‘ಮಿಡ್‌ಬ್ರೈನ್ ಕ್ರಿಯಾಶೀಲ’ವೆಂಬ ಮೋಸದ ಜಾಲ!
ನರೇಂದ್ರ ನಾಯಕ್ ಜೀವನ ಕಥನ
ಭಾಗ 30
ಮಧ್ಯ ಮೆದುಳು ಮನುಷ್ಯ ಸೇರಿದಂತೆ ಬಹುತೇಕ ಜೀವಜಂತುಗಳಲ್ಲಿಯೂ ಸಾಮಾನ್ಯ. ಆದರೆ ಅದನ್ನು ಉತ್ತೇಜಿಸಲಾಗುವುದು ಎಂಬುದು ಮೂರ್ಖತನದ ಪರಮಾವಧಿ. ಕಲಿಕೆ ಎನ್ನುವುದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಆದರೆ ಕಣ್ಣಿಗೆ ಬಟ್ಟೆ ಕಟ್ಟಿ ಓದುವುದು, ಬರೆಯಲಾಗುತ್ತದೆ ಎಂಬ ಪ್ರಕ್ರಿಯೆ ಮೋಸದಾಟ. ಕಣ್ಣಿನ ಅಕ್ಷಿಪಟಲದ ಮೇಲೆ ಸೂರ್ಯನ ಕಿರಣಗಳು ಬೀಳದಿದ್ದರೆ ಕಣ್ಣಿಗೆ ಏನೂ ಕಾಣಿಸಿಕೊಳ್ಳುವುದು ಅಸಾಧ್ಯ. ಈ ರೀತಿ ಕಣ್ಣಿಗೆ ಬಟ್ಟೆ ಕಟ್ಟಿ ಮೂಗಿನ ಅಥವಾ ಕಣ್ಣಿನ ನೇರಕ್ಕೆ ಪುಸ್ತಕ ಹಿಡಿದು ಮಕ್ಕಳನ್ನು ಓದಲು ಉತ್ತೇಜಿಸುವ ಪ್ರಕ್ರಿಯೆ ಕೇವಲ ಒಂದು ಟ್ರಿಕ್ಸ್.
ನಿಮ್ಮ ಮಗು ಇತರರಿಂದ ಭಿನ್ನ ಮತ್ತು ವಿಶಿಷ್ಟ ವ್ಯಕ್ತಿಯಾಗಬೇಕೇ ಎಂಬ ಒಕ್ಕಣೆಯೊಂದಿಗೆ ಮಕ್ಕಳನ್ನು ಶೋಷಣೆಗೆ ಗುರಿಪಡಿಸುವ ಜಾಲ ದೇಶಾದ್ಯಂತ ಹಿಂದೆ ಸುದ್ದಿ ಮಾಡಿತ್ತು. ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತೇವೆಂದು ಹೇಳುವ ಇಂತಹ ಮೋಸದ ಜಾಲಗಳು ದುಡ್ಡು ಮಾಡುವ ಕುತಂತ್ರವೇ ಹೊರತು ಇದರಿಂದ ಮಕ್ಕಳ ಜ್ಞಾನ ಹೆಚ್ಚಾಗದು. ಬದಲಿಗೆ ಇದರಿಂದ ಮಕ್ಕಳ ಶೋಷಣೆಯೇ ಅಧಿಕ. ಇದರ ವಿರುದ್ಧ ಹೋರಾಟ ನಡೆಸಿದಷ್ಟೂ ಈ ಜಾಲಗಳು ಹೊಸ ಹೆಸರು, ವಿಧಾನ, ಶೈಲಿಗಳಲ್ಲಿ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಮಕ್ಕಳ ಜ್ಞಾನ, ಬುದ್ಧಿಮತ್ತೆಯನ್ನು ಚುರುಕುಗೊಳಿಸುತ್ತೇವೆಂದು ಹೇಳುವ ಈ ಮೋಸದ ಜಾಲದ ಬಗ್ಗೆ ಪೋಷಕರು ಜಾಗರೂಕತೆ ವಹಿಸಬೇಕಾಗಿದೆ.
ಇತ್ತೀಚೆಗೆ ಅಂದರೆ ಕಳೆದ ಆಗಸ್ಟ್ ತಿಂಗಳ ವೇಳೆಗೆ ಪುತ್ತೂರಿನಲ್ಲಿ ಒಂದು ಸಂಸ್ಥೆ ಈ ಬಗ್ಗೆ ಜಾಹೀರಾತು ನೀಡಿ ಜನರನ್ನು ಮೋಸಗೊಳಿಸಲು ಸಿದ್ಧವಾಗಿತ್ತು. ಈ ಬಗ್ಗೆ ಕರ್ನಾಟಕ ವೈದ್ಯಕೀಯ ಸಂಘ, ಗ್ರಾಹಕ ವೇದಿಕೆ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಗೂ ದೂರು ನೀಡಲಾಯಿತು. ಈ ಬಗ್ಗೆ ಸೆಪ್ಟಂಬರ್‌ನಲ್ಲಿ ವೈಜ್ಞಾನಿಕ ತಂಡವೊಂದು ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅಕ್ಟೋಬರ್‌ನಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ವರದಿಯನ್ನು ನೀಡಿತ್ತು. ಡಿಡಿಪಿಐ ಕೂಡ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರವನ್ನು ಬರೆದಿದ್ದರು. ಒಟ್ಟಿನಲ್ಲಿ ಈ ಬಗ್ಗೆ ಸುದೀರ್ಘವಾದ ಹೋರಾಟವನ್ನೇ ಮಾಡಬೇಕಾಯಿತು. ಮಕ್ಕಳು ಕಣ್ಣಿಗೆ ಪಟ್ಟಿ ಧರಿಸಿ ಏನನ್ನೂ ಮಾಡಬಲ್ಲರು ಎಂಬ ಹೇಳಿಕೆಯೊಂದಿಗೆ ಈ ಮೋಸದ ಜಾಲಗಳು ಕಾರ್ಯ ನಿರ್ವಹಿಸುತ್ತಿವೆ. ಇದು ಒಂದು ರೀತಿಯಲ್ಲಿ ಮಕ್ಕಳಿಗೆ ನೀಡುವ ಶೋಷಣೆ. ಮಿಡ್‌ಬ್ರೈನ್ ಆ್ಯಕ್ಟಿವೇಶನ್ (ಮಧ್ಯ ಮೆದುಳನ್ನು ಸಕ್ರಿಯಗೊಳಿಸುವುದು) ಎಂಬ ಹೆಸರಿನಲ್ಲಿ ಎರಡು ವರ್ಷಗಳ ಹಿಂದೆ ದೇಶಾದ್ಯಂತ ಮೋಸದ ಜಾಲವೊಂದು ಸಕ್ರಿಯವಾಗಿತ್ತು.ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕವನ್ನು ಓದಬಲ್ಲರು ಎಂಬುದಾಗಿ ಪೋಷಕರನ್ನು ನಂಬಿಸಿ ಮಕ್ಕಳನ್ನು ತಮ್ಮ ಮೋಸದ ಪ್ರಯೋಗಕ್ಕೆ ಗುರಿಯಾಗಿಸಿ ಶೋಷಣೆಯಾಗಿಸುತ್ತಿದ್ದ ಜಾಲವನ್ನು ರಾಷ್ಟ್ರ ಮಟ್ಟದಲ್ಲಿ ವಿಚಾರವಾದಿಗಳ ಸಂಘಟನೆ ಭೇದಿಸಿತ್ತು.
