ದೃಶ್ಯದಿಂದ ಮತ್ತೆ 200 ವರ್ಷಗಳಷ್ಟು ಹಿಂದಕ್ಕೆ ಹೋಗಿರುವುದು ಕಳವಳಕಾರಿ ಸಂಗತಿಯಾಗಿದೆ. ಆರ್‌ಪಿಐ ಬಹುಜನ ಮಹಾಸಂಘದ ಪ್ರಕಾಶ್ ಅಂಬೇಡ್ಕರ್‌ರು ಮಾಡಿರುವ ಆರೋಪ ಗಮನಿಸಿದರೆ ‘‘ಸಂಭಾಜಿ ಭಿಡೆ ಅವರ ‘ಶಿವ ಪ್ರತಿಷ್ಠಾನ’ ಮತ್ತು ಮಿಲಿಂದ್ ಎಕ್‌ಬೋಟೆ ಅವರ ‘ಹಿಂದೂ ಏಕತಾ ಆಘಾಡಿ’ ಜೊತೆಗೂಡಿ ಭೀಮಾ ಕೋರೆಗಾಂವ್‌ನ ಜಯಸ್ತಂಭದ ಬಳಿ ಸೇರಿದ್ದ ಜನರ ಮೇಲೆ (ಕಿಡಿಗೇಡಿಗಳು)ಕಲ್ಲೆಸೆದಿರುವುದರಿಂದ ಹಿಂಸೆ ಹುಟ್ಟಿಕೊಂಡಿತು.’’ ಈ ಎರಡೂ ಸಂಘಟನೆಗಳು ಈ ಆರೋಪ ನಿರಾಕರಿಸಿವೆ. ಆದರೆ ಇದನ್ನು ಪ್ರಕಾಶ್ ಅಂಬೇಡ್ಕರ್‌ರು ತಮ್ಮ ರಾಜಕೀಯ ಜೀರ್ಣೋದ್ಧಾರಕ್ಕಾಗಿ ಬಳಸಿಕೊಂಡರೇ ಹೊರತು ಹಿಂಸೆಯನ್ನು ತಣಿಸುವ ಪ್ರಯತ್ನ ಮಾಡಲಿಲ್ಲ. ದಂಗೆಯನ್ನು ಶಾಂತಗೊಳಿಸುವವನೇ ಅಸಲಿ ನಾಯಕ ಎಂದು ಇನ್ನು ಕೆಲವರ ವಾದ.

ಇಂದಿರಾ ಗಾಂಧಿಯವರ ಹತ್ಯೆಯ ನಂತರ ಸಿಖ್ಖ್ಖ್ಖರ ನರಮೇಧ ದೃಶ್ಯ ವಿವಿಧೆಡೆ ಕಾಣಿಸಿದ್ದರೂ ಮುಂಬೈ ಮಹಾನಗರದಲ್ಲಿ ಸಿಖ್ ಸಮಾಜಕ್ಕೆ ಯಾವ ಹಾನಿಯೂ ಆಗದಂತೆ ನೋಡಿಕೊಂಡವರು ಬಾಳಾ ಸಾಹೇಬ ಠಾಕ್ರೆ ಎನ್ನುವುದು ಆಗಾಗ ಉಲ್ಲೇಖವಾಗುವ ಮಾತುಗಳು. ಈಗ ಭೀಮಾ ಕೋರೆಗಾಂವ್ ದಂಗೆಯ ನ್ಯಾಯಾಂಗ ತನಿಖೆಗೆ ಆದೇಶವನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ.

ಮರಾಠ ಆಂದೋಲನದ ನಂತರ ಇದೀಗ ಮಹಾರಾಷ್ಟ್ರದಲ್ಲಿ ದಲಿತ ಸಮಾಜದ ಆಂದೋಲನದ ಕಾರಣ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕುರ್ಚಿಗೆ ಮತ್ತೆ ಅಪಾಯ ಕಾದಿದೆ. ಭೀಮ ಶಕ್ತಿಯ ಘಟನೆಯೂ ಅವರ ತಲೆನೋವು ಹೆಚ್ಚಿಸಿದೆ. ಸಂಸತ್‌ನಲ್ಲೂ ಈ ವಿಷಯ ಪ್ರಸ್ತಾಪವಾದ ನಂತರ ಕೇಂದ್ರೀಯ ನೇತೃತ್ವವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಗುಜರಾತ್‌ನಲ್ಲಿ ಪಟೇಲ್ ಸಮಾಜದ ಆಂದೋಲನದ ನಂತರ ಅಲ್ಲಿನ ಸಾಮಾಜಿಕ ಪರಿಸ್ಥಿತಿಯು ಬಹಳಷ್ಟು ಬದಲಾವಣೆ ಕಾಣಿಸಿತ್ತು ಹಾಗೂ ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿಗೆ ವಿಧಾನ ಸಭೆಯಲ್ಲಿ ಗೆಲುವು ಸಾಧಿಸಲು ಹರಸಾಹಸ ಪಡಬೇಕಾಯಿತು.

