ಸಂವಿಧಾನಕ್ಕೆ ಸಂಚಕಾರ ತರಲು ಹೊರಟವರು
ಹಿಂದೂ ರಾಷ್ಟ್ರವಾದದಲ್ಲಿ ನಂಬಿಕೆಯಿಟ್ಟಿರುವ ಬಿಜೆಪಿಯು ಭಾರತೀಯ ಸಂವಿಧಾನದ ಕುರಿತು ಗೊಂದಲದಲ್ಲಿ ಸಿಲುಕಿದೆ. ಚುನಾವಣಾ ಉದ್ದೇಶಕ್ಕಾಗಿ ಅದು ಭಾರತೀಯ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರದರ್ಶಿಸಲೇಬೇಕಾಗಿದೆ. ಸಂವಿಧಾನದಿಂದಾಗಿ ಶೋಷಣೆಯಿಂದ ವಿಮೋಚನೆಗೊಂಡಿರುವ ದಲಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಮತಗಳು ಅದಕ್ಕೆ ಬೇಕಾಗುತ್ತದೆ. ಪ್ರಸ್ತುತ, ಬಿಜೆಪಿಯ ಚುನಾಯಿಕ (ಇಲೆಕ್ಟ್ರೋರಲ್) ಸಾಮರ್ಥ್ಯವು ಸಂವಿಧಾನವನ್ನು ಬದಲಿಸಲು ಬೇಕಾಗುವಷ್ಟು ಸಮರ್ಪಕವಾಗಿಲ್ಲ. ಹೀಗಾಗಿ ಆ ಬಗ್ಗೆ ಬಹಿರಂಗವಾಗಿ ಅದು ಮಾತನಾಡಲಾರದು. ಇದರ ಜೊತೆಗೆ, ದಲಿತರ ದೊಡ್ಡ ವರ್ಗಗಳು ಸಾಮಾಜಿಕ ಪರಿವರ್ತನೆಗಳಲ್ಲಿ ಅಂಬೇಡ್ಕರ್ ನೀಡಿರುವ ಮಹಾನ್ ಕೊಡುಗೆಯನ್ನು ಗೌರವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ, ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದು ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಹೇಳಿರುವುದು ಬಿಜೆಪಿಯ ಒಟ್ಟಾರೆ ಕಾರ್ಯತಂತ್ರಕ್ಕೆ ಹೊಂದಿಕೆಯಾಗಲಾರದು. ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವ ಮೊದಲು ಬಿಜೆಪಿಯು ಮೂರನೆ ಎರಡರಷ್ಟು ಬಹುಮತ ಪಡೆಯಬೇಕಾಗುತ್ತದೆ. ಅನಂತಕುಮಾರ್ ಹೆಗಡೆ, ಇತ್ತೀಚೆಗೆ ಬ್ರಾಹ್ಮಣ ಯುವ ಪರಿಷತ್ನ ಸಭೆಯಲ್ಲಿ ಮಾತನಾಡುತ್ತಾ, ‘‘ಒಂದು ವೇಳೆ ಯಾರಾದರೂ ತಾವು ಮುಸ್ಲಿಮ್, ಕ್ರೈಸ್ತ, ಬ್ರಾಹ್ಮಣ, ಲಿಂಗಾಯತ ಅಥವಾ ಹಿಂದೂ ಎಂದು ತಮ್ಮನ್ನು ಗುರುತಿಸಿಕೊಂಡರೆ ನನಗೆ ಸಂತಸವಾಗುತ್ತದೆ. ಆದರೆ ಅವರು ಜಾತ್ಯತೀತರೆಂದು ಹೇಳಿದರೇನೇ ತೊಂದರೆ ಉಂಟಾಗುತ್ತದೆ’’ ಎಂದಿದ್ದರು. ತನ್ನ ಹೇಳಿಕೆಗಾಗಿ ಅನಂತ್ಕುಮಾರ್, ಲೋಕಸಭೆಯಲ್ಲಿ ತೀವ್ರ ಟೀಕೆಗೊಳಗಾದಾಗ ಅವರು ನುಣುಚಿಕೊಳ್ಳಲು ಯತ್ನಿಸುತ್ತಾ, ‘‘ಒಂದು ವೇಳೆ ಯಾರಾದರೂ ಸಂವಿಧಾನವನ್ನು ಬದಲಾಯಿಸುವ ಅಥವಾ ಜಾತ್ಯತೀತತೆ ಕುರಿತ ತನ್ನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದಲ್ಲಿ, ಅವರ ಕ್ಷಮೆ ಕೇಳಲು ನಾನು ಹಿಂದೆ ಮುಂದೆ ನೋಡಲಾರೆ’’ ಎಂದಿದ್ದರು.
