ದೀವಟಿಗೆ ಇಡುವ ಪವಾಡ
ನರೇಂದ್ರ ನಾಯಕ್ ಜೀವನ ಕಥನ
ಭಾಗ 29
ಕೆಂಡದ ಮೇಲೆ ನಡೆಯುವಾಗ ಕೆಂಡಗಳಿಗೆ ಕಾಲಿನ ಚರ್ಮ ತಾಗಿದಾಗ, ಚರ್ಮದಲ್ಲಿ ನೀರು ಆವಿಯಾಗಿ ಕೆಂಡಗಳು ಮತ್ತು ಪಾದದ ಮಧ್ಯೆ ಶಾಖ ನಿರೋಧಕ ಪದರಕವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಕೆಲವೇ ಸೆಕೆಂಡುಗಳೊಳಗೆ ಕೆಂಡದ ಮೇಲೆ ನಡೆಯುವ ಕಾರಣ ಬಿಸಿ ತಗಲುವ ಮೊದಲೇ ಕೆಂಡಗಳನ್ನು ಹಾದು ಹೋಗಬಹುದು. ಇದಕ್ಕೆ ಯಾವುದೇ ವಿಶೇಷ ಶಕ್ತಿ ಬೇಕಾಗಿಲ್ಲ.
ಇದೊಂದು ವಿಚಿತ್ರ ಪವಾಡ. ಈ ಪವಾಡದಲ್ಲಿ ಸಾಮಾನ್ಯವಾಗಿ ಎಣ್ಣೆ ಹಾಕಿದ, ಕಂಚಿನ ದೀವಟಿಗೆಯನ್ನು ಮೈಗೆ ತಾಗಿಸಲಾಗುತ್ತದೆ. ತಾಗಿಸಿದಾಗ ಅದು ಮೆಲ್ಲನೆ ಚಲಿಸುತ್ತದೆ. ನೋಡುವವರಿಗೆ ಇದು ಇದ್ದಲ್ಲೇ ಇದೆಯೆಂಬ ಭ್ರಮೆಯಾಗುತ್ತದೆ. ಮುಖ್ಯವಾಗಿ ಚಲಿಸುವ ಬೆಂಕಿ ಸುಡುವುದಿಲ್ಲ. ಬೆಂಕಿಯು ಚಲಿಸುತ್ತಿರುವ ಕಾರಣ ಅದರ ಶಾಖ ಕಡಿಮೆಯಾಗುತ್ತದೆ. ಇದುವೇ ಈ ದೀವಟಿಗೆ ಸುಡುವ ಪ್ರಭಾವ. ಈ ಪ್ರಯೋಗವನ್ನು ನಾವು ಸುಲಭವಾಗಿ ಮಾಡಬಹುದು. ಹತ್ತಿಯ ಬನಿಯನ್ ಬಟ್ಟೆಯನ್ನು ಮರದ ಕಡ್ಡಿಗೆ ಸುತ್ತಿ ದೀವಟಿಗೆ ಮಾಡಬಹುದು. ಇದಕ್ಕೆ ಸೀಮೆ ಎಣ್ಣೆ ಅಥವಾ ಯಾವುದಾದರೂ ಸಸ್ಯಜನಿತ ತೈಲವನ್ನು ತಾಗಿಸಿ ಬೆಂಕಿ ಕೊಟ್ಟು ಮೈ ಕೈಗಳ ಮೇಲೆ ಚಲಿಸಬಹುದು. ಬೇರೆಯುವರು ನೋಡುವಾಗ ಉರಿಯುವ ಬೆಂಕಿಯು ಸುಡುವುದಿಲ್ಲವೆಂದು ಕಾಣುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಕೆಲ ವಿಷಯಗಳಿವೆ. ಇದರಿಂದ ರೋಮಗಳು ಮಾತ್ರ ಸುಡುತ್ತವೆ. ಆದರೆ ದೀವಟಿಗೆ ಉರಿಸಲು ಪೆಟ್ರೋಲ್ ಇತ್ಯಾದಿ ಸುಲಭವಾಗಿ ಆವಿಯಾಗುವ ಖನಿಜ ತೈಲಗಳನ್ನು ಉಪಯೋಗಿಸಬಾರದು. ನನ್ನ ನಾಸ್ತಿಕ ಮಿತ್ರರೊಬ್ಬರಿಗೆ ಅವರ ಕುಟುಂಬದ ಭೂತವೊಂದು ನಿರಂತರವಾಗಿ ನಿಂದಿಸುತ್ತಿತ್ತು. ಇದಕ್ಕೆ ಕಾರಣ ಅವರು ಭೂತಕ್ಕೆ ನಮಸ್ಕಾರ ಮಾಡುವುದಾಗಲಿ, ಕಾಣಿಕೆ ಕೊಡುವುದಾಗಲಿ ಮಾಡುತ್ತಿರಲಿಲ್ಲ. ಹಾಗಾಗಿ ಇವರು ಈ ಭೂತದ ಪಾತ್ರಿಯ ನಿಂದೆಗೆ ಒಳಗಾಗುತ್ತಿದ್ದರು. ಈ ರೀತಿ ತೊಂದರೆ ಕೊಡುವ ಭೂತಕ್ಕೆ ಪಾಠ ಕಲಿಸಬೇಕೆಂದು ಅವರು ನಿರ್ಧರಿಸಿದರು. ಭೂತದ ಪಾತ್ರಿಗೆ ಕುಡಿಯುವ ಅಭ್ಯಾಸವಿತ್ತು. ಆತನಿಗೆ ಶರಾಬು ಕುಡಿಸಿ ಲಂಚಕೊಟ್ಟು ದರ್ಶನಪಾತ್ರಿ ದೀವಟಿಗೆ ದೀಪದ ಪವಾಡ ಮಾಡುವಾಗ ಆತನ್ನು ಬಿಗಿಯಾಗಿ ಅಪ್ಪಿಕೊಳ್ಳುವಂತೆ ತಿಳಿಸಿದರು. ಪಾತ್ರಿಗೆ ದರ್ಶನ ಬಂದಾಗ ದೀವಟಿಗೆ ಮೈ ಮೇಲೆ ಇಡಲಾರಂಭಿಸಿದರು. ಆಗ ಆತನ ಅಣ್ಣ ಹೋಗಿ ಆತನನ್ನು ಬಿಗಿಯಾಗಿ ಅಪ್ಪಿ ಬಿಟ್ಟ. ಆತ ಕೊಸರಾಡಲೂ ಬಿಡಲಿಲ್ಲ. ಕೆಲ ನಿಮಿಷಗಳ ಬಳಿಕ ದರ್ಶನದ ಪಾತ್ರಿ ಕುಸಿದು ಬಿದ್ದರು. ಮೈಗೆ ಬಿಸಿ ತಾಗಿ ಬೊಕ್ಕೆಯೆದ್ದು ಆತನನ್ನು ಆಸ್ಪತ್ರೆಗೆ ಸೇರಿಸಿದರು. ಈ ಘಟನೆಯ ನಂತರ ಆ ಪಾತ್ರಿ ನನ್ನ ಮಿತ್ರನನ್ನು ಹೀಯಾಳಿಸುವುದನ್ನು ನಿಲ್ಲಿಸಿದ್ದರಂತೆ. ಕೆಂಡ ತುಳಿಯವವರ ಬಗ್ಗೆಯೂ ನಾನು ಈಗಾಗಲೇ ಹೇಳಿದ್ದೇನೆ. ಇದರ ಹಿಂದೆಯೂ ವೈಜ್ಞಾನಿಕ ತಂತ್ರವಿದೆ. ಕೆಂಡದ ಮೇಲೆ ನಡೆಯುವುದು ಮೇಲ್ನೋಟಕ್ಕೆ ಪವಾಡವಾಗಿ ಕಾಣುತ್ತದೆ. ಕತ್ತಲಿರುವಾಗ ನಿಗಿ ನಿಗಿ ಹೊಳೆಯುವ, ಹತ್ತಿರ ಬಂದಾಗ ಬಿಸಿ ತಾಗುವ ಕೆಂಡದ ಮೇಲೆ ನಡೆಯಲು ನಿಜಕ್ಕೂ ಅತಿಮಾನುಷ ಶಕ್ತಿ ಬೇಕೆಂದು ಭಾವಿಸುವುದು ಸಹಜ. ಆದರೆ ಕೆಂಡದ ಮೇಲೆ ನಡೆಯಲು ಇಂತಹ ಅತಿಮಾನುಷ ಶಕ್ತಿ ಬೇಕಾಗಿಲ್ಲ. ಕೆಂಡದ ಮೇಲೆ ನಡೆಯುವುದು ಭೌತಶಾಸ್ತ್ರದ ಒಂದು ನಿಯಮಾನುಸಾರ. ಇದಕ್ಕೆ ಲೈಡನ್ ಫ್ರಾಸ್ಟ್ ಪರಿಣಾಮ ಎನ್ನಲಾಗುತ್ತದೆ.