ಮಹಾರಾಷ್ಟ್ರದಲ್ಲಿ ಮರಾಠ ಸಮಾಜ ಮೀಸಲಾತಿಯ ವಿಷಯ ಮುಂದಿಟ್ಟು ಆಂದೋಲನದ ದಾರಿಯಲ್ಲಿದೆ. ಇದೀಗ ಭೀಮಾ ಕೋರೆಗಾಂವ್ ಪ್ರಕರಣದಿಂದ ಮರಾಠ ಮತ್ತು ದಲಿತ ಸಮಾಜದ ನಡುವೆ ವೈಮನಸ್ಸು ಅಂತರ ಹೆಚ್ಚಲಿದೆ. ಸಾಮಾಜಿಕ ಏಕತೆ ಮತ್ತು ಶಾಂತಿಯನ್ನು ಮುರಿಯಲು ನಡೆಸಿದ ಈ ಪ್ರಯತ್ನವನ್ನು ಕಾಲ ಮೀರುವ ಮೊದಲೇ ನಿಯಂತ್ರಿಸುವುದು ಆಡಳಿತ ಮತ್ತು ಪೊಲೀಸರ ಕರ್ತವ್ಯವಾಗಿದೆ. ಮಹಾರಾಷ್ಟ್ರದಲ್ಲಿ ಈಗಲೂ ರೈತರು ಸಾಲಮುಕ್ತಿಯ ನಿರೀಕ್ಷೆಯಲಿದ್ದಾರೆ. ಹಾಗಾಗಿ ರೈತರು, ಮರಾಠ ಸಮುದಾಯದ ಜೊತೆಗೆ ಈಗ ದಲಿತ ಸಮಾಜವೂ ಮುಖ್ಯಮಂತ್ರಿಯವರಲ್ಲಿ ಬೇಸರ ತಳೆದರೆ ಬಿಜೆಪಿಯ ಸಂಕಟ ಹೆಚ್ಚಲಿದೆ. ಮಹಾರಾಷ್ಟ್ರದಲ್ಲಿ ಎರಡು ದಿನಗಳ ಕಾಲ ನಡೆದ ಈ ಜಾತೀಯ ಹಿಂಸಾ ಘಟನೆಗಳ ಸಿಸಿಟಿವಿ ಫುಟೇಜ್‌ಗಳನ್ನು ಜಮಾ ಮಾಡುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಮುಂಬೈಯಲ್ಲಿ ನಡೆದ ಹಿಂಸಾ ದೃಶ್ಯಗಳಲ್ಲಿ ಒಳಗೊಂಡಿರುವ ತಪ್ಪಿತಸ್ಥರ ವಿರುದ್ಧ ಸರಕಾರ ಕಾರ್ಯಾಚರಣೆ ನಡೆಸಲಿದೆ. ಹೈಕೋರ್ಟ್‌ನ ವರ್ತಮಾನ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆ ನಡೆಸಲಾಗುವುದು. ಹೀಗಿದ್ದೂ ಘಟನೆಯ ಮೊದಲ ದಿನ ಅರ್ಥಾತ್ ಜನವರಿ 2ರಂದು ಜನ ಸಂಯಮದಿಂದ ಪ್ರತಿಭಟನೆ ನಡೆಸಿರುವುದು ವಿಶೇಷ.

