ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಯುವಜನರ ಸಂಖ್ಯೆ ಶೇ.40ಕ್ಕೇರಿಸುವುದು ಸರ್ಕಾರದ ಗುರಿ: ಸಿದ್ಧರಾಮಯ್ಯ
ಮೈಸೂರು,ಜ.24: ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಯುವಜನರ ಸಂಖ್ಯೆ ಶೇ.26ರಷ್ಟಿದೆ. ಆ ಪ್ರಮಾಣವನ್ನು ಶೇ.40ಕ್ಕೇರಿಸುವುದು ಸರ್ಕಾರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅವರು, ಅಮೆರಿಕಾದಲ್ಲಿ ಶೇ.80 ಯುವಜನರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇತರೆ ಮುಂದುವರೆದ ದೇಶಗಳಲ್ಲಿ ಕೂಡ ಶೇ.50,60 ಹಾಗೂ 70 ಪ್ರಮಾಣ ಇದ್ದಾರೆ. ಭಾರತದಲ್ಲಿ ಶೇ.24 ಇದೆ. ಕರ್ನಾಟಕದಲ್ಲಿ ಶೇ.26ರಷ್ಟು ಯುವಜನರು ಉನ್ನತ ವ್ಯಾಸಂಗ ಕಲಿಯುತ್ತಿದ್ದಾರೆ ಎಂದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು 45 ಕೋಟಿ ರೂ. ಹಾಗೂ ಕಾಲೇಜಿನ ವಿದ್ಯಾರ್ಥಿನಿಲಯವನ್ನು 33.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಮೊದಲ ಹಂತವಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹೊಸ ಕಾಲೇಜು ನಿರ್ಮಾಣದಲ್ಲಿ ಶಾಸಕ ವಾಸು, ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪರಿಶ್ರಮವೂ ಇದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಎಲರಿಗೂ ಶಿಕ್ಷಣ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ. ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ 52.88 ಲಕ್ಷ ಬಾಲಕರು ಕಲಿಯುತ್ತಿದ್ದರೆ, 48.79 ಲಕ್ಷ ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅಂದರೆ ಕೇವಲ ಶೇ.1.1 ಮಾತ್ರ ವ್ಯತ್ಯಾಸ ಇದೆ. ಅದು 50:50ಕ್ಕೆ ಏರಬೇಕು ಎಂದು ಹೇಳಿದರು.
ಸರ್ಕಾರದಿಂದ ಮೈಸೂರಿಗೆ ವಿವಿಧ ಅಭಿವೃದ್ಧಿಗಾಗಿ ಒಟ್ಟು 2052 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಲ್ಲಿ ಶಾಸಕ ವಾಸು ಅವರ ಕ್ಷೇತ್ರಕ್ಕೇ 1500 ಕೋಟಿ ರೂ. ದೊರೆತಿದೆ. ನಾನು ಇಲ್ಲಿಯೇ ಪ್ರೌಢಶಾಲೆಯಿಂದ ಕಾನೂನು ಪದವಿವರೆಗೂ ಕಲಿತಿದ್ದೇನೆ. ಕಾನೂನು ಮೇಷ್ಟ್ರಾಗಿಯೂ ಮೂರು ವರ್ಷ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಮೈಸೂರಿನ ಮೇಲೆ ವಿಶೇಷ ಪ್ರೀತಿ. ಹಾಗಂತ ಬೇರೆ ಕ್ಷೇತ್ರಗಳನ್ನೂ ನಿರ್ಲಕ್ಷ್ಯ ಮಾಡಿಲ್ಲ ಎಂದರು.
ಸಮುದಾಯ ಭವನ: ಈ ಕಾಲೇಜಿನ ಆವರಣದಲ್ಲಿರುವ ಜಾಗದಲ್ಲಿ ಪಡುವಾರಹಳ್ಳಿಯ ಜನರ ಉಪಯೋಗಕ್ಕೆ ಜಾಗ ಕೇಳಿದ್ದರು. ಆದರೆ, ಸರ್ಕಾರದಿಂದಲೇ ಇಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಅದನ್ನು ಎಲ್ಲ ಸಮುದಾಯದವರಿಗೂ ಕಾರ್ಯಕ್ರಮಗಳಿಗೆ ಒದಗಿಸಲಾಗುವುದು ಹೇಳಿದರು. ಒಟ್ಟಾರೆ ಮೈಸೂರನ್ನು ಸ್ವಚ್ಛ, ಉದ್ಯಾನ, ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರವಾಗಿಯೇ ಉಳಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಾಸು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ಶಾಸಕರಾದ ಎಚ್.ಪಿ.ಮಂಜುನಾಥ್, ಕಳಲೆ ಎನ್.ಕೇಶವಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಡಿ.ಧ್ರುವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮೈಸೂರು ಪೆಯಿಂಟ್ಸ್ ಮತ್ತು ವಾರ್ನಿಷ್ ಸಂಸ್ಥೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್, ಮಾಜಿ ಶಾಸಕ ಸತ್ಯನಾರಾಯಣ, ಜಿಲ್ಲಾಧಿಕಾರಿ ಡಿ.ರಂದೀಪ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಜೆ.ಪೂರ್ಣಚಂದ್ರ ತೇಜಸ್ವಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೆ.ರಾಮಯ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ಡಾ.ಬಿ.ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ನಗರಾಧ್ಯಕ್ಷೆ ರಾಧಾಮಣಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಡಾ.ಟಿ.ಎಸ್.ಸುಜಾತ, ಮುಡಾ ಸದಸ್ಯ ಶಿವಮಲ್ಲು, ಸುರೇಶ್ ಗೌಡ, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜುಗಳ ಪ್ರಾಂಶಪಾಲರಾದ ಕ್ರಮವಾಗಿ ಡಾ.ಚನ್ನಬಸವೇಗೌಡ, ಡಾ.ಅಣ್ಣೇಗೌಡ, ಕಾಲೇಜು ಕಟ್ಟಡ ವಾಸ್ತುತಜ್ಞ ಉದಯ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ನರಸೇಗೌಡ, ಮೆಲ್ಲಹಳ್ಳಿ ಮಹದೇವ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈಸೂರು ಕೃಷ್ಣಮೂರ್ತಿ ತಂಡ ನಾಡಗೀತೆ ಹಾಡಿದರು.
ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಯುವಜನರು ಜಾಗೃತರಾಗಬೇಕು. ವಿಶ್ವಮಾನವ ಪ್ರಜ್ಞೆ ಮೂಡಿಸಿಕೊಳ್ಳಬೇಕು.
-ಸಿದ್ದರಾಮಯ್ಯ