ಖಂಡಿತವಾಗಿಯೂ ಬಿಜೆಪಿಯ ಉದ್ದೇಶಗಳು ಮೇಲ್ನೋಟಕ್ಕೆ ತಿಳಿದುಬರುತ್ತದೆ ಹಾಗೂ ಅವರ ಕ್ಷಮೆಯಾಚನೆಯು ಶುದ್ಧ ಕಾರ್ಯತಂತ್ರವಾಗಿದೆ. ಒಂದು ಪಕ್ಷವಾಗಿ ಬಿಜೆಪಿಯು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ. ಕಾನೂನಾತ್ಮಕವಾಗಿಯೂ ಅದು ಸಂವಿಧಾನವನ್ನು ಅನುಸರಿಸಲೇಬೇಕಾಗುತ್ತದೆ. 1998ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದಾಗ, ಸಂವಿಧಾನದ ಪರಾಮರ್ಶೆಗಾಗಿ ಅದು ವೆಂಕಟಾಚಲಯ್ಯ ಆಯೋಗವನ್ನು ನೇಮಿಸಿತು. ಪ್ರಾಯಶಃ ಅದು ಈ ನಿಟ್ಟಿನಲ್ಲಿ ನಡೆಸಿದ ಮೊದಲ ಹಾಗೂ ಸೂಕ್ಷ್ಮವಾದ ಉದ್ದೇಶಿತ ಪ್ರಯತ್ನವಾಗಿತ್ತು. ಸಂವಿಧಾನವನ್ನು ಪುನರ್ವಿಮರ್ಶಿಸುವ ತನ್ನ ನಡೆಗೆ ಸಮಾಜದ ವಿಶಾಲವಾದ ವರ್ಗಗಳಿಂದ ಪ್ರಬಲ ವಿರೋಧ ಎದುರಾದುದನ್ನು ಅರಿತ ಬಳಿಕ ಆಯೋಗದ ವರದಿಯನ್ನು ಸರಕಾರ ಕೈಬಿಟ್ಟಿತೆಂಬುದು ಬೇರೆ ವಿಷಯ.
ಮೋದಿ ನೇತೃತ್ವದ ಎನ್ಡಿಎ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ, 2015ರ ಗಣರಾಜ್ಯೋತ್ಸವ ಸಂದರ್ಭದಲ್ಲಿ, ಅದು ಸಂವಿಧಾನದ ಮುನ್ನುಡಿಯೊಂದಿಗೆ ಜಾಹೀರಾತೊಂದನ್ನು ಪ್ರಕಟಿಸಿತ್ತು. ಆದರೆ ಅದರಲ್ಲಿ ಜಾತ್ಯತೀತತೆ ಹಾಗೂ ಸಮಾಜವಾದ ಎಂಬ ಪದಗಳು ಕಣ್ಮರೆಯಾಗಿದ್ದವು. 2017ರ ನವೆಂಬರ್ನಲ್ಲಿ ಯೋಗಿ ಆದಿತ್ಯನಾಥ್ ಅವರು ‘‘ಜಾತ್ಯತೀತತೆಯೆಂಬುದು ಭಾರತದ ಅತಿ ದೊಡ್ಡ ಸುಳ್ಳು’’ ಎಂದು ಹೇಳಿದ್ದರು.
