ಸ್ವತಂತ್ರ ಮಾಧ್ಯಮವನ್ನು ಎತ್ತಿ ಹಿಡಿಯುವ ದಿ ಪೋಸ್ಟ್
ಇಂಗ್ಲಿಷ್ ಸಿನೆಮಾ
ಸರಕಾರ ಸರ್ವಾಧಿಕಾರಿಯಾಗುತ್ತಾ ಜನರ ಮುಂದೆ ಸುಳ್ಳುಗಳನ್ನೇ ಸತ್ಯವಾಗಿಸುವ ಪ್ರಯತ್ನದಲ್ಲಿರುವಾಗ ಪತ್ರಿಕೆಗಳ ಕರ್ತವ್ಯವೇನು ಎನ್ನುವುದನ್ನು ಹೇಳುವ ಥ್ರಿಲ್ಲರ್ ರಾಜಕೀಯ ಕಥಾನಕ ‘ದಿ ಪೋಸ್ಟ್’. ಸ್ಟೀವನ್ ಸ್ಪೀಲ್‌ಬರ್ಗ್ ಎನ್ನುವ ದೈತ್ಯ ಪ್ರತಿಭೆ ವರ್ತಮಾನದ ಅಮೆರಿಕಕ್ಕೆ ಈ ಚಿತ್ರದ ಮೂಲಕ ಕನ್ನಡಿ ಹಿಡಿದಿದ್ದಾನೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ರಿಕೆಗಳ ಕುರಿತಂತೆ ತಳೆದಿರುವ ನಿಲುವುಗಳಿಗೆ ಸವಾಲೆಸೆಯುವಂತಿದೆ ಈ ಚಿತ್ರ. ಭಾರತದಲ್ಲಿ ಮಾಧ್ಯಮಗಳೆಲ್ಲ ಮೋದಿ ಎನ್ನುವ ಸರ್ವಾಧಿಕಾರಿ ಮನಸ್ಥಿತಿಯ ಜೊತೆಗೆ ರಾಜಿ ಮಾಡಿಕೊಂಡ ದಿನಗಳಲ್ಲಿ, ಪತ್ರಿಕೋದ್ಯಮ ಈ ಸಂದರ್ಭದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಚಿತ್ರ ಯಾವುದೇ ಭಾವಾವೇಷಗಳಿಲ್ಲದೆಯೇ ತಿಳಿಸಿಕೊಡುವ ಪ್ರಯತ್ನ ಮಾಡುತ್ತದೆ. 1966ರಲ್ಲಿ ಸಂಭವಿಸಿದ ವಿಯೆಟ್ನಾಂ ಯುದ್ಧದಲ್ಲಿ ದೇಶಕ್ಕಾದ ಹಾನಿ, ನಷ್ಟಗಳನ್ನು ಸರಕಾರ ಮುಚ್ಚಿಟ್ಟು, ಜನರಿಗೆ ಮಾಡಿದ ವಂಚನೆಯನ್ನು ಬಯಲಿಗೆಳೆಯುವ ‘ದಿ ಪೋಸ್ಟ್’ ಎಂಬ ಪತ್ರಿಕೆಯ ಸಾಹಸಗಾಥೆಯಿದು. ಚಿತ್ರ ವಿಯೆಟ್ನಾಂ ಸಾವುನೋವುಗಳ ಹಿನ್ನೆಲೆಯನ್ನು ಇಟ್ಟುಕೊಂಡಿದೆಯಾದರೂ, ಅದು ನಿರೂಪಣೆಗೊಳ್ಳುವುದು ಪತ್ರಿಕಾಕಚೇರಿಯೊಳಗಿನ ಒಳ ಸಂಘರ್ಷಗಳ ಮೂಲಕ. ಮಿಲಿಟರಿ ವಿಶ್ಲೇಷಕ ಡೇನಿಯಲ್ ಎಲ್ಸ್‌ಬರ್ಗ್ ಅವರು ವಿಯೆಟ್ನಾಂ ಯುದ್ಧಕ್ಕೆ ಸಂಬಂಧಪಟ್ಟಂತೆ ಶ್ವೇತ ಭವನ ಹೇಳಿರುವ ಸುಳ್ಳುಗಳನ್ನು ಬಹಿರಂಗಗೊಳಿಸುತ್ತಾರೆ. ಅಂದರೆ (ಯುನೈಟೆಡ್ ಸ್ಟೇಟ್ಸ್-ವಿಯೆಟ್ನಾಂ ರಿಲೇಶನ್ಸ್-1945-1967) ವರದಿಯಲ್ಲಿರುವ ರಹಸ್ಯ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾನೆ. ಆದರೆ ಬಿಡುಗಡೆ ಮಾಡಿದಷ್ಟು ಸಲೀಸಾಗಿ ಅದನ್ನು ಪ್ರಕಟಿಸುವುದು ಸಾಧ್ಯವಾಗುವುದಿಲ್ಲ. ಆ ಸುದ್ದಿಯನ್ನು ಈಗಷ್ಟೇ ಚೇತರಿಕೆಯನ್ನು ಪಡೆಯುತ್ತಿರುವ ಪತ್ರಿಕೆಯೊಂದು ಪ್ರಕಟಿಸಲು ಹೊರಟಾಗ ಅದು ಎದುರಿಸಬೇಕಾದ ಸವಾಲು, ಅದು ದೇಶದ ಗಣ್ಯರೊಂದಿಗೆ ನಡೆಸಬೇಕಾಗುವ ಹೋರಾಟ ಇವೆಲ್ಲವುಗಳನ್ನು ದಿ ಪೋಸ್ಟ್ ಮೂಲಕ ಸ್ಪೀಲ್‌ಬರ್ಗ್ ಕಟ್ಟಿಕೊಡುತ್ತಾರೆ. ರಕ್ಷಣಾ ದಾಖಲೆಗಳು ಸೋರಿಕೆಯಾಗಿ ಅಮೆರಿಕದ ನಾಲ್ಕು ಅಧ್ಯಕ್ಷರು ಆವರೆಗೆ ಮುಚ್ಚಿಟ್ಟ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದ್ದಂತೆಯೇ, ಅಂದಿನ ಅಧ್ಯಕ್ಷ ನಿಕ್ಸನ್ ಅದನ್ನು ದೇಶದ್ರೋಹವೆಂದು ಕರೆದು ಪತ್ರಿಕೆಗಳ ಕೈ ಕಟ್ಟಿ ಹಾಕಲು ಯತ್ನಿಸುತ್ತಾರೆ. ಆದರೆ ಪತ್ರಿಕೆ ತನ್ನ ಹಕ್ಕನ್ನು ಪ್ರತಿಪಾದಿಸಲು ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರುತ್ತದೆ. ಸರಕಾರ ಮತ್ತು ಮಾಧ್ಯಮ ಇವುಗಳ ನಡುವಿನ ಮುಖಾಮುಖಿ ಚಿತ್ರವನ್ನು ತೀವ್ರಗೊಳಿಸುತ್ತಾ ಹೋಗುತ್ತದೆ. ವ್ಯವಸ್ಥೆಯ ವಿರುದ್ಧ ಒಂದು ಪತ್ರಿಕೆ ಹೋರಾಟ ಮಾಡುವ ಸಂದರ್ಭದಲ್ಲಿ ವ್ಯವಸ್ಥೆಯೊಳಗಿರುವ ಸ್ನೇಹಿತರನ್ನೂ ಅದು ಎದುರು ಹಾಕಿಕೊಳ್ಳಬೇಕಾಗುತ್ತದೆ. ಜೊತೆಗೆ ಆಡಳಿತ ಮಂಡಳಿ, ಪತ್ರಿಕೆಯ ಪ್ರಸಾರಣಾ, ಆರ್ಥಿಕ ಸಮತೋಲನ, ಸಹೋದ್ಯೋಗಿಗಳು ಇವೆಲ್ಲದರ ಕಡೆಗೂ ಗಮನ ಕೊಡಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ ಪತ್ರಿಕೆಯನ್ನು ನಡೆಸುವಾಕೆ ಮಹಿಳೆಯಾದರೆ ಅವಳಿಗೆ ಇನ್ನಷ್ಟು ಭಿನ್ನ ಸವಾಲುಗಳು ಕಾದಿರುತ್ತವೆ. ವಾಷಿಂಗ್ಟನ್ ಪೋಸ್ಟ್‌ನ ಮಾಲಕಿ, ಪ್ರಸಾರಕಿಯಾಗಿರುವ ಕ್ಯಾಥರಿನ್ ನಾಲ್ಕು ಮಕ್ಕಳ ತಾಯಿ. ಜೊತೆಗೆ ಗಂಡನನ್ನು ಕಳೆದುಕೊಂಡ ವಿಧವೆ. ಪತ್ರಿಕಾ ಬೋರ್ಡ್‌ನೊಳಗೇ ಆಕೆಯ ಸಾಮರ್ಥ್ಯದ ಕುರಿತಂತೆ ಅನುಮಾನಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಪೆಂಟಗಾನ್ ಪೇಪರ್ಸ್ ಎಂದು ಖ್ಯಾತಿ ಪಡೆದ ದಾಖಲೆಗಳು ಸೋರಿಕೆಯಾಗಿ ಪತ್ರಿಕೆಗೆ ದೊರಕುತ್ತವೆ. ಆದರೆ ಅದನ್ನು ಪ್ರಕಟಿಸುವ ಸಂದರ್ಭದಲ್ಲಿ ಬೋರ್ಡ್‌ನೊಳಗೇ ತೀವ್ರ ಆಕ್ಷೇಪಗಳು ಬರುತ್ತವೆ. ಅದು ಎಲ್ಲ ಕ್ಷೇತ್ರಗಳಲ್ಲೂ ಪುರುಷರೇ ಪ್ರಧಾನವಾಗಿದ್ದ ಕಾಲ. ಮಹಿಳೆಯರ ಕಾರ್ಯವೈಖರಿಯ ಕುರಿತಂತೆ ಸಹಜವಾಗಿಯೇ ಪುರುಷರಿಗೆ ಪೂರ್ವಾಗ್ರಹಗಳಿದ್ದವು. ಕ್ಯಾಥರಿನ್ ವಿಷಯದಲ್ಲಿ ಸಹೋದ್ಯೋಗಿಗಳು ಇದೇ ದೃಷ್ಟಿಕೋನವನ್ನು ಹೊಂದಿದ್ದರು. ತನ್ನ ಸುತ್ತಮುತ್ತಲಿನ ಜನರ ವ್ಯಂಗ್ಯ, ಕುಹಕ ಇವುಗಳ ನಡುವೆಯೇ ಕ್ಯಾಥರಿನ್ ತೊದಲು ಹೆಜ್ಜೆಗಳನ್ನು ಇಡ ತೊಡಗುತ್ತಾರೆ. ಷೇರುಪೇಟೆಗೆ ಆಗಷ್ಟೇ ಕಾಲಿಟ್ಟಿರುವ ಪತ್ರಿಕೆ ಇಡೀ ಅಧಿಕಾರಶಾಹಿಗಳನ್ನು ಎದುರು ಹಾಕಿಕೊಂಡಾಗ ಸೃಷ್ಟಿಯಾಗುವ ಆತಂಕಗಳು ಕ್ಯಾಥರಿನ್ ಅವರನ್ನೂ ಕಾಡುತ್ತವೆ. ಆದರೆ ‘‘(ಪತ್ರಿಕೆಗಳಿರುವ) ಪ್ರಕಟಿಸುವ ಹಕ್ಕನ್ನು ರಕ್ಷಿಸಲು ಇರುವ ಏಕೈಕ ಮಾರ್ಗವೆಂದರೆ ಪ್ರಕಟಿಸುವುದು’’ ಎಂಬ ಕ್ಯಾಥರಿನ್ ನಿಲುವು ಗಟ್ಟಿಯಾಗುತ್ತಾ ಹೋದಂತೆಯೇ ಆಕೆ ವ್ಯಕ್ತಿತ್ವವೂ ನಿಧಾನಕ್ಕೆ ಹಿಗ್ಗುತ್ತಾ ಹೋಗುತ್ತದೆ. ಸಂಪಾದಕ ಬ್ಲಾಡ್ಲಿ ಆಕೆಯ ಮನದಿಂಗಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಹೋಗುತ್ತಾನೆ.
