ಝೈಬುನ್ನಿಸಾ ಸಾವು ಪ್ರಕರಣ : ಡಿವೈಎಸ್ಪಿಯಿಂದ ತನಿಖೆ
ಮಂಡ್ಯ, ಜ.27: ಕೆ.ಆರ್.ಪೇಟೆ ನವೋದಯ ಅಲ್ಪಸಂಖ್ಯಾತರ ವಸತಿಶಾಲೆ 8ನೆ ತರಗತಿ ವಿದ್ಯಾರ್ಥಿನಿ ಝೈಬುನ್ನಿಸಾ ಸಾವಿನ ಪ್ರಕರಣದ ತನಿಖೆಯನ್ನು ನಾಗಮಂಗಲ ಡಿವೈಎಸ್ಪಿಗೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕ ಎನ್.ಎಸ್.ರವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ ಎಂದರು.
ಕೆ.ಆರ್.ಪೇಟೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ಆದರೆ, ವಿದ್ಯಾರ್ಥಿನಿ ಪೋಷಕರು ಒತ್ತಾಯದ ಮೇರೆಗೆ ನಾಗಮಂಗಲ ಡಿವೈಎಸ್ಪಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಗಣರಾಜ್ಯೋತ್ಸವ ಸಂಬಂಧ ತಾಲೀಮಿನ ವಿಚಾರದಲ್ಲಿ ನಿಂದಿಸಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ಕಳೆದ ಮೂರು ತಿಂಗಳಿನಿಂದಲೂ ವಿದ್ಯಾರ್ಥಿನಿಗೆ ರವಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಆಕೆ ಈ ಬಗ್ಗೆ ತಮಗೆ ತಿಳಿಸಿದ್ದಾಳೆ. ಸಾವಿಗೆ ರವಿಯೇ ಕಾರಣವೆಂದು ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಪೋಷಕರ ಕೋರಿಕೆಯಂತೆ ಮೈಸೂರಿನಲ್ಲಿ ಶವ ಪರೀಕ್ಷೆ ನಡೆಸಿದ್ದೇವೆ. ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದೇವೆ. ವಿದ್ಯಾರ್ಥಿನಿ ಪೋಷಕರು ಬಡವರಾದ್ದರಿಂದ ಸರಕಾರ ಮತ್ತು ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.