varthabharthi


ನನ್ನೂರು ನನ್ನ ಜನ

ಧರ್ಮ ಸಾತ್ವಿಕರನ್ನೇ ಬಲಿ ತೆಗೆದುಕೊಳ್ಳುವುದು ಯಾಕೆ?

ವಾರ್ತಾ ಭಾರತಿ : 10 Jan, 2018
ಚಂದ್ರಕಲಾ ನಂದಾವರ

ಪಾಪಪ್ರಜ್ಞೆಯಿಂದ ನರಳುವ ಮನಸ್ಸುಗಳು ಕೇವಲ ಕೃಷ್ಣಾಪುರದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆಗಳಿಂದ ಹೊರಬರಲು ಹಲವು ದಾರಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿತ್ತು. ಮತ್ತೆ ದೇಶದ ಐಕ್ಯತೆ, ಸೌಹಾರ್ದಗಳ ಮರು ಸ್ಥಾಪನೆಗೆ ವೈಯಕ್ತಿಕ ಹಾಗೂ ಸಂಘಟಿತ ರಚನಾತ್ಮಕ ಕಾರ್ಯಗಳು ನಮ್ಮ ತಿಳಿವಿಗೂ ದೊರೆಯುತ್ತಿತ್ತು. ಈ ನಡುವೆ ಕರ್ಫ್ಯೂ ಕಳೆದ ಬಳಿಕ ನೈತ ಬ್ಯಾರಿಯವರ ಅಂಗಡಿಗೆ ಹೋಗಿ ಸಾಲ ಬೇಡಿ ಅಕ್ಕಿ, ಕಾಳು, ಬೇಳೆ ಎಂದು ತಂದವರು ನನ್ನ ಬ್ಲಾಕಿನ ‘ವೀರ ಯೋಧ’ರ ಹೆತ್ತವರು. ನೈತಬ್ಯಾರಿಯವರು ತನ್ನ ಅಂಗಡಿಯಲ್ಲಿ ದೋಚಿಯೂ ಉಳಿದುದನ್ನು ಸಾಲ ನೀಡಿ ಮಾನವರಾದರು ಎನ್ನುವುದನ್ನು ಮರೆಯುವುದು ಸಾಧ್ಯವೇ? ಇದೂ ಒಂದು ದಾರಿಯೇ ಅಲ್ಲವೆ. ಸೌಹಾರ್ದದ ಬದುಕಿಗೆ, ನಮ್ಮ ಗೆಳೆಯರ ಬಳಗವೊಂದಿದ್ದ ಬಗ್ಗೆ ಹಿಂದೊಮ್ಮೆ ಹೇಳಿದ್ದೆ.

ಇದರಲ್ಲಿ ಕಲಾವಿದರು, ಪತ್ರಕರ್ತರು, ಶಿಕ್ಷಕರು, ಉಪನ್ಯಾಸಕರು, ಸಾಹಿತಿಗಳು ಇದ್ದೇವೆಲ್ಲಾ? ಇವರೆಲ್ಲರೂ ಸೇರಿ ಈಗ ಸಂಘಟಿತರಾಗಿ ರಚನಾತ್ಮಕ ಕಾರ್ಯ ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡೆವು. ಇದರಲ್ಲಿ ಮುಖ್ಯವಾದುದು ವೈಚಾರಿಕವಾಗಿ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಮತ್ತೆ ಚೈತನ್ಯ ತುಂಬಿಸುವ ಪ್ರಯತ್ನ. ಶಾಲೆ ಎನ್ನುವುದು ಎಲ್ಲಾ ಜಾತಿ ಧರ್ಮಗಳ ಮಕ್ಕಳು ಸೇರುವ ದೇಗುಲವಲ್ಲವೇ? ನಾವೆಲ್ಲರೂ ಮೊದಲು ಮಾನವರು ಎನ್ನುವುದನ್ನು ಸಾರಬೇಕಾದ ಸಂಸ್ಥೆಗಳಲ್ಲವೇ? ಉದ್ದೇಶ ಸ್ಪಷ್ಟವಾಯಿತು. ಕಾರ್ಯ ಯೋಜನೆಯಲ್ಲಿ ಇನ್ನಷ್ಟು ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ಪವಾಡಗಳ ರಹಸ್ಯ ಬಯಲು ಮಾಡುವಲ್ಲಿ ಹೋರಾಟದ ಹೆಜ್ಜೆಗಳನ್ನು ಪ್ರಾರಂಭಿಸಿದ್ದ ನರೇಂದ್ರ ನಾಯಕರು, ವಿಜ್ಞಾನ ಲೋಕ ಪತ್ರಿಕೆಯ ಅಡ್ಯನಡ್ಕ ಕೃಷ್ಣಭಟ್ಟರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಸ್ಥೆ, ಭಾರತ ಜ್ಞಾನ ವಿಜ್ಞಾನ ಸಂಸ್ಥೆಗಳ ನೆರವು ಹೀಗೆ ಸೇರಿಸಿಕೊಂಡು ಅವಿಭಜಿತ ದ.ಕ. ಜಿಲ್ಲೆಯ ದಕ್ಷಿಣ ತುದಿಯ ತಲಪಾಡಿಯಿಂದ ಉತ್ತರದವರೆಗಿನ ಪ್ರಾಥಮಿಕ ಹಾಗೂ ಹೈಸ್ಕೂಲುಗಳನ್ನು ಸೇರಿಸಿಕೊಂಡು ಅಲ್ಲಿಲ್ಲಿ ವೈಚಾರಿಕ, ವೈಜ್ಞಾನಿಕ, ಐಕ್ಯತೆ, ಸೌಹಾರ್ದ, ಸಾಮರಸ್ಯಗಳ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳ ರೂಪು ರೇಖೆಗಳನ್ನು ಸಿದ್ಧಪಡಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಂಡದ್ದೂ ಆಯಿತು. ಒಂದೊಂದು ಊರಲ್ಲಿ ಆಸುಪಾಸಿನ ಹತ್ತಾರು ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದರೊಂದಿಗೆ ಅಲ್ಲಿನ ಶಿಕ್ಷಕ ಶಿಕ್ಷಕಿಯರೂ ಭಾಗವಹಿಸುವಂತೆ ಪ್ರೇರೇಪಿಸಲಾಯಿತು.

ನಾವು ಈ ಶೈಕ್ಷಣಿಕ ಜಾಥಾವನ್ನು ಆ ವರ್ಷ ಜನ್ಮಶತಾಬ್ದಿಯಾಗಿದ್ದ ಭಾರತೀಯ ವಿಜ್ಞಾನಿ ಮೇಘನಾದ ಸಹಾ ಅವರ ಸಂಸ್ಮರಣೆಯಲ್ಲಿ ನಡೆಸಿದೆವು. ವಾರ್ತಾ ಪ್ರಚಾರ ಇಲಾಖೆಯಲ್ಲಿದ್ದ ಶಿವರಾಂ ಪೈಲೂರು, ಪತ್ರಕರ್ತರಾದ ಜಿ.ಎನ್.ಮೋಹನ್, ಫ್ರಿಲಾನ್ಸ್ ಪತ್ರಕರ್ತೆಯಾಗಿದ್ದ ಸತ್ಯಾ, ಭಾರತ ಜ್ಞಾನ ವಿಜ್ಞಾನ ಸಂಸ್ಥೆಯ ವತಿಯಿಂದ ಫಕೀರ್ ಮುಹಮ್ಮದ್ ಕಟ್ಪಾಡಿ, ವ್ಯಂಗ್ಯ ಚಿತ್ರಕಾರ ಪತ್ರಕರ್ತ ಪಿ.ಮಹಮ್ಮದ್, ಕಲಾವಿದ ದಂಪತಿಯಾದ ಎಂ.ಜಿ. ಕಜೆ-ನಳಿನಿ ಕಜೆ, ವಿಜ್ಞಾನದ ಉಪಕರಣಗಳನ್ನು ಸರಳ ರೀತಿಯಲ್ಲಿ ತಯಾರಿಸುವ ಕೆ.ಕೆ.ಪೇಜಾವರ, ನಾವು ದಂಪತಿ, ವಿಲ್ಫ್ರೆಡ್ ಡಿಸೋಜ, ಆ್ಯಂಡ್ರೊ ಪೌಲ್, ಮಿಮಿಕ್ರಿಯ ಮೈಮ್ ರಾಮದಾಸ್ ಬಳಗ, ಬಹುಮುಖ ಪ್ರತಿಭೆಯ ಕಲಾವಿದ ಗೋಪಾಡ್ಕರ್ ಸೇರಿ ನಮ್ಮ ಮನೆಯಲ್ಲೇ ಇವರ ಎಲ್ಲಾ ಯೋಜನೆಗಳು ಸೇರಿದಂತೆ ಆಹ್ವಾನ ಪತ್ರಿಕೆಗಳು, ಆಯಾಯ ಊರಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗಣ್ಯರು ಮಾತ್ರವಲ್ಲದೆ, ಆಗಿನ ವಿದ್ಯಾಂಗ ಉಪನಿರ್ದೇಶಕರಾಗಿದ್ದ ತಿರುಮಲ ರಾವ್ ಭಾಗವಹಿಸುವಂತೆ ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ಯೋಚಿಸಿದಂತೆ ಒಟ್ಟಾಗಿ ಈ ಕಾರ್ಯಕ್ರಮದ ಅಧ್ಯಕ್ಷರಾದ ಪ್ರೊ.ಅಡ್ಯನಡ್ಕ ಕೃಷ್ಣಭಟ್ಟರೊಂದಿಗೆ ಸಂಚಾಲಕಿಯಾಗಿ ಕೆಲಸ ಮಾಡಿದ ನನ್ನ ಅನುಭವ ಅತ್ಯಪೂರ್ವವಾದುದು.

ನಮ್ಮ ಜಾಥಾ ಸುಮಾರು ಹದಿನೈದು ಶಾಲೆಗಳಲ್ಲಿ ನಡೆಯಿತು. ಇವುಗಳಲ್ಲಿ 150ಕ್ಕೂ ಹೆಚ್ಚು ಶಾಲೆಗಳು ಪಾಲ್ಗೊಂಡವು. ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು ಈ ಕಾರ್ಯಕ್ರಮ ಸಾಧಿಸಿದ ಸಾರ್ಥಕತೆಯಲ್ಲಿ ನಾವು ಧನ್ಯತೆಯನ್ನು ಅನುಭವಿಸುವುದರೊಂದಿಗೆ, ನಮ್ಮ ಇಬ್ಬರು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅನುಭವ ಕೋಶವನ್ನು ಹಿಗ್ಗಿಸಿಕೊಂಡರು ಎನ್ನುವುದೂ ನಿಜವೇ. ಈ ಕಾರ್ಯಕ್ರಮಗಳಿಂದ ದೇಶದಲ್ಲಿ ನಡೆದುಹೋದ ಘಟನೆಯಿಂದ ಉಂಟಾಗಿದ್ದ ವೌನದ ಸೂತಕ ಬದಲಾದುದು ನಿಜ. ತಲಪಾಡಿಯಿಂದ ಸಾಲಿಗ್ರಾಮ ಶಾಲೆಯವರೆಗಿನ ವಿದ್ಯಾರ್ಥಿಗಳು ತಮ್ಮಾಳಗಿನ ಭೇದ ಮರೆತು ‘‘ಭಾರತೀಯರು ನಾವು ಎಂದೆಂದೂ ಒಂದು’’ ಎಂದು ಹಾಡಿ ಕುಪ್ಪಳಿಸಿದರು. ‘‘ಮಾನವರಾಗೋಣ ನಾವು ಮಾನವರಾಗೋಣ’’ ಎಂದು ಸಂದೇಶ ನೀಡಿದರು. ಕೆರೆಗೆ ಹಾರ ನಾಟಕದ ಭಾಗೀರಥಿ ಅಕ್ಷರ ಕಲಿತಿದ್ದರೆ ದಂಡಿನಲ್ಲಿದ್ದ ಗಂಡನಿಗೆ ಪತ್ರ ಬರೆದು ದುರಂತ ತಪ್ಪಿಸುತ್ತಿದ್ದಳು ಎನ್ನುವ ಮೂಲಕ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು ಎನ್ನುವ ಅರಿವು ಮೂಡಿಸಲಾಯಿತು. ಜಾತಿ, ಭೇದ, ಲಿಂಗಭೇದ, ಧರ್ಮಭೇದಗಳನ್ನು ಮೀರಿ ಹೇಗೆ ಮೊದಲು ಮಾನವರಾಗಬೇಕು ಎಂದು ನಮ್ಮ ಸಂಪನ್ಮೂಲ ಕಲಾವಿದರು ಕತೆಗಳ ಮೂಲಕ, ಪ್ರಹಸನಗಳ ಮೂಲಕ, ನಾಟಕಗಳ ಮೂಲಕ ತಿಳಿಸಿ ಹೇಳುವ ಕೆಲಸ ಮಾಡಿದರು. ಎಲ್ಲ ಸಹಜವಾದ ಭೇದಗಳನ್ನು ಒಪ್ಪಿಕೊಳ್ಳುತ್ತಲೇ ಸೌಹಾರ್ದದಿಂದ ಪರಸ್ಪರ ಗೌರವದಿಂದ ಬದುಕಲು ಸಾಧ್ಯ ಎನ್ನುವುದು ಚರ್ಚೆಯ ಮೂಲಕ ತಿಳಿಯಲು ಸಾಧ್ಯವಾಯಿತು. ಪವಾಡಗಳು ಹೇಗೆ ವೈಜ್ಞಾನಿಕವಾದ ಸತ್ಯಗಳಾಗಿದ್ದು ಇದನ್ನು ಅರಿಯದ ಜನರನ್ನು ಮಂತ್ರ, ತಂತ್ರ, ಪ್ರಸಾದ, ಭಸ್ಮ ಎಂಬ ನಂಬಿಕೆಗಳಿಂದ ಮೂರ್ಖರನ್ನಾಗಿ ಮಾಡುತ್ತಾರೆ ಎನ್ನುವ ವಿಚಾರ ತಿಳಿದಾಗ ಉಂಟಾದ ಖುಷಿಯನ್ನು ವಿದ್ಯಾರ್ಥಿಗಳು ನೇರವಾಗಿ ಅದರಲ್ಲಿ ಭಾಗವಹಿಸುವ ಮೂಲಕ ಕಂಡುಕೊಂಡರು.

ಈ ಸರಣಿ ಕಾರ್ಯಕ್ರಮಗಳಲ್ಲಿ ಸುರತ್ಕಲ್ ಆಸುಪಾಸಿನ ಶಾಲೆಗಳು ವಿದ್ಯಾದಾಯಿನಿ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಸೇರಿಕೊಂಡಿತು. ಕಾಟಿಪಳ್ಳದ ಆಸುಪಾಸಿನ ಶಾಲೆಗಳು ಒಟ್ಟು ಸೇರಿ ಶ್ರೀ ನಾರಾಯಣಗುರು ಶಾಲೆಯಲ್ಲಿ ನಡೆಸಿದ ಶಿಬಿರ ಆ ಶಾಲೆಯವರಿಗೂ ಇತರ ಶಾಲೆಯ ವಿದ್ಯಾರ್ಥಿಗಳಿಗೂ ಅಪೂರ್ವವಾದ ಅನುಭವವನ್ನು ದೊರಕಿಸಿತ್ತು ಎಂದರೆ ತಪ್ಪಲ್ಲ. ನಾರಾಯಣಗುರು ಶಾಲೆಯ ಅನುಭವ ಅಪೂರ್ವವಾಗಲು ಅವರು ದೇಶದಲ್ಲಿ ನಡೆದ ಘಟನೆಯ ನೋವನ್ನು ಎರಡು ರೀತಿಯಿಂದ ಅನುಭವಿಸಿದವರು. ಕರ್ಫ್ಯೂವಿನ ಕಷ್ಟವನ್ನೂ ಅನುಭವಿಸಿದವರಲ್ಲವೇ? ಇಲ್ಲಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಹೆತ್ತವರು, ಆಡಳಿತ ಮಂಡಳಿಯವರು ಪಾಲ್ಗೊಂಡು ಉತ್ತಮ ಪ್ರಯೋಗ ಅನ್ನಿಸಿತ್ತು. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಂಘಟನೆಯ ವತಿಯಿಂದ ಪ್ರಮಾಣ ಪತ್ರವನ್ನೂ ನೀಡಲಾಯಿತು. ಇಂತಹ ಶಿಬಿರದ ಅಗತ್ಯವನ್ನು ಮನಗಂಡ ಶಾಲೆಗಳೆೆಲ್ಲವೂ ಮುಂದೆ ತಾವೇ ತಾವಾಗಿ ರಜಾ ದಿನಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸತೊಡಗಿದರು. ನಮ್ಮ ಸಂಪನ್ಮೂಲ ವ್ಯಕ್ತಿಗಳು ಇದನ್ನು ಹೊಸ ಆಲೋಚನೆಗಳಿಂದ ಇನ್ನಷ್ಟು ಸೃಜನಶೀಲವಾಗಿ ನಮ್ಮ ಜಿಲ್ಲೆಯಲ್ಲಿ ಅಂದಿನಿಂದ ಇಂದಿನವರೆಗೂ ನಡೆಸುತ್ತಿರುವುದು ಎಳೆಯ ಪೀಳಿಗೆಗೆ ದೊರೆತ ವಿಶಿಷ್ಟ ಅನುಭವ. ಹೀಗೆ ನನ್ನೂರಿನಲ್ಲಿದ್ದ ಹಾಗೆಯೇ ಇತರ ಕಡೆಗಳಲ್ಲಿಯೂ ಇದ್ದಿರಬಹುದಾದ ಬಿಗಿಯಾದ ವಾತಾವರಣ ವಿದ್ಯಾರ್ಥಿಗಳ ಪಾಲಿಗೆ ಸಡಿಲಾಯಿತು. ಸಹಜವಾದ ಶಾಲಾ ವಾತಾವರಣಕ್ಕೆ ಅವರನ್ನು ಮರಳಿಸಿತು. ಕೆಲವು ಕಡೆ ನಾವು ರಸ್ತೆ ಬದಿಗಳಲ್ಲಿಯೂ ನಿಂತು ಹಾಡು, ಭಾಷಣಗಳನ್ನು ಮಾಡಿದ್ದೂ ಇದೆ. ಆಗ ಧರ್ಮ ಭೇದವಿಲ್ಲದೆ ಸೇರಿದ ಮಹಿಳೆಯರನ್ನು ಕಂಡಾಗ ದೇಶದಲ್ಲಿ ನಡೆದ ಘಟನೆಗಳಲ್ಲಿ ಪಾಲುದಾರರಲ್ಲದೆ ನಾವು ಹಾಗೂ ನೆರೆಯವರು ಯಾಕೆ ದ್ವೇಷಿಸಬೇಕು ಎನ್ನುವ ಅವರ ಪ್ರಶ್ನೆಗೆ ನಮ್ಮಿಂದ ಉತ್ತರ ಸಿಕ್ಕಿದಂತೆ ನಿರಾಳರಾದರು ಅನ್ನಿಸುತ್ತಿತ್ತು. ಹೊನ್ನಕಟ್ಟೆ ಮಸೀದಿಯ ಬಳಿ, ಸುರತ್ಕಲ್ ಕೆಇಬಿ ಕಚೇರಿಯ ಬಳಿಯಲ್ಲಿ ನಡೆದ ಕಾರ್ಯಕ್ರಮದ ನೆನಪುಗಳು ಮೇಲಿನ ಭಾವನೆಯನ್ನು ನನ್ನಲ್ಲಿ ಉಂಟು ಮಾಡಿದುದು ನಿಜ. ಮಕ್ಕಳು ಬಹು ಬೇಗ ಹೊಸ ವಿಷಯಗಳಿಗೆ ಕುತೂಹಲಿಗರಾಗಿ ಹಳೆಯದನ್ನು ಮರೆತು ಬಿಡುತ್ತಾರೆ. ಮನೆಯಲ್ಲಿರುವ ಮಹಿಳೆಯರು ತಮ್ಮ ಮುಗ್ಧತೆಯಲ್ಲಿಯೇ ಸರಿ ತಪ್ಪನ್ನು ವಿಮರ್ಶಿಸಬಲ್ಲರು. ಆದರೆ ನನ್ನೂರಿನ ಹಿಂದೂ ಮುಸ್ಲಿಮ್ ಯುವಕರ ಮನಸ್ಸುಗಳಲ್ಲಿ ಏನು ನಡೆಯುತ್ತಿತ್ತೋ ಗೊತ್ತಿಲ್ಲ. ಒಳಗಿಂದೊಳಗೆ ಭಯ ಕಾಡುತ್ತಿದ್ದಂತೆಯೇ ದ್ವೇಷವೂ ಪ್ರಕಟಗೊಳ್ಳುವುದಕ್ಕೆ ನೆಪ ಹುಡುಕುತ್ತಿತ್ತು ಎನ್ನುವುದು ಮುಂದೆ ನಡೆದ ಕೆಲವು ವಿದ್ಯಮಾನಗಳು ಸಾಬೀತುಪಡಿಸಿದುವು.