ಯಾರ ಬಳಿ ವಿಷಯಗಳಿಲ್ಲವೋ ಅವರು ಮಹಾರಾಷ್ಟ್ರದ ವಾತಾವರಣ ಕೆಡಿಸಿ ರಾಜಕೀಯ ಲಾಭವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಆ ಸಂಜೆ ಹೇಳಿದರು. ಬಂದ್‌ನ ದಿನ ಶಹರದ ಟ್ರಾಫಿಕ್ ವ್ಯವಸ್ಥೆ ಮತ್ತು ಪರಿಸ್ಥಿತಿಯನ್ನು ಗಮನಿಸಿ ಮುಂಬೈ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್‌ನ ವರಿಷ್ಠ ಅಧಿಕಾರಿಗಳು ಸಮಯ ಸಮಯಕ್ಕೆ ಸೋಶಿಯಲ್ ಮೀಡಿಯಾದ ಮೂಲಕ ಜನರಿಗೆ ಸಂದೇಶಗಳನ್ನು ರವಾನಿಸುತ್ತಿದ್ದರು. ರೋಗಿಗಳ ಸ್ಥಿತಿ, ಗರ್ಭಿಣಿಯರ ಸ್ಥಿತಿ ಮಾತ್ರ ಅನೇಕ ಕಡೆ ಭಾರೀ ಸಂಕಟಕ್ಕೀಡಾಗಿರುವುದು ಮಾನವೀಯ ದುರಂತಕ್ಕೆ ಸಾಕ್ಷಿ. ವಿಕ್ರೋಲಿಯಲ್ಲಿ ಗರ್ಭಿಣಿಯೊಬ್ಬಳನ್ನು ಯಾವ ಟ್ಯಾಕ್ಸಿ ರಿಕ್ಷಾದವರೂ ಆಸ್ಪತ್ರೆಗೆ ಒಯ್ಯಲು ಒಪ್ಪದಿದ್ದಾಗ ಪಕ್ಕದ ಮನೆಯವರು ಮಾನವೀಯ ದೃಷ್ಟಿಯಿಂದ ತಮ್ಮ ಕಾರಲ್ಲಿ ಕೂರಿಸಿ ಆಸ್ಪತ್ರೆಗೆ ಒಯ್ದರೆ ಅವರ ಕಾರಿನ ಗಾಜು ಪುಡಿ ಮಾಡಿದ್ದಲ್ಲದೆ ಆಂದೋಲನಕಾರಿಗಳು ಥಳಿಸಿದ್ದು, 62 ವರ್ಷದ ಅಂಗವಿಕಲ ಯೂಸುಫ್ ಅವರು ಕಲ್ಯಾಣ್‌ನಿಂದ ಆಸ್ಪತ್ರೆಗೆ ಹೊರಟಿದ್ದರೂ ರೈಲ್ ರೋಕೋ ಆಂದೋಲನದ ಕಾರಣ ಅವರಿಗೆ ಆಸ್ಪತ್ರೆಗೆ ತಲುಪಲಾಗದಿರುವುದಾಗಿ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಶುಶ್ರೂಷೆಗೆ ಬರುವವರು ಆರ್ಥಿಕವಾಗಿ ಬಡವರಿದ್ದಾರೆ. ಇವರಿಗೆಲ್ಲಾ ಲೋಕಲ್ ರೈಲುಗಳ ಹೊರತು ಬೇರೆ ದಾರಿ ಇಲ್ಲ. ಮುಂಬೈ ಆಸ್ಪತ್ರೆಗಳಿಗೆ ಒಪಿಡಿಗಾಗಿ ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಬಂದ್ ದಿನ ಬಾಲಿವುಡ್‌ನ ಚಿತ್ರೀಕರಣಗಳೂ ಅನೇಕ ಕಡೆ ಬಂದ್ ಇತ್ತು. ಕಲಾವಿದರಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗಲಿಲ್ಲ.

ಮುಂಬೈಯಲ್ಲಿ ದಲಿತ ಸಮಾಜದಿಂದ ಇಂತಹ ಆಂದೋಲನವಾಗದೆ ಬಹಳಷ್ಟು ವರ್ಷಗಳಾಗಿತ್ತು. ತೊಂಬತ್ತರ ದಶಕದಲ್ಲಿ ಘಾಟ್‌ಕೋಪರ್‌ನ ರಮಾಬಾಯಿ ಕಾಲನಿಯಲ್ಲಿ ಕಾಣಿಸಿದ ಆಂದೋಲನ ನಂತರ ಅಷ್ಟೊಂದು ದೊಡ್ಡದಾದ ಮತ್ತೊಂದು ಆಂದೋಲನ ಕಾಣಿಸಿರಲಿಲ್ಲ. ಈ ಸಲ ಮುಲುಂಡ್, ಘಾಟ್ ಕೋಪರ್, ಚೆಂಬೂರ್ ಮೊದಲಾದೆಡೆ ದಲಿತ ಆಂದೋಲನ ಮೆರವಣಿಗೆ, ಬಂದ್‌ನ ದೃಶ್ಯ ಮೊದಲಿಗೆ ಕಾಣಿಸಿತು. ಇಂತಹ ಘಟನೆಗಳು ನಡೆದಾಗಲೆಲ್ಲ ತನಿಖೆಗೆ ಆದೇಶಿಸುವುದು ಮಾಮೂಲಿ. ಆದರೆ ದಂಗೆ - ಹಿಂಸೆಯನ್ನು ಹುಟ್ಟುಹಾಕಿದ ಅಸಲಿ ಜನಗಳು ಮುಂದೆ ಬರುವುದೇ ಇಲ್ಲ. ಇಂತಹ ಘಟನೆಗಳನ್ನೆಲ್ಲಾ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡವರೇ ಹೆಚ್ಚು.