ಸದ್ಯದ ಮಟ್ಟಿಗೆ ಬಿಜೆಪಿಯು ತನ್ನ ಆಳವಾದ ಕಾರ್ಯಸೂಚಿಯನ್ನು ಅಷ್ಟು ಸುಲಭವಾಗಿ ಬಹಿರಂಗಪಡಿಸಲಾರದು. ಪ್ರಸಕ್ತ ಸಂವಿಧಾನವು ಬಿಜೆಪಿಗೆ ಹಿತವೆನಿಸುವುದಿಲ್ಲವೆಂಬುದು ಈಗಲೇ ನಾವು ತಿಳಿದುಕೊಳ್ಳಬಹುದಾಗಿದೆ. ಸಂವಿಧಾನದ ಕಲಮುಗಳಾದ 370 (ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ), 25 (ಧಾರ್ಮಿಕ ಸ್ವಾತಂತ್ರ) ಹಾಗೂ 30 (ಅಲ್ಪಸಂಖ್ಯಾತರಿಂದ ಶಿಕ್ಷಣ ಸಂಸ್ಥೆಗಳ ಸ್ಥಾಪನೆ)ಯಂತಹ ಕಾನೂನುಗಳ ಬಗ್ಗೆಯೂ ಅದಕ್ಕೆ ಅಸಮ್ಮತಿಯಿದೆ. ಬಿಜೆಪಿಯು ಸಂಘಪರಿವಾರದ ಭಾಗವಾಗಿರುವುದರಿಂದ, ಆರೆಸ್ಸೆಸ್ ಚಿಂತಕರು, ವಿಎಚ್ಪಿಯಂತಹ ಸಹಸಂಘಟನೆಗಳು ಮತ್ತಿತರರು ಇದೇ ವಿಚಾರವಾಗಿ ಯಾವ ಮಾತುಗಳನ್ನಾಡುತ್ತಾರೆಂಬುದನ್ನು ಗಮನಿಸಬೇಕಾದ ಅಗತ್ಯವಿದೆ. ಈ ಸಂಘಟನೆಗಳು ಭಾರತೀಯ ಸಂವಿಧಾನಕ್ಕೆ ತಮ್ಮ ವಿರೋಧವನ್ನು ಹಾಗೂ ಭಾರತದ ಪವಿತ್ರ ಗ್ರಂಥಗಳ ಆಧಾರದಲ್ಲಿ ಹೊಸ ಸಂವಿಧಾನವನ್ನು ರೂಪಿಸುವ ತಮ್ಮ ಗುರಿಯನ್ನು ಆಗಾಗ್ಗೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿವೆ.
ಹೀಗಾಗಿ, ಪ್ರಸಕ್ತ ಸಂವಿಧಾನವು ನೀಡಿರುವ ಪ್ರಜಾತಾಂತ್ರಿಕ, ಜಾತ್ಯತೀತತೆಯ ಅವಕಾಶವನ್ನು ಬಳಸಿಕೊಂಡು ಹಿಂದೂ ರಾಷ್ಟ್ರವಾದಕ್ಕೆ ದಾರಿ ಮಾಡಿ ಕೊಡಲು ಯತ್ನಿಸುವುದೇ ಈ ಹಿಂದೂ ರಾಷ್ಟ್ರವಾದಿ ರಾಜಕೀಯ ಸಂರಚನೆಗಳ ಒಟ್ಟಾರೆ ಪ್ರಯತ್ನವಾಗಿದೆ.
ಆರೆಸ್ಸೆಸ್ನ ಚಿಂತಕರಾದ ಗೋಳ್ವಾಲ್ಕರ್ ಅವರು ತಮ್ಮ ‘ಬಂಚ್ ಆಫ್ ಥಾಟ್ಸ್’ನಂತಹ ಬರಹಗಳಲ್ಲಿ ಭಾರತದ ಸಂವಿಧಾನದ ತಳಹದಿಯಾದ ಪ್ರಾಂತೀಯ ರಾಷ್ಟ್ರವಾದವನ್ನು ಬರ್ಬರತೆಯವಾದವೆಂದು ಮೂದಲಿಸಿದ್ದರು. ಅವರ ಪ್ರಕಾರ ರಾಷ್ಟ್ರವೆೆಂಬುದು ಕೇವಲ ರಾಜಕೀಯ ಹಾಗೂ ಆರ್ಥಿಕ ಹಕ್ಕುಗಳ ಮೂಟೆಯಲ್ಲ. ಅದು ರಾಷ್ಟ್ರೀಯ ಸಂಸ್ಕೃತಿಯ ಸಾಕಾರವಾಗಿದೆ. ಭಾರತದಲ್ಲಿ ಅದು ಪುರಾತನ ಹಾಗೂ ಭವ್ಯ ಹಿಂದೂ ಸಂಸ್ಕೃತಿಯಾಗಿದೆ. ಪ್ರಜಾಪ್ರಭುತ್ವವೆಂಬುದು ಭಾರತೀಯ ಸಂಸ್ಕೃತಿಗೆ ಆಗಂತುಕವೆಂದು ಭಾವಿಸುವ ಗೋಳ್ವಾಲ್ಕರ್ ಅವರು ಮನು ಸಂಹಿತೆಯ ಗುಣಗಾನ ಮಾಡುತ್ತಾರೆ. ಮನುಸಂಹಿತೆಯು, ಮಾನವಕುಲದ ಪ್ರಪ್ರಥಮ, ಮಹಾನ್ ಹಾಗೂ ಮೇಧಾವಿ ಕಾನೂನುದಾತನೆಂದು ಅವರು ಶ್ಲಾಘಿಸಿದ್ದಾರೆ.
