ಜ.22 ರಂದು ಸುಳ್ಯದಲ್ಲಿ ಅರೆ ಭಾಷೆ-ಭಾಷಾ ಸೌಹಾರ್ದ ಸಂಭ್ರಮ
ಮಡಿಕೇರಿ, ಜ.20 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ-ಭಾಷಾ ಸೌಹಾರ್ದ ಸಂಭ್ರಮ ಕಾರ್ಯಕ್ರಮ ಮತ್ತು ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭ ಜ.22 ರಂದು ಸುಳ್ಯದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ನೂತನ ಅಧ್ಯಕ್ಷರಾದ ಪಿ.ಸಿ.ಜಯರಾಮ್, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸುಳ್ಯದ ಶ್ರೀ ದುರ್ಗಾ ಪರಪೇಶ್ವರಿ ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ, ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಂಗಾರ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‍ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎನ್.ಎಸ್. ದೇವಿಪ್ರಸಾದ್, ನಿಕಟಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಸುಳ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಕುರಿತು ಸುಳ್ಯದ ಅಕ್ಷರ ದಾಸೋಹದ ಸಹಾಯಕ ನಿದೇರ್ಶಕರಾದ ಚಂದ್ರಶೇಖರ್ ಪೇರಾಲು ಉಪನ್ಯಾಸ ನೀಡಲಿದ್ದಾರೆ. ಬಹು ಭಾಷಾ ಕವಿಗೋಷ್ಟಿಯಲ್ಲಿ, ಅರೆಭಾಷೆಯಲ್ಲಿ ಸುಳ್ಯದ ಹಿರಿಯ ಕವಯತ್ರಿಯಾದ ಚೆಟ್ಟಿಮಾಡ ಜಯಮ್ಮ ಹಾಗೂ ಸುಳ್ಯದ ಗಾಯಕರಾದ ಶಶಿಧರ ಮಾವಿನಕಟ್ಟೆ, ಕನ್ನಡ ಭಾಷೆಯಲ್ಲಿ ಬಾಬುಲ್ ಬೆಟ್ಟು ಗಾಯಕರಾದ ರಮ್ಯ ದಿಲೀಪ್, ಕೊಡವ ಭಾಷೆಯಲ್ಲಿ ಸಾಹಿತಿ, ಪತ್ರಕರ್ತ ಹಾಗೂ ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಚಟ್ಟಂಗಡ ರವಿ ಸುಬ್ಬಯ್ಯ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಬಶೀರ್ ಅಹಮ್ಮದ್ ಬ್ಯಾರಿ ಭಾಷೆಯಲ್ಲಿ, ತುಳು ಭಾಷೆಯಲ್ಲಿ ಕಲಾಕಂಠಶ್ರೀ ಪುರಸ್ಕೃತರಾದ ರಮೇಶ್ ಮೆಟ್ಟಿನಡ್ಕ ಹಾಗೂ ಕೊಂಕಣಿಯಲ್ಲಿ ಸುಳ್ಯದ ಕಲಾವಿದರಾದ ಕೈಲಾಸ್ ಶೆಣ್ಯೆ ಕಾವ್ಯ ವಾಚನ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಅರೆ ಭಾಷೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಯರಾಮ್ ಮಾಹಿತಿ ನೀಡಿದರು.
ಮುಂದಿನ ಯೋಜನೆ: ಮುಂದಿನ ದಿನಗಳಲ್ಲಿ ಅರೆ ಭಾಷೆ ಸಾಹಿತ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕಗಳ ಪ್ರಕಟಣೆ, ಪದಕೋಶ, ಭಾಷಾಂತರ, ಡಾಕ್ಯುಮೆಂಟ್ರಿ ಇತ್ಯಾದಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅರೆಭಾಷೆ ಸಾಹಿತಿಗಳಾಗಿ ವಿಚಾರ ಸಂಕಿರಣ, ಸಾಹಿತ್ಯ ಶಿಬಿರ, ಕವಿಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಯೋಚನೆಗಳಿವೆ ಎಂದು ಅವರು ಹೇಳಿದರು.
ಹಾಗೆಯೇ ಪುಸ್ತಕ ಬಹುಮಾನಗಳು, ತ್ರೈಮಾಸಿಕ ಸಂಚಿಕೆ ಪ್ರಕಟಣೆ ಮುಖ್ಯವಾಗಿ ಅರೆಭಾಷೆ ಸಂಸ್ಕೃತಿಯನ್ನು ದಾಖಲಿಸುವ ಚಿಂತನೆ ಇದೆ. ಹಿರಿಯರು ಆಚರಿಸಿಕೊಂಡು ಬಂದಿರುವ ಐನ್‍ಮನೆ ಸಂಸ್ಕೃತಿಗಳ ಬಗ್ಗೆ ಕಾರ್ಯಕ್ರಮ, ಅರೆಭಾಷೆ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಮೆರವಣಿಗೆ, ಅರೆಭಾಷೆ ನಾಟಕ, ಅರೆಭಾಷೆ ಹಾಡು ನೃತ್ಯದ ಜತೆಗೆ ಅರೆಭಾಷೆ ಯಕ್ಷಗಾನ ತಂಡ ರಚಿಸುವ ಯೋಜನೆಯನ್ನು ಹಾಕಿಕೊಳ್ಳಲಾಗುವುದು. ಅರೆ ಭಾಷೆ ನಾಟಕ ತರಬೇತಿ, ನೃತ್ಯ ತರಬೇತಿ, ಅರೆಭಾಷೆ ವೇಷ ಭೂಷಣ, ವಾದ್ಯ ಪರಿಕರ ವಿತರಣೆ, ಅರೆಭಾಷೆಯ ಜಾನಪದ ಸಂಗೀತ ಉತ್ಸವ, ನೃತ್ಯೋತ್ಸವಗಳನ್ನು ಆಯೋಜಿಸಲಾಗುವುದು ಎಂದರು.
ಪುಸ್ತಕಗಳ ಮುದ್ರಣ, ಪ್ರಶಸ್ತಿ ಪ್ರಧಾನ ಸಮಾರಂಭ, ಅರೆಭಾಷೆ ಬರಹಗಾರರ, ಕಲಾವಿದರ ಮತ್ತು ಚಿತ್ರಕಲಾ ಜಾನಪದ ಸಮಾವೇಶ, ಅರೆಭಾಷೆ ಚಿಂತನ ಹಾಗೂ ತಜ್ಞರ ತರಬೇತಿ ಶಿಬಿರದಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಮಹತ್ವಾಕಾಂಕ್ಷೆಯ “ಅರೆಭಾಷೆ ಸಂಸ್ಕೃತಿ ಗ್ರಾಮ ನಿರ್ಮಾಣ”ದ ಯೋಜನೆಗಾಗಿ ಸರಕಾರದಿಂದ ಭೂ ಮಂಜೂರಾತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಜಯರಾಮ್ ತಿಳಿಸಿದರು. ಅರೆಭಾಷೆ ಸಾಹಿತ್ಯ ಸಮ್ಮೇಳನ, ಅರೆಭಾಷೆ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನೂ ನಡೆಸಲಾಗುವುದು ಎಂದ ಅವರು ಅರೆಭಾಷೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಪ್ರಯತ್ನಗಳೂ ನಡೆಯಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ದೇವರಾಜ್ ಬೇಕಲ್, ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್, ಕುಂಬಗೌಡನ ಪ್ರಸನ್ನ ಹಾಗೂ ಕಾನೆಹಿತ್ಲು ಮೊಣ್ಣಪ್ಪ ಉಪಸ್ಥಿತರಿದ್ದರು.