ಫಕೀರಪ್ಪ ಗುರುಬಸಪ್ಪ ಹಳಕಟ್ಟಿ
ಅಸಾಮಾನ್ಯರಿರಲಿ, ಲಿಂಗಾಯತ ಮಠಾಧೀಶರುಗಳು, ಭಾಷಾ ವಿದ್ವಾಂಸರು ಅದುವರೆಗೂ ಕಣ್ಣಾರೆ ನೋಡಲೂ ಸಿಗದಿದ್ದ ವಚನಗಳನ್ನು ಹುಡುಕಿ ತೆಗೆದು ಮೊದಲು ಪ್ರಕಟಿಸಿದವರು ಹಳಕಟ್ಟಿ. ಹೀಗೆ ಅವರು ಸಂಗ್ರಹಿಸಿದ ವಚನಗಳ ಸಂಖ್ಯೆ ಹನ್ನೆರಡೂವರೆ ಸಾವಿರಕ್ಕೂ ಜಾಸ್ತಿ ಇದೆ ಎನ್ನುವುದೇ ಅವರ ಕೆಲಸದ ಮಹತ್ವವನ್ನು ಹೇಳುತ್ತಿದೆ. ಅದುವರೆಗೂ ಮೌಖಿಕವಾಗಿ, ಹಸ್ತಪ್ರತಿಗಳಲ್ಲಿ, ತಾಳೆಗರಿಗಳ ರೂಪದಲ್ಲಿದ್ದ ವಚನಗಳು ಮಠಗಳಲ್ಲಿ, ಲಿಂಗಾಯತ ಅರಸು ಮನೆತನದ ವಾರಸುದಾರರ ಸುಪರ್ದಿಯಲ್ಲಿ, ಗಣ್ಯರ ಕುಟುಂಬದವರ ಬಳಿ ನಿಸ್ತೇಜವಾಗಿ ಇದ್ದವು.
ಹೊಟ್ಟೆಯ ಹಸಿವಿಗೆ ಮಿತಿಯುಂಟು - ನೆತ್ತಿಯ ಹಸಿವಿಗೆ ಮಿತಿಯಿಲ್ಲ.ವಚನ ಪಿತಾಮಹ ಎಂದೇ ಕೀರ್ತಿ ಪಡೆದಿರುವ ದಿವಂಗತ ಫ.ಗು. ಹಳಕಟ್ಟಿಯವರ ಜೀವನದೃಷ್ಟಿ ಇದು.
ಕನ್ನಡದ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಲಯದಲ್ಲಿ ಅಪಾರ ಗೌರವ ಪಡೆದಿರುವ ಹಳಕಟ್ಟಿಯವರು 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎಂಬತ್ನಾಲ್ಕು ವರ್ಷ ಬದುಕಿದ್ದ ಹಳಕಟ್ಟಿ ಬೇರೆಯವರು ಮಾಡುವುದಿರಲಿ, ಕಲ್ಪಿಸಿಕೊಳ್ಳಲೂ ಆಗದಷ್ಟು ಕೆಲಸ ಮಾಡಿಹೋಗಿದ್ದಾರೆ.
ಇದು ಅವರ ಕೆಲಸದ ಅಗಾಧತೆ, ವಿಷಯ ವೈವಿಧ್ಯತೆ ಹಾಗೂ ಅವರು ಬದುಕಿದ್ದ ಕಾಲಘಟ್ಟ-ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಹೇಳಬಹುದಾದ ಮಾತು.