ವಿಯೆಟ್ನಾಂ ಯುದ್ಧವನ್ನು ಅಮೆರಿಕ ಗೆಲ್ಲುವುದು ಸಾಧ್ಯವಿಲ್ಲ ಎಂದು ಸರದಿಯಲ್ಲಿ ಬಂದ ನಾಲ್ಕು ಅಧ್ಯಕ್ಷರಿಗೆ ಗೊತ್ತಿದ್ದರೂ ಅಮೆರಿಕದ ಮತ್ತು ತಮ್ಮ ಸರಕಾರದ ಪ್ರತಿಷ್ಠೆಗಾಗಿ ಸತ್ಯವನ್ನು ಮುಚ್ಚಿಟ್ಟಿರುವುದು ಈ ವರದಿಯಲ್ಲಿದೆ. ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಮ್ಯಾಕ್ನಮೇರ್ ‘‘ಯುದ್ಧ ಗೆಲ್ಲುವುದಿಲ್ಲ ಎನ್ನುವ ಸತ್ಯ ನಮಗೆ ಆರು ವರ್ಷಗಳ ಹಿಂದೆಯೇ ಗೊತ್ತಿತ್ತು’’ ಎಂಬ ಹೇಳಿಕೆ ನೀಡಿದ್ದ. ಮ್ಯಾಕ್ನಮೇರ್ ಕ್ಯಾಥರಿನ್‌ಗೆ ಗೆಳೆಯನಾಗಿದ್ದಾನೆ. ಅವನೂ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಆಕೆಗೆ ಸ್ನೇಹಿತರು. ಈ ವರದಿಯನ್ನು ಪ್ರಕಟಿಸಿದರೆ ಅವರೆಲ್ಲರ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಖಾಸಗಿ ಬದುಕಿನಲ್ಲೂ ಅದು ಅವಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಪತ್ರಿಕೆಯ ಮೇಲೂ. ಆದರೆ ಮಾಧ್ಯಮ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಆಕೆ ಎಲ್ಲರನ್ನು ಎದುರುಹಾಕಿಕೊಳ್ಳಲು ಸಿದ್ಧಳಾಗುತ್ತಾಳೆ. ಅಂತಿಮವಾಗಿ ಗೆಲ್ಲುತ್ತಾಳೆ. ಅಮೆರಿಕ ಅಧ್ಯಕ್ಷ ರಾಜೀನಾಮೆ ನೀಡಬೇಕಾಗುತ್ತದೆ.
ಹನ್ನಾ ಮತ್ತು ಜೋಶ್ ಸಿಂಗರ್ ಅವರ ಬಿಗಿ ಚಿತ್ರಕತೆಯೇ ಚಿತ್ರದ ಹಿರಿಮೆ. ಜನೂಝ್ ಕಮಿಂಸ್ಕಿ ಛಾಯಾಗ್ರಹಣ ಚಿತ್ರದ ಥ್ರಿಲ್ಲರ್ ಆಯಾಮಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇಡೀ ಚಿತ್ರದ ಕೇಂದ್ರ ಬಿಂದು ಕ್ಯಾಥರಿನ್ ಪಾತ್ರ ನಿರ್ವಹಿಸಿರುವ ಮೆರಿಲ್ ಸ್ಟ್ರೀಪ್. ಆರಂಭದಲ್ಲಿ ದುರ್ಬಲಳಂತೆ ಕಾಣುವ ಈಕೆ ಹಂತ ಹಂತವಾಗಿ ಗಟ್ಟಿಯಾಗುತ್ತಾ ಹೋಗುವುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಜೊತೆಗೆ ಆಕೆಯ ಒಳಗಿನ ಆತಂಕ, ಆರಂಭದ ಕೀಳರಿಮೆ ಹಾಗೆಯೇ ಸತ್ಯದ ಜೊತೆಗಿದ್ದ ಬದ್ಧತೆ ಆಕೆಯನ್ನು ಬೆಳೆಸುವ ರೀತಿ ಪ್ರೇಕ್ಷಕರ ಹೃದಯ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ, ಅಮೆರಿಕದ ಅಧ್ಯಕ್ಷ ರೊನಾಲ್ಡ್ ಟ್ರಂಪ್‌ನ ಕೆನ್ನೆಗೆ ಬಾರಿಸಿದಂತಿದೆ. ಹಾಗೆಯೇ ನರೇಂದ್ರ ಮೋದಿಯ ಜೀತದಲ್ಲೇ ಸೌಭಾಗ್ಯ ಕಾಣುತ್ತಿರುವ ಭಾರತೀಯ ಪತ್ರಿಕೋದ್ಯಮದ ದಿಗ್ಗಜರು ಈ ಚಿತ್ರದ ಕನ್ನಡಿಯಲ್ಲಿ ತಮ್ಮ ಮುಖವನ್ನೊಮ್ಮೆ ನೋಡಿಕೊಳ್ಳಬೇಕಾಗಿದೆ.