1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿತ್ತು. ಆರೆಸ್ಸೆಸ್ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆಯು 1949ರ ನವೆಂಬರ್ 30ರಂದು ಪ್ರಕಟಿಸಿದ ಸಂಪಾದಕೀಯದಲ್ಲಿ ಹೀಗೆ ದೂರಿಕೊಂಡಿತ್ತು. ‘‘ಆದರೆ ನಮ್ಮ ಸಂವಿಧಾನದಲ್ಲಿ ಪುರಾತನ ಭಾರತದಲ್ಲಿದ್ದ ವಿಶಿಷ್ಟವಾದ ಸಾಂವಿಧಾನಿಕ ಅಭಿವೃದ್ಧಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮನುವಿನ ಕಾನೂನುಗಳನ್ನು ಸ್ಪಾರ್ಟಾದ ಲಿಕುರ್ಗುಸ್ ಅಥವಾ ಪರ್ಶಿಯಾದ ಸೊಲೊನ್ ಅವರಿಗಿಂತ ಮೊದಲೇ ಬರೆಯಲಾಗಿತ್ತು. ಮನುಸ್ಮತಿಯಲ್ಲಿ ಪ್ರತಿಪಾದಿಸಲಾಗಿರುವ ಆತನ ಕಾನೂನುಗಳು ಈಗಲೂ ಜಗತ್ತಿನಾದ್ಯಂತ ಪ್ರಶಂಸಿಸಲ್ಪಟ್ಟಿವೆ. ಆದರೆ ನಮ್ಮ ಸಂವಿಧಾನದ ಪಂಡಿತರಿಗೆ ಅದು ಏನೇನೂ ಅಲ್ಲವೆಂದು’’ ಅಸಮಾಧಾನ ವ್ಯಕ್ತಪಡಿಸಿತ್ತು.
ಬಹುತೇಕ ಹಿಂದೂ ರಾಷ್ಟ್ರವಾದಿಗಳು ಸ್ಫೂರ್ತಿ ಪಡೆದುಕೊಳ್ಳುವ ಪ್ರಮುಖ ಚಿಂತಕರಾಗಿದ್ದಾರೆ. ‘‘ನಮ್ಮ ಹಿಂದೂ ರಾಷ್ಟ್ರಕ್ಕೆ ವೇದಗಳ ಆನಂತರ ಮನುಸ್ಮತಿಯು ಅತ್ಯಂತ ಪೂಜನೀಯವಾದ ಗ್ರಂಥವಾಗಿದೆ. ಪುರಾತನ ಕಾಲದಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯಗಳು, ಚಿಂತನೆ ಹಾಗೂ ಆಚರಣೆಗಳಿಗೆ ಈ ಗ್ರಂಥವು ಆಧಾರವಾಗಿತ್ತು. ಹಲವು ಶತಮಾನಗಳಿಂದ ಈ ಕೃತಿಯು ನಮ್ಮ ದೇಶದ ಅಧ್ಯಾತ್ಮಿಕ ಹಾಗೂ ದೈವಿಕತೆಯ ಯಾತ್ರೆಗೆ ಈ ಕೃತಿಯು ಸಂಹಿತೆಯನ್ನು ರೂಪಿಸಿತ್ತು. ಇಂದಿಗೂ ಕೂಡಾ ಮನು ರೂಪಿಸಿದ ಕಾನೂನುಗಳನ್ನು ಕೋಟ್ಯಂತರ ಹಿಂದೂಗಳು ತಮ್ಮ ಬದುಕಿನಲ್ಲಿ ಅನುಸರಿಸುತ್ತಿದ್ದಾರೆ. ಮನುಸ್ಮತಿಯು ಇಂದು ಹಿಂದೂ ಕಾನೂನಾಗಿದೆ’’ಎಂದು ಸಾವರ್ಕರ್ ಪ್ರತಿಪಾದಿಸಿದ್ದರು.
ದೀನದಯಾಳ್ ಉಪಾಧ್ಯಾಯ ಸಂಘಪರಿವಾರದ ಇನ್ನೋರ್ವ ಪ್ರಮುಖ ಚಿಂತಕರಾಗಿದ್ದಾರೆ. ಹಿಂದಿನ ಬಿಜೆಪಿಯ ಅವತಾರವಾದ ಭಾರತೀಯ ಜನಸಂಘದ ಭಾಗವಾಗಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳನ್ನು ನಕಲು ಮಾಡಿ ಭಾರತದ ಸಂವಿಧಾನವನ್ನು ಬರೆದಿದ್ದು, ಅದು ನಮ್ಮ ಜೀವನದ ಗತಿಯೊಂದಿಗೆ ಮತ್ತು ವ್ಯಕ್ತಿ ಮತ್ತು ಸಮಾಜದ ನಡುವಿನ ಬಾಂಧವ್ಯದ ಕುರಿತಾದ ಭಾರತೀಯ ವೌಲ್ಯಗಳ ಜೊತೆ ಸಂಬಂಧವನ್ನು ಕಡಿದುಕೊಂಡಿದೆಯೆಂದು ಅವರು ಹೇಳಿದ್ದರು.