ಅಸಾಮಾನ್ಯರಿರಲಿ, ಲಿಂಗಾಯತ ಮಠಾಧೀಶರು ಗಳು, ಭಾಷಾ ವಿದ್ವಾಂಸರು ಅದುವರೆವಿಗೂ ಕಣ್ಣಾರೆ ನೋಡಲೂ ಸಿಗದಿದ್ದ ವಚನಗಳನ್ನು ಹುಡುಕಿ ತೆಗೆದು ಮೊದಲು ಪ್ರಕಟಿಸಿದವರು ಹಳಕಟ್ಟಿ. ಹೀಗೆ ಅವರು ಸಂಗ್ರಹಿಸಿದ ವಚನಗಳ ಸಂಖ್ಯೆ ಹನ್ನೆರಡೂವರೆ ಸಾವಿರಕ್ಕೂ ಜಾಸ್ತಿ ಇದೆ ಎನ್ನುವುದೇ ಅವರ ಕೆಲಸದ ಮಹತ್ವವನ್ನು ಹೇಳುತ್ತಿದೆ. ಅದುವರೆಗೂ ಮೌಖಿಕವಾಗಿ, ಹಸ್ತಪ್ರತಿಗಳಲ್ಲಿ, ತಾಳೆಗರಿಗಳ ರೂಪದಲ್ಲಿದ್ದ ವಚನಗಳು ಮಠಗಳಲ್ಲಿ, ಲಿಂಗಾಯತ ಅರಸು ಮನೆತನದ ವಾರಸುದಾರರ ಸುಪರ್ದಿಯಲ್ಲಿ, ಗಣ್ಯರ ಕುಟುಂಬದವರ ಬಳಿ ನಿಸ್ತೇಜವಾಗಿ ಇದ್ದವು. ಅವುಗಳ ಸರ್ವಕಾಲಿಕ ಹಾಗೂ ಸಾರ್ವಜನಿಕ ಮಹತ್ವಗಳ ಬಗ್ಗೆ ಆಗ ಬಹುಶಃ ಬಹುತೇಕರಿಗೆ ಅರಿವೇ ಇದ್ದಿರಲಾರದು.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಸ್ಮರಣಾರ್ಥ ಸ್ಥಾಪಿಸಲಾದ ವಿಜಯಪುರದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆ
ಹಳಕಟ್ಟಿಯವರು ಸಂಶೋಧನೆಯ ಜಾಡಿಗೆ ಬಿದ್ದದ್ದೂ ಆಕಸ್ಮಿಕವಾಗಿ. ಅವರು ಓದಿದ್ದು ವಕೀಲರಾಗಲು. ಕೆಲಸ ಪ್ರಾರಂಭಿಸಿದ್ದು ಬಿಜಾಪುರದಲ್ಲಿ. ನಡುವೆ ಕೆಲಕಾಲ ಬೆಳಗಾವಿಗೆ ಹೋಗಿ ಅಲ್ಲೂ ವಕೀಲಿಕೆ ನಡೆಸಿದರಾದರೂ ಈಗ್ಗೆ ಒಂದು ನೂರು ವರ್ಷಗಳ ಹಿಂದೆ ಬಿಜಾಪುರ ಅವರನ್ನು ಮತ್ತೆ ಸೆಳೆಯಿತು.
ಹಳಕಟ್ಟಿಯವರ ತಂದೆ ಫಕೀರಪ್ಪ ಗುರುಬಸಪ್ಪನವರ ಜೀವನವೂ ಆಶ್ಚರ್ಯ ಮೂಡಿಸುವಂತಿದೆ. ಇಪ್ಪತ್ತನೇ ಶತಮಾನದ ಆರಂಭದ ಕಾಲದಲ್ಲಿ ಶಿಕ್ಷಕರಾಗಿದ್ದ ಗುರುಬಸಪ್ಪ ಇಂಗ್ಲೆಂಡಿನ ಇತಿಹಾಸ, ಏಕನಾಥ ಸ್ವಾಮಿಗಳ ಚರಿತ್ರೆ, ನೆಪೋಲಿಯನ್ ಬೋನಾಪಾರ್ಟೆ, ಫ್ರೆಂಚ್ ಕ್ರಾಂತಿ, ಸಿಕಂದರ್ ಬಾದಷಹನ ಕುರಿತಂತೆ ಪುಸ್ತಕಗಳನ್ನು ಬರೆದಿದ್ದರು. ತಂದೆಯ ವ್ಯಕ್ತಿತ್ವದ ಪ್ರಭಾವದಡಿ ಬೆಳೆದಿದ್ದ ಹಳಕಟ್ಟಿ ಬಿಜಾಪುರದಲ್ಲಿ 1920ರ ಸುಮಾರಿಗೆ ವಕೀಲ ವೃತ್ತಿ ನಡೆಸುತ್ತಿದ್ದಾಗ ಅತ್ಯಂತ ಜನಪ್ರಿಯ ಹಾಗೂ ಗೌರವ ಹೊಂದಿದ್ದ ವ್ಯಕ್ತಿಯಾಗಿದ್ದರು. ಅಲ್ಲೇ ಅವರಿಗೆ ವಚನಗಳನ್ನು ಶೋಧಿಸುವ, ಸಂಗ್ರಹಿಸಿ ಪ್ರಕಟಿಸುವ ಕೆಲಸದಲ್ಲಿ ಆಸಕ್ತಿ ಶುರುವಾಯಿತು. ಈ ಗೀಳು ಅವರನ್ನು ಅದೆಷ್ಟು ಆವರಿಸಿಕೊಂಡಿತೆಂದರೆ ಬಿಜಾಪುರದ ಹಿರಿಯ ಲಾಯರ್ಗಳು ‘‘ಬುದ್ಧಿವಂತ ನ್ಯಾಯವಾದಿ ಹಸ್ತಪ್ರತಿಗಳಿಗಾಗಿ ವ್ಯರ್ಥವಾಗಿ ಕಾಲಹರಣ ಮಾಡುತ್ತಿದ್ದಾನೆ’’ ಎಂದು ಮೂದಲಿಸಿದ್ದೂ ಆಯಿತು. ಆದರೆ ಹಳಕಟ್ಟಿ ಇದನ್ನೆಲ್ಲ ನಿರ್ಲಕ್ಷಿಸಿ ತಮ್ಮ ಹರ್ಕ್ಯೂಲಸ್ ಸೈಕಲ್ ಏರಿ ಊರೂರು ಸುತ್ತತೊಡಗಿದರು. ಅದಕ್ಕೂ ಮೊದಲೇ ಅವರಿಗೆ ಜಮಖಂಡಿಯ ಗೋಠೆ ಗ್ರಾಮದಲ್ಲಿ ಪ್ರಭುಲಿಂಗ ಲೀಲೆ, ಗಣಭಾಷ, ಬನಹಟ್ಟಿಯ ಗಲಗಲಿ ಶಿವಲಿಂಗಪ್ಪನವರ ಮನೆಯಲ್ಲಿ ಮೂವತ್ತೆರಡು, ಗುರುಬಸಯ್ಯ ಕರಡಿ ಎಂಬವರ ಬಳಿ ಹದಿನಾರು ಓಲೆಗರಿ ಗ್ರಂಥಗಳು ಪರಿಶೀಲನೆಗೆ ದೊರೆತಿದ್ದವು. ಇದು ಹೀಗೆ ಮುಂದುವರಿದು ಬೆಳಗಾವಿಯ ಗಿಲಗಂಚಿ ಮನೆತನದವರ ಬಳಿ ಭೋಜಪ್ಪ ಭೋಜ, ಧಾರವಾಡದ ಶಿವಲಿಂಗಪ್ಪ ಮಂಚಾಲಿ ಕುಟುಂಬಗಳಲ್ಲಿ ಪುರಾತನ ತಾಳೆಗರಿ ಗ್ರಂಥಗಳ ಒಂದು ರಾಶಿಯನ್ನೇ ನೋಡಿದರು.
ಹರ್ವನ್ ಮೋಗ್ಲಿಂಗ್
ಹಳಕಟ್ಟಿ ಇವನ್ನೆಲ್ಲಾ ಸಂಗ್ರಹಿಸುತ್ತಾ ಹೋದಂತೆ ಅವುಗಳ ಸಂಖ್ಯೆ ಸಾವಿರ ದಾಟಿತ್ತು. ಮುಂದಿನ ಇಪ್ಪತ್ತು ವರ್ಷ ಕಾಲ ಅವರು ತಮಗೆ ತಾಳೆಗರಿಯಲ್ಲಿ ಸಿಕ್ಕ ವಚನ ಮತ್ತಿತರ ಪುರಾತನ ಸಾಹಿತ್ಯವನ್ನೆಲ್ಲಾ ವರ್ಗೀಕರಿಸಿ ಕಾಗದದ ಹಾಳೆಯಲ್ಲಿ ದಾಖಲಿಸುತ್ತಾ, ಕಠಿಣ ವಚನಗಳಿಗೆ ಟೀಕೆ ಬರೆಯುತ್ತಾ ಹೋದರು. ಇವೆಲ್ಲಾ ಒಂದು ಹಂತಕ್ಕೆ ಬರುತ್ತಿದ್ದಂತೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಚನೆ ಬಂತವರಿಗೆ. ಆಗಿನ ಮಂಗಳೂರಿನ ಪ್ರಸಿದ್ಧ ಬಾಸೆಲ್ ಮಿಶನ್ ಪ್ರೆಸ್ ಸೇರಿದಂತೆ ಹಲವರು ಗ್ರಂಥ ಪ್ರಕಟಣೆಗೆ ನಿರಾಕರಿಸಿದರು. ಇದನ್ನೇ ಒಂದು ಸವಾಲಿನಂತೆ ತೆಗೆದುಕೊಂಡ ಹಳಕಟ್ಟಿ ತಮ್ಮಲ್ಲಿದ್ದ ಚೂರುಪಾರು ಹಣ ಜೋಡಿಸಿ ಮನೆಯನ್ನೂ ಮಾರಿ ಹಿತಚಿಂತಕ ಹೆಸರಿನ ಸ್ವಂತದ ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಿದರು. ಇದೇ ಮುಂದೆ ‘ಶಿವಾನುಭವ’ ಎಂಬ ಪತ್ರಿಕೆಯ ಉಗಮಕ್ಕೂ ಪ್ರೇರಣೆ ನೀಡಿತು. ಹಳಕಟ್ಟಿ ಅದೆಂಥ ಕರ್ತೃತ್ವಶಕ್ತಿ ಇದ್ದ ವ್ಯಕ್ತಿಯಾಗಿದ್ದರೆಂದರೆ ತಮ್ಮ ವಚನ ಸಾಹಿತ್ಯ ಶೋಧದ ಕೆಲಸದೊಂದಿಗೆ ಮುಂಬೈ ಕರ್ನಾಟಕ ಪ್ರಾಂತದಲ್ಲೆಲ್ಲಾ ಹೊಸ ಸಂಚಲನ ಮೂಡುವಂತೆ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆ, ಸಿದ್ದೇಶ್ವರ ಬ್ಯಾಂಕ್, ಹತ್ತಿ ಮಾರಾಟಗಾರರ ಸಂಘ, ಒಕ್ಕಲುತನ ಸಹಕಾರ ಸಂಘ, ನೇಕಾರ ಸಹಕಾರ ಸಂಘ, Antifamine instituteಗಳನ್ನು ಸ್ಥಾಪಿಸಿ ಅದೆಲ್ಲದರಲ್ಲೂ ಸಕ್ರಿಯವಾಗಿ ದುಡಿದಿದ್ದರು. 1920ರ ವೇಳೆಯಲ್ಲಿ ಆಗಿನ ಮುಂಬೈ ವಿಧಾನಸಭೆಗೆ ಸದಸ್ಯರಾಗಿಯೂ ಆಯ್ಕೆಯಾದರು.
ಅದರ ಒಂದು ಸಭೆಯಲ್ಲಿ ‘‘ಲಿಂಗಾಯತ ಧರ್ಮದಲ್ಲಿ ಸ್ಪಶ್ಯ ಅಸ್ಪಶ್ಯ ಭೇದ ಇಲ್ಲ. ಆದ್ದರಿಂದ ಲಿಂಗಾಯತರು ಅಸ್ಪಶ್ಯತಾ ನಿವಾರಣೆಗೆ ತಮ್ಮ ಪೂರ್ಣ ಬೆಂಬಲ ಕೊಡತಕ್ಕದ್ದು’’ ಎಂದು ಬಹಿರಂಗವಾಗಿ ಪ್ರತಿಪಾದಿಸಿದರು. ಮೂರು ದಶಕಗಳ ಕಾಲ ಪ್ರಿಂಟಿಂಗ್ ಪ್ರೆಸ್, ಶಿವಾನುಭವ ಹಾಗೂ ನವಕರ್ನಾಟಕ ಪತ್ರಿಕೆಗಳನ್ನು ನಿರ್ವಹಿಸಿದ ಅವಧಿಯಲ್ಲಿ ಒಮ್ಮೆಯೂ ತಮ್ಮ ಸಿಬ್ಬಂದಿಯ ಜೊತೆ ಉದ್ಧಟತನದಿಂದ ವರ್ತಿಸಿರಲಿಲ್ಲ. ಕೈಗೆ ಬಂದಿದ್ದ ಮಗ ಚಂದ್ರಶೇಖರ ಅಕಾಲ ಸಾವಿಗೀಡಾದಾಗಲೂ ಅವರು ಮಣಿಯದೆ, ‘ಶಿವನ ಪುತ್ರ ಶಿವನಿಗೇ ಸಂದ’ ಎಂದು ಹೇಳಿ ಪುನಃ ವಚನ ಸಂಗ್ರಹಣೆ ಪ್ರಕಟಣೆಗಳತ್ತ ಹೊರಳಿದರು. ತಮ್ಮ ಜೀವಿತಕಾಲದಲ್ಲಿ ನೂರರ ಹತ್ತಿರ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದೇ ಅಲ್ಲದೆ, ಚವನ ವ್ಯಾಖ್ಯಾನ, ವಚನಕಾರರ ಜೀವನಚರಿತ್ರೆ ಹಾಗೂ ಅನೇಕ ಚಾರಿತ್ರಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದು ಪ್ರಕಟಿಸಿದರು.