ಕೆಂಡದ ಮೇಲೆ ನಡೆಯುವಾಗ ಕೆಂಡಗಳಿಗೆ ಕಾಲಿನ ಚರ್ಮ ತಾಗಿದಾಗ, ಚರ್ಮದಲ್ಲಿನ ನೀರು ಆವಿಯಾಗಿ ಕೆಂಡಗಳು ಮತ್ತು ಪಾದದ ಮಧ್ಯೆ ಶಾಖ ನಿರೋಧಕ ಪದರವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಕೆಲವೇ ಸೆಕೆಂಡುಗಳೊಳಗೆ ಕೆಂಡದ ಮೇಲೆ ನಡೆಯುವ ಕಾರಣ ಬಿಸಿ ತಗಲುವ ಮೊದಲೇ ಕೆಂಡವನ್ನು ಹಾದು ಹೋಗಬಹುದು. ಇದಕ್ಕೆ ಯಾವುದೇ ವಿಶೇಷ ಶಕ್ತಿ ಬೇಕಾಗಿಲ್ಲ. ಈ ಪ್ರಯೋಗ ನಡೆಸುವುದು ಬಹಳ ಸುಲಭ. ಆರು ಅಡಿ ಉದ್ದ, ಎರಡು ಅಡಿ ಅಗಲ, 3 ಇಂಚು ಆಳದ ಗುಂಡಿ ಇರಬೇಕು. 2 ಕ್ವಿಂಟಾಲ್‌ನಷ್ಟು ಒಂದೇ ಜಾತಿಗೆ ಸೇರಿದ ಕಟ್ಟಿಗೆ ಅದರಲ್ಲೂ ಮಾವಿನ ಮರದ್ದಾಗಿದ್ದರೆ ಉತ್ತಮ. ನಡೆಯಲು ಉದ್ದೇಶಿಸಿದ ಎರಡು ಗಂಟೆ ಮೊದಲು ಈ ಹೊಂಡದಲ್ಲಿ ಕಟ್ಟಿಗೆಗಳನ್ನು ಸಾಲಾಗಿ ಇಟ್ಟು ಬೆಂಕಿ ಉರಿಸಬೇಕು. ಕಟ್ಟಿಗೆಗಳು ಉರಿದು ಕೆಂಡವಾದ ಮೇಲೆ ಅದರಲ್ಲಿರುವ ದೊಡ್ಡ ದೊಡ್ಡ ತುಂಡುಗಳನ್ನು ತೆಗೆದು ಅದನ್ನು ಸಮತಟ್ಟು ಮಾಡಬೇಕು. ನಂತರ ಉಪ್ಪಿನ ಹರಳುಗಳನ್ನು ಅದರ ಮೇಲೆ ಚಿಮುಕಿಸಿ ಜೋರಾಗಿ ಗಾಳಿ ಬೀಸಬೇಕು. ಬೂದಿ ಎಲ್ಲವೂ ಆರಿ ಹೋಗಿ ಉಪ್ಪಿನ ಹರಳುಗಳು ಸಿಡಿಯುವುದು ನಿಂತ ಮೇಲೆ ಯಾರು ಬೇಕಾದರೂ ಕೆಂಡದ ಮೇಲೆ ನಡೆಯಬಹುದು. ಹೇಗೆ ನಡೆಯುವುದು: ನಡೆಯುವವರು ಒಂದೇ ದಿಕ್ಕಿನಲ್ಲಿ ಮಾತ್ರ ನಡೆಯಬೇಕು. ಇಲ್ಲವಾದಲ್ಲಿ ಎರಡೂ ಕಡೆಗಳಿಂದ ಬಂದು ಮಧ್ಯದಲ್ಲಿ ಪರಸ್ಪರ ಢಿಕ್ಕಿ ಹೊಡೆದು ಬೀಳುವ ಸಾಧ್ಯತೆ ಇದೆ. ಧೈರ್ಯವಾಗಿ ಒಂದೇ ವೇಗದಲ್ಲಿ ನಡೆಯಬೇಕು. ಕೆಂಡವನ್ನು ಆಗಾಗ ಸರಿ ಮಾಡುತ್ತಿರಬೇಕು. ಚಿಕ್ಕ ಮಕ್ಕಳು, ಭಯ ಹೊಂದಿರುವ ಮಹಿಳೆಯರು ಆದಲ್ಲಿ ಅವರನ್ನು ಕೈ ಹಿಡಿದು ನಡೆಸಬೇಕು. ಪ್ಯಾಂಟು ಧರಿಸಿದ್ದಲ್ಲಿ ಮಡಚಿಕೊಳ್ಳಬೇಕು. ಸೀರೆ ಉಟ್ಟಿರುವವರು ಅದನ್ನು ಎತ್ತಿ ಕಟ್ಟಬೇಕು. ನಡೆಯುವ ಕಾರ್ಯ ಕ್ರಮ ಮುಗಿದ ಮೇಲೆ ಕೆಂಡದ ಮೇಲೆ ನೀರು ಸುರಿದು ಆರಿಸ ಬೇಕು. ಬೆಂಕಿ ಹಿಡಿಸಿ ಕೆಂಡಗಳ ಮೇಲೆ ನಡೆಯುವವರೆಗೆ ನಮ್ಮ ಜನಗಳೇ ಬೆಂಕಿಯ ಬಳಿ ಇರಬೇಕು. ಕೆಂಡದೊಂದಿಗೆ ಕಲ್ಲು, ಗಾಜಿನ ಚೂರು, ಲೋಹದ ತುಂಡುಗಳು ಇರಬಾರದು. ನಮಗಾ ಗದವರು ಇಂತಹ ವಸ್ತುಗಳನ್ನು ಹಾಕುವ ಸಾಧ್ಯತೆಯೂ ಇದೆ!
ಕೆಂಡದ ಸುತ್ತಮುತ್ತ ದೂರದಲ್ಲಿ ಜನರನ್ನು ನಿಲ್ಲಿಸಬೇಕು. ನಡೆಯಲು ಇಚ್ಛಿಸುವವರನ್ನು ಸಾಲಾಗಿ ನಿಲ್ಲಿಸಿ ಒಬ್ಬೊಬ್ಬರನ್ನಾಗಿಯೇ ನಡೆಸಬೇಕು. ಕೆಲವೊಮ್ಮೆ ಬೆಂಕಿಯ ಮೇಲೆ ನಡೆಯಲು ಹೋಗಿ ಅನಾಹುತವಾಗುತ್ತದೆ. ಇದೇ ಕಾರಣಕ್ಕಾಗಿ ಆರು ಅಡಿ ಉದ್ದ, ಎರಡು ಅಡಿ ಅಗಲ ಮತ್ತು ಮೂರು ಇಂಚು ಆಳದ ಗುಂಡಿಯಲ್ಲಿ ಕೆಂಡ ಮಾಡುವುದು. ಕಡೂರಿನಲ್ಲಿ ವೈದ್ಯರೊಬ್ಬರು ಕೆಂಡದ ಮೇಲೆ ನಡೆಯುವಾಗ ಕುಸಿದು ಬಿದ್ದು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು. ವಿಶೇಷವೆಂದರೆ ಮಕ್ಕಳ ತಜ್ಞರಾದ ಇವರು ತಮ್ಮ ಮಗುವಿಗೆ ಜ್ವರ ಬಂದಾಗ ಅದು ವಾಸಿಯಾಗಲೆಂದು ಕೆಂಡದ ಮೇಲೆ ನಡೆಯುವ ಹರಕೆ ಹೊತ್ತಿದ್ದರಂತೆ!