ಸಂಘಪರಿವಾರದ ಹಿಂದಿನ ಚಿಂತಕರ ಹಾಗೆ ದೀನದಯಾಳ ಉಪಾಧ್ಯಾಯ ಕೂಡಾ ಸಂವಿಧಾನವು ಭಾರತದಂತಹ ಪುರಾತನ ರಾಷ್ಟ್ರಕ್ಕೆ ಸೂಕ್ತವಾದಂತಹ ಹಿಂದೂ ರಾಜಕೀಯ ಸಿದ್ಧಾಂತವನ್ನು ಅಳವಡಿಸಿಕೊಂಡಿರಬೇಕೆಂದು ಅಭಿಪ್ರಾಯಿಸಿದ್ದರು. ಅವರ ಪ್ರಕಾರ ಖಿಲಾಫತ್ ಚಳವಳಿಯ ಬಳಿಕ ಭಾರತದ ರಾಷ್ಟ್ರೀಯವಾದ ಚಳವಳಿಯು ಮುಸ್ಲಿಂ ಸಮುದಾಯವನ್ನು ಓಲೈಸುವ ನೀತಿಯೆಡೆಗೆ ತಿರುಗಿತೆಂದು ಅವರು ಹೇಳಿದ್ದರು.
ಭಾರತೀಯ ಸಂವಿಧಾನವನ್ನು ಕಟುವಾಗಿ ಟೀಕಿಸುತ್ತಿದ್ದ ಅವರು ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಅವರ ವಿಚಾರಧಾರೆಯು ಹಾಲಿ ಬಿಜೆಪಿ ನಾಯಕತ್ವದ ಪ್ರಮುಖ ಸ್ಫೂರ್ತಿಗಳಲ್ಲೊಂದೆಂಬಂತೆ ತೋರುತ್ತಿದೆ. ಸಂವಿಧಾನದ 25, 30 ಹಾಗೂ 370 ಇತ್ಯಾದಿ ಕಲಮುಗಳು, ಬಹುತ್ವವಾದಿ ವೈವಿಧ್ಯಮಯ ಸಮಾಜದ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿರುವುದೇ ಬಿಜೆಪಿ ಅವುಗಳ ಬಗ್ಗೆ ಅಸಮಾಧಾನ ಹೊಂದಿರಲು ಕಾರಣವಾಗಿದೆ.
ಸದ್ಯದ ಮಟ್ಟಿಗೆ ಬಿಜೆಪಿಯು ತನ್ನ ಆಳವಾದ ಕಾರ್ಯಸೂಚಿಯನ್ನು ಅಷ್ಟು ಸುಲಭವಾಗಿ ಬಹಿರಂಗಪಡಿಸಲಾರದು. ಪ್ರಸಕ್ತ ಸಂವಿಧಾನವು ಬಿಜೆಪಿಗೆ ಹಿತವೆನಿಸುವುದಿಲ್ಲವೆಂಬುದು ಈಗಲೇ ನಾವು ತಿಳಿದುಕೊಳ್ಳಬಹುದಾಗಿದೆ. ಸಂವಿಧಾನದ ಕಲಮುಗಳಾದ 370 (ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ), 25 (ಧಾರ್ಮಿಕ ಸ್ವಾತಂತ್ರ) ಹಾಗೂ 30 (ಅಲ್ಪಸಂಖ್ಯಾತರಿಂದ ಶಿಕ್ಷಣ ಸಂಸ್ಥೆಗಳ ಸ್ಥಾಪನೆ)ಯಂತಹ ಕಾನೂನುಗಳ ಬಗ್ಗೆಯೂ ಅದಕ್ಕೆ ಅಸಮ್ಮತಿಯಿದೆ. ಬಿಜೆಪಿಯು ಸಂಘಪರಿವಾರದ ಭಾಗವಾಗಿರುವುದರಿಂದ, ಆರೆಸ್ಸೆಸ್ ಚಿಂತಕರು, ವಿಎಚ್ಪಿಯಂತಹ ಸಹಸಂಘಟನೆಗಳು ಮತ್ತಿತರರು ಇದೇ ವಿಚಾರವಾಗಿ ಯಾವ ಮಾತುಗಳನ್ನಾಡುತ್ತಾರೆಂಬುದನ್ನು ಗಮನಿಸಬೇಕಾದ ಅಗತ್ಯವಿದೆ.