ಬಂಡವಾಳ ಹೂಡಿಕೆ ಏಕಾಗುತ್ತಿಲ್ಲ?
ಭಾರತದ ಒಟ್ಟಾರೆ ಆಂತರಿಕ ಅಭಿವೃದ್ಧಿಯ ಬೆಳವಣಿಗೆಯ ದರ ನಿಧಾನಗತಿಯಲ್ಲಿದ್ದು ಬಂಡವಾಳ ಹೂಡಿಕೆಯೂ ಸಹ ಕುಂಠಿತವಾಗುತ್ತಿದೆ ಮತ್ತು ಇಳಿಮುಖವಾಗುತ್ತಿದೆ.
ಭಾರತದ ಕೇಂದ್ರೀಯ ಅಂಕಿಅಂಶ ಇಲಾಖೆ (ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್) ಜನವರಿ 5ರಂದು ಬಿಡುಗಡೆ ಮಾಡಿರುವ ಭಾರತದ ರಾಷ್ಟ್ರೀಯ ಆದಾಯದ ಮುಂದಂದಾಜು 2017-18 ರ ಪ್ರಕಾರ ಭಾರತದ ಆರ್ಥಿಕತೆಯ ಅಭಿವೃದ್ಧಿಯು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಗತಿಯಲ್ಲಿ ನಡೆಯಲಿದೆ. ಫೆಬ್ರವರಿ 1ರಂದು ಮಂಡಿತವಾಗಲಿರುವ ಬಜೆಟ್ ಭಾರತದ ಆರ್ಥಿಕತೆಯ ಕಳೆದ 6-8 ತಿಂಗಳ ಅವಧಿಯ ಈ ಅಂಕಿಅಂಶಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಿದೆ. ಬಂಡವಾಳ ಹೂಡಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೆಂಬ ಬಗ್ಗೆ ಸರಕಾರವು ಎಷ್ಟೇ ಆಶಾವಾದದ ಮಾತುಗಳನ್ನು ಆಡುತ್ತಿದ್ದರೂ ಗೋಚರವಾಗುತ್ತಿರುವ ಚಿತ್ರಣ ಮಾತ್ರ ಭಿನ್ನವಾಗಿಯೇ ಇದೆ. ಉದಾಹರಣೆಗೆ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಒಟ್ಟಾರೆ ಸ್ಥಿರ ಬಂಡವಾಳ ಕ್ರೋಡೀಕರಣ (ಗ್ರಾಸ್ ಫಿಕ್ಸೆಡ್ ಕ್ಯಾಫಿಟಲ್ ಫಾರ್ಮೇಷನ್- ಜಿಎಫ್ಸಿಪಿ)ದ ಪ್ರಮಾಣವೆಷ್ಟು ಎಂಬುದು ಒಂದು ಆರ್ಥಿಕತೆಯ ಬೆಳವಣಿಗೆಯ ಸಾಮರ್ಥ್ಯದ ಬಗ್ಗೆ ಸರಿಯಾದ ಸೂಚನೆಯನ್ನು ಕೊಡುತ್ತದೆ. ಆದರೆ ಈ ವರ್ಷ ಆ ಅನುಪಾತವು 2011ರಲ್ಲಿ ಭಾರತವು ಹೊಸ ರಾಷ್ಟ್ರೀಯ ಅಂಕಿಅಂಶ ಲೆಕ್ಕಾಚಾರ ಪದ್ಧತಿಯನ್ನು ಅಳವಡಿಸಿಕೊಂಡ ನಂತರದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ.
