ವಿದ್ಯಾರ್ಥಿನಿ ಝೈಬುನ್ನಿಸಾ ಆತ್ಮಹತ್ಯೆ ಪ್ರಕರಣ: ವಸತಿ ಶಾಲೆಯ ಶಿಕ್ಷಕನ ವಿರುದ್ಧ ದೂರು
ಆರೋಪಿಯ ವಿರುದ್ಧ 33/2018 ಐಪಿಸಿ ಸೆಕ್ಷನ್ 306ರಡಿ ಪ್ರಕರಣ ದಾಖಲಿಸಿದ ಕೆ.ಆರ್.ಪೇಟೆ ಪೊಲೀಸರು
ಮಂಗಳೂರು, ಜ.23: ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯ 8ನೆ ತರಗತಿಯ ವಿದ್ಯಾರ್ಥಿನಿ ಝೈಬುನ್ನಿಸಾ ಆತ್ಮಹತ್ಯೆಗೆ ಶಾಲೆಯಲ್ಲಿನ ಅಧ್ಯಾಪಕ ರವಿ ಎನ್.ಎಸ್. ಎಂಬಾತನೇ ಕಾರಣ ಎಂದು ಕೆ.ಆರ್.ಪೇಟೆ (ಟೌನ್) ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿಯ ಮಾವ ಹಾಗೂ ಉಪ್ಪಿನಂಗಡಿ ನಿವಾಸಿ ಹಸೈನಾರ್ ಆರೋಪಿಸಿದ್ದಾರೆ.
ನವೋದಯ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಝೈಬುನ್ನಿಸಾಳಿಗೆ ಅಲ್ಲಿನ ಆಂಗ್ಲ ವಿಷಯದ ಅಧ್ಯಾಪಕ ರವಿ.ಎನ್.ಎಸ್. ಕಳೆದ ಮೂರು ತಿಂಗಳುಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಆಕೆಗೆ ಜಾತಿ ನಿಂದನೆ ಮಾಡುತ್ತಿದ್ದ. ಅಲ್ಲದೆ ಹೀಯಾಳಿಸಿ ವಿದ್ಯಾರ್ಥಿನಿಯರ ಎದುರೇ ಅವಮಾನ ಮಾಡುತ್ತಿದ್ದ. ಕೂದಲಿನ ಜುಟ್ಟು ಹಿಡಿದು ಹೊರಗೆ ತಂದು ಗೋಡೆಗೆ ಬಡಿಯುತ್ತಿ ದ್ದ ಎಂದು ಝೈಬುನ್ನೀಸಾ ತನ್ನ ತಾಯಿಯಲ್ಲಿ ಹೇಳಿಕೊಂಡಿದ್ದಾಳೆ ಎಂದು ಹಸೈನಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ಝೈಬುನ್ನೀಸಾ ಕೆಲವು ದಿನಗಳ ಹಿಂದೆ ತಾಯಿಗೆ ಫೋನ್ ಮಾಡಿ ತನ್ನನ್ನು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಈ ಸಂದರ್ಭ ತಾಯಿ ಆಕೆಗೆ ಬುದ್ದಿವಾದ ಹೇಳಿದ್ದಾಳೆ. ಬುಧವಾರವೂ ಸಂಜೆ 4:30ಕ್ಕೆ ತಾಯಿಗೆ ಫೋನ್ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದು, ಅದಕ್ಕೆ ಬರುವುದಾಗಿ ತಾಯಿ ಭರವಸೆ ನೀಡಿದ್ದರು. ಆದರೆ. ಸಂಜೆ 5:30ರ ಹೊತ್ತಿಗೆ ಅದೇ ಶಾಲೆಯಿಂದ ವಿದ್ಯಾರ್ಥಿನಿಯೋರ್ವಳು ಕರೆ ಮಾಡಿ ಝೈಬುನ್ನಿಸಾಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾಳೆ. ಇದನ್ನು ಖಚಿತಪಡಿಸಲು ಶಾಲೆಗೆ ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದಾಗ ಅಧ್ಯಾಪಕ ರವಿಯು ವಿಷಯವನ್ನು ಮನೆಯವರಿಗೆ ಅಥವಾ ಪೊಲೀಸರಿಗೆ ತಿಳಿಸದೇ ಝೈಬುನ್ನಿಸಾಳನ್ನು ದ್ವಿಚಕ್ರ ವಾಹನದಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಸೈನಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಹಸೈನಾರ್ ನೀಡಿದ ದೂರಿನಂತೆ ಆರೋಪಿಯ ವಿರುದ್ಧ 33/2018 ಐಪಿಸಿ ಸೆಕ್ಷನ್ 306ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಕೆ.ಆರ್. ಪೇಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹಸೈನಾರ್, ಬುಧವಾರ ಸಂಜೆ ಸುಮಾರು 7 ಗಂಟೆಗೆ ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ದೊರೆತ ಕೂಡಲೇ ನಾವು ಉಪ್ಪಿನಂಗಡಿಯ ಮನೆಯಿಂದ ಕೆ.ಆರ್.ಪೇಟೆಗೆ ಹೊರಟಿದ್ದೇವೆ. ರಾತ್ರಿ ಸುಮಾರು 1:45ಕ್ಕೆ ಕೆ.ಆರ್.ಪೇಟೆ ತಲುಪಿದ್ದೇವೆ. ಇದೀಗ ಝೈಬುನ್ನೀಸಾಳ ಮೃತದೇಹವು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿದೆ ಎಂದು ತಿಳಿಸಿದ್ದಾರೆ.
ಇಬ್ರಾಹೀಂ ಅವರಿಗೆ ಮೂವರು ಮಕ್ಕಳು. ಝೆಬುನ್ನಿಸಾ ಹಿರಿಯಳಾಗಿದ್ದರೆ, ಸಹೋದರ ನಿಹಾಲ್ ಮತ್ತು ಸಹೋದರಿ ಫಾತಿಮಾ ನಿಹಾಲ ಅವಳಿ ಮಕ್ಕಳು. ಈ ಮೂವರೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿರುವ ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ರಾಹೀಂ ಮೂಲತಃ ಶಿವಮೊಗ್ಗದವರಾಗಿದ್ದರೆ, ಅವರ ಪತ್ನಿ ಉಪ್ಪಿನಂಗಡಿಯವರು.
ಪಿಎಫ್‌ಐ ಖಂಡನೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ನವೋದಯ ಅಲ್ಪಸಂಖ್ಯಾತ ವಸತಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಝೈಬುನ್ನಿಸಾ ಸಾವು ಆತ್ಮಹತ್ಯೆಯಲ್ಲ. ಅದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂದು ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪ್ರಕರಣವನ್ನು ಉನ್ನತ ತನಿಖೆಗೆ ಆಗ್ರಹಿಸಿದೆ. ಅಲ್ಲದೆ, ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ಧನವನ್ನು ನೀಡುವಂತೆಯೂ ಒತ್ತಾಯಿಸಿದೆ.
ಕಳೆದ ಮೂರು ತಿಂಗಳಿನಿಂದ ಇಂಗ್ಲಿಷ್ ಶಿಕ್ಷಕ ರವಿ ಎಂಬವನು ವಿದ್ಯಾರ್ಥಿನಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದಾನೆ, ಝೈಬುನ್ನಿಸಾ ಈ ಬಗ್ಗೆ ಪೋಷಕರಲ್ಲಿ ದೂರು ನೀಡಿದ್ದಾಳೆ. ಆದ್ದರಿಂದ ಸರಕಾರ ಸತ್ಯಾಂಶವನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅದು ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಾಗಿದೆ. ವಿದ್ಯಾಸಂಸ್ಥೆಗಳೇ ವಿದ್ಯಾರ್ಥಿನಿಗಳ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದೆ. ಸರಕಾರ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೊಸ ಕಾನೂನು ಜಾರಿಗೊಳಿಸಬೇಕಾಗಿದೆ ಎಂದು ಸಿಎಫ್‌ಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಪಿ.ಜೆ. ಒತ್ತಾಯಿಸಿದ್ದಾರೆ.