ಈಗ ನಮ್ಮ ರಸ್ತೆಯಲ್ಲಿ ಓಡಾಡುವ ವಾಹನಗಳು ಅಂದರೆ ರಿಕ್ಷಾ, ಬೈಕು, ಬಸ್ಸುಗಳು ಒಂದಿಷ್ಟು ಸ್ವಲ್ಪ ತಾಗಿಕೊಂಡರೂ, ಅವುಗಳಿಗೆ ಏನು ಹಾನಿಯಾಗದೆ ಇದ್ದರೂ ಜಗಳಗಳಿಗೆ, ಹೊಡೆದಾಟಗಳಿಗೆ ಅಷ್ಟೇ ನೆಪ ಸಾಕಾಗುತ್ತಿತ್ತು. ಬಸ್ಸುಗಳು ಯಾವಾಗೆಂದರೆ ಆವಾಗ ಧಿಡೀರ್ ಸ್ಟ್ರೈಕ್ ಮಾಡುತ್ತಿದ್ದುವು. ತಮ್ಮ ಬಸ್ಸುಗಳ ರಕ್ಷಣೆಗೆ ಬಸ್ಸನ್ನೇ ನಿಲ್ಲಿಸಿ ಮಾಲಕರಿಗೆ ಒಂದಿಷ್ಟು ಆ ದಿನದ ಗಳಿಕೆ ಕಡಿಮೆಯಾಗಬಹುದು. ಆದರೆ ಬಸ್ಸಿನ ಗಾಜು ಒಡೆದರೆ ಆಗುವ ನಷ್ಟ ಟಯರ್ ಸುಟ್ಟರೆ ಆಗುವ ನಷ್ಟದ ಮುಂದೆ ಈ ಕಡಿಮೆ ಗಳಿಕೆ ಸುಧಾರಿಸಕೊಳ್ಳಬಹುದಾಗಿತ್ತು. ಇಂತಹ ನಿರ್ಧಾರಗಳಿಂದ ನಾವು ಹೋಗಬೇಕಾದ ಬಸ್ಸುಗಳು ಇಲ್ಲವಾಗಿ ನಾವು ಕೃಷ್ಣಾಪುರದಿಂದ ಸುರತ್ಕಲ್‌ವರೆಗೆ, ಸುರತ್ಕಲ್‌ನಿಂದ ಕೃಷ್ಣಾಪುರದ ವರೆಗೆ ನಡೆಯಬೇಕಾಗಿ ಬಂದುದು ಹಲವು ಬಾರಿ. ಆಗ ಅನುಮಾನಗಳೂ ಹುಟ್ಟಿಕೊಳ್ಳುತ್ತಿತ್ತು. ಬೇಕು ಬೇಕೆಂದೇ ಇಂತಹ ಘಟನೆಗಳನ್ನು ಉಂಟು ಮಾಡಿ ಆ ಬಸ್ಸು ಮಾಲಕರಿಗೆ, ಅದರ ಚಾಲಕ, ನಿರ್ವಾಹಕರಿಗೆ ತೊಂದರೆ ಕೊಡುತ್ತಿದ್ದಾರೋ ಏನೋ ಎಂಬುದಾಗಿ. ಅಲ್ಲದೆ ಇದೀಗ ಇಂತಹ ಢಿಕ್ಕಿಗಳು ಸಾಮಾನ್ಯವಾಗುತ್ತಿದ್ದುದು ಮತ್ತು ವಾಹನ ಚಾಲಕ ಯಾವ ಧರ್ಮದವ ಎನ್ನುವ ಪ್ರಶ್ನೆ ಮೊದಲಿನದಾಗುತ್ತಿತ್ತು. ಪೊಲೀಸರು ಬರುವಷ್ಟರೊಳಗೆ ಸಾಕಷ್ಟು ಹೊಡೆದಾಟ ಮಾಡಿಕೊಂಡು ನೋವಿಗೆ ತುತ್ತಾಗುತ್ತಿದ್ದರೂ ಮತ್ತೆ ಘಟನೆಗಳು ಮರುಕಳಿಸುತ್ತಿದ್ದಾಗಲೂ ಹೊಡೆದಾಟ ಇರುತ್ತಿದ್ದುದರಿಂದ ಈ ಜನ ವರ್ಗ ಹಿಂಸೆಯನ್ನು ಪ್ರೀತಿಸಲು ಕಲಿಯುತ್ತಿದ್ದಾರೆ ಎಂದೇ ಅನ್ನಿಸುತ್ತಿತ್ತು. 