ಶಂ.ಭಾ. ಜೋಶಿ
ಹಳಕಟ್ಟಿಯವರದ್ದು ಒಂದು ರೀತಿಯಲ್ಲಿ ಉದ್ವೇಗಕಾರಿ ಜೀವನ ಎನಿಸುತ್ತದೆ. ತಾವು ಕೈಗೆತ್ತಿಕೊಂಡಿದ್ದ ಕೆಲಸದ ಮಹತ್ವ ಏನೆಂಬುದು ಅವರಿಗೆ ಚೆನ್ನಾಗಿ ಅರ್ಥವಾಗಿತ್ತು. ಸಂಶೋಧಕರ ಜಗತ್ತಿನಲ್ಲಿ ಇಂತಹ ಅತಿರೇಕದ ಅರ್ಪಣಾ ಮನೋಭಾವ ಸರ್ವೇಸಾಮಾನ್ಯ. ನಮ್ಮ ಕರ್ನಾಟಕದಲ್ಲೇ ಬಿ.ಎಲ್. ರೈಸ್, ಮೊಗ್ಲಿಂಗ್, ಮೆಕೆಂಜಿ, ಶಂ.ಭಾ. ಜೋಶಿ ಮುಂತಾದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಳಕಟ್ಟಿಯವರಂತೆಯೇ ಮೊದಲ ಪೀಳಿಗೆಯ ಸಂಶೋಧಕರಾಗಿ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಮಹಾ ತಿಕ್ಕಲನೆಂದು ಹೆಸರಾದ ಇಟಲಿಯ ಗಿಸೆಪ್ಪೊ ತುಚ್ಚೆ ತನ್ನ ಬದುಕನ್ನೆಲ್ಲಾ ಬೌದ್ಧ ಧರ್ಮದ ಇತಿಹಾಸ ಶೋಧನೆಯಲ್ಲೇ ಕಳೆದವನು. ಟಿಬೆಟ್ ಹಾಗೂ ಅಲ್ಲಿನ ಬೌದ್ಧ ಪರಂಪರೆಯ ಬಗ್ಗೆ ತಿಳಿಯಲು ಲಾಮಾ ಗುರುಗಳೂ ಕೂಡ ಪ್ರೊ. ತುಚ್ಚೆಯ ಮಾತುಗಳಿಗೆ ಕಿವಿಗೊಡುತ್ತಿದ್ದರಂತೆ. ಈ ತುಚ್ಚೆಯ ಸಂಶೋಧನಾ ಸಾಹಸಗಳ ಬಗ್ಗೆ ಎವರೆಸ್ಟ್ ಹತ್ತಿದ ಮೊದಲಿಗ ತೇನ್ಸಿಂಗ್ ನೋರ್ಗೆ ತನ್ನ ಆತ್ಮಕತೆಯಲ್ಲಿ ಬಹಳ ಸೊಗಸಾದ ಚಿತ್ರಣ ಕೊಡುತ್ತಾನೆ. ಹಳಕಟ್ಟಿ ಈ ಮೇಲೆ ಹೇಳಲಾದ ಸಂಶೋಧಕರಂತೆಯೇ ಮಹಾನ್ ಸಾಹಸಿ ಹಾಗೂ ಅರ್ಪಣಾ ಮನೋಭಾವದ ವ್ಯಕ್ತಿ. ತಮ್ಮ ಸಂಶೋಧನಾ ಪ್ರಕ್ರಿಯೆಯಲ್ಲಿ ಪಡೆದ ಪಾಂಡಿತ್ಯದಿಂದಾಗಿ ಅವರಿಗೆ ನಾಡಿನ ಧರ್ಮಗುರುಗಳ, ರಾಜಕಾರಣಿಗಳ ಹಾಗೂ ಸಮಾಜದ ಗಣ್ಯರೆಲ್ಲರ ಸಹಕಾರ, ಬೆಂಬಲ ಸಿಕ್ಕಿತ್ತು. ಆದರೂ ಅವರೆಂದೂ ಹಣದ ಬಗ್ಗೆ ಯೋಚಿಸಲಿಲ್ಲ. ಬದುಕಿನ ಕೊನೆಯವರೆಗೂ ಸೈಕಲ್ ಹತ್ತಿ ಓಡಾಡಿದರು. ತಮ್ಮಲ್ಲಿದ್ದ ಏಕೈಕ ಕೋಟು ಹರಿದರೆ ತಾವೇ ಹೊಲಿದು ರಿಪೇರಿ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದರು. ಬಡತನದ ಕೀಳರಿಮೆ ಅವರನ್ನು ಬಾಧಿಸಲಿಲ್ಲ. ವಿದ್ಯಾಶ್ರೀಮಂತಿಕೆಯ ಅಹಂಕಾರ ಅವರ ಹತ್ತಿರ ಸುಳಿಯಲಿಲ್ಲ.