* * *

ತುರ್ತು ಪರಿಸ್ಥಿತಿಯ ಕಾಲದಲ್ಲಿ
ಜೈಲಿಗೆ ಹೋದವರಿಗೆ 10 ಸಾವಿರ ರೂ. ಪೆನ್ಶನ್!

ಇಂದಿರಾ ಗಾಂಧಿ ಸರಕಾರದ ವತಿಯಿಂದ ಎಪ್ಪತ್ತರ ದಶಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಸಮಯದಲ್ಲಿ ಜೈಲ್‌ಗೆ ಹೋದವರಿಗೆ ಮಹಾರಾಷ್ಟ್ರ ಸರಕಾರವು ಹತ್ತು ಸಾವಿರ ರೂಪಾಯಿ ಪ್ರತೀ ತಿಂಗಳು ಪೆನ್ಶನ್ ನೀಡುವ ವಿಚಾರವನ್ನು ಮಾಡುತ್ತಿದೆ. ಇದಲ್ಲದೆ ಇಂತಹವರಿಗೆ ವಾರ್ಷಿಕ ಹತ್ತು ಸಾವಿರ ರೂಪಾಯಿ ತನಕದ ಮೆಡಿಕಲ್ ಸೌಲಭ್ಯವನ್ನು ನೀಡಲು ನಿಶ್ಚಯಿಸಿದೆ. ಈ ಕುರಿತಂತೆ ಸರಕಾರವು ಉಪಸಮಿತಿಯನ್ನು ರಚಿಸಲು ನಿರ್ಣಯಿಸಿದೆ. ಮಂತ್ರಿಮಂಡಲದ ತೀರ್ಮಾನದ ಸಂದರ್ಭದಲ್ಲಿ ಸಂಸದೀಯ ಕಾರ್ಯಮಂತ್ರಿ ಗಿರೀಶ್ ಬಾಪಟ್ ಅವರು ತಿಳಿಸಿದಂತೆ ದೇಶದ ಕೆಲವು ರಾಜ್ಯಗಳಲ್ಲಿ (ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಬಿಹಾರ್.....) ಜೈಲ್‌ಗೆ ಆ ಸಮಯ ತೆರಳಿದ್ದವರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜೈಲ್‌ಗೆ ಹೋಗಿದ್ದವರು ನಿಧನರಾಗಿದ್ದರೆ ಪೆನ್ಶನ್ ಹಣವನ್ನು ಅವರ ಪತ್ನಿಗೆ ನೀಡಲಾಗುತ್ತದೆ. ಹಾಗಾಗಿ ವಿಸ್ತಾರದ ಅಧ್ಯಯನಕ್ಕಾಗಿ ಒಂದು ಉಪಸಮಿತಿಯನ್ನು ರಚಿಸಲು ಮಂತ್ರಿಮಂಡಲ ಮಂಜೂರು ನೀಡಿದೆ.

ಈ ಉಪಸಮಿತಿ ತನ್ನ ವರದಿಯನ್ನು ಮೂರು ತಿಂಗಳ ಒಳಗೆ ನೀಡಲಿದೆ. ‘‘ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲ್‌ಗೆ ಯಾರೆಲ್ಲ ಹೋಗಿದ್ದರೋ ಅವರು ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ಪ್ರಮುಖ ಪಾತ್ರ ನಿರ್ವಹಿಸಿದವರಾಗಿದ್ದಾರೆ. ಇವರ ಶ್ರಮದ ಕಾರಣವೇ ಇಂದು ದೇಶದಲ್ಲಿ ಗಣತಂತ್ರ ಉಳಿದುಕೊಂಡಿದೆ’’ ಎಂದು ಸಂಸದೀಯ ಕಾರ್ಯ ಮಂತ್ರಿ ಬಾಪಟ್ ತಿಳಿಸಿದ್ದಾರೆ.

ದೇಶದಲ್ಲಿ 25 ಜೂನ್ 1975ರಿಂದ 21 ಮಾರ್ಚ್ 1977ರ ತನಕ ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)