ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ
ಈ ಹೊತ್ತಿನ ಹೊತ್ತಿಗೆ
ದಲಿತ ಸಾಹಿತ್ಯವೆಂದರೆ ಆಕ್ರೋಶ, ನೋವು, ಬಂಡಾಯ ಇವಿಷ್ಟೇ ಎಂದು ತಿಳಿದುಕೊಂಡಿರುವ ವರ್ಗವಿದೆ. ಅದನ್ನು ಸಾಹಿತ್ಯದ ಪ್ರಾಕಾರದಲ್ಲಿ ಸೇರಿಸಿಕೊಳ್ಳಲು ಹಿಂಜರಿಯುವ ಮಡಿ ಮೈಲಿಗೆ ವಿಮರ್ಶಕರು ನಮ್ಮ ನಡುವಿದ್ದಾರೆ. ಇದೇ ಸಂದರ್ಭದಲ್ಲಿ ದಲಿತ ಸಾಹಿತ್ಯವನ್ನು ಬರೆಯಬೇಕಾದರೆ ದಲಿತನಾಗಿಯೇ ಇರಬೇಕೆಂದೇನಲ್ಲ ಎಂದು ನಂಬಿದವರೂ ಇದ್ದಾರೆ. ಕುದುರೆಯ ಬಗ್ಗೆ ಬರೆಯಬೇಕಾದರೆ ನಾವು ಕುದುರೆಯಾಗಬೇಕೇ? ಎಂದು ಪ್ರಶ್ನಿಸಿದ ಹಿರಿಯ ಲೇಖಕರಿದ್ದಾರೆ. ಕುದುರೆಯ ಬಗ್ಗೆ ಬರೆಯುವುದು ಎಂದರೆ ಏನು? ಅದರ ಬಾಹ.್ಯ ಆಕೃತಿಯನ್ನು, ಸೌಂದರ್ಯವನ್ನು, ಮಾಂಸಖಂಡಗಳನ್ನು, ಹೊರಗಿನ ಗಾಯಗಳನ್ನು ಒಬ್ಬ ಬರೆಯಬಲ್ಲ. ಆದರೆ ಅದರ ಒಳಗಿನ ದಣಿವನ್ನು ಅನುಭವಿಸಿ ಬರೆಯಬೇಕಾದರೆ ಆತ ಕುದುರೆಯಾಗುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’ದ ಕುರಿತಂತೆ ಹಿಂದಿಯ ಖ್ಯಾತ ಲೇಖಕ ಓಮ್ ಪ್ರಕಾಶ್ ವಾಲ್ಮೀಕಿ ಚರ್ಚಿಸಿದ್ದಾರೆ. ಅದನ್ನು ಆರ್. ಪಿ. ಹೆಗಡೆಯವರು ಕನ್ನಡಕ್ಕೆ ಇಳಿಸಿದ್ದಾರೆ. ದಲಿತ ಸಾಹಿತ್ಯಕ್ಕೆ ಬೇರೆಯದೇ ಆದ ಸೌಂದರ್ಯ ಶಾಸ್ತ್ರದ ಅವಶ್ಯಕತೆ ಯಾಕೆ ಇದೆ ಎನ್ನುವ ಮಹತ್ವದ ಪ್ರಶ್ನೆಯನ್ನು ಈ ಕೃತಿ ಚರ್ಚಿಸುತ್ತದೆ. ಹಿಂದಿಯಲ್ಲಿ ದಲಿತ ಸಾಹಿತ್ಯದ ಚರ್ಚೆ ಮತ್ತು ಅದರ ಬಗ್ಗೆ ಎದ್ದ ವಿವಾದಗಳು ಹಿಂದಿ ಸಾಹಿತ್ಯವನ್ನೇ ಕಟಕಟೆಯಲ್ಲಿ ನಿಲ್ಲಿಸಿವೆ. ಒಂದು ಕಡೆ ಹಿಂದಿ ಸಾಹಿತ್ಯದ ಮಠಾಧೀಶರು, ಸಮೀಕ್ಷಕರು, ವಿಮರ್ಶಕರು ದಲಿತ ಸಾಹಿತ್ಯದ ಅಸ್ತಿತ್ವವನ್ನೇ ನಿರಾಕರಿಸುತ್ತಿದ್ದಾರೆ. ಮತ್ತೆ ಕೆಲವರು ದಲಿತ ಸಾಹಿತ್ಯಕ್ಕೆ ದಲಿತರಾಗಿರಬೇಕಾದ ಆವಶ್ಯಕತೆಯೇನೂ ಇಲ್ಲವೆಂದು ಸಿದ್ಧಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವೆಲ್ಲವನ್ನು ಇಟ್ಟುಕೊಂಡು ವಾಲ್ಮೀಕಿ ಅವರು, ದಲಿತ ಸಾಹಿತ್ಯವನ್ನು ನೋಡುವ ಹೊಸ ದೃಷ್ಟಿಯೊಂದರ ಅಗತ್ಯವನ್ನು ಹೇಳುತ್ತಾರೆ. ಇದು ಕೇವಲ ಹಿಂದಿಗಷ್ಟೇ ಸೀಮಿತವೇನೂ ಅಲ್ಲ. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿ ಹೊರಬಂದಾಗ ಅದನ್ನು ಹೇಗೆ ಸ್ವೀಕರಿಸಬೇಕು ಎನ್ನುವುದರ ಕುರಿತಂತೆ ಪ್ರಗತಿಪರ ಲೇಖಕರೇ ಗೊಂದಲದಲ್ಲಿದ್ದರು. ಒಡಲಾಳವನ್ನು ಸ್ವೀಕರಿಸಿದಷ್ಟು ಸರಾಗವಾಗಿ ಕುಸುಮಬಾಲೆಯನ್ನು ಸ್ವೀಕರಿಸಲು ಅವರು ಹಿಂಜರಿದರು. ಈ ಹಿಂಜರಿಕೆಯ ಮುಖ್ಯ ಕಾರಣ, ಕುಸುಮಬಾಲೆಯೊಳಗಿನ ಕತೆ ಹೇಳುವ ರೀತಿಯೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಾಗಿರುವುದು. ಭಾಷೆ, ಲಯ, ಪ್ರಕಾರ ಎಲ್ಲವೂ ಕನ್ನಡ ಸಾಹಿತ್ಯ ಪರಂಪರೆಗೆ ಸವಾಲು ಒಡ್ಡುವಂತಹದು. ದಲಿತ ಸಾಹಿತ್ಯ ಸೌಂದರ್ಯ ಶಾಸ್ತ್ರ ಕೃತಿ ದಲಿತ ಸಾಹಿತ್ಯ ಮತ್ತು ಬದುಕಿನ ಬೇರೆ ಬೇರೆ ನೆಲೆಗಳನ್ನು ಇಟ್ಟುಕೊಂಡು ಚರ್ಚಿಸುತ್ತದೆ.ದಲಿತ ಸಾಹಿತ್ಯದ ಪ್ರಸ್ತುತತೆ, ದಲಿತರ ನೋವಿನ ಅಭಿವ್ಯಕ್ತಿ, ವೈಚಾರಿಕತೆ ಮತ್ತು ದಾರ್ಶನಿಕತೆ, ರಾಜಕೀಯ, ಆರ್ಥಿಕ ಸಿದ್ಧಾಂತಗಳನ್ನು ಇಲ್ಲಿ ನಿಕಷಕ್ಕೊಡ್ಡಲಾಗಿದೆ. ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 128. ಮುಖಬೆಲೆ 100 ರೂಪಾಯಿ.