114ನೇ ಸೆಕ್ಷನ್ ಆಗಾಗ ಜಾರಿಯಾಗುತ್ತಿತ್ತು. ಒಟ್ಟಿನಲ್ಲಿ ಊರಿನಲ್ಲಿ ಹಿಂದಿನ ಸೌಹಾರ್ದ ವಾತಾವರಣವಿಲ್ಲದೆ ಆತಂಕ ಎನ್ನುವುದು ಸದಾಕಾಲ ನಮ್ಮಿಟ್ಟಿಗೆ ಇದ್ದು ನಮಗೂ ಇದು ಸಾಮಾನ್ಯ ಎಂಬ ಭಾವ ಉಂಟಾಗಿತ್ತು.

 ಇಂತಹ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ಚೊಕ್ಕಬೆಟ್ಟು ತಿರುವಿನಲ್ಲಿ ಒಂದು ಮಧ್ಯಾಹ್ನ ಭವಾನಿ ಹೆಸರಿನ 53 ನಂಬ್ರದ ಬಸ್ಸು ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದರು ಎಂಬ ಸುದ್ದಿ. ರಿಕ್ಷಾ ಚಾಲಕನೂ ಮುಸ್ಲಿಮನಾಗಿದ್ದರು. ತಪ್ಪು ರಿಕ್ಷಾ ಚಾಲಕನದ್ದೆಂದೇ ನೋಡಿದವರು ಹೇಳುತ್ತಿದ್ದರು. ಆ ತಿರುವಿನಲ್ಲಿ ಮುಸ್ಲಿಮರ ಅಂಗಡಿ, ಮನೆಗಳೇ ಇದ್ದವು. ಬಸ್ಸಿನ ಡ್ರೈವರ್ ಸಾಧು ಸ್ವಭಾವದವನಾಗಿದ್ದು ಎಲ್ಲರಿಗೂ ಪ್ರೀತಿಯವನಾಗಿದ್ದ ಎನ್ನುವ ಮಾತುಗಳನ್ನು ಅಲ್ಲಿನ ಮುಸ್ಲಿಮರೇ ಆಡಿಕೊಳ್ಳುತ್ತಿದ್ದರು. ತನ್ನ ತಪ್ಪಿಲ್ಲ ಎನ್ನುವುದು ಸ್ವತಃ ಚಾಲಕನಿಗೆ ತಿಳಿದದ್ದೆ ಆಗಿರಬಹುದಾದರೂ, ಆಸ್ಪತ್ರೆ ಸೇರಿದವರು, ರಿಕ್ಷಾ ಚಾಲಕ ಎಲ್ಲರೂ ಮುಸ್ಲಿಮರಾದುದರಿಂದ ತನ್ನ ತಪ್ಪಿಲ್ಲದ ಸ್ಥಿತಿ ತನಗೆ ರಕ್ಷಣೆ ನೀಡೀತು ಎಂದು ಒಪ್ಪಿಕೊಳ್ಳಲಾಗದ ಮನಸ್ಸು. ಇದನ್ನೇ ಊರಿನಲ್ಲಿ ಆತಂಕದ ವಾತಾವರಣ ಎಂದಿರುವುದು. ಚೊಕ್ಕಬೆಟ್ಟಿನ ಜನ ಪೊಲೀಸರ ತೀರ್ಮಾನ ಏನೇ ಇರಲಿ ನ್ಯಾಯದ ಬದಲು ತಾನು ಹಿಂದೂ ಎನ್ನುವುದನ್ನೇ ಭಾವಿಸಿ ತನ್ನನ್ನು ಹೊಡೆದು