ಒಂದು ಸರಕಾರಿ ಇಲಾಖೆಯೋ ಅಥವಾ ವಿಶ್ವವಿದ್ಯಾನಿಲಯವೋ ಮಾಡಬಹುದಾದಷ್ಟು ಅಗಾಧ ಕೆಲಸವನ್ನು ತಾವೊಬ್ಬರೇ ನಿಭಾಯಿಸಿ ಬದುಕಿದ ಹಳಕಟ್ಟಿ 1964ರಲ್ಲಿ ತೀರಿಕೊಂಡಾಗ ಅಂತ್ಯಸಂಸ್ಕಾರದ ವೇಳೆ ಮೂವತ್ತು ಜನರೂ ಇರಲಿಲ್ಲವಂತೆ. ಕುಟುಂಬದ ದಾಯಾದಿಗಳ ನಡುವೆ ಆಸ್ತಿ ಜಗಳವಾದಾಗ ಅವರ ಸಮಾಧಿಯೂ ಕಣ್ಮರೆಯಾಗುವುದರಲ್ಲಿತ್ತು. ಕೊನೆಗೆ ಅದು ಹೇಗೋ ತಪ್ಪಿತು. ಆದರೆ ಈಗಲೂ ಅದು ನಿರ್ಲಕ್ಷಿತ ತಾಣವಾಗಿಯೇ ಉಳಿದಿದೆ.
ಹಳಕಟ್ಟಿ ಕರ್ನಾಟಕದ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರು. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಜನ ಸೃಷ್ಟಿಸಿದ ಅದ್ಭುತ ಚಿಂತನೆಗಳನ್ನು, ಜೀವನಮೌಲ್ಯಗಳನ್ನು ಎಂದೆಂದೂ ಸಿಗದಂತೆ ಕೈತಪ್ಪಿ ಹೋಗುವ ಸನ್ನಿವೇಶದಿಂದ ರಕ್ಷಿಸಿ ಮರಳಿ ಜನರ ಕೈಗೆ ತಂದೊಪ್ಪಿಸಿದ ದೊಡ್ಡ ಸಾಧಕ ಅವರು. ಇದಕ್ಕಿಂತ ಮುಖ್ಯವಾಗಿ ಶರಣರ ಬದುಕು ಹಾಗೂ ಚಿಂತನೆಗಳಿಗೆ ಪವಾಡ, ದೈವಿಕ ಆಯಾಮಗಳನ್ನಷ್ಟೇ ನೀಡುತ್ತಾ ಪ್ರಚಾರಪಡಿಸುತ್ತಿದ್ದ ಕಾಲಘಟ್ಟದಲ್ಲಿ ಆ ಮಿಥ್ಯೆಯನ್ನು ಮುರಿದು ಸಮಾಜಮುಖಿಯನ್ನಾಗಿಸಿದವರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ. ಕರ್ನಾಟಕದ ಇಂದಿನ ಅನೇಕ ಸಾಮಾಜಿಕ ಕಾಯಿಲೆಗಳಿಗೆ ಚಿಕಿತ್ಸೆಯಾಗಬಲ್ಲ ಕೊಡುಗೆ ಇದು.