2016-17ರ ನೋಟು ರದ್ದತಿ ಮತ್ತು 2017-18ರಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳು ಆರ್ಥಿಕತೆಯಲ್ಲಿ ಉಂಟುಮಾಡಿದ ಅಸ್ತವ್ಯಸ್ತತೆಗಳಿಂದಾಗಿ ಈ ಅಂದಾಜಿನಲ್ಲೂ ಕೆಲವು ಅನಿಶ್ಚತೆಗಳಿವೆ. ಅಂಕಿಅಂಶಗಳನ್ನು ಆಧರಿಸಿ ಏನನ್ನು ನಿರೀಕ್ಷಿಸಬಹುದು ಎಂಬುದನು ತಿಳಿದುಕೊಳ್ಳುವ ಮುಂಚೆ ಈ ಅಂಕಿಅಂಶಗಳು ಹೇಳುತ್ತಿರುವುದರ ಸಾರಾಂಶವನ್ನು ನೋಡೋಣ. ಈ ದತ್ತಾಂಶಗಳ ಪ್ರಕಾರ 2017-18ರಲ್ಲಿ ಭಾರತದ ಆರ್ಥಿಕತೆಯು ಶೇ.6.5 ದರದಲ್ಲಿ ಮಾತ್ರ ಅಭಿವೃದ್ಧಿ ಹೊಂದಲಿದೆ. ವರ್ಷದಿಂದ ವರ್ಷಕ್ಕೆ ಮಾಡುವ ಹೋಲಿಕೆಯಲ್ಲಿ ನೋಡಿದರೆ ಇದು ಕಳೆದ ಸಾಲಿನಲ್ಲಿ ಅಂದಾಜಿಸಲಾಗಿದ್ದ ಶೇ. 7.1 ಕ್ಕಿಂತ ಕಡಿಮೆ. ಒಟ್ಟಾರೆ ಮೌಲ್ಯ ಸಂಚಯನ-ಜಿವಿಎ (ಗ್ರಾಸ್ ವ್ಯಾಲ್ಯೂ ಅಡಿಷನ್-ಜಿವಿಎ- ತೆರಿಗೆಗಳನ್ನು ಹೊರತುಪಡಿಸಿ ವಾಸ್ತವ ಮೌಲ್ಯಾಭಿವೃದ್ಧಿ)ಯು ಕಳೆದ ಸಾಲಿನ ಅಂದಾಜು ಶೇ.6.6 ರಷ್ಟಿದ್ದರೆ ಈ ವರ್ಷ ಅದನ್ನು ಕೇವಲ ಶೇ.6.1 ಎಂದು ಅಂದಾಜು ಮಾಡಲಾಗಿದೆ. ಜಿಡಿಪಿಯ ಮತ್ತೊಂದು ಘಟಕಾಂಶವಾಗಿರುವ ತೆರಿಗೆ ಸಂಗ್ರಹವು ಕಳೆದ ವರ್ಷ ಶೇ.10.9ರಷ್ಟಿತ್ತು. ಆದರೆ ಈ ವರ್ಷ ಜಿಎಸ್ಟಿಯು ಆರ್ಥಿಕತೆಯಲ್ಲಿ ಉಂಟುಮಾಡಿರುವ ಅಸ್ತವ್ಯಸ್ತತೆಯಿಂದಾಗಿ ಪರೋಕ್ಷ ತೆರಿಗೆ ಸಂಗ್ರಹವು ಕೂಡಾ ಮತ್ತಷ್ಟು ಕಡಿಮೆಯಾಗಲಿದೆ.
ಜಿವಿಎ (ಗ್ರಾಸ್ ವ್ಯಾಲ್ಯೂ ಅಡಿಷನ್-ಜಿವಿಎ-ತೆರಿಗೆಗಳನ್ನು ಹೊರತುಪಡಿಸಿ ವಾಸ್ತವ ಮೌಲ್ಯಾಭಿವೃದ್ಧಿ)ಯ ದತ್ತಾಂಶಗಳನ್ನು ಗಮನಿಸುವುದಾದರೆ ಈ ದೇಶದ ಬಹುಸಂಖ್ಯಾತ ಜನರು ಆಧರಿಸಿರುವ ಕೃಷಿ ಕ್ಷೇತ್ರವು ಕಳೆದ ವರ್ಷಕ್ಕಿಂತ ಹೆಚ್ಚಿನ ಕುಸಿತವನ್ನು ಕಾಣಲಿದೆ. ಕೃಷಿ ಕ್ಷೇತ್ರವಂತೂ ಕಳೆದ ಹಲವಾರು ವರ್ಷಗಳಿಂದ ಯಾವುದೇ ಬಗೆಯ ಚೇತರಿಕೆಯನ್ನು ಕಾಣುತ್ತಲೇ ಇಲ್ಲ. ಇದರಿಂದಾಗಿಯೇ ದೇಶದ ಒಟ್ಟಾರೆ ಜಿವಿಎದಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರದ ಪಾಲು ಕುಸಿಯುತ್ತಲೇ ಬಂದಿದ್ದು ಈ ವರ್ಷ ಅದು ಕೇವಲ ಶೇ.14.6ರಷ್ಟಾಗಿದೆ. ಸೇವಾ ಕ್ಷೇತ್ರವು ಒಟ್ಟಾರೆ ಜಿವಿಎದ ಶೇ.40ರಷ್ಟಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ತುಸು ಹೆಚ್ಚಿನ ಅಭಿವೃದ್ಧಿಯನ್ನು ತೋರುವ ನಿರೀಕ್ಷೆ ಇದೆ. ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ಗತಿಯು ಕಳೆದ ವರ್ಷಕ್ಕಿಂತ ಕಡಿಮೆಯೇ ಇರಲಿದೆ. ಆದರೆ ಖರೀದಿ ನಿರ್ವಾಹಕ ಸೂಚ್ಯಂಕವು (ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) ಮಾತ್ರ ಆಶಾವಾದಿಯಾಗಿದ್ದು ಈ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆಯು ಸಕಾರಾತ್ಮಕ ಸೂಚನೆಗಳನ್ನು ನೀಡಬಹುದೆಂಬ ಆಶೆ ಇರಿಸಿಕೊಂಡಿದೆ.
ಕಳೆದ ವರ್ಷದ ಮೊದಲರ್ಧದಲ್ಲಿ ಜಾಗತಿಕ ವಾಣಿಜ್ಯವು ಏರುಗತಿಯಲ್ಲಿದ್ದರೂ ಭಾರತದ ರಫ್ತು ವ್ಯವಹಾರ ಕೂಡಾ ಅಷ್ಟೊಂದು ಸುಧಾರಣೆಯನ್ನೇನೂ ತೋರಿಲ್ಲ. ಸಾಮಾನ್ಯವಾಗಿ ಅಂಕಿಅಂಶ ಇಲಾಖೆಯು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಹೋಲಿಕೆಯಲ್ಲಿ ಹಾಲಿ ವರ್ಷದ ಅಂದಾಜುಗಳನ್ನು ಸಿದ್ಧಪಡಿಸುತ್ತದೆ. ಈ ಪದ್ಧತಿಯಿಂದಾಗಿ ಜಿವಿಎ ಯ ಪ್ರಾರಂಭದ ಅಭಿವೃದ್ಧಿ ಅಂದಾಜುಗಳು ಸಾಮಾನ್ಯವಾಗಿ ಹೆಚ್ಚಾಗಿಯೇ ಅಂದಾಜಿಸಲ್ಪಟ್ಟಿರುತ್ತವೆ. ನಂತರದಲ್ಲಿ ಮಾಡುವ ಅಂದಾಜುಗಳು ಕಡಿಮೆಯಾಗುತ್ತಾ ಹೋಗುತ್ತವೆ; ಏನಿಲ್ಲವೆಂದರೂ ಈವರೆಗೂ ಅನುಸರಿಸಿಕೊಂಡುಬಂದಿರುವ ರಿವಾಜು ಇದೇ ಆಗಿದೆ. ಆದರೆ ಈ ಬಾರಿ ಸರಕಾರವು ಪ್ರಾಥಮಿಕ ಅಂದಾಜಿಗಿಂತ ನಂತರದ ಅಂದಾಜುಗಳಲ್ಲಿ ಅಭಿವೃದ್ಧಿಯ ಗತಿಯು ಹೆಚ್ಚಳವನ್ನು ಸೂಚಿಸಲಿದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಅದು 2017-18ರ ಮೊದಲರ್ಧಕ್ಕಿಂತ ದ್ವಿತೀಯಾರ್ಧವು ಉತ್ತಮವಾಗಿರಲಿದೆಯೆಂಬ ವಿಶ್ವಾಸವನ್ನು ತೋರಿಸುತ್ತಿದೆ. ಈ ವರೆಗಿನ ಎನ್ಎಎಸ್ ಲೆಕ್ಕಾಚಾರಗಳಾಗಲೀ, ಆರ್ಥಿಕ ವ್ಯವಹಾರಗಳ ಇತರ ಸೂಚ್ಯಂಕಗಳಾಗಲಿ ಅಂಥ ಯಾವುದೇ ಸೂಚನೆಯನ್ನು ಕೊಡುತ್ತಿಲ್ಲ. ಅದೇನೇ ಇದ್ದರೂ ಕೆಲವು ವಿಶ್ಲೇಷಕರ ಪ್ರಕಾರ ನಂತರದ ಅಂದಾಜುಗಳಲ್ಲಿ ಹಾಲಿ ವರ್ಷದ ಅಭಿವೃದ್ಧಿಯ ದರದಲ್ಲಿ ಏರುಗತಿಯನ್ನು ತೋರಿಸಿದಲ್ಲಿ ಅದು ಅಂಕಿಅಂಶಾತ್ಮಕವಾಗಿ ಮಾತ್ರ ಉತ್ಪಾದಿಸಲ್ಪಟ್ಟ ಹೆಚ್ಚಳ ಆಗಿರುತ್ತದಷ್ಟೆ. ಈ ಪ್ರತಿಪಾದನೆಗೆ ಒಂದು ಕಾರಣವಿದೆ. 2018ರ ಜನವರಿಯಲ್ಲಿ 2016-17ನೇ ಸಾಲಿನ ಅಭಿವೃದ್ಧಿ ದರಗಳ ಪ್ರಥಮ ಪರಿಷ್ಕೃತ ಅಂದಾಜು ಪ್ರಕಟವಾಗಲಿದೆ. ಆ ಸಾಲಿನಲ್ಲೇ ನೋಟು ನಿಷೇಧವು ಜಾರಿಯಾಗಿದ್ದರಿಂದ ಈ ಪರಿಷ್ಕೃತ ಅಂದಾಜು ಮೊದಲ ಅಂದಾಜಿಗಿಂತ ಕಡಿಮೆಯೇ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ವರ್ಷದ ಅಂದಾಜು ಈ ಕಡಿಮೆಗೊಂಡ ದರವನ್ನು ಆಧಾರವಾಗಿಟ್ಟುಕೊಳ್ಳಲಿದೆ. ಹೀಗಾಗಿ ಯಾವುದೇ ಹಚ್ಚಳವು ಕಡಿಮೆ ಮೌಲ್ಯವಿರುವ ಸಂಗತಿಯೊಂದಿಗೆ ಹೋಲಿಸಿದಷ್ಟೂ ಹೆಚ್ಚೇ ಆಗುತ್ತದೆ. ಹೀಗಾಗಿ ಹಾಲೀ ಅಭಿವೃದ್ಧಿ ದರ ಮೊದಲಿಗಿಂತ ತುಂಬಾ ಹೆಚ್ಚಾಗಿದೆ ಎಂದು ತೋರಿಸಲು ಯಾವುದರೊಂದಿಗೆ ಹೋಲಿಕೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಹೀಗಾಗಿ ಫೆಬ್ರವರಿಯ ಕೊನೆಯಲ್ಲಿ ಪ್ರಕಟವಾಗಲಿರುವ ಎರಡನೇ ಪರಿಷ್ಕೃತ ಅಂದಾಜು ನೋಟು ನಿಷೇಧದ ಪರಿಣಾಮವಾಗಿ ಇನ್ನೂ ಕುಸಿತಗೊಂಡಿರುವ ಅಭಿವೃದ್ಧಿ ದರದೊಂದಿಗಿನ ಹೋಲಿಕೆಯಾಗುವುದರಿಂದ ಅಂಕಿಅಂಶಾತ್ಮಕವಾಗಿಯೇ ಅಭಿವೃದ್ಧಿ ದರದಲ್ಲಿ ಹೆಚ್ಚಳವಾಗಲಿದೆ. ಅಷ್ಟು ಮಾತ್ರವಲ್ಲ, 2016-17 ಮತ್ತು 2017-18 ಎರಡೂ ಸಾಲಿನ ಅಭಿವೃದ್ಧಿ ದರದ ಪರಿಷ್ಕೃತ ಅಂದಾಜುಗಳು ಮೊದಲಿಗಿಂತ ಕಡಿಮೆ ತೋರಿಸಲ್ಪಡುವ ಸಾಧ್ಯತೆಯೂ ಇದೆ. ಅಂಕಿಅಂಶಗಳ ಕಸರತ್ತನ್ನು ಬದಿಗಿಟ್ಟು ವಿಷ್ಲೇಷಿಸಿದರೂ ಒಂದು ಆರ್ಥಿಕತೆಯ ನಿಜವಾದ ಆರೋಗ್ಯಕ್ಕೆ ಸೂಚಕವಾದ ಬಂಡವಾಳ ಹೂಡಿಕೆಯ ಪ್ರಮಾಣ ಮಾತ್ರ ಕುಸಿಯುತ್ತಲೇ ಇದೆ. ಸಾರ್ವಜನಿಕ ಮತ್ತು ಖಾಸಗಿ ಬಳಕೆ ವೆಚ್ಚ ಪ್ರಮಾಣಗಳು ದೇಶದ ಆರ್ಥಿಕತೆಯ ಇನ್ನೆರಡು ಆರೋಗ್ಯ ಸೂಚಕಗಳಾಗಿದ್ದು ಅವೂ ವರ್ಷದಿಂದ ವರ್ಷಕ್ಕೆ ಹೋಲಿಸಿದಲ್ಲಿ 2017-18ರಲ್ಲಿ ಕುಸಿತವನ್ನು ಕಂಡಿದೆ. ಜಿಡಿಪಿಯಲ್ಲಿ ಒಟ್ಟಾರೆ ಸ್ಥಿರ ಬಂಡವಾಳ ಕ್ರೋಡೀಕರಣ (ಜಿಎಫ್ಸಿಎಫ್) ಪ್ರಮಾಣ 2011ರಲ್ಲಿ ಶೇ.34.3ರಷ್ಟಿದ್ದದ್ದು 2017-18ರ ಸಾಲಿನಲ್ಲಿ ಶೇ.29ಕ್ಕೆ ಕುಸಿದಿದೆ. 2004-05 ಮತ್ತು 2011-12ರ ನಡುವೆ ಕಂಡುಬಂದ ಅಭಿವೃದ್ಧಿ ದರಕ್ಕೆ ಮರಳಬೇಕಾದರೆ ಆಗಬೇಕಾದಷ್ಟು ಬಂಡವಾಳ ಹೂಡಿಕೆ ಆಗುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಬಂಡವಾಳದ ಹರಿವನ್ನು ಹೆಚ್ಚಿಸಲು ಸರಕಾರವು ಹಲವಾರು ತರ್ಕರಹಿತ ಪ್ರಯೋಗಗಳನ್ನು ಮಾಡಿತು. ಅಲ್ಲದೆ ಕೇಂದ್ರ ಸರಕಾರವು ತನ್ನ ಬಜೆಟ್ನ ಮೇಲೆ ಅನಗತ್ಯ ಕಡಿವಾಣವನ್ನೂ ಹೇರಿಕೊಂಡಿತು.