ಆ ಬಳಿಕ ಕೆಲ ಸಮಯದಿಂದ ಕಣ್ಮರೆಯಾಗಿದ್ದ ಮೋಸದ ಜಾಲ ಇದೀಗ ಹೊಸ ಹೆಸರಿನಲ್ಲಿ ಅಲ್ಲಲ್ಲಿ ತಲೆ ಎತ್ತಲು ಪ್ರಯತ್ನಿಸುತ್ತಿವೆ. ನಿಮ್ಮ ಮಕ್ಕಳಲ್ಲಿನ ನಿಷ್ಕ್ರಿಯವಾಗಿರುವ ಮಧ್ಯದ ಮೆದುಳನ್ನು ಜಾಗೃತಗೊಳಿಸಿ ಅತೀ ಕ್ರಿಯಾಶೀಲ ಹಾಗೂ ಅತೀಂದ್ರಿಯ ಶಕ್ತಿ ಹೊಂದುವವರನ್ನಾಗಿ ಮಾಡುತ್ತೇವೆ. ಇದರಿಂದ ಸ್ಮರಣ ಶಕ್ತಿ, ಏಕಾಗ್ರತೆ, ಆತ್ಮಸ್ಥೈರ್ಯ ಬೆಳೆಸಲಾಗುತ್ತದೆ. ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಸಂಕೋಚ, ಏಕಾಂಗಿತನ, ಅತಿಯಾದ ಭಾವುಕತೆ, ಮಾನಸಿಕ ಒತ್ತಡಗಳನ್ನು ಹೋಗಲಾಡಿಸುತ್ತದೆ ಎಂಬ ಬರಹಗಳ ಜಾಹೀರಾತುಗಳನ್ನು ಇಂತಹ ಮೋಸ ಮಾಡುವವರು ಪ್ರಕಟಿಸುತ್ತಾರೆ. ಒಟ್ಟಿನಲ್ಲಿ ಈ ಜಾಲಗಳದ್ದು ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸುವುದಲ್ಲ, ಬದಲಾಗಿ ಹಣ ಮಾಡುವ ಉದ್ದೇಶವಾಗಿರುತ್ತದೆ. ಈ ಬಗ್ಗೆ ಪೋಷಕರು ಹಾಗೂ ಜನಸಾಮಾನ್ಯರು ಗಮನ ಹರಿಸಬೇಕು.
ಕಣ್ಣಿಗೆ ಬಟ್ಟೆ ಕಟ್ಟಿ ಇಡೀ ಪುಸ್ತಕವನ್ನು ಓದುವುದೆಂದರೆ ಅದು ಸಾಧ್ಯವೇ? ಇದು ಜಾದೂಗಾರರು ನಡೆಸುವ ತಂತ್ರವಷ್ಟೇ. ಈ ಬಗ್ಗೆ ನಾನು ಸೇರಿದಂತೆ ಸಂಘಟನೆಯು ಹಲವಾರು ಕಡೆಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಇದರ ಹಿಂದಿರುವ ರಹಸ್ಯವನ್ನು ಬಯಲುಗೊಳಿಸಿದ್ದೇವೆ. ಜಾದೂಗಾರರು ಈ ತಂತ್ರವನ್ನು ಬಳಸುತ್ತಾರೆ. ಅದನ್ನೇ ಮಕ್ಕಳ ಮೇಲೆ ಒತ್ತಡದ ರೂಪದಲ್ಲಿ ಸುಳ್ಳು ಹೇಳಿಸುವ ಮೂಲಕ ಹೇರಲಾಗುತ್ತದೆ. ಈ ರೀತಿಯಲ್ಲಿ ಮಕ್ಕಳಿಗೆ ಸುಳ್ಳು ಹೇಳಲು ಪ್ರೇರೇಪಿಸುವ ಮತ್ತು ಮಕ್ಕಳ ಮೇಲೆ ಒತ್ತಡ ಹೇರುವ ಈ ಕ್ರಿಯೆಗಳು ಅಪಾಯಕಾರಿ.