ಕೊಲ್ಲಬಹುದು ಎಂದು ಊಹಿಸಿ ತಾನು ಮನೆಗೆ ಹೋಗುವ ದಾರಿಯಲ್ಲಿದ್ದ ನೇತ್ರಾವತಿ ಹೊಳೆಗೆ ರಾತ್ರಿಯೇ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಮರುದಿನ ಪತ್ರಿಕೆಯಲ್ಲಿ ಬಂದ ಸುದ್ದಿ ಓದಿ ಊರಿಗೇ ಊರೇ ಮರುಗಿತು. ಹೋದ ಜೀವ ಮರಳಿಬಾರದಲ್ಲವೇ? ಪದವೀಧರನಾಗಿದ್ದ ಆತ ಹೆತ್ತವರಿಗೆ ಜೀವನಾಧಾರವಾಗಿದ್ದರು. ಆ ಹೆತ್ತವರು ಸಂಕಟಕ್ಕೆ ಉತ್ತರ ನೀಡುವ ಧರ್ಮ ಯಾವುದು? ನಾನು 53 ನಂಬ್ರದಲ್ಲಿ ಸಂಜೆಯ ಪಯಣಿಗಳು. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಈ ಬಸ್ಸಿನಲ್ಲಿ ಈ ಡ್ರೈವರ್‌ನನ್ನು ಸದಾ ಕಾಣುತ್ತಿದ್ದೆ. ಮಿತಭಾಷಿಯಾಗಿದ್ದ ಆತನ ವ್ಯಕ್ತಿತ್ವ ಇತರ ಸಾಮಾನ್ಯ ಚಾಲಕರಿಗಿಂತ ಭಿನ್ನವಾದುದನ್ನೂ ಗಮನಿಸಿದ್ದೆ. ನಿಜವಾದ ವಿದ್ಯಾವಂತನಾಗಿದ್ದ. ಉತ್ತಮ ಚಾಲಕ. ಕರ್ತವ್ಯದಕ್ಷನಾದ ಆತ ಧರ್ಮಭೀರುವೂ ಆಗಿದ್ದರಿಂದಲೇ ತನ್ನನ್ನು ತಾನು ಇಲ್ಲವಾಗಿಸಿಕೊಂಡನೇ? ಆ ದಿನಗಳಲ್ಲಿ ಸುರತ್ಕಲ್‌ನಲ್ಲಿ ಪೊಲೀಸ್ ಸ್ಟೇಷನ್ ಇರಲಿಲ್ಲ ಎಂಬುದು ನೆನಪು. ಪೊಲೀಸ್ ಇದ್ದರೂ ಜನರೇ ಕಾನೂನು ಕೈಗೆತ್ತಿಕೊಳ್ಳುವ ಧರ್ಮ ರಾಜಕಾರಣದಲ್ಲಿ ಇಂತಹ ಅದೆಷ್ಟು ಮುಗ್ಧರು ಬಲಿಯಾಗುತ್ತಿದ್ದರಲ್ಲಾ? ಸಾತ್ವಿಕರಿಗೆ ಧರ್ಮ ಎನ್ನುವುದು ಆತ್ಮವಿಶ್ವಾಸ ತುಂಬುವ ಆತ್ಮಸ್ಥೈರ್ಯ ನೀಡುವ ಕಾಲ ಯಾವಾಗ ಬಂದೀತು ಎನ್ನುವ ಅಂದಿನ ಪ್ರಶ್ನೆ ಇಂದಿಗೂ ಉತ್ತರ ದೊರೆಯದೆ ಹಾಗೇ ಉಳಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)