ಇವೆಲ್ಲವೂ ವಿಫಲವಾಗಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಎದುರು ಈಗ ಒಂದು ಆಯ್ಕೆ ಇದೆ. ಭಾರತದ ಆರ್ಥಿಕತೆಯ ರೇಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳದೆ ಉದ್ಯೋಗವನ್ನು ಹೆಚ್ಚಿಸುವಂಥ, ಜೀವನೋಪಾಯಗಳಿಗೆ ರಕ್ಷಣೆ ಕಲ್ಪಿಸುವಂತಹ ಮತ್ತು ಆರ್ಥಿಕತೆಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಂತಹ ದಿಕ್ಕಿನಲ್ಲಿ ಹೆಚ್ಚು ವೆಚ್ಚವನ್ನು ಮಾಡುವುದು. ಹಾಗಿದ್ದಲ್ಲಿ ಮುಖ್ಯ ಗಮನ ಯಾವ ಕಡೆ ಇರಬೇಕು? ಸರಕಾರವು ದೊಡ್ಡ ತೋರಿಕೆಯ ರಾಜಕೀಯ ನಡೆಗಳಿಗೆ ಮುಂದಾಗಬಾರದು. ನೋಟು ನಿಷೇಧ ಮತ್ತು ಜಿಎಸ್ಟಿಯ ಅವಸರದ ಅನುಷ್ಠಾನಗಳು ಆರ್ಥಿಕತೆಗೆ ಒಳಿತನ್ನು ಮಾಡಲಿಲ್ಲ. ಗ್ರಾಮೀಣ ಮೂಲಭೂತ ಸೌಕರ್ಯ, ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆ, ಗ್ರಾಮೀಣ ಕೃಷಿಯೇತರ ಉದ್ಯೋಗ ನಿರ್ಮಾಣ, ಅದರಲ್ಲೂ ನಿರ್ದಿಷ್ಟವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಂಥ ಸಾರ್ವಜನಿಕ ಸೇವೆಗಳಲ್ಲಿ ಮತ್ತು ಉತ್ಪಾದಕ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಹೆಚ್ಚಿಸುವಂತಹ ವಿವೇಚನಾಯುಕ್ತ ನೀತಿಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕು. ಜನತೆಯ ಆದಾಯವನ್ನು ಹೆಚ್ಚಿಸಿ, ಆ ಮೂಲಕ ಅಗತ್ಯವಿರುವ ಬೇಡಿಕೆೆಯನ್ನು ಮತ್ತು ಆ ಮೂಲಕ ಬಂಡವಾಳ ಹೂಡಿಕೆಯನ್ನೂ ಹೆಚ್ಚಿಸಲು ಇವೆಲ್ಲವೂ ಅತ್ಯಂತ ನಿರ್ಣಾಯಕವಾದ ಕ್ರಮಗಳಾಗಿವೆ.
ಕೃಪೆ: Economic and Political Weekly