ಮಧ್ಯ ಮೆದುಳು ಮನುಷ್ಯ ಸೇರಿದಂತೆ ಬಹುತೇಕ ಜೀವಜಂತುಗಳಲ್ಲಿಯೂ ಸಾಮಾನ್ಯ. ಆದರೆ ಅದನ್ನು ಉತ್ತೇಜಿಸಲಾಗುವುದು ಎಂಬುದು ಮೂರ್ಖತನದ ಪರಮಾವಧಿ. ಕಲಿಕೆ ಎನ್ನುವುದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಆದರೆ ಕಣ್ಣಿಗೆ ಬಟ್ಟೆ ಕಟ್ಟಿ ಓದುವುದು, ಬರೆಯಲಾಗುತ್ತದೆ ಎಂಬ ಪ್ರಕ್ರಿಯೆ ಮೋಸದಾಟ. ಕಣ್ಣಿನ ಅಕ್ಷಿಪಟಲದ ಮೇಲೆ ಸೂರ್ಯನ ಕಿರಣಗಳು ಬೀಳದಿದ್ದರೆ ಕಣ್ಣಿಗೆ ಏನೂ ಕಾಣಿಸಿಕೊಳ್ಳುವುದು ಅಸಾಧ್ಯ. ಈ ರೀತಿ ಕಣ್ಣಿಗೆ ಬಟ್ಟೆ ಕಟ್ಟಿ ಮೂಗಿನ ಅಥವಾ ಕಣ್ಣಿನ ನೇರಕ್ಕೆ ಪುಸ್ತಕ ಹಿಡಿದು ಮಕ್ಕಳನ್ನು ಓದಲು ಉತ್ತೇಜಿಸುವ ಪ್ರಕ್ರಿಯೆ ಕೇವಲ ಒಂದು ಟ್ರಿಕ್ಸ್ ಎಂಬುದಾಗಿ ದ.ಕ. ಜಿಲ್ಲಾ ವಿಚಾರವಾದಿಗಳ ಸಂಘಟನೆ ಅಧ್ಯಕ್ಷ ಹಾಗೂ ಡಾ. ಕೆ.ಎಸ್. ಮಾಧವ ರಾವ್ ಅವರೂ ದೃಢೀಕರಿಸುತ್ತಾರೆ. ಹಾಗಿರುವಾಗ ಮಧ್ಯ ಮೆದುಳನ್ನು ಸಕ್ರಿಯಗೊಳಿಸುತ್ತೇವೆಂಬ ಇಂತಹ ಮೋಸದ ಜಾಲಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಈ ಬಗ್ಗೆ ಜನಸಾಮಾನ್ಯರು ಸದಾ ಎಚ್ಚರಿಕೆ ವಹಿಸಬೇಕು.
ಇಂತಹ ಜಾಲಗಳ ವಿರುದ್ಧ ಹೋರಾಟ ನಡೆಸಿದಷ್ಟು ಅವು ಒಂದು ಸಮಯಕ್ಕೆ ಕಣ್ಮರೆಯಾದಂತೆ ಕಂಡರೂ ಹೊಸ ರೂಪ, ಹೊಸ ವಿಧಾನ, ಹೊಸ ಶೈಲಿಯಲ್ಲಿ ಹುಟ್ಟಿಕೊಳ್ಳುತ್ತವೆ. ಜನರನ್ನು ತಮ್ಮತ್ತ ಆಕರ್ಷಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಮೋಸ ಹೋಗುವವರಿರುವಾಗ ಮೋಸ ಮಾಡುವವರಿಗೇನೂ ನಮ್ಮ ಸಮಾಜದಲ್ಲಿ ಕೊರತೆ ಇಲ್ಲ. ಹಾಗಿರುವಾಗ ನಾವು ಎಚ್ಚೆತ್ತುಕೊಂಡಿದ್ದಷ್ಟು ಸ್ವಸ್ಥ ಸಮಾಜವನ್ನು ಕಾಣಬಹುದು. ಮೂಢನಂಬಿಕೆಗಳ ವಿರುದ್ದ ಸೆಟೆದು ನಿಲ್ಲುವ ಜತೆಗೆ ಇಂತಹ ಮೋಸದ ಜಾಲಗಳ ಬಗ್ಗೆಯೂ ನಮ್ಮನ್ನು ನಾವು ನಮ್ಮ ಮುಂದಿನ ಜನಾಂಗವನ್ನು ರಕ್ಷಿಸಿಕೊಳ್ಳಬೇಕು. ವಿಚಾರವಾದಿಗಳ ಸಂಘಟನೆ ಈ ನಿಟ್ಟಿನಲ್ಲಿ ಹಿಂದಿನಿಂದಲೂ ಸದಾ ಜಾಗೃತವಾಗಿದ್ದು, ಸಮಾಜದ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದೆ. ಮುಂದೆಯೂ ನಿರ್ವಹಿಸಲಿದೆ. ಇದಕ್ಕೆ ಸಮಾಜದ ಸಹಕಾರವೂ ಅಗತ್ಯವಾಗಿರುತ್ತದೆ.