ನಾವು ನಮ್ಮ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿಯನ್ನು ಕೆಂಡದ ಮೇಲೆ ನಡೆಸಿದ್ದರೂ ಯಾವುದೇ ಅನಾಹುತವಾಗಿಲ್ಲ. ಓರ್ವ ಮಹಿಳೆ ನೈಲಾನ್ ಸೀರೆ ಧರಿಸಿ ಕೆಂಡ ಹಾಯುವ ವೇಳೆ ಸೀರೆ ಸುಟ್ಟಿತ್ತು. ಇನ್ನೊಮ್ಮೆ ಕೆಂಡ ಮಾಡಲು ಟೈರ್‌ನ ತುಂಡುಗಳನ್ನು ಹಾಕಲಾಗಿತ್ತು. ಅವುಗಳ ಸರಿಗೆಯಿಂದ ಕೆಲವರ ಕಾಲಿಗೆ ಬಿಸಿ ತಾಗಿತ್ತು. ಕೆಲವು ಕಡೆ ಹತ್ತು ಹದಿನೈದು ಬಾರಿ ಕೆಂಡದ ಮೇಲೆ ನಡೆಯುವವರೂ ಇದ್ದಾರೆ. ಕೆಂಡ ನೋಡಿದಾಗಲೇ ಭಯವಾಗುತ್ತದೆ. ಆದರೆ ಒಮ್ಮೆ ಆತ್ಮವಿಶ್ವಾಸ ಮೂಡಿದರೆ ಮತ್ತೆ ನಡೆಯುವುದು ಕಷ್ಟವೇನಲ್ಲ. ಮೂಢನಂಬಿಕೆಗಳನ್ನು ಪ್ರಚಾರ ಮಾಡುವಲ್ಲಿ ಕೆಂಡದ ಮೇಲೆ ನಡೆಯಬೇಕಾದರೆ ಉಪವಾಸವಿರಬೇಕು. ಹಲವು ರೀತಿಯ ವೃತ ಅನುಸರಿಸಬೇಕೆಂದು ಕಟ್ಟಳೆ ವಿಧಿಸಲಾಗುತ್ತದೆ. ಆದರೆ ನಾವು ಮಾಡುವ ಕೆಂಡದ ಮೇಲೆ ಯಾರು ಬೇಕಾದರೂ ನಡೆಯಬಹುದು. ಕೆಂಡದ ಮೇಲೆ ನಡೆಯುವುದು ಹಲವಾರು ಸಂಸ್ಕೃತಿಗಳಿಂದ ಬೆಳೆದು ಬಂದಿದೆ. ಪಾಪುವಾ ನಿವ್‌ಗಿನಿಯಾದಲ್ಲಿ, ಪೆಸಿಫಿಕ್ ಸಾಗರದ ಹಲವಾರು ದ್ವೀಪಗಳಲ್ಲಿ, ಭಾರತದ ಹಲವಾರು ಜಾತಿ ಪಂಗಡಗಳಲ್ಲಿ ಪವಾಡವು ಇಂದಿಗೂ ಪ್ರಚಲಿತ. ಹಾಗಾಗಿ ಇದು ಕೇವಲ ಒಂದು ಜಿಲ್ಲೆ, ಜಾತಿ, ಪ್ರದೇಶಕ್ಕೆ ಮಾತ್ರ ಸೀಮಿತವಾದ ಮೂಢನಂಬಿಕೆ ಎನ್ನಲಾಗದು.